ಪ್ರೊ.ಆರ್.ಎಂ.ಚಿಂತಾಮಣಿ
ಹೊಸ ಗವರ್ನರರ ಅಧ್ಯಕ್ಷತೆಯಲ್ಲಿ ರಿಸರ್ವ್ ಬ್ಯಾಂಕಿನ ಹಣಕಾಸು ನೀತಿ ಸಮಿತಿಯ ಮೊದಲ ದ್ವೆ ಮಾಸಿಕ ಸಭೆ ಕಳೆದ ವಾರ ನಡೆದು ಸರ್ವಾನು ಮತದಿಂದ ‘ರೆಪೊ ದರ’ವನ್ನು (Repossession Rate)) ಶೇ.೦.೨೫ ಕಡಿಮೆ ಮಾಡಿ ಶೇ.೬.೨೫ಕ್ಕೆ ನಿಗದಿ ಮಾಡಲು (ಈ ಕ್ಷಣದಿಂದ) ನಿರ್ಧರಿಸಿದೆ. ಇನ್ನೊಂದು ನಿರ್ಣಯದಂತೆ ‘ತಟಸ್ತ ನಿಲುವು’ (Neutral stance) ಮುಂದುವರಿಯಲಿದೆ. ದೇಶದಲ್ಲಿ ಹಣದುಬ್ಬರವು ಇಳಿಮುಖವಾಗಿದ್ದು ಇನ್ನೂ ತನ್ನ ಸ್ವೀಕೃತ ಮಿತಿಗಿಂತ (ಶೇ.೪.೦ ಮಧ್ಯಮ ಸ್ಥಿತಿ) ಮೇಲೆಯೇ ಇದ್ದರೂ ಆರ್ಥಿಕ ಬೆಳವಣಿಗೆ ಕುಂಠಿತವಾಗಿದ್ದು ರಾಷ್ಟ್ರೀಯ ಒಟ್ಟಾದಾಯದ (ಜಿಡಿಪಿ) ಬೆಳವಣಿಗೆ ತೀರ ಕೆಳ ಮಟ್ಟದಲ್ಲಿರುವುದರಿಂದ (೨೦೨೪-೨೫ರ ಎರಡನೇ ತ್ರೈಮಾಸಿಕದಲ್ಲಿ ಶೇ.೫.೪ಕ್ಕೆ ಕುಸಿದಿರುವುದರಿಂದ) ಅದನ್ನು ಮೇಲೆತ್ತುವ ಕ್ರಮಗಳಿಗೆ ಪೂರಕವಾಗುವಂತೆ ರೆಪೊ ದರವನ್ನು ಸಣ್ಣ ಮಟ್ಟದಲ್ಲಿ ಇಳಿಸಲಾಗಿದೆ ಎಂದು ರಿಸರ್ವ್ ಬ್ಯಾಂಕಿನ ಗವರ್ನರ್ ಹೇಳಿದ್ದಾರೆ. ಹಿಂದಿನ ವಾರ ಮಂಡಿಸಲ್ಪಟ್ಟ ಮುಂಗಡಪತ್ರದಲ್ಲಿ ಕೇಂದ್ರ ಸರ್ಕಾರ ಗ್ರಾಹಕ ಬೇಡಿಕೆ ಹೆಚ್ಚಿಸುವ ಕ್ರಮಗಳಿಂದ ಬೆಳವಣಿಗೆ ತೀವ್ರಗೊಳಿಸಲು ಉದ್ದೇಶಿಸಿರುವುದರಿಂದ ಅದಕ್ಕೆ ಪೂರಕವಾಗಿ ರೆಪೊ ದರ ಇಳಿಸಲಾಗಿದೆ ಎಂದೂ ಹೇಳಲಾಗಿದೆ. ಅಂತಾರಾಷ್ಟ್ರೀಯ ಭೌಗೋಳಿಕ-ರಾಜಕೀಯ-ಆರ್ಥಿಕ ಸ್ಥಿತಿ ಊಹಿಸಲಿಕ್ಕಾಗಲಾರದಷ್ಟು ಅನಿಶ್ಚಿತತೆಯಿಂದ ಕೂಡಿರುವುದರಿಂದ ಕಾದು ನೋಡುವ ಉದ್ದೇಶದಿಂದ ತಟಸ್ತ ನಿಲುವು ಮುಂದುವರಿಸಲಾಗಿದೆ ಎಂದು ರಿಸರ್ವ್ ಬ್ಯಾಂಕ್ ಪ್ರಕಟಣೆಯಲ್ಲಿ ತಿಳಿಸಿದೆ.
ರೆಪೊ ಮತ್ತು ಇತರೆ ಬಡ್ಡಿ ದರಗಳು: ಬ್ಯಾಂಕುಗಳಿಗೆ ಮತ್ತು ಇತರೆ ಹಣಕಾಸು ಸಂಸ್ಥೆಗಳಿಗೆ ತಾತ್ಕಾಲಿಕವಾಗಿ ಹಣಕಾಸು ಬೇಕಾದಾಗ ಬೇರೆಲ್ಲಿಯೂ ಕಡಿಮೆ ಬಡ್ಡಿ ದರಲ್ಲಿ ಸಾಲ ಸಿಗದಿದ್ದಾಗ ರಿಸರ್ವ್ ಬ್ಯಾಂಕ್ ಅವುಗಳಿಂದ ಸರ್ಕಾರದ ಬಾಂಡುಗಳನ್ನು ಅಡವಿಟ್ಟುಕೊಂಡು ಕೊಡುವ ಸಾಲದ ಮೇಲೆ ಆಕರಿಸುವ ಬಡ್ಡಿ ದರವೇ ರೆಪೊ ದರ. ಇದಕ್ಕೆ ವಿರುದ್ಧವಾಗಿ ಬ್ಯಾಂಕುಗಳಲ್ಲಿ ಮತ್ತು ಹಣಕಾಸು ಸಂಸ್ಥೆಗಳಲ್ಲಿ ಅಲ್ಪಾವಧಿಗಾಗಿ ಹೆಚ್ಚು ನಗದು ಉಳಿದಿದ್ದು ಬೇರೆಲ್ಲಿಯೂ ಲಾಭದಾಯಕವಾಗಿ ಬಳಸಲಿಕ್ಕಾಗದಿದ್ದಾಗ ತಾತ್ಕಾಲಿಕವಾಗಿ ರಿಸರ್ವ್ ಬ್ಯಾಂಕಿನಲ್ಲಿ ಠೇವಣಿ ಇಟ್ಟಾಗ ರಿಸರ್ವ್ ಬ್ಯಾಂಕು ಕೊಡುವ ಬಡ್ಡಿ ದರವೇ ರಿಸರ್ವ್ ರೆಪೊ ರೇಟ್ ಅಥವಾ ವಿಶೇಷ ತಾತ್ಕಾಲಿಕ ಠೇವಣಿ ಬಡ್ಡಿದರ ಎನ್ನುತ್ತೇವೆ. ಈ ದರ ರೆಪೊ ದರಕ್ಕಿಂತ ಶೇ.೦.೨೫ ಕಡಿಮೆ ಇರುತ್ತದೆ. ಅದೇ ರೀತಿ ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳಿಗೆ ಆಪತ್ಕಾಲದಲ್ಲಿ ಅಂತಿಮ ಧಣಿಯಾಗಿ Lender Of Last Resort) ರಿಸರ್ವ್ ಬ್ಯಾಂಕು ಕೊಡುವ ಸಾಲಗಳ ಮೇಲೆ ಆಕರಿಸುವ ಬಡ್ಡಿ ದರವೇ ಬ್ಯಾಂಕ್ ರೇಟ್. ಇದುಸಾಮಾನ್ಯವಾಗಿ ರೆಪೊ ರೇಟಿಗಿಂತ ಶೇ.೦.೨೫ ಹೆಚ್ಚಾಗಿರುತ್ತದೆ. ಈ ಮೂರನ್ನೂ ನೀತಿ ಬಡ್ಡಿ ದರ’ಗಳೆಂದು ಕರೆಯಲಾಗುತ್ತದೆ. ಈಗ ರಿಸರ್ವ್ ರೆಪೊ ದರ ಶೇ.೬.೦೦ರಲ್ಲಿಯೂ ಬ್ಯಾಂಕ್ ರೇಟ್ ಶೇ.೬.೫೦ರಲ್ಲಿಯೂ ಮುಂದುವರಿಯುತ್ತವೆ.
ದೇಶದ ಅರ್ಥ ವ್ಯವಸ್ಥೆಯಲ್ಲಿಯ ಎಲ್ಲ ಠೇವಣಿಗಳ ಮತ್ತು ಸಾಲಗಳ ಮೇಲಿನ ಬಡ್ಡಿ ದರಗಳು ಈ ಮೂರರ ಸುತ್ತಲೇ ಸುತ್ತುತ್ತಿರುತ್ತವೆ. ದೇಶದ ಅಭಿವೃದ್ಧಿ ಮತ್ತು ವ್ಯವಸ್ಥೆಯಲ್ಲಿಯ ಬೆಲೆಗಳಲ್ಲಿ ಸ್ಥಿರತೆಯನ್ನು ಗುರಿಯಾಗಿಟ್ಟು ಕೊಂಡು ರಿಸರ್ವ್ ಬ್ಯಾಂಕ್ ಇವುಗಳನ್ನು ನಿಯಂತ್ರಿಸುವುದಲ್ಲದೇ ಸದಾ ಕಣ್ಣಲ್ಲಿ ಕಣ್ಣಿಟ್ಟು ಗಮನಿಸುತ್ತಿರುತ್ತದೆ. ಎರಡು ತಿಂಗಳಿಗೊಮ್ಮೆ ಹಣಕಾಸು ನೀತಿ ಸಮಿತಿ ಸಭೆ ಸೇರಿ ಪರಿಸ್ಥಿತಿಯನ್ನು ಪರಿಶೀಲಿಸಿ ನಿರ್ಧಾರಗಳನ್ನು ಕೈಗೊಳ್ಳುತ್ತದೆ. ಬರಲಿರುವ ದಿನಗಳಲ್ಲಿ ರಿಸರ್ವ್ ಬ್ಯಾಂಕು ತನ್ನ ಸಂಶೋಧನೆಗಳ ಆಧಾರದ ಮೇಲೆ ಜಿಡಿಪಿ ಬೆಳವಣಿಗೆ ಮತ್ತು ಹಣದುಬ್ಬರ ದರಗಳನ್ನು ಅಂದಾಜು ಮಾಡುತ್ತದೆ. ಅವುಗಳನ್ನು ಪರಿಗಣಿಸಿ ಬಡ್ಡಿದರ ನೀತಿಯನ್ನು ರೂಪಿಸಿ ಪ್ರಕಟಗೊಳಿಸುತ್ತದೆ. ಫೆಬ್ರವರಿ ನೀತಿಯಂತೆ ಜಿಡಿಪಿ ಬೆಳವಣಿಗೆ ಮತ್ತು ಹಣದುಬ್ಬರ ಅಂದಾಜುಗಳು ಕೆಳಗಿನಂತಿವೆ.
ಹಣಕಾಸು ನೀತಿ ಫೆಬ್ರವರಿ ೨೦೨೫ರಂತೆ ಜಿಡಿಪಿ ಬೆಳವಣಿಗೆ
(ಶೇ.) ಮತ್ತು ಹಣದುಬ್ಬರ ದರ (ಶೇ.)
ವಿವರಗಳು ಜಿಡಿಪಿ ಬೆಳವಣಿಗೆ ಹಣದುಬ್ಬರ
೨೦೨೪-೨೫ ವಾರ್ಷಿಕ ಶೇ.೬.೪ ಶೇ.೪.೮
೨೦೨೫-೨೬ ೧ನೇ ತ್ರೈಮಾಸಿಕ ಶೇ.೬.೭ ಶೇ.೪.೫
೨೦೨೫-೨೬ ೨ನೇ ತ್ರೈಮಾಸಿಕ ಶೇ.೭.೦ ಶೇ.೪.೦
೨೦೨೫-೨೬ ೩ನೇ ತ್ರೈಮಾಸಿಕ ಶೇ.೬.೫ ಶೇ.೩.೮
೨೦೨೫-೨೬ ೪ನೇ ತ್ರೈಮಾಸಿಕ ಶೇ.೬.೫ ಶೇ.೪.೨
೨೦೨೫-೨೬ ವಾರ್ಷಿಕ ಶೇ.೬.೭ ಶೇ.೪.೨
ನೀತಿ ಬಡ್ಡಿ ದರಗಳನ್ನು ಇಳಿಸಿದ ಕೂಡಲೆ ವ್ಯವಸ್ಥೆಯಲ್ಲಿಯ ಬಡ್ಡಿ ದರಗಳು ಕಡಿಮೆಯಾಗುವುದಿಲ್ಲ. ಅದಕ್ಕೆ ಸ್ವಲ್ಪ ಸಮಯ ಬೇಕು. ಸಾಲ ಕೊಡುವ ಸಂಸ್ಥೆಗಳು ಸಾಲದ ನಿರ್ವಹಣೆ ವೆಚ್ಚ ಮತ್ತು ವಸೂಲಿ ವೆಚ್ಚ ಮುಂತಾದವುಗಳನ್ನು ಲೆಕ್ಕ ಹಾಕಬೇಕಾಗುತ್ತದೆ. ಈ ಕಡಿತದಲ್ಲಿ ತಾವು ಎಷ್ಟು ಭಾಗವನ್ನು ಕಡಿಮೆ ಮಾಡಬಹುದೆಂಬುದನ್ನು ಸಂಸ್ಥೆಗಳು ಅಧ್ಯಯನ ಮಾಡಬೇಕಾಗುತ್ತದೆ. ತಮ್ಮ ಆದಾಯದ ಸುಸ್ಥಿರತೆಯನ್ನೂ ಗಮನಿಸಬೇಕಾಗುತ್ತದೆ. ತಾವು ಸಾಲ ಕೊಡಬಹುದಾದ ಒಟ್ಟು ಮೊತ್ತದಲ್ಲಿ ಬಡ್ಡಿ ಕಡಿತಗೊಂಡ ರೆಪೊ ಸಾಲಗಳ ಪ್ರಮಾಣ ಎಷ್ಟೆಂಬುದೂ ಇಲ್ಲಿ ಮಹತ್ವದ್ದಾಗುತ್ತದೆ. ಹೀಗೆ ಎಲ್ಲ ದೃಷ್ಟಿಕೋನಗಳಿಂದ ಅಭ್ಯಸಿಸಿ ಕಡಿತದಲ್ಲಿ ಎಷ್ಟು ಭಾಗದ ಅನುಕೂಲತೆಯನ್ನು ಸಾಲಗಾರರಿಗೆ ವರ್ಗಾಯಿಸಬಹುದೆಂಬುದನ್ನು ಪರಿಗಣಿಸಿ ನಿರ್ಧಾರ ತೆಗೆದುಕೊಳ್ಳುತ್ತಾರೆ. ನಿರೀಕ್ಷೆಗಿಂತ ಕಡಿಮೆ ಪ್ರಮಾಣದಲ್ಲಿ ನೀತಿ ದರಗಳು ಇಳಿಸಲ್ಪಟ್ಟಿರುವುದೂ ಗಮನಿಸಬೇಕಾದ ಅಂಶ. ಹೀಗಾಗಿ ಒಂದೆರಡು ವಾರಗಳೇ ಬೇಕಾಗಬಹುದು.
ಠೇವಣಿ ದರಗಳದ್ದೇ ಬೇರೆ ಸಮಸ್ಯೆ. ದರ ಇಳಿಸಿದರೆ ಆಕರ್ಷಣೆ ಕಳೆದುಕೊಳ್ಳುತ್ತವೆ. ಈಗಾಗಲೇ ಬ್ಯಾಂಕುಗಳೂ ಸೇರಿ ಹಣಕಾಸು ಸಂಸ್ಥೆಗಳಲ್ಲಿ ಠೇವಣಿಗಳ ಬೆಳವಣಿಗೆ ಕಡಿಮೆ ಪ್ರಮಾಣದಲ್ಲಿದೆ. ಬ್ಯಾಂಕುಗಳು ಠೇವಣಿಗಳನ್ನು ಆಕರ್ಷಿಸಲು ಹರಸಾಹಸ ಮಾಡುತ್ತಿವೆ. ಅಂಥದ್ದರಲ್ಲಿ ಬಡ್ಡಿ ದರ ಇಳಿಸಿದರೆ ಠೇವಣಿಗಳ ಬೆಳವಣಿಗೆ ಇನ್ನೂ ಕಡಿಮೆಯಾಗುವ ಭಯವಿದೆ. ತಮಗಿಂತ ಸ್ವಲ್ಪ ಹೆಚ್ಚು ಬಡ್ಡಿ ದರ ಇರುವಲ್ಲಿಗೆ ವರ್ಗಾವಣೆಯಾಗಬಹುದೆಂಬ ಆತಂಕವೂ ಇದೆ. ಇಲ್ಲಿಯೂ ಆದಾಯ ವೆಚ್ಚಗಳ ಲೆಕ್ಕ ಹಾಕಬೇಕಾಗುತ್ತದೆ. ಈ ಕಡಿತದ ಸ್ವಲ್ಪ ಭಾಗವನ್ನಾದರೂ ವೈಜ್ಞಾನಿಕವಾಗಿ ಲೆಕ್ಕ ಹಾಕಿ ಕಡಿಮೆ ಮಾಡಬೇಕಾಗುತ್ತದೆ. ಮಾಡಲಾಗುತ್ತದೆ.
ನೀತಿ ದರಗಳ ಇಳಿಕೆ, ಏರಿಕೆಗಳು ಸಾಮಾನ್ಯವಾಗಿ ಹೊಸ ಠೇವಣಿಗಳು ಮತ್ತು ಸಾಲಗಳಿಗೆ ಅನ್ವಯಿಸುತ್ತವಾದರೂ ಬದಲಾಗುವ (Floating) ಬಡ್ಡಿ ದರ ಹೊಂದಿರುವ ಹಳೆಯ ಸಾಲಗಳಿಗೂ ಅನ್ವಯಿಸುತ್ತವೆ. ಈ ಸಾಲಗಳ ಬಡ್ಡಿ ದರಗಳನ್ನು ಹೊರಗಿನ ನೀತಿ ದರ ರೆಪೊ ದರ ಮತ್ತು ಸರ್ಕಾರಿ ಬಾಂಡ್ (Government Securities-G.Sec)) ಪೇಟೆಗಳಲ್ಲಿ ೧೦ ವರ್ಷದ ಬಾಂಡುಗಳ ಬೆಲೆಗಳನ್ನಾಧರಿಸಿ ನಿವ್ವಳ ಲಾಭ / ಇಳುವರಿ (Yields)ಗಳನ್ನು ಆಧರಿಸಿ ನಿಗದಿ ಮಾಡಲಾಗಿರುತ್ತದೆ. ಸಾಲಗಾರರು ಇದನ್ನು ಒಪ್ಪಿಕೊಂಡಿರುತ್ತಾರೆ. ರೆಪೊ ದರ ಹೆಚ್ಚಾದಾಗ ಮತ್ತು ಬಾಂಡ್ ಯೀಲ್ಡ್ ಹೆಚ್ಚಾದಾಗ (ನಿಗದಿತ ಅವಧಿಯಲ್ಲಿ) ಸಾಲಗಾರರಿಗೆ ಬಡ್ಡಿ ದರ ಭಾರ ಹೆಚ್ಚಾಗುತ್ತದೆ. ಇವೆರಡೂ ಕಡಿಮೆಯಾದಾಗ ಬಡ್ಡಿ ಭಾರ ಕಡಿಮೆಯಾಗುತ್ತದೆ. ಅಂತೂ ನೀತಿ ದರಗಳ ಕಡಿತದ ಸ್ವಲ್ಪ ಭಾಗವನ್ನಾದರೂ (ಅವರವರ ಲೆಕ್ಕಾಚಾರದಂತೆ) ಗ್ರಾಹಕರಿಗೆ ವರ್ಗಾವಣೆ ಮಾಡಲೇಬೇಕು.
” ನೀತಿ ಬಡ್ಡಿ ದರಗಳನ್ನು ಇಳಿಸಿದ ಕೂಡಲೆ ವ್ಯವಸ್ಥೆಯಲ್ಲಿನ ಬಡ್ಡಿ ದರಗಳು ಕಡಿಮೆಯಾಗುವುದಿಲ್ಲ. ಅದಕ್ಕೆ ಸ್ವಲ್ಪ ಸಮಯ ಬೇಕು. ಸಾಲ ಕೊಡುವ ಸಂಸ್ಥೆಗಳು ಸಾಲದ ನಿರ್ವಹಣೆ ವೆಚ್ಚ ಮತ್ತು ವಸೂಲಿ ವೆಚ್ಚ ಮುಂತಾದವುಗಳನ್ನು ಲೆಕ್ಕ ಹಾಕಬೇಕಾಗುತ್ತದೆ. ಈ ಕಡಿತದಲ್ಲಿ ತಾವು ಎಷ್ಟು ಭಾಗವನ್ನು ಕಡಿಮೆ ಮಾಡಬಹುದೆಂಬುದನ್ನು ಸಂಸ್ಥೆಗಳು ಅಧ್ಯಯನ ಮಾಡಬೇಕಾಗುತ್ತದೆ. ತಮ್ಮ ಆದಾಯದ ಸುಸ್ಥಿರತೆಯನ್ನೂ ಗಮನಿಸಬೇಕಾಗುತ್ತದೆ. ತಾವು ಸಾಲ ಕೊಡಬಹುದಾದ ಒಟ್ಟು ಮೊತ್ತದಲ್ಲಿ ಬಡ್ಡಿ ಕಡಿತಗೊಂಡ ರೆಪೊ ಸಾಲಗಳ ಪ್ರಮಾಣ ಎಷ್ಟೆಂಬುದೂ ಇಲ್ಲಿ ಮಹತ್ವದ್ದಾಗುತ್ತದೆ. ಹೀಗೆ ಎಲ್ಲ ದೃಷ್ಟಿಕೋನಗಳಿಂದ ಅಭ್ಯಸಿಸಿ ಕಡಿತದಲ್ಲಿ ಎಷ್ಟು ಭಾಗದ ಅನುಕೂಲತೆಯನ್ನು ಸಾಲಗಾರರಿಗೆ ವರ್ಗಾಹಿಸಬಹುದೆಂಬುದನ್ನು ಪರಿಗಣಿಸಿ ನಿರ್ಧಾರ ತೆಗೆದುಕೊಳ್ಳುತ್ತಾರೆ”.