ರಾಜ್ಯ ರಾಜಕಾರಣ ಕುತೂಹಲಕಾರಿ ತಿರುವು ಪಡೆಯುತ್ತಿದೆ.
ನಾಲ್ಕು ತಿಂಗಳ ಹಿಂದೆ ಸಿದ್ದರಾಮಯ್ಯ ಸಿಎಂ ಹುದ್ದೆಯಿಂದ ಕೆಳಗಿಳಿದಿದ್ದೇ ಇದಕ್ಕೆ ಕಾರಣ. ಅಂದ ಹಾಗೆ ಸಿದ್ದರಾಮಯ್ಯ ಅವರು ಕೆಳಗಿಳಿದ ನಂತರ ಕಣ್ಣಿಗೆ ಢಾಳಾಗಿ ಕಾಣಿಸಿದ್ದು ಅಹಿಂದ ಸೈನ್ಯದ ವಿಘಟನೆ. ಈ ವಿಘಟನೆಯ ಪ್ರಮುಖ ಲಕ್ಷಣವೆಂದರೆ ಸಿದ್ದರಾಮಯ್ಯ ಅವರ ಟೀಮಿನಿಂದ ಡಾ.ಹೆಚ್.ಸಿ.ಮಹದೇವಪ್ಪ, ಸತೀಶ್ ಜಾರಕಿಹೊಳಿ, ಜಮೀರ್ ಅಹ್ಮದ್ ಖಾನ್ ಅವರಂತಹ ನಾಯಕರು ದೂರವಾಗಿದ್ದು. ಇವತ್ತಿನ ವರ್ತಮಾನದ ಪ್ರಕಾರ, ಮಾಜಿ ಸಚಿವ ಕೆ.ಎನ್.ರಾಜಣ್ಣ ಅವರು ಈ ಅಹಿಂದ ಸೈನ್ಯದ ಒಗ್ಗಟ್ಟನ್ನು ಮರುಸ್ಥಾಪಿಸಲು ಯತ್ನಿಸುತ್ತಿರುವುದೇನೋ ಹೌದು. ಆದರೆ ರಾಜಕಾರಣದಲ್ಲಿ ಒಮ್ಮೆ ಮುರಿದು ಬಿದ್ದ ಸ್ನೇಹ ತಕ್ಷಣ ಮರುಸ್ಥಾಪನೆಯಾಗುವುದು ಕಷ್ಟ.
ಎಲ್ಲಕ್ಕಿಂತ ಮುಖ್ಯವಾಗಿ ಪರಸ್ಪರ ದೂರವಾಗಲು ಇದ್ದ ಕಾರಣಗಳು ಇವತ್ತು-ನಿನ್ನೆಯವಲ್ಲ. ಹಲವು ಕಾಲದಿಂದ ಶಿಥಿಲವಾಗುತ್ತಾ ಕಳಚಿ ಕೊಂಡವುಗಳು. ಹೀಗಾಗಿ ಇದನ್ನು ಮರುಸ್ಥಾಪಿಸುವುದು ಅಷ್ಟು ಸರಳವಾದ ಕೆಲಸವಲ್ಲ.
ಕಾಂಗ್ರೆಸ್ ಮೂಲಗಳ ಪ್ರಕಾರ, ತಮ್ಮನ್ನು ದೂರವಿಟ್ಟು ಬೆಂಗಳೂರು ಅರಮನೆ ಮೈದಾನದಲ್ಲಿ ಸಿದ್ದರಾಮಯ್ಯ ಅವರು ಹಿಂದುಳಿದ ವರ್ಗಗಳ ಸಮಾವೇಶದಲ್ಲಿ ಪಾಲ್ಗೊಂಡ ನಂತರ ಉಳಿದ ನಾಯಕರು ಸೇರಿ ಮತ್ತೊಂದು ಸಮಾವೇಶ ನಡೆಸಲು ಅಣಿಯಾಗುತ್ತಿದ್ದಾರೆ. ಪರಿಣಾಮ? ಅಹಿಂದ ವರ್ಗಗಳ ಪಿಲ್ಲರುಗಳ ಲೆಕ್ಕಾಚಾರ ಬೇರೆಯಾಗಿದೆ. ಈ ಬೆಳವಣಿಗೆಯಿಂದ ನಷ್ಟವಾಗುವುದು ಕಾಂಗ್ರೆಸ್ ಪಕ್ಷಕ್ಕೆ ಎಂಬುದು ಒಂದು ಕಡೆಯಾದರೆ, ಇದರ ಲಾಭವನ್ನು ಪಡೆದುಕೊಳ್ಳಲು ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಜಾ.ದಳ ಅಣಿಯಾಗು ತ್ತಿರುವುದು ಮತ್ತೊಂದು ಕಡೆ. ಗಮನಿಸಬೇಕಾದ ಸಂಗತಿ ಎಂದರೆ ಮೊನ್ನೆ ಮೊನ್ನೆಯ ತನಕ ಪಕ್ಷದಲ್ಲಿ ಒಗ್ಗಟ್ಟಿನ ಮಂತ್ರ ಜಪಿಸದೆ ಇದ್ದ ಬಿಜೆಪಿ ರಾಜಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಈಗ ಒಗ್ಗಟ್ಟಿನ ಮಂತ್ರ ಜಪಿಸತೊಡಗಿದ್ದಾರೆ.
ಅದರಲ್ಲೂ ಪಕ್ಷದ ಹಿರಿಯ ನಾಯಕರಿಂದ ಸದಾ ಕಾಲ ಅಂತರವನ್ನು ಕಾಪಾಡಿಕೊಂಡು ಬಂದಿದ್ದ ಅವರು, ಈಗ ಇದ್ದಕ್ಕಿದ್ದಂತೆ ಹಿರಿಯರನ್ನು ಜ್ಞಾಪಿಸಿಕೊಳ್ಳುತ್ತಿದ್ದಾರೆ. ಇದರ ಭಾಗವಾಗಿಯೇ ಮೊನ್ನೆ ಮಧ್ಯವರ್ತಿಯೊಬ್ಬರ ಮೂಲಕ ಹಿರಿಯ ನಾಯಕ ಕೆ.ಎಸ್.ಈಶ್ವರಪ್ಪ ಅವರಿಗೆ ಪಕ್ಷ ಸೇರ್ಪಡೆಯ ಆಹ್ವಾನ ಕಳಿಸಿದ್ದಾರೆ.
ಹಾಗೆ ನೋಡಿದರೆ ಕೆ.ಎಸ್.ಈಶ್ವರಪ್ಪ ಅವರು ಪಕ್ಷದಿಂದ ಹೊರ ಬೀಳಲು ಮೂಲ ಕಾರಣರಾದವರೇ ವಿಜಯೇಂದ್ರ. ಅಂತಹ ವಿಜಯೇಂದ್ರ ಅವರು ಈಶ್ವರಪ್ಪ ಅವರು ಮರಳಿ ಬಿಜೆಪಿಗೆ ಸೇರ್ಪಡೆಯಾಗಲಿ ಅಂತ ಕಾತರಿಸುತ್ತಿದ್ದಾರೆ. ಹೀಗೆ ಅವರು ಕಾತರಿಸಲು ಒಂದು ಗುರುತರ ಕಾರಣವಿದೆ. ಅದೆಂದರೆ ಈಶ್ವರಪ್ಪ ಅವರು ಪ್ರಬಲ ಕುರುಬ ಸಮುದಾಯದವರು. ಸಿದ್ದರಾಮಯ್ಯ ಅವರ ನಂತರ ಕುರುಬ ಸಮುದಾಯಕ್ಕೆ ಆಕರ್ಷಣೆಯ ನಾಯಕರು ಅಂತಿದ್ದರೆ ಅದು ಈಶ್ವರಪ್ಪ. ಅದರೆ ಎಲ್ಲಿಯವರೆಗೆ ರಾಜಕೀಯವಾಗಿ ಸಿದ್ದರಾಮಯ್ಯ ಅವರು ಪ್ರಬಲರಾಗಿದ್ದರೋ ಅಲ್ಲಿಯವರೆಗೆ ಆ ಸಮುದಾಯ ಈಶ್ವರಪ್ಪ ಅವರ ನಾಯಕತ್ವಕ್ಕೆ ಶಕ್ತಿ ತುಂಬಿರಲಿಲ್ಲ. ಅದರೆ ಯಾವಾಗ ಸಿದ್ದರಾಮಯ್ಯ ಅವರು ಸಿಎಂ ಹುದ್ದೆಯಿಂದ ಕೆಳಗಿಳಿದರೋ, ಅದಕ್ಕಿಂತ ಮುಖ್ಯವಾಗಿ ಕಾಂಗ್ರೆಸ್ ಹೈಕಮಾಂಡ್ ಅವರನ್ನು ಬಲವಂತವಾಗಿ ಕೆಳಗಿಳಿಸಿತೋ ಇದಾದ ನಂತರ ಕುರುಬ ಸಮುದಾಯ ಕನಲಿದೆ. ಅಷ್ಟೇ ಅಲ್ಲ, ಕಾಂಗ್ರೆಸ್ಗೆ ಪರ್ಯಾಯವಾದ ಶಕ್ತಿಯ ಕಡೆ ನೋಡುತ್ತಿದೆ.
ಅದು ಹೀಗೆ ನೋಡುವ ಕಾಲಕ್ಕೆ ಕಣ್ಣಿಗೆ ಕಾಣುವ ಶಕ್ತಿಗಳು ಯಾವುವು? ಬಿಜೆಪಿ ಮತ್ತು ಜಾ.ದಳ ತಾನೇ? ಹೀಗಾಗಿಯೇ ಇಂತಹ ಸಂದರ್ಭದಲ್ಲಿ ಅವರಿಗೆ ಭರವಸೆ ತುಂಬುವ ನಾಯಕ ಬೇಕು.ಅಂತಹ ನಾಯಕ ಇವತ್ತು ಕರ್ನಾಟಕದಲ್ಲಿದ್ದರೆ ಅದು ಕೆ.ಎಸ್.ಈಶ್ವರಪ್ಪ. ಹೀಗಿರುವಾಗ ಅವರನ್ನು ಪಕ್ಷಕ್ಕೆ ವಾಪಸ್ ಕರೆತರಬೇಕು, ಆ ಮೂಲಕ ಪ್ರಬಲ ಕುರುಬ ಸಮುದಾಯದ ಕಣ್ಣು ಬಿಜೆಪಿಯತ್ತ ಸರಿಯಬೇಕು ಎಂಬುದು ವಿಜಯೇಂದ್ರ ಅವರ ಬಯಕೆ.
ವಾಸ್ತವವಾಗಿ ಹೇಳಬೇಕೆಂದರೆ ವಿಜಯೇಂದ್ರ ಅವರಿಗೆ ಜಾ.ದಳ ಜತೆಗಿನ ಸಖ್ಯ ಇಷ್ಟವಿಲ್ಲ. ಕಾರಣ, ನಾಳೆ ಜಾ.ದಳ ಜತೆಗೂಡಿ ವಿಧಾನಸಭೆ ಚುನಾವಣೆಯಲ್ಲಿ ಗೆದ್ದರೆ ಸಿಎಂ ಪಟ್ಟ ಜಾ.ದಳ ನಾಯಕ ಕುಮಾರಸ್ವಾಮಿಯವರ ಮನೆ ಬಾಗಿಲಿಗೆ ಹೋಗಬಹುದು. ಆದರೆ ವರ್ಷಾನುಗಟ್ಟಲೆ ಕಾಲ ಪಕ್ಷ ಸಂಘಟನೆಗಾಗಿ ದುಡಿದು ಸಿಎಂ ಹುದ್ದೆಗೆ ಕುಮಾರಸ್ವಾಮಿ ಬರುವುದಾದರೆ ಅದನ್ನು ಸಹಿಸಿಕೊಳ್ಳುವುದು ಹೇಗೆ? ಇದು ಇವತ್ತು ವಿಜಯೇಂದ್ರ ಅವರನ್ನು ಕೊರೆಯುತ್ತಿರುವ ಪ್ರಶ್ನೆ. ಆದರೆ ಹೀಗಾಗಬಾರದು ಎಂದರೆ ಏನು ಮಾಡಬೇಕು? ಬಿಜೆಪಿಯೇ ಸ್ವಯಂ ಬಲದ ಮೂಲಕ ಅಧಿಕಾರ ಹಿಡಿಯಬೇಕು. ಹೀಗೆ ಅಧಿಕಾರ ಹಿಡಿಯಲು ೧೧೪ರ ಮ್ಯಾಜಿಕ್ ನಂಬರನ್ನು ಗಳಿಸಬೇಕು ಎಂದರೆ ಬಿಜೆಪಿಯ ಮತ ಬ್ಯಾಂಕು ಮತ್ತಷ್ಟು ಬಲಿಷ್ಠವಾಗಬೇಕು.
ಇವತ್ತು ಕುರುಬ ಸಮುದಾಯದ ನಾಯಕ ಕೆ.ಎಸ್.ಈಶ್ವರಪ್ಪ ಅವರನ್ನು ಮರಳಿ ಬಿಜೆಪಿಗೆ ಕರೆತರಬೇಕು ಎಂಬ ಆಕಾಂಕ್ಷೆ ವಿಜಯೇಂದ್ರ ಅವರಲ್ಲಿ ಹುಟ್ಟಿದ್ದರೆ ಅದಕ್ಕೆ ಇದೇ ಮುಖ್ಯ ಕಾರಣ. ಅಂದ ಹಾಗೆ ವಿಜಯೇಂದ್ರ ಅವರ ಈ ಪ್ರಯತ್ನ ಸಫಲವಾಗುತ್ತದೆಯೇ? ಎಂಬ ಪ್ರಶ್ನೆ ಎದ್ದರೆ ಅದಕ್ಕೆ ಹೌದು ಎಂದೇ ಉತ್ತರಿಸಬೇಕಾಗುತ್ತದೆ. ಯಾಕೆಂದರೆ ಇವತ್ತು ಬಿಜೆಪಿಯಿಂದ ಹೊರಗಿ ದ್ದರೂ ಈಶ್ವರಪ್ಪ ಅವರು ಬೇರೆ ಪಕ್ಷಗಳ ಹೊಸ್ತಿಲು ತುಳಿದಿಲ್ಲ. ಬದಲಿಗೆ ಆರ್‌ಎಸ್‌ಎಸ್‌ಗೆ ಬೇಕಾದ ಕಾರ್ಯಕ್ರಮಗಳನ್ನು ಮಾಡುತ್ತಾ ನಡೆದಿದ್ದಾರೆ.
ವಾಸ್ತವವಾಗಿ ಈ ಹಿಂದೆ ಆರ್‌ಎಸ್‌ಎಸ್ ನಾಯಕರು ಈಶ್ವರಪ್ಪ ಅವರ ಪಕ್ಷ ಮರುಸೇರ್ಪಡೆಗೆ ಯತ್ನ ಮಾಡಿದ್ದರು. ಆದರೆ ಅದು ಯಡಿಯೂರಪ್ಪ, ವಿಜಯೇಂದ್ರರವರ ವಿರೋಧದ ಹಿನ್ನೆಲೆಯಲ್ಲಿ ಸಾಧ್ಯವಾಗಿರಲಿಲ್ಲ. ಹಾಗಂತ ಹಿಂದಿನ ಸ್ಥಿತಿ ಈಗ ಉಳಿದಿಲ್ಲ. ಕಾರಣ, ಜಾತಿ ರಾಜಕಾರಣ ಪಡೆಯುತ್ತಿರುವ ತಿರುವುಗಳು. ವಿಜಯೇಂದ್ರ ಅವರ ಕಣ್ಣಿಗೆ ಸ್ಪಷ್ಟವಾಗಿ ಗೋಚರಿಸಿವೆ. ಇಂತಹ ರಾಜಕಾರಣದಲ್ಲಿ ಅವರ ತಂದೆ ಯಡಿಯೂರಪ್ಪ ನಿಷ್ಣಾತರಲ್ಲವೇ? ಹೀಗಾಗಿ ಈಶ್ವರಪ್ಪ ಅವರ ಪಕ್ಷ ಮರುಸೇರ್ಪಡೆ ತಂದುಕೊಡುವ ಲಾಭ ಏನೆಂಬುದು ಅವರಿಗೆ ಗೊತ್ತಿದೆ. ಹೀಗಾಗಿ ಈಶ್ವರಪ್ಪ ಅವರ ಪಕ್ಷ ಮರುಸೇರ್ಪಡೆಯ ಪ್ರಯತ್ನಕ್ಕೆ ವಿಜಯೇಂದ್ರ ಹೆಚ್ಚು ಉತ್ಸಾಹದಿಂದಲೇ ಕೈ ಹಾಕಿದ್ದಾರೆ.
ಅಂದ ಹಾಗೆ ಅವರ ಈ ಪ್ರಯತ್ನ ಫಲ ನೀಡಲು ಸ್ವಲ್ಪ ಕಾಲ ವಿಳಂಬ ವಾಗಬಹುದು. ಆದರೆ ಅಸಾಧ್ಯವಂತೂ ಅಲ್ಲ. ಇದೇ ರೀತಿ ವಾಲ್ಮೀಕಿ ಸಮುದಾಯ, ದಲಿತ ವರ್ಗದ ಎಡಗೈ ಮತ್ತು ಬಲಗೈ ಪಂಗಡಗಳ ನೋಟ ಬಿಜೆಪಿ ಮತ್ತು ಜಾ.ದಳ ಪಕ್ಷಗಳಿಗೆ ಬಲ ತುಂಬಬಹುದು. ಮೂಲಗಳ ಪ್ರಕಾರ, ಬಲಗೈನ ಮತಗಳನ್ನು ಸೆಳೆಯಲು ಆ ಸಮುದಾಯದ ನಾಯಕರನ್ನು ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ತಂದರೆ ಹೇಗೆ? ಅಂತ ಜಾ.ದಳ ನಾಯಕರಾದ ಹೆಚ್.ಡಿ.ಕುಮಾರಸ್ವಾಮಿ ಯೋಚಿಸುತ್ತಿದ್ದಾರೆ. ಅವರ ಯೋಚನೆ ಕಾರ್ಯಗತವಾದರೆ ಹಳೆ ಮೈಸೂರು ಭಾಗದಲ್ಲಿ ಜಾ.ದಳ ಶಕ್ತಿ ಗಣನೀಯವಾಗಿ ಹೆಚ್ಚುತ್ತದೆ. ಹೀಗಾಗಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಜತೆಗಿದ್ದ ಬಹುತೇಕ ಶಕ್ತಿಗಳು ಬಿಜೆಪಿ-ಜಾ.ದಳ ಪಾಳೆಯದ ಬಲವನ್ನು ಹಿಗ್ಗಿಸುವ ಲಕ್ಷಣ ಜಸ್ತಿ.
ಇವತ್ತು ರಾಜ್ಯವನ್ನು ಭೀಕರ ಬರಗಾಲ ಆವರಿಸುತ್ತಿರುವ ಸಂದರ್ಭದಲ್ಲಿ ಇಂತಹ ರಾಜಕೀಯ ಧ್ರುವೀಕರಣಕ್ಕೆ ಮತ್ತಷ್ಟು ವೇಗ ದಕ್ಕುವುದು ಅಸಹಜವೂ ಅಲ್ಲ. ಇದೇ ಸದ್ಯದ ವಿಶೇಷ.
” ಬಿಜೆಪಿ ರಾಜಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಈಗ ಒಗ್ಗಟ್ಟಿನ ಮಂತ್ರ ಜಪಿಸತೊಡಗಿದ್ದಾರೆ. ಅದರಲ್ಲೂ ಪಕ್ಷದ ಹಿರಿಯ ನಾಯಕರಿಂದ ಸದಾ ಕಾಲ ಅಂತರವನ್ನು ಕಾಪಾಡಿಕೊಂಡು ಬಂದಿದ್ದ ಅವರು ಈಗ ಇದ್ದಕ್ಕಿದ್ದಂತೆ ಹಿರಿಯರನ್ನು ಜ್ಞಾಪಿಸಿಕೊಳ್ಳುತ್ತಿದ್ದಾರೆ. ಇದರ ಭಾಗವಾಗಿಯೇ ಮೊನ್ನೆ ಮಧ್ಯವರ್ತಿಯೊಬ್ಬರ ಮೂಲಕ ಹಿರಿಯ ನಾಯಕ ಕೆ.ಎಸ್.ಈಶ್ವರಪ್ಪ ಅವರಿಗೆ ಪಕ್ಷ ಸೇರ್ಪಡೆಯ ಆಹ್ವಾನ ಕಳಿಸಿದ್ದಾರೆ.”




