ಪಂಜು ಗಂಗೊಳ್ಳಿ
೨೦೧೦ರ ‘ವರ್ಲ್ಡ್ ಹಾಸ್ಪೆ ಸ್ ಆಂಡ್ ಪಾಲಿಎಟಿವ್ ಕೇರ್’ ದಿನದಂದು ಇಂಡಿಯನ್ ಅಸೋಸಿಯೇಷನ್ ಆಫ್ ಪಾಲಿಎಟಿವ್ ಕೇರ್ ಸಂಸ್ಥೆಯ ಕೇರಳ ವಿಭಾಗದ ಅಧ್ಯಕ್ಷ ನಾರಾಯಣ ಪೂತುಕ್ಕುಡಿಯವರ ಒಂದು ರೇಡಿಯೋ ಭಾಷಣ ಪ್ರಸಾರವಾದ ನಂತರ ಕಣ್ಣೂರು ಜಿಲ್ಲೆಯ ಮುಝಾಕ್ಕುಣ್ಣು ಎಂಬ ಹಳ್ಳಿಯ ಒಬ್ಬ ಚಹದಂಗಡಿ ಮಾಲೀಕ ೩೫ ವರ್ಷಗಳಿಂದ ಹಾಸಿಗೆ ಪಾಲಾಗಿರುವ ಒಬ್ಬಳು ಮಹಿಳಾ ರೋಗಿಯ ಬಗ್ಗೆ ತಿಳಿಸಿದರು. ಮರುದಿನ ನಾರಾಯಣ ಪೂತುಕ್ಕುಡಿ ಮತ್ತು ಕೆಲವು ಸ್ವಯಂ ಸೇವಕರು ಆ ರೋಗಿಯ ಗುಡಿಸಲಿಗೆ ಹೋಗಿ ನೋಡಿದಾಗ ಆಘಾತಕಾರಿ ದೃಶ್ಯ ಕಾಣಿಸಿತು. ಸುಮಾರು ಐವತ್ತರ ಪ್ರಾಯದ ಒಬ್ಬಳು ಮಹಿಳೆ ಕಾಟಿನ ಮೇಲೆ ಬೋರಲಾಗಿ ಮಲಗಿದ್ದಳು. ೩೫ ವರ್ಷಗಳ ಹಿಂದೆ ಒಂದು ಮರದ ದಿಮ್ಮಿ ಅವಳ ಮೇಲೆ ಬಿದ್ದು ಅವಳ ಇಡೀ ಶರೀರ ಪಾರ್ಶ್ವವಾಯು ಪೀಡಿತವಾಗಿತ್ತು. ಆಕೆ ಮಲಗಿದಲ್ಲಿ ತನ್ನ ಪಾರ್ಶ್ವವನ್ನೂ ಬದಲಾಯಿಸಲಾರಳು. ಅವಳು ಮೂತ್ರ ವಿಸರ್ಜಿಸಲು ಆ ಕಾಟಿನಲ್ಲಿ ಒಂದು ತೂತು ಮಾಡಲಾಗಿತ್ತು. ತೂತಿನ ಅಡಿ ಮೂತ್ರ ಸಂಗ್ರಹಿಸಲು ಒಂದು ಪ್ಲಾಸ್ಟಿಕ್ ಬಕೆಟ್ ಇಡಲಾಗಿತ್ತು. ನಾರಾಯಣ ಪೂತುಕ್ಕಡಿಯವರು ಸ್ವಯಂ ಸೇವಕರ ಸಹಾಯದಿಂದ ಅವಳನ್ನು ಒಂದು ಆಸ್ಪತ್ರೆಗೆ ಒಯ್ದರು. ಆಸ್ಪತ್ರೆಯಲ್ಲಿ ಆಕೆ ಆರು ತಿಂಗಳ ಕಾಲ ವೈದ್ಯಕೀಯ ಆರೈಕೆ ಪಡೆದು, ಗಾಲಿಕುರ್ಚಿಯಲ್ಲಿ ಓಡಾಡುವಂತಾಗಿ ತನ್ನ ಗುಡಿಸಲಿಗೆ ಹಿಂತಿರುಗಿದಳು.
ಇದು ಕೇರಳದಲ್ಲಿ ‘ಪಾಲಿಎಟಿವ್ ಕೇರ್’ ಆರೈಕೆ ಯೋಜನೆ ಹೇಗೆ ಕೆಲಸ ಮಾಡುತ್ತದೆ ಎಂಬುದಕ್ಕೆ ಒಂದು ಉದಾಹರಣೆ. ಕೇರಳದ ಪಾಲಿಎಟಿವ್ ಕೇರ್ ಆರೈಕೆ ಯೋಜನೆ ಇಡೀ ದೇಶದ ಸರಾಸರಿ ಪಾಲಿಎಟಿವ್ ಕೇರ್ ಆರೈಕೆಗಿಂತ ಹದಿನಾರು ಪಟ್ಟು ಹೆಚ್ಚು ಉತ್ತಮ ಎನ್ನಲಾಗುತ್ತದೆ. ದೇಶದಲ್ಲಿರುವ ಒಟ್ಟು ೨,೦೦೦ ಪಾಲಿಎಟಿವ್ ಕೇರ್ ಸಂಸ್ಥೆಗಳಲ್ಲಿ ೧,೬೦೦ಕ್ಕೂ ಹೆಚ್ಚು, ಅಂದರೆ ಶೇ.೮೦ ಪಾಲಿಎಟಿವ್ ಕೇರ್ ಸಂಸ್ಥೆಗಳು ಕೇರಳದಲ್ಲಿವೆ. ಕೇರಳದ ಪ್ರತಿ ಜಿಲ್ಲೆಯಲ್ಲೂ ಪಾಲಿಎಟಿವ್ ಕೇರ್ ಸಂಸ್ಥೆಗಳಿವೆ. ಅದರಲ್ಲೂ ವೆಂಗನೂರು ಎಂಬ ಹಳ್ಳಿಯಲ್ಲಿರುವ ಪಾಲಿಎಟಿವ್ ಕೇರ್ ಆರೈಕೆ ಕ್ರಮ ಮಾದರಿಯಾದುದು.
ಗುಣಪಡಿಸಲಾಗದಂತಹ ರೋಗಗಳಿಂದ ಬಳಲುವವರಿಗೆ, ಹಾಸಿಗೆ ಹಿಡಿದು ಸಾವಿನ ನಿರೀಕ್ಷೆಯಲ್ಲಿರುವವರಿಗೆ ಪಾಲಿಎಟಿವ್ ಕೇರ್ ಆರೈಕೆ ಒದಗಿಸುವುದು ಬಹು ದುಬಾರಿಯಾದುದು. ಆದರೆ, ವೆಂಗನೂರಿನಲ್ಲಿ ಎಷ್ಟೇ ಬಡವರಾದರೂ ಅವರು ಎಷ್ಟೇ ದೀರ್ಘಕಾಲದ ಅವಽಗೂ ಪಾಲಿಎಟಿವ್ ಕೇರ್ ಆರೈಕೆ ಪಡೆಯಬಹುದು. ಇದಕ್ಕೆ ಕಾರಣ ವೆಂಗನೂರು ಪಂಚಾಯತ್ ತನ್ನ ಗ್ರಾಮದ ಜನರಿಗೆ ಉಚಿತವಾಗಿ ಒದಗಿಸುವ ಪಾಲಿಎಟಿವ್ ಕೇರ್ ಆರೈಕೆ. ವೆಂಗನೂರು ಪಂಚಾಯತ್ ರೋಗಿಗಳ ಪಾಲಿಎಟಿವ್ ಕೇರ್‌ಗೆ ಆರೈಕೆಗೆ ತಗಲುವ ವೆಚ್ಚವನ್ನು ಭರಿಸುವುದು ಮಾತ್ರವಲ್ಲದೆ ರೋಗಿಗಳ ಮನೆ ಬಾಗಿಲಿಗೇ ಪಾಲಿಎಟಿವ್ ಕೇರ್ ಆರೈಕೆಯನ್ನು ತಲುಪಿಸುತ್ತದೆ.
ವೆಂಗನೂರಿನ ಜನಸಂಖ್ಯೆ ೪೫,೦೦೦. ಸುಮಾರು ೧೦,೦೦೦ ಮನೆಗಳಿವೆ. ಜನಸಂಖ್ಯೆಯ ಶೇ.೨೨ ಪ್ರಮಾಣ ಹಿರಿಯ ನಾಗರಿಕರು. ವೆಂಗನೂರು ಪಂಚಾಯತ್ ಪಾಲಿಎಟಿವ್ ಕೇರ್ ಆರೈಕೆ. ಅಗತ್ಯವಿರುವ ೨೬೬ ರೋಗಿಗಳನ್ನು ಗುರುತಿಸಿದೆ. ಇವರಲ್ಲಿ ೧೩೦ ರೋಗಿಗಳು ಹೃದಯ ಕಾಯಿಲೆ, ಪಾರ್ಶ್ವವಾಯು, ಕ್ಯಾನ್ಸರ್, ಲಿವರ್ ಸಿರ‍್ಹೋಸಿಸ್, ರ‍್ಹಿಮಾಟಾಯ್ಡ್ ಆತ್ರೆ ಟಿಸ್, ಪ್ಯಾರಾಪ್ಲೆಜಿಯಾ ಅಥವಾ ಕ್ವಾಡ್ರಿಪ್ಲೆಜಿಯಾ ಮತ್ತು ಡಯಾಲಿಸಿಸ್‌ಗೆ ಒಳಗಾಗಿ ಸಂಪೂರ್ಣವಾಗಿ ಹಾಸಿಗೆ ಹಿಡಿದವರು.
೬೨ ವರ್ಷ ಪ್ರಾಯದ ಸೌದಮ್ಮಾ ಎಂಬವರ ತಾಯಿ ರಕ್ತದೊತ್ತಡ ಹಾಗೂ ಇತರ ವಯೋಸಹಜ ಕಾಯಿಲೆಗಳು ತಗುಲಿ ಹಾಸಿಗೆ ಹಿಡಿದಿದ್ದಾರೆ. ಮೂತ್ರ ಶಂಕೆಯ ಮೇಲೆ ನಿಯಂತ್ರಣವಿಲ್ಲದಿರುವುದರಿಂದ ಅವರಿಗೆ ಸಿಕ್ಕಿಸಿರುವ ಯೂರಿನರಿ ಕ್ಯಾತೆರ್ಟರ್‌ಗೆ ಲಗತ್ತಿಸಿದ ಮೂತ್ರದ ಚೀಲವನ್ನು ಆಗಾಗ್ಗ ಬದಲಾಯಿಸಬೇಕಾಗುತ್ತದೆ. ತಾನೇ ಸ್ವತಃ ವಯಸ್ಸಾಗಿ ಸಿಹಿಮೂತ್ರದಿಂದಾಗಿ ಅನಾರೋಗ್ಯ ಪೀಡಿತರಾಗಿರುವ ಸೌದಮ್ಮಾ ಅದನ್ನು ಮಾಡಲಾರರು. ಆಂಬ್ಯುಲೆನ್ಸ್ ಅಥವಾ ಟ್ಯಾಕ್ಸಿ ಮಾಡಿ ಅವರನ್ನು ಆಗಾಗ್ಗೆ ಆಸ್ಪತ್ರೆಗೆ ಒಯ್ಯುವ ಆರ್ಥಿಕ ಅನುಕೂಲತೆಯೂ ಅವರಿಗಿಲ್ಲ. ಆದರೂ ಸೌದಮ್ಮಾ ನಿಶ್ಚಿಂತರಾಗಿದ್ದಾರೆ. ಏಕೆಂದರೆ, ವೆಂಗನೂರು ಪಂಚಾಯತ್ ನೇಮಿಸಿದ ಒಂದು ಪಾಲಿಎಟಿವ್ ಕೇರ್ ತಂಡವು ನಿಯಮಿತವಾಗಿ ಅವರ ಮನೆಗೆ ಬಂದು ಸೌದಮ್ಮಾನ ತಾಯಿಯ ಆರೈಕೆ ಮಾಡಿ ಹೋಗುತ್ತದೆ.
ಸೆರೆಬ್ರಲ್ ಪಾಲ್ಸಿ ಕಾಯಿಲೆಯಿಂದ ಬಳಲುವ ೩೦ ವರ್ಷ ಪ್ರಾಯದ ಅನೀಶ್ ತಾನೇ ನಡೆಯಲಾರ. ವ್ಯಾಸ್ಕುಲರ್ ಅಲ್ಸರ್ ಪೀಡಿತೆಯಾಗಿರುವ ಅವನ ವಿಧವೆ ಅಕ್ಕ ರೀನಾ ಅವನನ್ನು ನೋಡಿಕೊಳ್ಳಬೇಕು. ಅವರ ಅಪ್ಪ ಅಮ್ಮ ದಿನಗೂಲಿ ಕಾರ್ಮಿಕರು. ಅನೀಶ್ ಮತ್ತು ರೀನಾರಿಗೆ ಒಂದು ಪಾಲಿಎಟಿವ್ ಕೇರ್ ಆರೈಕೆ ತಂಡವು ನಿಯಮಿತವಾಗಿ ಬಂದು ಸಾಂತ್ವನ ನೀಡಿ ಹೋಗುತ್ತದೆ. ಪಾಲಿಎಟಿವ್ ಕೇರ್ ಆರೈಕೆಯ ಅಗತ್ಯವಿರುವ ವೆಂಗನೂರಿನ ೨೬೬ ರೋಗಿಗಳಲ್ಲಿ ೨೨ ಕ್ಯಾನ್ಸರ್ ರೋಗಿಗಳಿದ್ದು, ಅವರಲ್ಲಿ ನಾಲ್ವರಿಗೆ ಮಾರ್ಫಿನ್ ಇಂಜೆಕ್ಷನ್ ಕೊಡಬೇಕು. ಮಾರ್ಫಿನ್ ನೀಡುವುದು ಅತ್ಯಂತ ಸೂಕ್ಷ ಪ್ರಕ್ರಿಯೆಯಾಗಿರುವುದರಿಂದ ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿರುವ ಹೆಚ್ಚಿನ ಡಾಕ್ಟರುಗಳು ಮಾರ್ಫಿನ್ ನೀಡುವ ಲೈಸನ್ಸನ್ನು ಹೊಂದಿರುವುದಿಲ್ಲ. ವೆಂಗನೂರಿನಲ್ಲಿ ಸೂಕ್ತ ತರಬೇತಿ ಪಡೆದ ‘ಪ್ಯಾಲಿಯಮ್ ಇಂಡಿಯಾ’ದ ವೈದ್ಯರುಗಳು ಮಾರ್ಫಿನ್ ಇಂಜೆಕ್ಷನ್ ನೀಡುತ್ತಾರೆ.
ಕೇರಳ ಇಡೀ ದೇಶದಲ್ಲಿ ಉಚಿತ ಸಾರ್ವಜನಿಕ ಪಾಲಿಎಟಿವ್ ಕೇರ್ ವ್ಯವಸ್ಥೆ ಹೊಂದಿರುವ ಮೊತ್ತ ಮೊದಲ ರಾಜ್ಯ. ವೆಂಗನೂರು ಇಡೀ ಕೇರಳದಲ್ಲೇ ಅತ್ಯುತ್ತಮ ಪಾಲಿಎಟಿವ್ ಕೇರ್ ಆರೈಕೆ ನೀಡಲು ಪಣತೊಟ್ಟಿರುವ ಗ್ರಾಮ. ವೆಂಗನೂರಿನ ಆಶಾ ಕಾರ್ಯಕರ್ತೆಯರು ಪಾಲಿಎಟಿವ್ ಕೇರ್ ಆರೈಕೆಯ ಅಗತ್ಯವಿರುವ ರೋಗಿಗಳನ್ನು ಗುರುತಿಸಿ, ಪಂಚಾಯಿತಿಗೆ ಮಾಹಿತಿ ಕೊಡುತ್ತಾರೆ. ಪಂಚಾಯತ್ ರೋಗಿಯ ಅಗತ್ಯವನ್ನು ಅನುಸರಿಸಿ ಗಾಲಿಕುರ್ಚಿ, ವಾಟರ್ ಬೆಡ್, ಏರ್ ಬೆಡ್, ಆಕ್ಸಿಜನ್ ಕಾನ್ಸೆಂಟೇಟರ್, ಚೇರ್ ಕಮೋಡ್, ವಾಕರ್ ಮತ್ತು ವಿಶೇಷ ರೀತಿಯ ಆಸ್ಪತ್ರೆ ಹಾಸಿಗೆಗಳನ್ನು ಪೂರೈಸುತ್ತದೆ. ಕೆಲವು ರೋಗಿಗಳಿಗೆ ಇವುಗಳು ದೀರ್ಘ ಕಾಲ ಬಳಕೆಗೆ ಬೇಕಾದರೆ, ಇನ್ನುಳಿದವರಿಗೆ ತಾತ್ಕಾಲಿಕ ಸಮಯಕ್ಕೆ ಮಾತ್ರ ಬೇಕಾಗಬಹುದು. ಆಗ ಇವುಗಳನ್ನು ಬೇರೆ ರೋಗಿಗಳ ಉಪಯೋಗಕ್ಕಾಗಿ ಪಂಚಾಯಿತಿಗೆ ವಾಪಸ್ ಮಾಡಲಾಗುತ್ತದೆ.
ಕೇರಳ ೨೦೦೮ರಲ್ಲಿ ಪಾಲಿಎಟಿವ್ ಕೇರ್ ಪಾಲಿಸಿಯನ್ನು ಜಾರಿಗೆ ತಂದ ನಂತರ ರಾಜ್ಯದ ಪ್ರತಿಯೊಂದೂ ಪಂಚಾಯಿತಿಯಲ್ಲೂ ಒಂದು ಪಾಲಿಎಟಿವ್ ಕೇರ್ ಘಟಕವನ್ನು ಹೊಂದಿರುವುದು ಕಡ್ಡಾಯವಾಗಿದೆ. ಇಲ್ಲವಾದರೆ ರಾಜ್ಯ ಸರ್ಕಾರದಿಂದ ತಮ್ಮ ವಾರ್ಷಿಕ ಬಜೆಟಿಗೆ ಬೇಕಾಗುವ ಫಂಡನ್ನು ಪಡೆಯಲು ಸಾಧ್ಯವಾಗುವುದಿಲ್ಲ. ರಾಜ್ಯದ ಪ್ರತಿ ಪಂಚಾಯಿತಿಯೂ ತನ್ನ ಬಜೆಟಿನ ಕನಿಷ್ಠ ಶೇ.೫ರಷ್ಟನ್ನಾದರೂ ಪಾಲಿಎಟಿವ್ ಕೇರ್ ಆರೈಕೆಗೆ ವಿನಿಯೋಗಿಸಬೇಕು. ವೆಂಗನೂರು ಕೇರಳದ ಬೇರೆಲ್ಲ ಪಂಚಾಯಿತಿಗಳಿಗಿಂತ ಹೆಚ್ಚಿನ ಹಣವನ್ನು ಪಾಲಿಎಟಿವ್ ಕೇರ್ ಆರೈಕೆಗೆ ಖರ್ಚು ಮಾಡುತ್ತದೆ. ಅದು ಪ್ರತಿ ವರ್ಷ ಪಾಲಿಎಟಿವ್ ಕೇರ್ ಆರೈಕೆಗೆ ಖರ್ಚು ಮಾಡುವ ಹಣ ೧೮ ಲಕ್ಷ ರೂಪಾಯಿಗೂ ಹೆಚ್ಚು.
ಪಾಲಿಎಟಿವ್ ಕೇರ್ ಆರೈಕೆಯ ಅಗತ್ಯವಿರುವ ವೆಂಗನೂರಿನ ೨೬೬ ರೋಗಿಗಳಲ್ಲಿ ೨೨ ಕ್ಯಾನ್ಸರ್ ರೋಗಿಗಳಿದ್ದು, ಅವರಲ್ಲಿ ನಾಲ್ವರಿಗೆ ಮಾರ್ಫಿನ್ ಇಂಜೆಕ್ಷನ್ ಕೊಡಬೇಕು. ಮಾರ್ಫಿನ್ ನೀಡುವುದು ಅತ್ಯಂತ ಸೂಕ್ಷ ಪ್ರಕ್ರಿಯೆಯಾಗಿರುವುದರಿಂದ ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿರುವ ಹೆಚ್ಚಿನ ಡಾಕ್ಟರುಗಳು ಮಾರ್ಫಿನ್ ನೀಡುವ ಲೈಸನ್ಸನ್ನು ಹೊಂದಿರುವುದಿಲ್ಲ. ವೆಂಗನೂರಿನಲ್ಲಿ ಸೂಕ್ತ ತರಬೇತಿ ಪಡೆದ ‘ಪ್ಯಾಲಿಯಮ್ ಇಂಡಿಯಾ’ದ ವೈದ್ಯರುಗಳು ಮಾರ್ಫಿನ್ ಇಂಜೆಕ್ಷನ್ ನೀಡುತ್ತಾರೆ