Light
Dark

ನೆನ್ನೆ ಮೊನ್ನೆ ನಮ್ಮ ಜನ | ರೈತ ಚಳುವಳಿಗೆ ಬಲಿಯಾದ ಪೊಲೀಸ್ ಹುತಾತ್ಮ!

ಜೆ.ಬಿ.ರಂಗಸ್ವಾಮಿ

ಸಿಕಂದರ್ ಪಟೇಲ್ ಗೆ ಮದುವೆ ನಿಶ್ಚಯವಾಗಿತ್ತು, ಇನ್ನು ಕೇವಲ ೨೯ ದಿನ ಇದೆ ಎನ್ನುವಾಗ ದಾರುಣ ಹತ್ಯೆಗೀಡಾಗಿದ್ದ.

ಸ್ಥಳದಲ್ಲೇ ೨೯ ಮಂದಿ ಅರೆಸ್ಟಾದರು.

ಎಸ್ಸೈ ಸಿಕಂದರ್ ಬಿ. ಪಟೇಲ್ ಹಾರಿಸಿದ್ದು ಐದೇ ಗುಂಡಾದರೂ ತಗುಲಿದ್ದುದು ಮಾತ್ರ ಒಬ್ಬನಿಗೆ ಮಾತ್ರ. ತೋಳಿಗೆ ತಗುಲಿದ್ದರಿಂದ ಆತನೂ ಬದುಕುಳಿದ. ಉಳಿದ ನಾಲ್ಕು ಗುಂಡುಗಳು ಗಾಳಿಗೆ ಹಾರಿದ್ದವು.

ಅಲ್ಲಿದ್ದ ಆರೇಳು ಪೊಲೀಸರನ್ನೂ ಉದ್ರಿಕ್ತ ಜನ ಅಟ್ಟಾಡಿಸಿ ಹೊಡೆದಿದ್ದರು. ಇಬ್ಬರು ಕಾನ್ಸ್‌ಟೇಬಲ್‌ಗಳು ತೀವ್ರ ಗಾಯ ಗೊಂಡಿದ್ದರು. ಸುದ್ದಿ ಕಾಳ್ಗಿಚ್ಚಿನಂತೆ ಹಬ್ಬಿದ್ದರಿಂದ ಉದ್ರಿಕ್ತ ಜನ ಎಲ್ಲೆಂದರೆ ಅಲ್ಲಿಗೆ ನುಗ್ಗಿ ಕಛೇರಿಯೊಳಗೆ ಕುಳಿತಿದ್ದ ತಹಸೀಲ್ದಾರರನ್ನು ಹೊರಗೆಳೆದು ಚಚ್ಚಿದರು. ಅವರ ಕಿವಿ ಕಿತ್ತು ಹೋಯಿತು. ಬಿಡಿಸಲು ಬಂದ ಡಿ.ವೈ.ಎಸ್.ಪಿ ಪ್ರವೀಣ್ ಕುಮಾರ್ ಉರ್ವ , ಇನ್‌ಸ್ಪೆಕ್ಟರ್‌ಗಳ ತಲೆ ಒಡೆಯಿತು. ಗುಂಪು ಗಲಭೆ ಘರ್ಷಣೆಗಳಲ್ಲಿ ಯಾರು ಎತ್ತ ಏನೂ ತಿಳಿಯುವುದಿಲ್ಲ. ಹುಚ್ಚು ಆವೇಶದಲ್ಲಿ ಉದ್ರಿಕ್ತರಾಗಿರುವ ಗುಂಪಿಗೆ ತಾನೇನು ಮಾಡುತ್ತಿದ್ದೇನೆ ಎಂಬ ವಿವೇಕವೇ ಇರುವುದಿಲ್ಲ. ಅಂಥ ಉಗ್ರ ಘಳಿಗೆಯಲ್ಲಿ ಯಾರೂ ಯಾವ ನಾಯಕನ ಮಾತನ್ನೂ ಕೇಳುವ ಸ್ಥಿತಿಯಲ್ಲಿರುವುದಿಲ್ಲ. ಅಸಲಿಗೆ ನಾಯಕನೇ ಇರುವುದಿಲ್ಲ. ಎಲ್ಲರೂ ರಣಭೀಕರ ನಾಯಕರೇ. ಆಡಿದ್ದೇ ಆಟ , ಹೂಡಿದ್ದೇ ಲಗ್ಗೆ. ಮಾಬ್ ಮೆಂಟಾಲಿಟಿ ಎಂದರೆ ಇದೇ.

ಐವರನ್ನು ಸಾಯಿಸಿದ ಎಂಬ ಗಾಳಿ ಮಾತೇ ಎಸ್ಸೈನ ದಾರುಣ ಹತ್ಯೆಗೆ ಕಾರಣವಾಯಿತು.
೧೯೮೦ ರ ದಶಕದಲ್ಲಿ ಪ್ರಾರಂಭವಾದ ರೈತ ಚಳುವಳಿಗೆ ಮೊತ್ತ ಮೊದಲ ಹುತಾತ್ಮನಾದದ್ದು ರೈತನಲ್ಲ. ಬದಲಿಗೆ ರೈತನ ಮಗನಾಗಿದ್ದ ಪೊಲೀಸ್ ಅಧಿಕಾರಿ ಸಿಕಂದರ್. ಬಿ. ಪಟೇಲ್.ಆ ಕೇಸಿನಲ್ಲಿ ಒಟ್ಟು ೩೨ ಜನರ ಮೇಲೆ ದೋಷಾರೋಪಣ ಪಟ್ಟಿ ಸಲ್ಲಿಸಲಾಗಿತ್ತು. ಉದ್ರಿಕ್ತ ಗಲಭೆಯ ನಾನಾ ಫೋಟೋಗಳು , ಪತ್ರಿಕಾವರದಿ, ಕಣ್ಣಾರೆ ಕಂಡ ಸಾಕ್ಷಿಗಳ ಹೇಳಿಕೆಗಳು ಎಲ್ಲವೂ ಇದ್ದವು. ಪತ್ರಕರ್ತರೇ ಮುಖ್ಯ ಸಾಕ್ಷಿಗಳಾಗಿದ್ದ ಬಲವತ್ತರ ಕೇಸು. ಶಿಕ್ಷೆಯಾಗಲೇ ಬೇಕಿದ್ದ ಕೇಸು.
ಆದರೇನು? ೧೯೮೩ ರಲ್ಲಿ ಜನತಾ ಪಕ್ಷದ ಹೊಸ ಸರ್ಕಾರ ಬಂತು. ರೈತರಿಂದಾಗಿ ತಾನು ಅಧಿಕಾರಕ್ಕೆ ಬಂದೆ ಎಂದು ಹೇಳಿಕೊಂಡಿದ್ದರಿಂದ ರೈತರ ವಿರುದ್ಧ ದಾಖಲಾಗಿದ್ದ ಸಾವಿರಾರು ಕ್ರಿಮಿನಲ್ ಕೇಸುಗಳನ್ನು ವಾಪಾಸ್ ತೆಗೆದುಕೊಂಡಿತು. ಅದರಲ್ಲಿ ಸಿಕಂದರ್ ಬಾಬಾ ಪಟೇಲನ ಈ ಹತ್ಯೆಯ ಕೇಸೂ ಇತ್ತು .

ಆ ಸಾವಿಗೆ ಯಾವ ಪರಿಹಾರವೂ ಕುಟುಂಬದವರಿಗೆ ಸಿಕ್ಕಲಿಲ್ಲ. ಸರ್ಕಾರಿ ಕರ್ತವ್ಯದಲ್ಲಿದ್ದಾಗ ಮೃತಪಟ್ಟರೆ ಅವರ ಕುಟುಂಬದ ಅವಲಂಬಿತರಿಗೆ ಅನುಕಂಪದ ಆಧಾರದ compassionate ground ಮೇಲೆ ಒಂದು ಸರ್ಕಾರಿ ಕೆಲಸ ಕೊಡುವ ಪದ್ಧತಿ ಇದೆ.
ಪಟೇಲ್ ಮನೆಯವರಿಗೆ ಆ ಅವಕಾಶವೂ ಸಿಗಲಿಲ್ಲ. ಹಾಗೆ ಕೆಲಸ ಕೊಡಲು ಕನಿಷ್ಟ ಐದು ವರ್ಷವಾದರೂ ಸೇವೆ ಸಲ್ಲಿಸಿರಬೇಕಾಗುತ್ತದೆ. ಈತ ಕೆಲಸಕ್ಕೆ ಸೇರಿ ಎರಡು ವರ್ಷವೂ ಆಗಿರಲಿಲ್ಲ. ಪ್ರೊಬೇಷನರಿ ಹಂತ ಪೂರ್ಣವಾಗಿರಲಿಲ್ಲ. ಹೀಗಾಗಿ ಪೂರ್ಣ ಪ್ರಮಾಣದ ಸರ್ಕಾರಿ ನೌಕರನೂ ಆಗಿಲ್ಲದಿದ್ದುದರಿಂದ ಯಾವ ಸವಲತ್ತುಗಳೂ ಸಿಗಲಿಲ್ಲ.
ಮೃತ ಸಿಕಂರ್ದ ಬಾಬಾ ಪಟೇಲ್ ನನ್ನ ಬ್ಯಾಚ್ ಮೇಟ್. ತರಬೇತಿಯ ವೇಳೆ ನಾವಿಬ್ಬರೂ ರೂಂ ಮೇಟುಗಳು. ನೋಡಲು ನಟ ರಾಜೇಂದ್ರ ಕುಮಾರ್ ರೀತಿ ಸುಂದರವಾಗಿದ್ದ. ಎಂಎಸ್ಸಿ ಮಾಡಿದ್ದ ಆತ ಮೃದು ಭಾಷಿ. ಸಜ್ಜನಿಕೆಯ ಯುವಕ. ಆಲ್ ರೌಂಡ್ ಬೆಸ್ಟ್ ಕ್ಯಾಡೆಟ್ ಆಗಬೇಕೆಂದು ಶ್ರಮಿಸುತ್ತಿದ್ದ . ನಾನವನನ್ನು ರಾಜೇಂದ್ರಕುಮಾರನಿಗೆ ಹೋಲಿಸಿ ಫ್ಲಾಪ್ ಹೀರೋ ಎಂದು ತಮಾಷೆ ಮಾಡುತ್ತಿದ್ದೆ. ನಮ್ಮ ಜೊತೆಗಿದ್ದ ಇತರ ರೂಂಮೇಟುಗಳೆಂದರೆ ತಡಕೋಡ್, ಅಬ್ದುಲ್ ಘೋರಿ, ಪ್ರಭುಸ್ವಾಮಿ, ಚೆಂಗಪ್ಪ, ರಾಜಗೋಪಾಲ್ ಇತರರು.

=====

ಟ್ರೇನಿಂಗಿನಲ್ಲಿದ್ದಾಗ ಒಮ್ಮೆ ಗುಡ್ ಫ್ರೈಡೇ ಸರ್ಕಾರಿ ರಜೆ ಇತ್ತು. ಆದರೂ ನಮಗೆ ಕ್ಯಾಂಪಸ್ಸಿನಿಂದ ಹೊರಗಡೆ ಹೋಗಲು ಅನುಮತಿ ಕೊಟ್ಟಿರಲಿಲ್ಲ. ನಾಡಿದ್ದು ಹೇಗೂ ಭಾನುವಾರ . ಹೊರ ಹೋಗಲು ಪರ್ಮಿಷನ್ ಇದೆ. ಈವತ್ತು ದೈಹಿಕ ಶ್ರಮದ (fatigue duty) ಕೆಲಸ ಮಾಡಿ ಎಂದು ಕ್ಯಾಂಪಸ್ ತೋಟವನ್ನು ಸ್ವಚ್ಛ ಮಾಡುವ ಕೆಲಸ ಹಚ್ಚಿದ್ದರು. ರಜದ ಮಜವೂ ಇಲ್ಲ. ಅದರ ಮೇಲೆ ಕ್ಯಾಂಪಸ್ ಹೊಲಸು ಕಸ ತೆಗೆವ ಕೆಲಸ. ನಾವೆಲ್ಲರೂ ಬೈದುಕೊಳ್ಳುತ್ತಾ ಬೇಜಾರಿನಿಂದ ಬೇಕಾಬಿಟ್ಟಿ ಕಸ ತೆಗೆದಂತೆ ಮಾಡುತ್ತಿದ್ದೆವು. ಆದರೆ ಕಸ ಹಾಗೇ ಇತ್ತು.
ಆಗ ಎಸ್.ಬಿ. ಪಟೇಲ್, ‘ಹೇಗೂ ಹೊರಗಡೆ ಬಿಡೋದಿಲ್ಲ. ಹೋಗೋದಕ್ಕೂ ಬಿಡೋದಿಲ್ಲ. ಕಾಡು ಹರಟೆ ಹೊಡೆಯುತ್ತಾ ಕೂರೋದ್ಯಾಕೆ? ಕ್ಯಾಂಪಸ್ಸನ್ನಾದರೂ ಚೆನ್ನಾಗಿ ಕ್ಲೀನ್ ಮಾಡೋಣ. ಬಾರೋ ಜೇಬರಾ ಕೈ ಹಾಕೋ’ ಎಂದು ನನ್ನನ್ನು ಎಳೆದೊಯ್ದ. ಒಲ್ಲದ ಮನಸ್ಸಿನಿಂದ ಅವನೊಂದಿಗೆ ಸ್ವಚ್ಛತೆ ಕೆಲಸ ಮಾಡಿದೆ.
ಈ ಘಟನೆ ಮುಂದೆ ನಾನಾ ವಿಧದಲ್ಲಿ ನನಗೆ ಪ್ರೇರಣೆಯಾಯಿತು. ಪಟೇಲ್ ಆಗಾಗ್ಗೆ ಹೇಳುತ್ತಿದ್ದ ‘
ಈಗ ಈ ಕೆಲಸ ಆಗೋದಿಲ್ಲ ಅಂದ್ರೆ ಪರವಾಗಿಲ್ಲ. ಆದ್ರೆ ಟೈಮ್ ವೇಸ್ಟ್ ಮಾಡೋದು ಬೇಡ. ಬೇರೇನಾದ್ರೂ ಉಪಯುಕ್ತ ಕೆಲಸ ಮಾಡೋಣ’ ಎಂಬ ಮಾತು ನೆನಪಾಗುತ್ತಿತ್ತು.
ಬದುಕಿದ್ದಿದ್ದರೆ ಓರ್ವ ಆದರ್ಶ ಅಧಿಕಾರಿಯಾಗಿ ಬಾಳುತ್ತಿದ್ದ ಎಂಬುದರಲ್ಲಿ ಅನುಮಾನವಿರಲಿಲ್ಲ.
ಆ ಗುಣಗಳು ಅವನಲ್ಲಾಗಲೇ ಮಿಳಿತವಾಗಿದ್ದವು.

=====

ಸಿಕಂದರ್ ಪಟೇಲ್ ಗೆ ಮದುವೆ ನಿಶ್ಚಯವಾಗಿತ್ತು. ಇನ್ನು ಕೇವಲ ೨೯ ದಿನ ಇದೆ ಎನ್ನುವಾಗ ದಾರುಣ ಹತ್ಯೆಗೀಡಾಗಿದ್ದ. ಮದುವೆ ಪೋಷಾಕು ಸೂಟು ಬೂಟುಗಳನ್ನು ಕ್ವಾರ್ಟರ್ಸಿನಲ್ಲಿ ತಂದಿಟ್ಟುಕೊಂಡಿದ್ದನಂತೆ. ತನ್ನ ಜೊತೆಯ ೨೧೨ ಬ್ಯಾಚ್ ಮೇಟುಗಳಿಗೆ ಕಳಿಸಲು ಆಹ್ವಾನ ಪತ್ರಿಕೆಗಳ ಮೇಲೆ ವಿಳಾಸಗಳನ್ನು ಬರೆಯುತ್ತಿದ್ದನಂತೆ.
ಅವನೆಲ್ಲ ಕನಸುಗಳೂ ಅವನದಲ್ಲದ ತಪ್ಪಿಗಾಗಿ ಛಿದ್ರವಾಗಿದ್ದವು. ಮುಪ್ಪಿನ ತಂದೆ ತಾಯಿಗಳ ಬದುಕೂ ದುರ್ಭರವಾಯಿತು. ನ್ಯಾಯವಾಗಿ ಸಿಕ್ಕಬೇಕಿದ್ದ ಸವಲತ್ತುಗಳಿಂದಲೂ ಅವರು ವಂಚಿತರಾದರು. ಹೋಗಲಿ ಎಂದರೆ ಕಣ್ಣಾರೆ ಸಾಕ್ಷಿಗಳಿದ್ದ ಹಾಡು ಹಗಲಿನ ಕೊಲೆಯ ಕೇಸಿಗಾದರೂ ನ್ಯಾಯ ಸಿಕ್ಕಿತೇ? ಸರ್ಕಾರ ಕೇಸನ್ನು ವಾಪಸ್ ತೆಗೆದುಕೊಳ್ಳಲಾಗಿ ಕೊಲೆಗಾರರಿಗೂ ಶಿಕ್ಷೆಯಾಗಲಿಲ್ಲ. ಜೈಲು ಶಿಕ್ಷೆಯಿಂದ ಬಚಾವಾದ ರೈತರೂ ನೆನೆಯಲಿಲ್ಲ. ನಿಯಮಗಳ ತೊಡಕಿನಿಂದಾಗಿ ಸರ್ಕಾರವೂ ಅವನ ಸಾವಿಗೆ ಸ್ಪಂದಿಸಲಿಲ್ಲ. ಸೂಕ್ತ ಸ್ಮಾರಕವನ್ನೂ ನಿರ್ಮಿಸಲಿಲ್ಲ.
ಅವನ ಸಾವೊಂದು ವ್ಯರ್ಥ ಬಲಿದಾನ. ಅದೊಂದು ವ್ಯಥೆಯ ದುಃಖದ ಸಂಗತಿ bus as your batchmates we salute you with great honour dear brother ಎಂದು ಸ್ಮರಿಸಿದ್ದೇ ಬಂತು.

=====

ಈ ವ್ಯಥೆ ಇಲ್ಲಿಗೇ ಮುಗಿಯುವುದಿಲ್ಲ. ಆ ದಿನದ ಗಲಭೆಯ ಫೈರಿಂಗಿನಲ್ಲಿ ಇಬ್ಬರು ರೈತರು ಸಾವಿಗೀಡಾದರು. ರೈತ ವೀರಪ್ಪ ಬಸಪ್ಪ ಕಡಕಕೊಪ್ಪ ನರಗುಂದದಲ್ಲಿ ಸತ್ತರೆ, ಮತ್ತೊಬ್ಬ ರೈತ ನವಲುಗುಂದ ಫೈರಿಂಗಿನಲ್ಲಿ ಮೃತನಾದ. ಮೂವರು ಪೊಲೀಸರ ಹತ್ಯೆಯಾಯಿತು. ನೂರಾರು ಪೊಲೀಸರು ತೀವ್ರವಾಗಿ ಗಾಯಗೊಂಡರು.
ಅವಿವಾಹಿತ ಎಸ್.ಬಿ.ಪಟೇಲ್ ಜೊತೆಗೆ ಇನ್ನೊಬ್ಬ ಪೇದೆ ಬಸಯ್ಯ ಹಿರೇಮಠ ಕೂಡ ಹತ್ಯೆಯಾಗಿದ್ದ. ದುರಂತವೆಂದರೆ ಈತ ಹತ್ಯೆಯಾದ ಆರು ಗಂಟೆಗೆ ಒಬ್ಬ ಮಗ ಹುಟ್ಟಿದ. ಈತನೇ ಈಶ್ವರಯ್ಯ ಹಿರೇಮಠ. ಗಂಡ ತೀರಿಕೊಂಡಿದ್ದರಿಂದ ಅವಿದ್ಯಾವಂತ ಪತ್ನಿ ಕಂಡವರ ಹೊಲದಲ್ಲಿ ಕೂಲಿ ನಾಲಿ ಮಾಡಿಕೊಂಡು ಜೀವಿಸ ತೊಡಗಿದರು. ಅವರ ಪರವಾಗಿ ಸರ್ಕಾರದ ಸವಲತ್ತು ಕೊಡಿಸುವವರು ಯಾರೂ ಇರಲಿಲ್ಲ. ಇಲಾಖೆಯಲ್ಲಿದ್ದವರೂ ಆಸಕ್ತಿ ವಹಿಸಲಿಲ್ಲ. ಅವರ ಮಗ ಈಶ್ವರಯ್ಯ ಹಿರೇಮಠನಿಗೆ ೪೦ ವರ್ಷವಾದರೂ ಯಾವ ಕೆಲಸವೂ ಸಿಕ್ಕಲಿಲ್ಲ. ಬಡತನ. ಅಜ್ಞಾನ ಅಸಹಾಯಕತೆಯ ಕೂಲಿ ಬದುಕು. ಕಂಬದಿಂದ ಕಂಬಕ್ಕೆ ಅಲೆದದ್ದೇ ಬಂತು. ಅನುಕಂಪದ ಆಧಾರದಲ್ಲಿ ಕೂಡಾ ಅತನಿಗೆ ಕೆಲಸ ಸಿಗದಾಯಿತು.

ಸಿಕಂದರ್. ಬಿ.ಪಟೇಲ್ ಮತ್ತು ಮೂವರು ಪೊಲೀಸ್ ಪೇದೆಗಳ ಬಲಿದಾನ ವ್ಯರ್ಥವಾಗಿ ಹೋಯಿತು. ಮತ್ತು ಸತ್ತ ರೈತರಿಗೂ ತಕ್ಕ ಪರಿಹಾರ ಸಿಕ್ಕಲಿಲ್ಲ.
ಎಲ್ಲರೂ ಎಲ್ಲರೂ ಹುತಾತ್ಮ ಹೀರೋಗಳೇ. ಆದರೆ unsung heros !

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ