ಪ್ರೊ. ಬಿ. ಜಯಪ್ರಕಾಶಗೌಡ, ಅಧ್ಯಕ್ಷರು, ಕರ್ನಾಟಕ ಸಂಘ, ಮಂಡ್ಯ
ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನಗದು ಪಶಸ್ತಿ ಪ್ರೋತ್ಸಾಹ
ಮಂಡ್ಯದ ಕರ್ನಾಟಕ ಸಂಘ ಹಲವು ಹತ್ತು ಕಾರ್ಯಕ್ರಮಗಳಿಗೆ ಸಾಕ್ಷಿಯಾಗುತ್ತಾ ಮುನ್ನಡೆದಿದ್ದು ಅವುಗಳಲ್ಲಿ ವಿವಿಧ ರಂಗಗಳಲ್ಲಿ ಸಾಧನೆ ಮಾಡಿರುವ ವ್ಯಕ್ತಿಗಳನ್ನು ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸುತ್ತಿರುವುದು ಅತ್ಯಂತ ಸ್ತುತ್ಯಾರ್ಹವಾದ ಕೆಲಸ. ಇಂತಹ ವಿಶೇಷಗಳಲ್ಲೊಂದು ಮಂಡ್ಯ ತಾಲ್ಲೂಕು ದೊಡ್ಡಗರುಡನಹಳ್ಳಿಯ ಪಟೇಲ್ ಚಾರಿಟಬಲ್ ಟ್ರಸ್ಟ್. ಇದು ಕಳೆದ ಐದಾರು ವರ್ಷಗಳಿಂದ ಬಹಳ ಮಹತ್ತರವಾದ ಕಾರ್ಯಗಳನ್ನು ಮಾಡುತ್ತಾ ಬಂದಿದೆ.
ಲೋಕೇಶ್ ಪಟೇಲ್ ಒಬ್ಬ ಸಾಮಾನ್ಯ ಕುಟುಂಬದ ಹುಡುಗ. ಭಾರತೀಯ ಭೂ ಸೇನೆಯಲ್ಲಿ ಯೋಧನಾಗಿದ್ದು ೧೫ ವರ್ಷಗಳನ್ನು ಪೂರೈಸಿ ನಿವೃತ್ತಿಯನ್ನು ಹೊಂದಿ ಸಾರ್ವಜನಿಕ ವಲಯದಲ್ಲಿ ನೌಕರಿಗಾಗಿ ಪ್ರಯತ್ನಿಸುತ್ತಿದ್ದ ಒಬ್ಬ ಮಧ್ಯ ವಯಸ್ಸಿನ ವ್ಯಕ್ತಿ. ಇನ್ನೇನು ಯಾವುದೋ ಒಂದು ಉತ್ತಮವಾದ ಕೆಲಸ ಸಿಗುತ್ತದೆ ಎಂದಾದಾಗ ತಾನು ನಂಬಿದ್ದ ಧರ್ಮಸ್ಥಳದ ಮಂಜುನಾಥನಿಗೆ ಹರಕೆಯನ್ನು ಸಲ್ಲಿಸಲು ಹೋಗಿ ಹಾದಿ ಮಧ್ಯದಲ್ಲಿ ಹೋಟೆಲ್‌ನಲ್ಲಿ ಕಾಫಿ ಕುಡಿದು ಹಿಂತಿರುಗಿ ಕಾರಿನಲ್ಲಿ ಕುಳಿತುಕೊಳ್ಳಲು ಬರುತ್ತಿದ್ದಾಗ ರಭಸವಾದ ಮಳೆಯಿಂದಾಗಿ ಮುರಿದುಬಿದ್ದ ಕೊಂಬೆಯೊಂದು ಆತನ ತಲೆಯ ಮೇಲೆ ಬಿದ್ದು ಸ್ಥಳದಲ್ಲೇ ಮೃತಪಟ್ಟ ಒಂದು ದಾರುಣ ಘಟನೆ ಐದಾರು ವರ್ಷಗಳ ಹಿಂದೆ ನಡೆದದ್ದು ಒಂದು ನೋವಿನ ಸಂಗತಿ. ತನ್ನ ತಂದೆ – ತಾಯಿಗಳಿಗೆ ಏಕಮಾತ್ರ ಪುತ್ರನಾಗಿದ್ದ.
ಮಗನ ಸಾವಿನ ನಂತರ ತನ್ನೂರಿನಲ್ಲಿದ್ದ ಆಸ್ತಿ-ಪಾಸ್ತಿಯನ್ನೆಲ್ಲಾ ಮಾರಿ ಮಂಡ್ಯ ನಗರಕ್ಕೆ ವಲಸೆ ಬಂದು ದಂಪತಿಗಳಿಬ್ಬರೂ ಬಾಡಿಗೆ ಮನೆಯಲ್ಲಿ ನೆಲೆನಿಂತು ಓದುವ ಬಡ ಹುಡುಗರಿಗೆ ಸಹಾಯ ಮಾಡಬೇಕೆಂದು ಸಂಕಲ್ಪಿಸಿದರು. ಪ್ರತಿವರ್ಷ ತನ್ನ ಮಗನ ಹೆಸರಿನಲ್ಲಿ ಇಂಜಿನಿಯರಿಂಗ್, ವೈದ್ಯಕೀಯ, ಪಶುವೈದ್ಯಕೀಯ, ಕೃಷಿ ಪದವಿಗೆ ಪ್ರವೇಶ ಪಡೆದುಕೊಂಡ ಬಡ ವಿದ್ಯಾರ್ಥಿಗಳಿಗೆ ತಲಾ ೨೫,೦೦೦ ರೂ.ಗಳನ್ನು ನೀಡುವ, ತನ್ನೂರಿನ ವೈದ್ಯಕೀಯ ವಿದ್ಯಾರ್ಥಿಗೆ ಪ್ರತಿವರ್ಷ ೨೫೦೦೦ ರೂ. ತನ್ನ ಹೋಬಳಿಯ ಸರ್ಕಾರಿ ಶಾಲೆಯ ಎಸ್‌ಎಸ್‌ಎಲ್‌ಸಿಯಲ್ಲಿ ಅತಿಹೆಚ್ಚು ಅಂಕ ಗಳಿಸಿದ ೮ ಜನ ವಿದ್ಯಾರ್ಥಿಗಳಿಗೆ ತಲಾ ೫೦೦೦ರೂ. ವಿಶೇಷವಾಗಿ ಇಬ್ಬರು ಇಂಜಿನಿಯರಿಂಗ್ ಬಡ ವಿದ್ಯಾರ್ಥಿಗಳಿಗೆ ತಲಾ ೧೫,೦೦೦ ರೂ., ತಾಲ್ಲೂಕು ಮತ್ತು ತನ್ನ ಗ್ರಾಮದ ವಿದ್ಯಾರ್ಥಿಗಳಿಗೆ ನಗದು ಪ್ರಶಸ್ತಿ ಹಾಗೂ ಮಂಡ್ಯ ತಾಲ್ಲೂಕಿನ ಪಿಯು ಕಾಲೇಜಿನ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ೧೫ ಜನ ವಿದ್ಯಾರ್ಥಿಗಳಿಗೆ ತಲಾ ೨,೦೦೦ ರೂ. ಹೀಗೆ ಒಟ್ಟು ೨,೫೦,೦೦೦ ರೂ.ಗಳ ನಗದು ಪ್ರಶಸ್ತಿಯನ್ನು ನೀಡುವುದರ ಜೊತೆಗೆ ಕರ್ನಾಟಕ ಸಂಘದ ಜೊತೆಯಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಏರ್ಪಡಿಸುತ್ತಾರೆ.
ಪ್ರಥಮವಾಗಿ ಪ್ರಶಸ್ತಿಗೆ ಭಾಜನರಾಗಿರುವ ನಾಡಿನ ಹೆಸರಾಂತ ಜಾನಪದ ತಜ್ಞ ಡಾ.ಚಕ್ಕೆರೆ ಶಿವಶಂಕರ್ ಹಾಗೂ ನಿಸ್ವಾರ್ಥದಲ್ಲಿ ಕೃಷಿಕನಾಗಿರುವ ಎಂ.ಬಿ.ಸೋಮೇಗೌಡರ ಬಗ್ಗೆ ನಾಲ್ಕು ಮಾತುಗಳನ್ನು ಹೇಳಲು ಇಚ್ಛಿಸುತ್ತೇನೆ. ಜಾನಪದ ಪ್ರಶಸ್ತಿ ವಿಜೇತ ಡಾ.ಚಕ್ಕೆರೆ ಶಿವಶಂಕರ್ : ಶ್ರೀಯುತರು ಚನ್ನಪಟ್ಟಣ ತಾಲ್ಲೂಕಿನ ಚಕ್ಕೆರೆ ಗ್ರಾಮದವರು. ವಿಶ್ವವಿದ್ಯಾಲಯದ ಮಟ್ಟದಲ್ಲಿ ಜನಪದ ಸಾಹಿತ್ಯಕ್ಕೊಂದು ಗಟ್ಟಿನೆಲೆಯನ್ನು ಒದಗಿಸಿದ ದೇಜಗೌ ಅವರ ಗರಡಿಯಲ್ಲಿ ಜನಪದ ಕ್ಷೇತ್ರವನ್ನು ಪ್ರವೇಶ ಮಾಡಿದ ಡಾ.ಚಕ್ಕೆರೆ ಮುಂದೆ ಜಾನಪದ ಲೋಕದ ನಿರ್ಮಾತೃ ಡಾ.ಹೆಚ್.ಎಲ್.ನಾಗೇಗೌಡರ ಜೋಡಿಯಾಗಿ ಜಾನಪದ ಲೋಕವನ್ನು ಕಟ್ಟುವುದರ ಜೊತೆಗೆ ನಾಗೇಗೌಡರ ಜನಪದ ಸಂಗ್ರಹ ಕಾರ್ಯ ಹಾಗೂ ವಿಶ್ಲೇಷಣೆಯಲ್ಲಿ ಜೋಡಿಯಾಗಿ ನಿಲ್ಲುತ್ತಾರೆ. ಕನ್ನಡ ಸಾಹಿತ್ಯದಲ್ಲಿ ಎಂ.ಎ., ಪಿಎಚ್.ಡಿ. ಮಾಡಿರುವ ಡಾ. ಚಕ್ಕೆರೆಯ ಆಸಕ್ತಿಯ ಕ್ಷೇತ್ರ ಜಾನಪದ. ಡಾ.ಜೀಶಂಪ ಅವರ ಸಮಗ್ರ ಸಾಹಿತ್ಯವನ್ನು ಹಲವಾರು ಸಂಪುಟಗಳಲ್ಲಿ ಪ್ರಕಟಗೊಳ್ಳುವಂತೆ ಮಾಡಿರುವುದು ಅವರ ಮತ್ತೊಂದು ಹೆಗ್ಗಳಿಕೆ.
ಚಕ್ಕೆರೆ ನಿವೃತ್ತರಾದ ಮೇಲೆ ಕೃಷಿಯಲ್ಲಿ ತೊಡಗಿ ಸಂತೃಪ್ತ ಜೀವನ ನಡೆಸುತ್ತಾ ಇವತ್ತಿಗೂ ಜನಪದವನ್ನೇ ಉಸಿರಾಡುತ್ತಿದ್ದಾರೆ. ೭೦ರ ಪ್ರಾಯದ ಡಾ.ಚಕ್ಕೆರೆ ಶಿವಶಂಕರ್ ಅವರ ಜಾನಪದ ಸಾಧನೆಯನ್ನು ಗುರುತಿಸಿ ಕರ್ನಾಟಕ ಸಂಘದ ನೇತ್ವತೃದಲ್ಲಿ ಕೊಡಮಾಡುವ ಪಟೇಲ್ ಚಾರಿಟಬಲ್ ಟ್ರಸ್ಟ್‘ಶ್ರೀಮತಿ ಲಿಂಗಮ್ಮ ಶ್ರೀ ಪಟೇಲ್ ಸಿದ್ದೇಗೌಡ ಜಾನಪದ ಪ್ರಶಸ್ತಿ’ಯನ್ನು ೨೦,೦೦೦ ರೂ. ನಗದು ಹಾಗೂ ಪ್ರಶಸ್ತಿ ಫಲಕದೊಡನೆ ನೀಡಿ ಗೌರವಿಸಲಾಗುತ್ತಿದೆ.
ಕೃಷಿ ಪ್ರಶಸ್ತಿಯ ವಿಜೇತ ಎಂ.ಬಿ.ಸೋಮೇಗೌಡ : ಪಾಂಡವಪುರ ತಾಲ್ಲೂಕಿನ ರಾಗಿಮುದ್ದನಹಳ್ಳಿ ಗ್ರಾಮದಲ್ಲಿ ೧೯೫೧ರಲ್ಲಿ ಜನಿಸಿದ ಎಂ.ಬಿ. ಸೋಮೇಗೌಡ ಬಿ.ಎ. ಪದವೀಧರ. ವಿವಿಧ ಸರ್ಕಾರಿ ಹಾಗೂ ಕೈಗಾರಿಕಾ ಇಲಾಖೆಯ ಉದ್ಯೋಗವನ್ನು ನಿರ್ವಹಿಸಿ, ಕೃಷಿಯಲ್ಲಿ ತೊಡಗುವುದು ನಿಜವಾದ ಕಾಯಕ ಎಂದು ಭಾವಿಸಿ ರಾಜೀನಾಮೆ ನೀಡಿ ಶ್ರೀರಂಗಪಟ್ಟಣ ತಾಲ್ಲೂಕಿನ ಎಣ್ಣೆಹೊಳೆ ಕೊಪ್ಪಲಿನಲ್ಲಿ ೧೦ ಗುಂಟೆ ಜಮೀನು ಖರೀದಿಸಿ ಕೃಷಿ ಆರಂಭಿಸಿ ಇಂದು ಸ್ವಂತ ಪರಿಶ್ರಮದಿಂದ ೫ ಎಕರೆ ಜಮೀನು ಹೊಂದಿರುವ ರೈತರಾಗಿದ್ದಾರೆ. ಹೋರಾಟದ ಬದುಕಿನ ಮೂಲಕವೇ ಸಂತೃಪ್ತಿ ಜೀವನವನ್ನು ಕಂಡುಕೊಂಡಿರುವ ಸೋಮೇಗೌಡ ಒಬ್ಬ ಆದರ್ಶ ರೈತ. ತಮ್ಮ ಶ್ರೀಮತಿಯ ಜೊತೆಗೂಡಿ ನೈಸರ್ಗಿಕ ಕೃಷಿ ಪದ್ಧತಿಯನ್ನು ಅನುಸರಿಸಿ ಜೀವಾಮೃತದ ಮೂಲಕವೇ ತನ್ನ ಜಮೀನಿನಲ್ಲಿ ಮಿಶ್ರ ಬೇಸಾಯ ಪದ್ಧತಿಯ ಮೂಲಕ ಲಕ್ಷಾಂತರ ರೂ.ಗಳನ್ನು ಗಳಿಸುತ್ತಿದ್ದಾರೆ. ಕಬ್ಬಿನಂತಹ ದೀರ್ಘ ಬೆಳೆಯನ್ನು ಮಾಡಿ ದಂಪತಿಗಳಿಬ್ಬರೇ ನೈಸರ್ಗಿಕವಾಗಿ ಆಲೆಮನೆಯ ಜವಾಬ್ದಾರಿಯನ್ನು ಹೊತ್ತು ನೈಸರ್ಗಿಕ ಬೆಲ್ಲವನ್ನು ತೆಗೆದು ಅದಕ್ಕೊಂದು ಮೌಲ್ಯವಽತ ಬೆಲೆಯನ್ನು ನಿಗದಿಪಡಿಸುವುದರ ಜೊತೆಗೆ ತಾವೇ ಬೆಳೆದ ತರಕಾರಿ ಹಾಗೂ ವಿವಿಧ ಹಣ್ಣುಗಳನ್ನು ತಾವೇ ಮಾರುಕಟ್ಟೆಗೆ ಕೊಂಡೊಯ್ದು ಮಾರಿ ಆರ್ಥಿಕವಾಗಿ ದೃಢತೆಯನ್ನು ಕಂಡುಕೊಂಡಿರುವ ರೈತರಾಗಿದ್ದಾರೆ. ಎಂ.ಬಿ. ಸೋಮೇಗೌಡ ಅವರಿಗೆ ಕರ್ನಾಟಕ ಸಂಘದ ಮೂಲಕ ಪಟೇಲ್ ಚಾರಿಟಬಲ್ ಟ್ರಸ್ಟ್ ಕೊಡಮಾಡುವ ‘ನಿಂಗಮ್ಮ ಪಟೇಲರ ಜೋಗಿಗೌಡ ಕೃಷಿ ಪ್ರಶಸ್ತಿ’ಯನ್ನು ೨೦,೦೦೦ ರೂ. ನಗದು ಹಾಗೂ ಪ್ರಶಸ್ತಿ ಫಲಕದೊಂದಿಗೆ ನೀಡಿ ಗೌರವಿಸಲಾಗುತ್ತಿದೆ. ಗುರುವಾರ ಪ್ರಶಸ್ತಿ ವಿತರಣಾ ಸಮಾರಂಭ ನಡೆಯಲಿದೆ.
” ಈ ವರ್ಷದಿಂದ ತಮ್ಮ ತಂದೆ-ತಾಯಿ ಹೆಸರಿನಲ್ಲಿ ಕೃಷಿ ಕ್ಷೇತ್ರದಲ್ಲಿ ದುಡಿಯುವ ಕೃಷಿಕನೋರ್ವನಿಗೆ ೨೦,೦೦೦ ರೂ.ಗಳ ನಗದು ಪ್ರಶಸ್ತಿಯನ್ನು ಮತ್ತು ತಮ್ಮ ತಾತ ಮತ್ತು ಅಜ್ಜಿಯ ಹೆಸರಿನಲ್ಲಿ ಜಾನಪದ ಕ್ಷೇತ್ರದಲ್ಲಿ ದುಡಿಯುವ ಕಲಾವಿದ ಅಥವಾ ತಜ್ಞನಿಗೆ ೨೦,೦೦೦ ರೂ.ಗಳ ನಗದು ಪ್ರಶಸ್ತಿಯನ್ನು ಸ್ಥಾಪಿಸಿದ್ದಾರೆ.”




