ದೆಹಲಿ ಕಣ್ಣೋಟ
ಶಿವಾಜಿ ಗಣೇಶನ್
ಬಿಹಾರ ಐತಿಹಾಸಿಕವಾಗಿ ಪ್ರಸಿದ್ಧಿ ಪಡೆದ ರಾಜ್ಯ. ಗೌತಮ ಬುದ್ಧರಿಗೆ ಬೋಧ ಗಯಾದಲ್ಲಿ ಜ್ಞಾನೋದಯವಾದರೆ, ಜೈನ ಧರ್ಮ ಉದಯವಾದ ರಾಜ್ಯವಿದು. ೨೪ನೇ ತೀರ್ಥಂಕರ ವರ್ಧಮಾನ ಮಹಾವೀರ ಜನಿಸಿದ್ದು ಇದೇ ರಾಜ್ಯದ ವೈಶಾಲಿ ನಗರದಲ್ಲಿ. ಎರಡು ಪುರಾತನ ಧರ್ಮಗಳ ನೆಲೆಯಾದ ಬಿಹಾರಕ್ಕೆ ಇಂದು ಬೇರೆಯದೇ ವರ್ಚಸ್ಸು ಇದೆ. ಮೂರು ದಶಕಗಳ ಹಿಂದೆ ಬಿಹಾರ ಭೂಮಾಲೀಕ ಜಾತಿಗಳಾದ ಭೂಮಿಹಾರ್, ರಜಪೂತರ ಮತ್ತು ಹಿಂದುಳಿದ ಜಾತಿಗಳಾದ ಕುರ್ಮಿ ಮತ್ತು ಯಾದವರ ದಬ್ಬಾಳಿಕೆ ಮತ್ತು ಅಟ್ಟಹಾಸಕ್ಕೆ ಕುಖ್ಯಾತಿಯಾಗಿತ್ತು. ಈ ಜಾತಿಗಳ ಅಟ್ಟಹಾಸದಿಂದ ಹಲವು ಕಡೆ ನೂರಾರು ದಲಿತರ ಸಾಮೂಹಿಕ ಹತ್ಯಾಕಾಂಡದ ಇತಿಹಾಸದೊಂದಿಗೆ ಅತ್ಯಂತ ಬಡತನದ ರಾಜ್ಯ ಎಂಬ ಕಳಂಕವನ್ನೂ ಅಂಟಿಸಿಕೊಂಡಿತ್ತು.
ಎಪ್ಪತ್ತರ ದಶಕದಲ್ಲಿ ಜಾತಿ ತಾರತಮ್ಯದ ವಿರುದ್ಧದ ಹೋರಾಟಕ್ಕೂ ಬಿಹಾರ ಹೆಸರುವಾಸಿಯಾಗಿತ್ತು. ಸಮಾನತೆಯನ್ನು ಬೋಧಿಸುತ್ತಿದ್ದ ಸಮಾಜವಾದ ವನ್ನು ಅಪ್ಪಿಕೊಂಡ ಕರ್ಪೂರಿ ಠಾಕೂರ್, ಸಂಪೂರ್ಣ ಕ್ರಾಂತಿಗೆ ಬೀಜ ಬಿತ್ತಿದ್ದ ಸರ್ವೋದಯ ನಾಯಕ ಜಯಪ್ರಕಾಶ್ ನಾರಾಯಣ ಅವರು ಜನಿಸಿ ಹೋರಾಟ ಮಾಡಿದ ರಾಜ್ಯವಿದು. ದೇಶದ ಮೊದಲ ರಾಷ್ಟ್ರಪತಿಯಾಗಿದ್ದ ಬಾಬು ರಾಜೇಂದ್ರ ಪ್ರಸಾದ್ , ಕಾಂಗ್ರೆಸ್ಸಿನ ದಿಗ್ಗಜ ಕಮಲಾಪತಿ ತ್ರಿಪಾಠಿ, ದಲಿತ ವರ್ಗದಿಂದ ಬಂದ ಮಹಾನ್ ನಾಯಕ ಮಾಜಿ ಉಪಪ್ರಧಾನಿ ಜಗಜೀವನ ರಾಂ,೧೯೬೮ರಿಂದ ೧೯೭೧ರ ಅವಧಿಯಲ್ಲಿ ಒಮ್ಮೆ ೧೦೦ ದಿನ, ಮತ್ತೊಮ್ಮೆ ೧೩ ದಿನ ಮತ್ತು ಕೊನೆಗೊಮ್ಮೆ ೭ ದಿನ ಮುಖ್ಯಮಂತ್ರಿ ಆಗಿದ್ದ ಬೋಲಾ ಪಾಸ್ವಾನ್ ಶಾಸ್ತ್ರಿ ಮತ್ತು ಇತ್ತೀಚೆಗೆ ನಿಧನರಾದ ರಾಂ ವಿಲಾಸ್ ಪಾಸ್ವಾನ್ ಮತ್ತು ಹೋರಾಟದ ಬದುಕಿನ ಮೂಲಕ ರಾಜಕೀಯ ನೆಲೆ ಕಂಡುಕೊಂಡಿದ್ದ ಜಾರ್ಜ್ ಫರ್ನಾಂಡೀಸ್ ಅಂತಹ ಮಹಾನ್ ನಾಯಕರ ಕರ್ಮಭೂಮಿಯಾಗಿತ್ತು.
ಶ್ರೇಷ್ಠ ಇತಿಹಾಸದ ಹಿನ್ನೆಲೆ ಹೊಂದಿದ್ದರೂ ಬಿಹಾರ ಎಂದರೆ ಅದೊಂದು ‘ಬಿಮಾರು’ (ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ರೋಗಗ್ರಸ್ತ ರಾಜ್ಯ) ರಾಜ್ಯ ಎಂದೇ ಹೆಸರುವಾಸಿಯಾಗಿದೆ. ಎಪ್ಪತ್ತರ ದಶಕದ ಆರಂಭದ ವರ್ಷಗಳಲ್ಲಿ ಸಂಪೂರ್ಣ ಕ್ರಾಂತಿಗೆ ಕಾರಣವಾಗಿದ್ದ ಮುಖ್ಯಮಂತ್ರಿ ಅಬ್ದುಲ್ಗಫೂರ್ ಖಾನ್‌ರ ಭ್ರಷ್ಟ ಆಡಳಿತದ ಕಳಂಕ, ಸಹಸ್ರಾರು ಕೋಟಿ ರೂ. ಮೇವು ಹಗರಣದ ಲಾಲೂ ಪ್ರಸಾದ್ ಯಾದವ್ ಆಳ್ವಿಕೆಯವರೆಗೂ ಮುಂದುವರಿದಿತ್ತು. ಆದರೂ ಭೂಮಿಹಾರರ ನೇತೃತ್ವದ ರಣವೀರ ಸೇನೆ ಎಂಬ ಬಲಿಷ್ಠ ಜಾತಿಗಳ ಅಟ್ಟಹಾಸ ಇತ್ತೀಚಿನ ವರ್ಷಗಳವರೆಗೂ ಇತ್ತು. ದೇಶದ ಮುಖ್ಯ ಚುನಾವಣಾ ಆಯುಕ್ತರಾಗಿ ಟಿ.ಎನ್. ಶೇಷನ್ ಬರುವವರೆಗೂ ಅಲ್ಲಿ ಚುನಾವಣೆಗಳು ನಡೆದರೂ ಅವು ಜನತಾಂತ್ರಿಕವಾಗಿ ನಡೆದ ಇತಿಹಾಸ ಇರಲಿಲ್ಲ. ದಲಿತರು ಮತಗಟ್ಟೆಗಳಿಗೆ ಬರದಂತೆ ತಡೆಯುವುದು ಮತ್ತು ಕೆಲವು ಕಡೆ ಮತಚಲಾಯಿಸಿದ್ದರೂ ಚುನಾವಣಾ ಮತಗಟ್ಟೆಗಳಿಗೆ ನುಗ್ಗಿ ಮತಪೆಟ್ಟಿಗೆಗಳನ್ನೇ ಎತ್ತಿಕೊಂಡು ಹೋಗುತ್ತಿದ್ದ ಅನಾಗರಿಕ ಕ್ರೂರ ವ್ಯವಸ್ಥೆ ಸಾಮಾನ್ಯ ಎನ್ನುವಂತೆ ಇತ್ತು. ಚುನಾವಣಾ ಪರಿಸ್ಥಿತಿ ಸುಧಾರಿಸುತ್ತಿದ್ದಂತೆ ಜನತಂತ್ರ ವ್ಯವಸ್ಥೆ ಇತ್ತೀಚೆಗೆ ಜಾರಿಯಾದಂತೆ ಕಾಣುತ್ತಿದೆ.
ಆದರೆ ಈಗ ನಿಧಾನವಾಗಿ ಬಿಹಾರ ರಾಜ್ಯ ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ಮುನ್ನಡೆಯುತ್ತಿರುವುದು ಗೋಚರಿಸುತ್ತಿದೆ. ೨೦೧೧ರ ಜನಗಣತಿಯಂತೆ ಸಾಕ್ಷರತೆ ಪ್ರಮಾಣ ಶೇ. ೬೧. ೮ ಇದ್ದದ್ದು, ೨೦೧೫-೧೬ರಲ್ಲಿನ್ಯಾಷನಲ್ ಮಲ್ಟಿಡೈಮೆನ್ಷನಲ್ ಪಾವರ್ಟಿ ಇಂಡೆಕ್ಸ್ ಪ್ರಕಾರ ಶೇ.೭೯.೭ ಮುಟ್ಟಿ ಅಚ್ಚರಿ ಮೂಡಿಸಿದೆ. ಈ ಸಾಕ್ಷರತೆಯಲ್ಲಿ ಪುರುಷರು ಶೇ.೮೪.೯, ಮಹಿಳೆಯರ ಸಾಕ್ಷರತಾ ಪ್ರಮಾಣ ಶೇ.೭೯. ೧ ಇದೆ. ನಗರ ಪ್ರದೇಶಗಳಲ್ಲಿ ಸಾಕ್ಷರತಾ ಪ್ರಮಾಣ ಶೇ.೮೩ .೧ ಇದ್ದರೆ, ಗ್ರಾಮೀಣ ಭಾಗಗಳಲ್ಲಿ ಶೇ. ೭೮ರಷ್ಟಿದೆ. ೨೦೨೧-೨೨ರ ಅವಽಯಲ್ಲಿ ನಡೆದ ಸಮೀಕ್ಷೆಯಂತೆ ಹಾಗೆಯೇ ಬಡತನದ ಪ್ರಮಾಣವು ೩೩.೭೬ಕ್ಕೆ ಇಳಿದಿದೆ.
ಇದೇನೇ ಇದ್ದರೂ ಮೇಲ್ನೋಟಕ್ಕೆ ಬೇರೆ ರಾಜ್ಯಗಳಿಗೆ ಹೋಲಿಸಿದರೆ ಬಿಹಾರ ಇನ್ನೂ ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದಿದೆ ಎನ್ನುವ ಚಿತ್ರಣ ನಮ್ಮ ಕಣ್ಣ ಮುಂದಿದೆ. ಎರಡು ದಶಕಗಳಿಂದ ಮೇವು ಹಗರಣದಿಂದ ಮತ್ತು ಜಂಗಲ್ ರಾಜ್ಯ ಎಂದೇ ಹೆಸರಾಗಿದ್ದ ಲಾಲೂ ಪ್ರಸಾದ್ ಯಾದವ್ ಆಳ್ವಿಕೆ ಹೆಚ್ಚು ಕಡಿಮೆ ಅಂತ್ಯಗೊಂಡ ನಂತರ ಪರಿಸ್ಥಿತಿ ಸುಧಾರಿಸುತ್ತಿದ್ದರೂ, ರಾಜಕೀಯ ಅಸ್ಥಿರತೆ ಮುಂದುವರಿದಿದೆ. ಈ ಅಸ್ಥಿರ ರಾಜಕೀಯ ಪರಿಸ್ಥಿತಿ ಈಗ ಬಿಹಾರಕ್ಕೆ ವರದಾನವೇ ಆಗಿದೆ. ಆಗಿಂದಾಗ್ಗೆ ಪಕ್ಷಗಳ ಆಡಳಿತ ವ್ಯವಸ್ಥೆ ಬದಲಾಗುತ್ತಲೇ ಇದೆ. ಈ ಅತಂತ್ರ ರಾಜಕೀಯ ವ್ಯವಸ್ಥೆಯೂ ಆ ರಾಜ್ಯದ ಅಭಿವೃದ್ಧಿಗೆ ಪೂರಕವಾಗಿಯೇ ಇರುವುದು ವಿಚಿತ್ರ ಅನಿಸಿದರೂ ಸತ್ಯ.
ಸ್ವಾತಂತ್ರ್ಯದ ನಂತರದ ವರ್ಷಗಳಲ್ಲಿ ಕಾಂಗ್ರೆಸ್ ಇಲ್ಲಿ ಭದ್ರ ನೆಲೆಯನ್ನು ಕಂಡುಕೊಂಡಿತ್ತಾದರೂ, ಬಲಿಷ್ಠ ನಾಯಕತ್ವದ ಕೊರತೆಯಿಂದ ಅದೀಗ ಪರಾವಲಂಬಿ ಪಕ್ಷವಾಗಿದೆ. ತುರ್ತುಪರಿಸ್ಥಿತಿಯ ನಂತರ ಜೆಪಿ ಚಳವಳಿಯ ಪ್ರಭಾವದಿಂದ ಜನತಾ ಪರಿವಾರದ ಆಡಳಿತ ಹಲವು ವರ್ಷ ನಡೆಯಿತು. ಅದು ಛಿದ್ರವಾದ ನಂತರ ಅದರ ಕೊಂಬೆಗಳಂತೆ, ರಾಷ್ಟ್ರೀಯ ಜನತಾದಳ, ಜನತಾದಳ (ಯು) ಮತ್ತು ಬಿಜೆಪಿ ಪ್ರಭಾವ ಬೆಳೆದಿದೆ. ಹಾಗಾಗಿ ಜಾತ್ಯತೀತ ಮತ್ತು ಕೋಮುವಾದಿ ಬಣಗಳ ಹೆಸರಿನಲ್ಲಿ ಎರಡು ರಾಜಕೀಯ ಶಕ್ತಿ ಕೇಂದ್ರಗಳಾಗಿ ರಾಜಕಾರಣ ನಡೆದು ಬರುತ್ತಿದೆ. ಇದೆಲ್ಲ ಮೇಲ್ನೋಟಕ್ಕಷ್ಟೆ. ಆರು ಕೊಟ್ಟರೆ ಅತ್ತೆ ಕಡೆ, ಮೂರು ಕೊಟ್ಟರೆ ಸೊಸೆ ಕಡೆ ಎನ್ನುವ ಗಾದೆಯಂತೆ ಇಲ್ಲಿನ ಆಡಳಿತ ನಡೆದಿದೆ. ಈಗಿನ ಮುಖ್ಯಮಂತ್ರಿ ನಿತೀಶ್ ಕುಮಾರ್ ಈ ಐದು ವರ್ಷಗಳ ಅವಧಿಯಲ್ಲಿ ಎರಡು ಬಣಗಳನ್ನೂ ಸೇರಿ ಮುಖ್ಯಮಂತ್ರಿ ಗಾದಿಯ ಸುಖ ಅನುಭವಿಸುತ್ತಿದ್ದಾರೆ. ಅವರ ಈ ಅಯಾರಾಂ ಗಯಾರಾಂ ಕಾರಣಕ್ಕೆ ನಿತೀಶ್ ಕುಮಾರ್ ಅವರನ್ನು ಹಿಂದಿಯಲ್ಲಿ ‘ಪಲ್ಟು ಕುಮಾರ್’ ಎಂದೇ ಗೇಲಿ ಮಾಡಲಾಗುತ್ತಿದೆ. ಆದರೆ ಮತ್ತೆ ತಾನು ‘ಎನ್‌ಡಿಎ’ ಬಣ ಬಿಟ್ಟು ಕಾಂಗ್ರೆಸ್ ನೇತೃತ್ವದ ‘ಇಂಡಿಯಾ’ ಬಣದತ್ತ ಮುಖ ಹಾಕುವುದಿಲ್ಲ ಎಂದು ಇತ್ತೀಚೆಗೆ ಬಿಹಾರದ ಜನರಿಗೆ ವಚನ ನೀಡಿರುವುದು ಬಿಜೆಪಿ ಬಣಕ್ಕೆ ಬಲಬಂದಂತಾಗಿದೆ.
ಎಪ್ಪತ್ತೈದು ವರ್ಷ ದಾಟಿರುವ ನಿತೀಶ್ ಕುಮಾರ್ ಮತ್ತೆ ಇನ್ನೂ ಐದು ವರ್ಷಗಳ ಅವಧಿಗೆ ಮುಖ್ಯಮಂತ್ರಿಯಾಗಿ ಮುಂದುವರಿದು ತನಗೆ ದೊರೆಯುವ ಅಧಿಕಾರವನ್ನು ರಾಜಕೀಯ ಪ್ರವೇಶ ಮಾಡಿರುವ ತನ್ನ ಪುತ್ರ ನಿಶಾಂತ್ ಕುಮಾರ್ ಅವರಿಗೆ ವರ್ಗಾಯಿಸುವ ದೂರಾಲೋಚನೆ ಅವರದ್ದು. ೨೪೩ ವಿಧಾನಸಭೆ ಸ್ಥಾನಗಳನ್ನು ಹೊಂದಿರುವ ಈಗಿನ ಪಕ್ಷಗಳ ಬಲಾಬಲ ಬಿಜೆಪಿ-ಜನತಾದಳ (ಯು ) ಬಣವು ೧೩೧ ಸಂಖ್ಯೆ ಹೊಂದಿದ್ದರೆ, ಆರ್ ಜೆ ಡಿ-ಕಾಂಗ್ರೆಸ್ ನೇತೃತ್ವದ ಇಂಡಿಯಾ ಬಣದ ಬಲವು ೧೧೧ ಇದೆ. ನಿತೀಶ್ ಪಕ್ಷದ ಸಂಖ್ಯಾಬಲ ೪೫ ಇದ್ದರೂ, ೮೦ ಸ್ಥಾನಗಳನ್ನು ಹೊಂದಿರುವ ಬಿಜೆಪಿಯ ಬೆಂಬಲದಿಂದ ನಿತೀಶ್ ಮುಖ್ಯಮಂತ್ರಿಯಾಗಿ ಮುಂದುವರಿದಿದ್ದಾರೆ. ಈ ಎಲ್ಲ ಬೆಳವಣಿಗೆಗಳ ನಡುವೆ ಬಿಹಾರ ರಾಜ್ಯ ಈಗ ಚುನಾವಣೆಯ ಹೊಸ್ತಿಲಿಗೆ ಬಂದು ನಿಂತಿದೆ. ಅಕ್ಟೋಬರ್ ಅಥವಾ ನವೆಂಬರ್‌ನಲ್ಲಿ ರಾಜ್ಯ ವಿಧಾನಸಭೆಗೆ ಚುನಾವಣೆ ನಡೆಯುವುದು ಬಹುತೇಕ ಖಚಿತವಾಗಿದೆ.
ಚುನಾವಣೆ ಹತ್ತಿರವಾಗುತ್ತಿದ್ದಂತೆ ವಿರೋಧ ಪಕ್ಷವನ್ನು ಕೇಂದ್ರದಲ್ಲಿ ತಮಗಿರುವ ಅಧಿಕಾರವನ್ನು ಬಳಸಿ ನಿರ್ನಾಮ ಮಾಡಲು ಪ್ರಧಾನಿ ನರೇಂದ್ರ ಮೋದಿ ಅವರು ಹಟಕ್ಕೆ ಬಿದ್ದವರಂತೆ ಈಗಾಗಲೇ ಅಂದರೆ ಜನವರಿಯಿಂದ ಇಲ್ಲಿಯವರೆಗೆ ಐದು ಬಾರಿ ಸರ್ಕಾರಿ ಕಾರ್ಯಕ್ರಮಗಳ ಹೆಸರಿನಲ್ಲಿ ಚುನಾವಣಾ ಪ್ರಚಾರ ಆರಂಭಿಸಿದ್ದಾರೆ. ಬಿಜೆಪಿಯು ಕಳೆದ ಲೋಕಸಭೆ ಚುನಾವಣೆಯಲ್ಲಿ ಅಧಿಕಾರ ಹಿಡಿಯಲು ಬೇಕಾದ ೨೭೧ ಸ್ಥಾನಗಳನ್ನು ಗಳಿಸಲಾಗದೆ ಕೇವಲ ೨೪೦ ಸ್ಥಾನಗಳನ್ನು ಪಡೆದ ಕಾರಣ ಬಿಹಾರದ ಜನತಾದಳ (ಯು) ೧೨ ಮತ್ತು ಆಂಧ್ರದ ತೆಲುಗುದೇಶಂನ ೧೬ ಸದಸ್ಯ ಬಲ ಮತ್ತು ಇತರೆ ಸಣ್ಣಪುಟ್ಟ ಪಕ್ಷಗಳ ಹಾಗೂ ಪಕ್ಷೇತರರ ಬೆಂಬಲವನ್ನು ಪಡೆದಿರುವುದು ಗೊತ್ತಿರುವ ಸಂಗತಿ. ಆದರೂ, ಈ ಪರಿಸ್ಥಿತಿಯ ಲಾಭವನ್ನು ಬಿಹಾರ ಮತ್ತು ಆಂಧ್ರ ಪ್ರದೇಶಗಳು ಪಡೆಯುತ್ತಿರುವುದು ಈಗಿನ ರಾಜಕೀಯ ವಿದ್ಯಮಾನ.
ಕೇಂದ್ರದಲ್ಲಿ ತನ್ನ ಆಡಳಿತವನ್ನು ಭದ್ರಗೊಳಿಸಿಕೊಳ್ಳುವುದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಈ ವರ್ಷದ ಬಜೆಟ್ಟಿನಲ್ಲಿ ಬಿಹಾರಕ್ಕೆ ೫೪.೫೭೫ ಕೋಟಿ ರೂ. ಅನುದಾನವನ್ನು ಘೋಷಿಸಿದ್ದಾರೆ. ಮೋದಿ ಅವರು ತಮ್ಮ ಈ ಹತ್ತು ವರ್ಷಗಳ ಅಧಿಕಾರಾವಧಿಯಲ್ಲಿ ಬಿಹಾರಕ್ಕೆ ೨.೮ ಲಕ್ಷ ಕೋಟಿ ರೂ. ಅನುದಾನ ನೀಡಿದ್ದಾರೆ. ಸವಿಸ್ತಾರವಾದ ಹೆಚ್ಚು ಭೂ ಪ್ರದೇಶ, ಅಧಿಕ ಜನಸಂಖ್ಯೆಯ ಕಾರಣ ಬಿಹಾರ ಕೇಂದ್ರ ಸರ್ಕಾರದ ಹೆಚ್ಚಿನ ಅನುದಾನವನ್ನು ಪಡೆಯುತ್ತಿದೆ. ಆದರೆ ಹೆಚ್ಚಿನ ತೆರಿಗೆ ನೀಡುತ್ತಿರುವ ಎರಡನೇ ರಾಜ್ಯವಾದ ಕರ್ನಾಟಕ ಜಿಎಸ್‌ಟಿ ಪಾಲಿನಲ್ಲಿ ಕಡಿಮೆ ಪಾಲನ್ನು ಪಡೆಯುತ್ತಿರುವುದು ಇಂದಿನ ಹಣಕಾಸು ಹಂಚಿಕೆಯ ವಂಚನೆಯ ನೀತಿ ಅಲ್ಲದೆ ಬೇರೇನೂ ಅಲ್ಲ. ಬಿಹಾರದಲ್ಲಿ ಪ್ರಭಾವಿ ನಾಯಕರಾಗಿದ್ದ ನಿತೀಶ್ ಕುಮಾರ್ ಸಂಪುಟದಲ್ಲಿ ಉಪಮುಖ್ಯಮಂತ್ರಿಯಾಗಿದ್ದ ಸುಶೀಲ್ ಕುಮಾರ್ ಮೋದಿ ಕಳೆದ ವರ್ಷ ನಿಧನರಾದ ಬಳಿಕ ಅಲ್ಲಿ ಬಿಜೆಪಿಯ ನಾಯಕತ್ವದ ಬಲ ಕುಸಿದಿದೆ. ಆ ಕೊರತೆಯನ್ನು ನಿವಾರಿಸಲು ಪ್ರಧಾನಿ ಮೋದಿ ಈಗ ಬಿಹಾರದಲ್ಲಿ ಬಿಜೆಪಿ ಆಡಳಿತ ತರಬೇಕೆನ್ನುವ ಕಾರಣಕ್ಕೆ ಆಗಿಂದ್ದಾಗೆ ಅಲ್ಲಿಗೆ ಭೇಟಿ ನೀಡುವ ಮೂಲಕ ಚುನಾವಣಾ ಕಣಕ್ಕಿಳಿದಿದ್ದಾರೆ.
ಬಿಹಾರದಲ್ಲಿ ಈಗ ನಿತೀಶ್ ನೇತೃತ್ವದ ಎನ್‌ಡಿಎ ಮತ್ತು ಆರ್‌ಜೆಡಿಯ ನಾಯಕ ತೇಜಸ್ವಿ ಯಾದವ್ ಜೊತೆಗೆ ಈಗ ಚುನಾವಣಾ ತಂತ್ರಗಾರಿಕೆಯಲ್ಲಿ ನೈಪುಣ್ಯತೆ ಹೊಂದಿರುವ ಪ್ರಶಾಂತ್ ಕಿಶೋರ್ ಸುರಾಜ್ ಪಕ್ಷವನ್ನು ಕಟ್ಟಿ ಚುನಾವಣೆಗೆ ಸಿದ್ಧತೆ ನಡೆಸಿದ್ದಾರೆ. ಮೇವು ಹಗರಣದಲ್ಲಿ ಜೈಲುಪಾಲಾಗಿದ್ದ ಆರ್‌ಜೆಡಿ ನಾಯಕ ಲಾಲೂ ಪ್ರಸಾದ್ ಯಾದವ್ ಜಾಮೀನಿನ ಮೇಲಿದ್ದು, ಮತ್ತು ಅವರ ಆರೋಗ್ಯವೂ ಸುಧಾರಿಸಿರುವುದರಿಂದ ಪುತ್ರ ತೇಜಸ್ವಿ ಯಾದವ್ ಗೆಲುವಿಗಾಗಿ ಚುನಾವಣಾ ಕಣಕ್ಕಿಳಿದಿದ್ದಾರೆ. ಈ ಚುನಾವಣೆಯ ವಿಶೇಷ ಎಂದರೆ ದಲಿತ ವರ್ಗದಿಂದ ಬಂದಿದ್ದರೂ ರಾಷ್ಟ್ರ ಮಟ್ಟದ ವರ್ಚಸ್ಸು ಬೆಳೆಸಿಕೊಂಡಿದ್ದ ರಾಂ ವಿಲಾಸ್ ಪಾಸ್ವಾನ್ ಅವರ ನಿಧನದಿಂದ ಬಿಹಾರ ರಾಜಕೀಯ ಐವತ್ತು ವರ್ಷಗಳ ರಾಜಕಾರಣದ ಅನುಭವವಿದ್ದ ನಾಯಕನ ಕೊರತೆಯನ್ನು ಕಾಣುತ್ತಿದೆ. ಆದರೆ ಅವರ ಪುತ್ರ ಚಿರಾಗ್ ಪಾಸ್ವಾನ್, ತಂದೆ ಕಟ್ಟಿದ್ದ ಲೋಕ ಜನಶಕ್ತಿ ಪಕ್ಷ (ಎಲ್‌ಜೆಪಿ)ದ ನೇತೃತ್ವ ವಹಿಸಿದ್ದು, ಹಾಜಿಪುರ ಲೋಕಸಭೆ ಕ್ಷೇತ್ರದಿಂದ ಗೆದ್ದು ನರೇಂದ್ರ ಮೋದಿ ಅವರ ಸಂಪುಟದಲ್ಲಿ ಸಚಿವರೂ ಆಗಿದ್ದಾರೆ.
ಅವರೀಗ ರಾಜ್ಯ ರಾಜಕಾರಣಕ್ಕೆ ಬರಲು ಸಿದ್ಧತೆ ನಡೆಸಿದ್ದಾರೆ ಎನ್ನುವ ಸುದ್ದಿ ರಹಸ್ಯವಾಗಿ ಉಳಿದಿಲ್ಲ. ಎನ್‌ಡಿಎ ಮೈತ್ರಿಕೂಟದಲ್ಲಿರುವ ಅವರು ಸಾಕಷ್ಟು ಸೀಟುಗಳನ್ನು ಪಡೆದು ತಾನು ಮೀಸಲು ಕ್ಷೇತ್ರ ಬಿಟ್ಟು ಸಾರ್ವತ್ರಿಕ ಕ್ಷೇತ್ರವೊಂದರಿಂದ ಸ್ಪರ್ಧಿಸಲು ನಿರ್ಧರಿಸಿದ್ದಾರೆನ್ನಲಾಗಿದೆ. ಹಾಗಾಗಿ ಅವರು ದೆಹಲಿಗಿಂತ ಹೆಚ್ಚಾಗಿ ಬಿಹಾರದಲ್ಲಿ ಚುನಾವಣಾ ಸಿದ್ಧತೆಗಾಗಿ ಓಡಾಡುತ್ತಿದ್ದಾರೆ. ಬಿಹಾರದಲ್ಲಿ ಈಗ ಬಿಜೆಪಿಯ ಪ್ರಬಲ ನಾಯಕತ್ವ ಇಲ್ಲದ ಕಾರಣ ಎನ್‌ಡಿಎ ಅಧಿಕಾರಕ್ಕೆ ಬಂದರೆ ತಾನು ಮುಖ್ಯಮಂತ್ರಿ ಆಗಬೇಕೆನ್ನುವ ಕನಸು ಈ ಯುವ ನಾಯಕನದ್ದು. ಆದರೆ ಚಿರಾಗ್ ಪಾಸ್ವಾನ್ ಅವರ ರಾಜಕೀಯ ಆಸೆಯನ್ನು ಮೋದಿ ಅವರು ಎಷ್ಟರ ಮಟ್ಟಿಗೆ ಈಡೇರಿಸುತ್ತಾರೆ ಎನ್ನುವುದನ್ನು ಚುನಾವಣೆ ಬರುವವರೆಗೂ ಕಾಯಬೇಕಷ್ಟೆ.
ರಾಜ್ಯ ವಿಧಾನಸಭೆಯ ಚುನಾವಣೆ ಇನ್ನೂ ದೂರವಿದ್ದರೂ, ಚುನಾವಣಾ ಪೂರ್ವ ಸಮೀಕ್ಷೆ ನಡೆಸುವ ಸಂಸ್ಥೆಗಳು ಚುರುಕಾಗಿವೆ. ಕಳೆದ ಏಪ್ರಿಲ್ ನಲ್ಲಿ ಸಿ-ವೋಟರ್ ಸಮೀಕ್ಷಾ ಸಂಸ್ಥೆ ನಡೆಸಿದ ಸಮೀಕ್ಷೆಯ ಪ್ರಕಾರ ಕಳೆದ ಫೆಬ್ರುವರಿಯಲ್ಲಿ ಶೇ.೧೮ರಷ್ಟಿದ್ದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಜನಪ್ರಿಯತೆ ಏಪ್ರಿಲ್‌ನಲ್ಲಿ ಶೇ.೧೫ಕ್ಕೆ ಇಳಿದಿದೆ. ಮುಖ್ಯಮಂತ್ರಿ ಸ್ಥಾನಕ್ಕೆ ತೇಜಸ್ವಿ ಯಾದವ್ ಹೆಚ್ಚಿನ ಜನಪ್ರಿಯತೆಯನ್ನೂ ಗಳಿಸಿದ್ದಾರೆ. ನಂತರದ ಸ್ಥಾನವನ್ನು ಪ್ರಶಾಂತ್ ಕಿಶೋರ್ ಮತ್ತು ಮೂರನೇ ಸ್ಥಾನ ನಿತೀಶ್ ಕುಮಾರ್ ಅವರಿಗೆ ದೊರೆತಿದ್ದು , ಅವರ ಜನಪ್ರಿಯತೆ ಕುಗ್ಗಿರುವುದಾಗಿ ಸಮೀಕ್ಷೆ ಹೇಳಿಕೊಂಡಿದೆ. ಈ ಎಲ್ಲದರ ನಡುವೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಬಿಹಾರದ ಸಮಗ್ರ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡುತ್ತಿರುವುದರಿಂದ ಮತ್ತು ಚುನಾವಣೆಗೆ ಇನ್ನೂ ಐದು ತಿಂಗಳ ಕಾಲ ಇರುವುದರಿಂದ ಚುನಾವಣೆಯ ಚಿತ್ರಣ ಬದಲಾಗುವ ಎಲ್ಲ ಸಾಧ್ಯತೆಗಳಿರುವುದನ್ನು ತಳ್ಳಿಹಾಕಲಾಗದು.
” ಕೇಂದ್ರದಲ್ಲಿ ತನ್ನ ಆಡಳಿತವನ್ನು ಭದ್ರಗೊಳಿಸಿಕೊಳ್ಳುವುದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಈ ವರ್ಷದ ಬಜೆಟ್ಟಿನಲ್ಲಿ ಬಿಹಾರಕ್ಕೆ ೫೪.೫೭೫ ಕೋಟಿ ರೂ. ಅನುದಾನವನ್ನು ಘೋಷಿಸಿದ್ದಾರೆ. ಮೋದಿ ಅವರು ತಮ್ಮ ಈ ಹತ್ತು ವರ್ಷಗಳ ಅಧಿಕಾರಾವಧಿಯಲ್ಲಿ ಬಿಹಾರಕ್ಕೆ ೨.೮ ಲಕ್ಷ ಕೋಟಿ ರೂ. ಅನುದಾನ ನೀಡಿದ್ದಾರೆ. ಸವಿಸ್ತಾರವಾದ ಹೆಚ್ಚು ಭೂ ಪ್ರದೇಶ, ಅಧಿಕ ಜನಸಂಖ್ಯೆಯ ಕಾರಣ ಬಿಹಾರ ಕೇಂದ್ರ ಸರ್ಕಾರದ ಹೆಚ್ಚಿನ ಅನುದಾನವನ್ನು ಪಡೆಯುತ್ತಿದೆ. ಆದರೆ ಹೆಚ್ಚಿನ ತೆರಿಗೆ ನೀಡುತ್ತಿರುವ ಎರಡನೇ ರಾಜ್ಯವಾದ ಕರ್ನಾಟಕ ಜಿಎಸ್‌ಟಿ ಪಾಲಿನಲ್ಲಿ ಕಡಿಮೆ ಪಾಲನ್ನು ಪಡೆಯುತ್ತಿರುವುದು ಇಂದಿನ ಹಣಕಾಸು ಹಂಚಿಕೆಯ ವಂಚನೆಯ ನೀತಿ ಅಲ್ಲದೆ ಬೇರೇನೂ ಅಲ್ಲ.”





