Mysore
28
light rain

Social Media

ಬುಧವಾರ, 25 ಜೂನ್ 2025
Light
Dark

ಭಾರತ -ಪಾಕ್ ಯುದ್ಧ : ಕೌತುಕದ ಹೋಲಿಕೆ

ಬೆಂಗಳೂರು ಡೈರಿ 

ಆರ್.ಟಿ.ವಿಠ್ಠಲಮೂರ್ತಿ 

ಭಾರತ-ಪಾಕಿಸ್ತಾನದ ನಡುವಣ ಯುದ್ಧವನ್ನು ಗಮನಿಸುತ್ತಾ ಇತಿಹಾಸವನ್ನು ಕೆದಕಿದರೆ ಕೆಲವು ಕೌತುಕದ ಹೋಲಿಕೆಗಳು ಕಾಣಸಿಗುತ್ತವೆ.

ಮಾಜಿ ಪ್ರಧಾನಿ ಇಂದಿರಾ ಗಾಂಧಿ ಮತ್ತು ಪ್ರಧಾನಿ ನರೇಂದ್ರ ಮೋದಿ ಈ ಹೋಲಿಕೆಗೆ ಹೊಂದಿಕೊಳ್ಳುತ್ತಾರೆ ಎಂಬುದು ವಿಶೇಷ. ಇದೇ ರೀತಿ ಇಂತಹ ಹೋಲಿಕೆಯನ್ನು ಗಮನಿಸಲು ನಾವು ಐವತ್ನಾಲ್ಕು ವರ್ಷಗಳ ಹಿಂದಕ್ಕೆ ಹೋಗಬೇಕು.

೧೯೪೭ರಲ್ಲಿ ಭಾರತದಿಂದ ವಿಭಜನೆಯಾಗಿ ಪಾಕಿಸ್ತಾನ ರಚನೆಯಾದಾಗ ಬಂಗಾಳದ ಪೂರ್ವ ಭಾಗ ಅದರ ವಶಕ್ಕೆ ಹೋಗಿತ್ತು. ಪಾಕಿಸ್ತಾನಕ್ಕೆ ಸೇರಿದ ಈ ಭಾಗ ಮುಂದೆ ಪಾಕಿಸ್ತಾನದ ಆಡಳಿತಗಾರರಿಂದ ತಾರತಮ್ಯಕ್ಕೆ, ದಬ್ಬಾಳಿಕೆಗೆ ಒಳಗಾದಾಗ ಅಲ್ಲಿ ಸ್ವಾತಂತ್ರ್ಯದ ಕನಸು ಮೊಳೆಯಿತು.

ಇಂತಹ ಕನಸಿಗೆ ರೆಕ್ಕೆ ಕೊಟ್ಟ ಶೇಖ್ ಮುಜಿಬುರ್ ರೆಹಮಾನ್ ಪ್ರತ್ಯೇಕತೆಗಾಗಿ ಶುರುವಾದ ಹೋರಾಟದ ನೇತೃತ್ವ ವಹಿಸಿದ್ದರು. ಯಾವಾಗ ಈ ಹೋರಾಟ ಪ್ರಬಲವಾಯಿತೋ ಆಗ ಪಾಕಿಸ್ತಾನದ ಆಡಳಿತಗಾರರು ಉರಿದು ಬಿದ್ದು ದೌರ್ಜನ್ಯ ನಡೆಸಲು ಮುಂದಾದರು.

ಈ ಸಂದರ್ಭದಲ್ಲಿ ಪ್ರತ್ಯೇಕತೆಯ ಹೋರಾಟಗಾರರ ಮೇಲೆ ಪಾಕಿಸ್ತಾನದ ಸೈನ್ಯ ಯಾವ ಮಟ್ಟಿನ ದೌರ್ಜನ್ಯ ಎಸಗಿತೆಂದರೆ ಕೊಲೆ, ಸುಲಿಗೆ, ಅತ್ಯಾಚಾರಗಳು ಸರ್ಕಾರಿ ಪ್ರಾಯೋಜಕತ್ವದಲ್ಲೇ ನಡೆಯತೊಡಗಿದವು. ಮಹಿಳೆಯರು, ಅಮಾಯಕರ ರೋದನವಂತೂ ಆ ಭಾಗದಲ್ಲಿ ಅನುರಣಿಸುತ್ತಲೇ ಹೋಯಿತು. ಯಾವಾಗ ಇದು ವಿಕೋಪಕ್ಕೆ ಹೋಗತೊಡಗಿತೋ ಆಗ ಪ್ರತ್ಯೇಕತೆಗಾಗಿ ಹೋರಾಡುತ್ತಿದ್ದ ಶೇಖ್ ಮುಜಿಬುರ್ ರೆಹಮಾನ್ ಅವರು ಭಾರತದ ನೆರವು ಕೋರಿದರು.

ಅವರಿಗೆ ನೆರವು ಕೊಡಲು ಬಯಸಿದ ಇಂದಿರಾ ಗಾಂಧಿಯವರು ಸೇನಾ ಮುಖ್ಯಸ್ಥರಾಗಿದ್ದ ಮಾಣಿಕ್ ಷಾರನ್ನು ಕರೆಯಿಸಿ ಪಾಕಿಸ್ತಾನದ ವಿರುದ್ಧ ಯುದ್ಧ ಮಾಡೋಣ ಎಂದರು. ಆದರೆ ಅವರು ಹಾಗೆ ಹೇಳಿದಾಗ ತಕ್ಷಣ ಬೇಡ ಮೇಡಂ ಸ್ವಲ್ಪ ಸಮಯಾವಕಾಶ ಕೊಡಿ ಎಂದರು. ಅಂದ ಹಾಗೆ ಪಾಕಿಸ್ತಾನದ ಮೇಲೆ ಯುದ್ಧ ಮಾಡಲು ಇಂದಿರಾ ಗಾಂಧಿ ಏಕೆ ಉತ್ಸುಕರಾಗಿದ್ದರು ಎಂದರೆ ಅಷ್ಟು ಹೊತ್ತಿಗಾಗಲೇ ಗಡಿ ಯಲ್ಲಿ ಪಾಕಿಸ್ತಾನದ ಕಿರುಕುಳ ಅತಿಯಾಗಿತ್ತು.

೧೯೬೫ರಲ್ಲಿ ಭಾರತದ ವಿರುದ್ಧ ಯುದ್ಧ ಮಾಡಿ ಹೀನಾಯವಾಗಿ ಸೋಲನುಭವಿಸಿದ್ದ ಪಾಕಿಸ್ತಾನ ಅವಮಾನದಿಂದ ಕುದಿಯುತ್ತಿತ್ತು. ಮತ್ತು ಇದೇ ಕಾರಣಕ್ಕಾಗಿ ಪದೇ ಪದೇ ಭಾರತದ ವಿರುದ್ಧ ಕಾಲು ಕೆರೆದು ಜಗಳ ತೆಗೆಯುತ್ತಿತ್ತು. ಅದರ ಈ ಗುಣದಿಂದ ಇಂದಿರಾ ಗಾಂಧಿ ಎಷ್ಟು ಕೆರಳಿದ್ದರೆಂದರೆ, ಅಮ್ಮಾ ನಮಗೆ ನೆರವು ಕೊಡಿ ಅಂತ ಮುಜಿಬುರ್ ರೆಹಮಾನ್ ಕೇಳಿದ ಕೂಡಲೇ ಅವರು ಯುದ್ಧಕ್ಕೆ ಸಜ್ಜಾಗಿಬಿಟ್ಟರು.

ಆದರೆ ಯುದ್ಧ ಎಂದರೆ ಸಣ್ಣ ಸಂಗತಿ ಅಲ್ಲವಲ್ಲ, ಎಲ್ಲಕ್ಕಿಂತ ಮುಖ್ಯವಾಗಿ ಎದುರಾಳಿಯ ಶಕ್ತಿ, ದೌರ್ಬಲ್ಯಗಳ ವಿವರ ಕೈಲಿರದಿದ್ದರೆ ಕುರುಡಾಗಿ ರಣಭೂಮಿಗಿಳಿದಂತೆ. ೧೯೬೨ರಲ್ಲಿ ಭಾರತ ನೆರೆಯ ಚೀನಾದ ವಿರುದ್ಧ ಇಂತಹ ಯುದ್ಧ ಮಾಡಿ ಸೋಲನುಭವಿಸಿತ್ತು. ಚೀನಾ ನಮಗಿಂತಲೂ ಪ್ರಬಲ ರಾಷ್ಟ್ರ ಎಂಬುದು ಎಷ್ಟು ನಿಜವೋ, ಅಂತಹ ಪ್ರಬಲ ಶಕ್ತಿಯ ವಿರುದ್ಧ ಯುದ್ಧ ಮಾಡುವಾಗ ಅದರ ಶಕ್ತಿ, ದೌರ್ಬಲ್ಯದ ಜತೆ, ನಮ್ಮ ಶಕ್ತಿ, ದೌರ್ಬಲ್ಯದ ಅರಿವೂ ನಮಗಿರಬೇಕಿತ್ತು. ಆದರೆ ಅದನ್ನು ಅರ್ಥ ಮಾಡಿಕೊಳ್ಳುವ ಮುಂಚೆ ಭಾರತ ಚೀನಾದ ಬಲೆಗೆ ಬಿತ್ತು. ಅಷ್ಟೇ ಅಲ್ಲ. ಮರ್ಮಾಘಾತವಾಗುವಂತಹ ಹೊಡೆತ ತಿಂದಿತ್ತು. ಈ ಕಹಿ ನೆನಪು ಇತ್ತಲ್ಲ, ಹೀಗಾಗಿ ಸೇನಾ ಮುಖ್ಯಸ್ಥರಾಗಿದ್ದ ಮಾಣಿಕ್ ಷಾ ಅವರು ತಕ್ಷಣ ಯುದ್ಧಕ್ಕೆ ಅಣಿಯಾಗುವ ಬದಲು ಕಾಲಾವಕಾಶ ಕೇಳಿದರು. ಮತ್ತು ದೊರೆತ ಈ ಕಾಲಾವಕಾಶದಲ್ಲಿ ಪಾಕಿಸ್ತಾನ ಸೈನ್ಯದ ಚಲನೆ, ಅದಕ್ಕಿರುವ ಶಕ್ತಿ, ದೌರ್ಬಲ್ಯಗಳ ಸಂಪೂರ್ಣ ವಿವರ ದಕ್ಕಿದ ನಂತರ ರಣಭೂಮಿಗಿಳಿದರು.

ಹೀಗೆ ರಣಭೂಮಿಗಿಳಿದ ಭಾರತದ ಸೈನ್ಯ ಹಿಂತಿರುಗಿ ನೋಡಲಿಲ್ಲ. ಕಾರಣ, ಯುದ್ಧದ ಚಲನೆಯ ಬಗ್ಗೆ ಅದಕ್ಕೆ ಸಂಪೂರ್ಣ ಅರಿವಿತ್ತು. ಮತ್ತು ಇದೇ ಕಾರಣಕ್ಕಾಗಿ ಅದು ಪಾಕಿಸ್ತಾನ ಸೈನ್ಯದ ತೊಡೆ ಪತರಗುಟ್ಟುವಂತೆ ಬಾರಿಸಿತು. ಪರಿಣಾಮ, ಬಾಂಗ್ಲಾ ದೇಶದ ಉದಯ. ಯಾವಾಗ ಪಾಕಿಸ್ತಾನ ವಿಭಜನೆಯಾಗಿ ಬಾಂಗ್ಲಾದೇಶ ಜನಿಸಿತೋ ಆಗ ಇಂದಿರಾ ಗಾಂಧಿ ದೊಡ್ಡ ಶಕ್ತಿಯಾಗಿ ಮೇಲೆದ್ದು ನಿಂತರು. ಹೀಗೆ ಮೇಲೆದ್ದು ನಿಂತ ಇಂದಿರಾ ಗಾಂಧಿಯವರನ್ನು ದುರ್ಗೆ ಅಂತ ಕರೆಯಲಾಯಿತು.

ವಸ್ತುಸ್ಥಿತಿ ಎಂದರೆ ಈ ಯುದ್ಧಕ್ಕೂ ಮುನ್ನ ಇಂದಿರಾ ಗಾಂಧಿ ರಾಜಕೀಯವಾಗಿ ಪೈಪೋಟಿ ಎದುರಿಸುತ್ತಿದ್ದರು.ಅಷ್ಟು ಹೊತ್ತಿಗಾಗಲೇ ರಾಷ್ಟ್ರ ಮಟ್ಟದಲ್ಲಿ ಕಾಂಗ್ರೆಸ್ ವಿಭಜನೆಯಾಗಿದ್ದರಿಂದ ಪ್ರಬಲ ನಾಯಕರೆಲ್ಲ ವಿರೋಧಿ ಬಣದಲ್ಲಿ ನಿಂತು, ಎರಡನೇ ಪಂಕ್ತಿಯ ನಾಯಕರೇ ಇಂದಿರಾ ಬೆನ್ನಿಗೆ ನಿಂತಿದ್ದರು. ಹೀಗೆ ಭವಿಷ್ಯದಲ್ಲಿ ತಮ್ಮನ್ನು ಹಣಿಯುವ ಸಕಲ ಸಿದ್ಧತೆ ನಡೆಯುತ್ತಿದ್ದುದನ್ನು ನೋಡುತ್ತಿದ್ದ ಇಂದಿರಾ ಗಾಂಧಿಯವರಿಗೆ ವರವಾಗಿ ದಕ್ಕಿದ್ದು  ಪಾಕಿಸ್ತಾನದೊಂದಿಗಿನ ಯುದ್ಧ.

ಈ ಯುದ್ಧ ಅವರ ನಾಯಕತ್ವಕ್ಕೆ ಹೊಳಹು ನೀಡಿದ್ದು ಎಷ್ಟು ನಿಜವೋ, ಅಹಂಕಾರಿ ಪಾಕಿಸ್ತಾನದ ತೊಳ್ಳೆ ನಡುಗಿಸಿ ಭಾರತದ ಆತ್ಮವಿಶ್ವಾಸವನ್ನು ಹೆಚ್ಚಿಸಿದ್ದೂ ಅಷ್ಟೇ ನಿಜ. ಇತಿಹಾಸದ ಈ ಘಟನೆಯನ್ನು ಗಮನಿಸಿದರೆ, ಪ್ರಸ್ತುತ ಪಾಕಿಸ್ತಾನದೊಂದಿಗೆ ಭಾರತ ನಡೆಸುತ್ತಿರುವ ಯುದ್ಧದ ಹಿನ್ನೆಲೆಯಲ್ಲೂ ಇಂತಹ ಕೆಲ ಸಾಮ್ಯತೆಗಳು ಕಾಣುತ್ತವೆ.

ಮೊದಲನೆಯದಾಗಿ ಅವತ್ತು ಬಾಂಗ್ಲಾದೇಶದ ಪ್ರತ್ಯೇಕತೆಯ ಹೋರಾಟ ಹೇಗೆ ನಡೆಯುತ್ತಿತ್ತೋ ಹಾಗೆಯೇ ಪಾಕಿಸ್ತಾನದ ವಶದಲ್ಲಿರುವ ಬಲೂಚಿಸ್ಥಾನದಲ್ಲೂ ಅಂತಹದೇ ಹೋರಾಟ ನಡೆಯುತ್ತಿದೆ. ಮೂಲಗಳ ಪ್ರಕಾರ, ಪಾಕಿಸ್ತಾನದ ದೌರ್ಜನ್ಯದಿಂದ ಕ್ಷುದ್ರರಾಗಿರುವ ಬಲೂಚಿಸ್ಥಾನದ ಪ್ರತ್ಯೇಕತೆಯ ಹೋರಾಟಗಾರರು ನೆರವಿಗಾಗಿ ಭಾರತದತ್ತ ನೋಡುತ್ತಿದ್ದಾರೆ.

ಆದರೆ ಅವರು ನೆರವಿಗಾಗಿ ನೋಡುತ್ತಿದ್ದಂತೆಯೇ ಕೈ ಚಾಚಲು ಸಾಧ್ಯವಿಲ್ಲವಲ್ಲ, ಹೀಗಾಗಿ ಭಾರತೀಯ ಸೇನೆ ಪಾಕಿಸ್ತಾನದ ಶಕ್ತಿ, ದೌರ್ಬಲ್ಯಗಳ ಬಗ್ಗೆ ವಿವರವಾಗಿ ಗ್ರಹಿಸಿದೆ. ಯಾವಾಗ ಪಹಲ್ಗಾಮ್ ನಲ್ಲಿ ಪಾಕಿಸ್ತಾನ ಪ್ರೇರಿತ ಉಗ್ರರು ದಾಳಿ ನಡೆಸಿ ಅಮಾಯಕ ಭಾರತೀಯ ರನ್ನು ಕೊಂದರೋ, ಆಗ ಯುದ್ಧಕ್ಕೆ ಅಣಿಯಾಗಿ ನಿಂತಿದೆ. ಹೀಗೆ ಅದು ಸರ್ವ ಸನ್ನದ್ಧವಾಗಿದೆ ಎಂಬುದು ಗೊತ್ತಿದ್ದುದರಿಂದಲೇ ಪ್ರಧಾನಿ ನರೇಂದ್ರ ಮೋದಿಯವರು ಪಾಕಿಸ್ತಾನದ ವಿರುದ್ಧ ಯುದ್ಧ ಮಾಡಲು ಸೈನ್ಯಕ್ಕೆ ಮುಕ್ತ ಹಸ್ತ ನೀಡಿದ್ದು. ಯಾವಾಗ ಮೋದಿಯವರು ತಮಗೆ ಮುಕ್ತ ಹಸ್ತ ನೀಡಿದರೋ, ಆಗ ಭಾರತೀಯ ಸೈನ್ಯ ವ್ಯವಸ್ಥಿತವಾಗಿ ಪಾಕಿಸ್ತಾನದ ವಿರುದ್ಧ ಯುದ್ಧ ಆರಂಭಿಸಿತು. ಅಂದ ಹಾಗೆ ಈ ಯುದ್ಧದ ಫಲಿತಾಂಶ ಯಾವಾಗ ಬರುತ್ತದೋ ಅದು ಬೇರೆ ವಿಷಯ. ಆದರೆ ಈ ಯುದ್ಧಕ್ಕೂ ಮುನ್ನಿನ ರಾಜಕೀಯ ಸ್ಥಿತಿ ಹೇಗಿತ್ತೆಂದರೆ ಮೋದಿ ಪ್ರಧಾನಿ ಪಟ್ಟದಿಂದ ಕೆಳಗಿಳಿದು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಲ್ಲಿಗೆ ಬರಬೇಕು ಎಂಬ ಲೆಕ್ಕಾಚಾರ ಪರಿವಾರದಲ್ಲಿ ಮೊಳೆತಿತ್ತು.

ಇದೇ ಕಾರಣಕ್ಕಾಗಿ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರಾಗಿ ತಮಗೆ ಬೇಕಾದ ಶಿವರಾಜ್ ಸಿಂಗ್ ಚೌಹಾಣ್ ಬರಲಿ ಅಂತ ಪರಿವಾರ ಯೋಚಿಸಿದರೆ, ಇಲ್ಲ, ಆ ಜಾಗದಲ್ಲಿ ತಮಗೆ ಬೇಕಾದ ಭೂಪೇಂದ್ರ ಯಾದವ್ ಇಲ್ಲವೇ ಧರ್ಮೇಂದ್ರ ಪ್ರಧಾನ್ ಬರಲಿ ಅಂತ ಮೋದಿ-ಅಮಿತ್ ಶಾ ಜೋಡಿ ಬಯಸಿತ್ತು ಎಂಬುದು ಮೂಲಗಳ ಹೇಳಿಕೆ. ಗಮನಿಸಬೇಕಾದ ಸಂಗತಿಯೆಂದರೆ ಪಹಲ್ಗಾಮ್ ಪ್ರಕರಣದ ನಂತರ ಈ ಆಯ್ಕೆ ಪ್ರಕ್ರಿಯೆಯನ್ನೇ ಮೋದಿ-ಅಮಿತ್ ಶಾ ಜೋಡಿ ಮುಂದಕ್ಕೆ ಹಾಕಿದರು. ಇದಾದ ನಂತರ ಶುರುವಾಗಿದ್ದೇ ಪಾಕಿಸ್ತಾನದ ಜತೆಗಿನ ಯುದ್ಧ.

ಈ ಯುದ್ಧದಲ್ಲಿ ಭಾರತ ಜಯಗಳಿಸಿದರೆ ಐವತ್ನಾಲ್ಕು ವರ್ಷಗಳ ಹಿಂದಿನ ಇತಿಹಾಸ ಮರುಕಳಿಸುತ್ತದೆ.ಅರ್ಥಾತ್ ಪಾಕಿಸ್ತಾನದ ವಿರುದ್ಧ ಯುದ್ಧ ಗೆದ್ದರೆ ಮೋದಿ ಗಟ್ಟಿಯಾಗುತ್ತಾರೆ.ಅಷ್ಟೇ ಅಲ್ಲ,ವಯಸ್ಸಿನ ಕಾರಣ ನೀಡಿ ಅವರನ್ನು ಪ್ರಧಾನಿ ಹುದ್ದೆಯಿಂದ ಕೆಳಗಿಳಿಸುವ ಎಲ್ಲ ತಂತ್ರಗಳು ಬಕಾಬರಲೆ ಬೀಳುತ್ತವೆ.ಇದೇ ರೀತಿ ದೇಶದ ರಾಜಕೀಯ ದಿಕ್ಕು ಬದಲಾಗುತ್ತದೆ. ಹಾಗಾಗುತ್ತದಾ? ಗೊತ್ತಿಲ್ಲ. ಕಾದು ನೋಡಬೇಕು.

” ಪಾಕಿಸ್ತಾನದೊಂದಿಗೆ ಭಾರತ ನಡೆಸಿದ್ದ ಯುದ್ಧವು ಇಂದಿರಾ ಗಾಂಧಿ ಅವರ ನಾಯಕತ್ವಕ್ಕೆ ಹೊಳಹು ನೀಡಿದ್ದು ಎಷ್ಟು ನಿಜವೋ, ಅಹಂಕಾರಿ ಪಾಕಿಸ್ತಾನದ ತೊಳ್ಳೆ ನಡುಗಿಸಿ ಭಾರತದ ಆತ್ಮವಿಶ್ವಾಸವನ್ನು ಹೆಚ್ಚಿಸಿದ್ದೂ ಅಷ್ಟೇ ನಿಜ. ಇತಿಹಾಸದ ಈ ಘಟನೆಯನ್ನು ಗಮನಿಸಿದರೆ, ಪ್ರಸ್ತುತ ಪಾಕಿಸ್ತಾನದೊಂದಿಗೆ ಭಾರತ ನಡೆಸುತ್ತಿರುವ ಯುದ್ಧದ ಹಿನ್ನೆಲೆಯಲ್ಲೂ ಇಂತಹ ಕೆಲ ಸಾಮ್ಯತೆಗಳು ಕಾಣುತ್ತವೆ. ಮೊದಲನೆಯದಾಗಿ ಅವತ್ತು ಬಾಂಗ್ಲಾ ಪ್ರತ್ಯೇಕತೆಯ ಹೋರಾಟ ಹೇಗೆ ನಡೆಯುತ್ತಿತ್ತೋ ಹಾಗೆಯೇ ಇವತ್ತು ಪಾಕಿಸ್ತಾನದ ವಶದಲ್ಲಿರುವ ಬಲೂಚಿಸ್ಥಾನದಲ್ಲೂ ಅಂತಹದೇ ಹೋರಾಟ ನಡೆಯುತ್ತಿದೆ. ಪಾಕಿಸ್ತಾನದ ದೌರ್ಜನ್ಯದಿಂದ ಕ್ಷುದ್ರರಾಗಿರುವ ಬಲೂಚಿಸ್ಥಾನದ ಪ್ರತ್ಯೇಕತೆಯ ಹೋರಾಟಗಾರರು ನೆರವಿಗಾಗಿ ಭಾರತದತ್ತ ನೋಡುತ್ತಿದ್ದಾರೆ.”

Tags:
error: Content is protected !!