ಪಂಜು ಗಂಗೊಳ್ಳಿ
ಹತ್ತು ಸಾವಿರಕ್ಕೂ ಹೆಚ್ಚು ಮಹಿಳೆಯರ ಬದುಕನ್ನು ಬದಲಾಯಿಸಿದ ಸಮಾಜ ಸೇವಕಿ
ಜನವರಿ ೨೦೨೦ರಲ್ಲಿ ಪುಣೆಯ ಬುಧವಾರ ಪೇಟೆಯ ಸುಪ್ರಿಯಾ ಮದುವೆಯಾಗಿ ಅವಳೀಗ ಒಬ್ಬ ಗೃಹಸ್ಥೆಯಾಗಿದ್ದಾಳೆ. ಅದೇ ಬುಧವಾರ ಪೇಟೆಯ ಅಭಿಲಾಷ ಬಿಕಾಂ ಪದವಿ ಪಡೆದು ಈಗ ಬ್ಯಾಂಕರ್ ಆಗಿದ್ದಾಳೆ. ಹೆಣ್ಣು ಮಕ್ಕಳು ಗೃಹಿಣಿಯರಾಗುವುದು, ಶಿಕ್ಷಣ ಪಡೆದು ಬ್ಯಾಂಕರ್‌ಗಳಾಗುವುದರಲ್ಲಿ ಅದೇನು ವಿಶೇಷವಿದೆ ಅಂತ ಯಾರಿಗಾದರೂ ಅನ್ನಿಸುವುದು ಸಹಜವೇ. ಆದರೆ, ಈ ಸುಪ್ರಿಯಾ ಒಬ್ಬಳು ಗೃಹಿಣಿಯಾಗಿರುವುದು, ಈ ಅಭಿಲಾಷ ಒಬ್ಬಳು ಬ್ಯಾಂಕರಾಗಿರುವುದರಲ್ಲಿ ಖಂಡಿತವಾಗಿಯೂ ವಿಶೇಷವಿದೆ. ಏಕೆಂದರೆ, ಅದಕ್ಕೂ ಮೊದಲು ಅವರಿಬ್ಬರೂ ಇದೇ ಬುಧವಾರ ಪೇಟೆಯ ನೂರಾರು ವೇಶ್ಯೆಯರಲ್ಲಿ ಇಬ್ಬರಾಗಿದ್ದರು. ಇವರಿಬ್ಬರಷ್ಟೇ ಅಲ್ಲ, ಅವರಂತೆ ಇನ್ನೂ ನೂರಾರು ವೇಶ್ಯೆಯರು ವೇಶ್ಯಾವಾಟಿಕೆಯ ಕೂಪದಿಂದ ಹೊರ ಬಂದು ಈಗ ಗೌರವದ ಬದುಕನ್ನು ಬದುಕುತ್ತಿದ್ದಾರೆ. ಇದಕ್ಕೆ ಕಾರಣ ಸೀಮಾ ವಾಗ್ಮೋಡೆ ಎಂಬ ಒಬ್ಬರು ಸಮಾಜ ಸೇವಕಿ.
ಸೀಮಾ ವಾಗ್ಮೋಡೆ ೧೯೭೦-೮೦ ರ ದಶಕದಲ್ಲಿ ಕೆಇಎಮ್ ಆಸ್ಪತ್ರೆಯಲ್ಲಿ ಹಾಗೂ ಮಹಾರಾಷ್ಟ್ರ ರಾಜ್ಯ ಆರೋಗ್ಯ ಇಲಾಖೆಯಲ್ಲಿ ಹನ್ನೊಂದು ವರ್ಷಗಳ ಕಾಲ ಸೇವೆ ಸಲ್ಲಿಸಿ ಸುಮಾರು ೫೦೦೦ಕ್ಕೂ ಹೆಚ್ಚು ಕುಷ್ಟರೋಗಿಗಳ ಆರೈಕೆ ಮಾಡಿ ಅನುಭವವಿರುವ ಒಬ್ಬರು ಸಮಾಜ ಸೇವಕಿ. ೧೯೭೦-೮೦ ದಶಕ ಭಾರತದಲ್ಲಿ ಎಚ್‌ಐವಿ/ಏಡ್ಸ್ ಸೋಂಕು ವ್ಯಾಪಕವಾಗಿ ಹರಡುತ್ತಿದ್ದ ಸಮಯ. ಅದೇ ಸಮಯದಲ್ಲಿ ಈ ಸೋಂಕಿನ ಬಗ್ಗೆ ಜನಸಾಮಾನ್ಯರಿಗೆ ಸಾಕಷ್ಟು ಅರಿವು ಇರಲಿಲ್ಲ. ೧೯೯೩ರಲ್ಲಿ ಸೀಮಾ ವಾಗ್ಮೋಡೆ ಮಹಾರಾಷ್ಟ್ರ ಸರ್ಕಾರದ ಎಚ್‌ಐವಿ/ಏಡ್ಸ್ ಸಂಶೋಧನಾ ತಂಡ ಸೇರಿದ್ದರು. ಅದರ ಕಾರ್ಯವ್ಯಾಪ್ತಿಯ ಭಾಗವಾಗಿ ಅವರು ಬುಧವಾರ ಪೇಟೆಯ ಕೆಂಪು ದೀಪ ಪ್ರದೇಶಕ್ಕೆ ಭೇಟಿ ಕೊಟ್ಟಿದ್ದರು.
ಶ್ರೀಮಂತ್ ದಗ್ಡುಶೇಟ್ ಹಲ್ವಾಯ್ ಗಣಪತಿ ದೇವಸ್ಥಾನ, ತಂಬ್ಡಿ ಜೋಗೇಶ್ವರಿ ದೇವಸ್ಥಾನ ಹಾಗೂ ರಾಜಾ ದಿನಕರ್ ಕೇಳ್ಕರ್ ವಸ್ತುಸಂಗ್ರಹಾಲಯವಿರುವ ಬುಧವಾರ ಪೇಟೆ ಪುಣೆಯ ಚಾರಿತ್ರಿಕ ಹಾಗೂ ಜನಪ್ರಿಯ ಪ್ರವಾಸಿ ತಾಣಗಳಲ್ಲೊಂದು. ಹಾಗೆಯೇ, ಇದು ಕೆಂಪು ದೀಪ ಪ್ರದೇಶಕ್ಕೂ ಹೆಸರಾದ ಪ್ರದೇಶ. ಸೀಮಾ ವಾಗ್ಮೋಡೆ ಅಲ್ಲಿ ತಿರುಗಾಡಿ, ಅಲ್ಲಿನ ಸ್ತ್ರೀಯರ ಬದುಕಿನ ಒಳಹೊಕ್ಕು ನೋಡಿದಾಗ ಆ ಮಹಿಳೆಯರಿಗೆ ಆರೋಗ್ಯ ತಪಾಸಣೆಯಷ್ಟೇ ಸಾಲದು ಎಂಬುದು ತಿಳಿಯಿತು. ಅಲ್ಲಿ ವೇಶ್ಯೆವಾಟಿಕೆ ನಡೆಸುವ ಸ್ತ್ರೀಯರಲ್ಲದೆ ಅವರ ಮಕ್ಕಳೂ ಅವರೊಂದಿಗೆ ಅಲ್ಲಿ ವಾಸಿಸುತ್ತಾರೆ. ಅಲ್ಲಿ ಒಂದು ಮನೆಯಲ್ಲಿ ಕಂಡ ದೃಶ್ಯ ಅವರನ್ನು ನಖಶಿಖಾಂತ ಅಲುಗಾಡಿಸಿತು. ಒಬ್ಬ ಚಿಕ್ಕ ಹುಡುಗ ತನಗೆ ಹಸಿವೆಯಾಗುತ್ತಿದೆ ದುಡ್ಡು ಕೊಡು ಅಂಗಡಿಯಿಂದ ತಿಂಡಿ ತಂದು ತಿನ್ನುತ್ತೇನೆ ಎಂದು ತನ್ನ ಅಮ್ಮನನ್ನು ಕೇಳುತ್ತಿದ್ದ. ಅದಕ್ಕವಳು ತನ್ನ ಬಳಿ ದುಡ್ಡಿಲ್ಲ ಅಂದಾಗ ಆ ಬಾಲಕ ಇನ್ನೊಬ್ಬ ಗಿರಾಕಿಯನ್ನು ಕರೆ ಎಂದು ಅವಳಿಗೆ ಹೇಳುತ್ತಿದ್ದ. ಆ ದೃಶ್ಯವನ್ನು ಕಂಡ ಸೀಮಾ ವಾಗ್ಮೋಡೆಗೆ ಕರುಳು ಕಿವುಚಿದಂತಾಯಿತು!
ವೇಶ್ಯಾವಾಟಿಕೆ ಕೇಂದ್ರಗಳಲ್ಲಿ ವಾಸವಾಗಿರುವ ಮಹಿಳೆಯರು, ಅವರ ಮಕ್ಕಳ ಬದುಕಿನ ಪರಿಸ್ಥಿತಿಯನ್ನು ನೋಡಿದ ಮೇಲೆ ಅವರನ್ನು ಅವರಷ್ಟಕ್ಕೆ ಬಿಡಲು ಸೀಮಾ ವಾಗ್ಮೋಡೆಯವರ ಮನಸ್ಸು ಒಪ್ಪಲಿಲ್ಲ. ಅವರ ಬದುಕಿನ ಸುಧಾರಣೆಗಾಗಿ ತಾನು ಏನಾದರೂ ಮಾಡಲೇಬೇಕು ಎಂದು ಅವರು ನಿರ್ಧರಿಸಿದರು. ತನ್ನ ನಿರ್ಧಾರವನ್ನು ತಮ್ಮ ಪತಿ ಶಿರೀಸ್‌ಗೆ ಹೇಳಿದಾಗ ಅವರೂ ಸೀಮಾರನ್ನು ಪ್ರೋತ್ಸಾಹಿಸಿದರು. ಆದರೆ, ಅದರ ಜೊತೆಗೆ ಒಂದು ಕಿವಿ ಮಾತನ್ನೂ ಹೇಳಿದರು. ‘ನೀನು ನಿಜಕ್ಕೂ ಅವರಿಗಾಗಿ ಕೆಲಸ ಮಾಡಬೇಕೆಂದಿದ್ದರೆ ಮುಂದುವರಿ. ಆದರೆ, ಇದು ನೀನು ಭಾವಿಸಿದಷ್ಟು ಸುಲಭವಾದ ಕೆಲಸವಲ್ಲ. ಇದರಲ್ಲಿ ನೀನು ಬಹಳಷ್ಟು ಅಡೆತಡೆಗಳನ್ನು ಎದುರಿಸಬೇಕಾಗಿ ಬರುತ್ತದೆ’ ಎಂದರು.
ಒಂದು ವರ್ಷದ ನಂತರ ೧೯೯೪ರಲ್ಲಿ ಸೀಮಾ ವಾಗ್ಮೋಡೆ ತನ್ನ ನಿರ್ಧಾರವನ್ನು ಕಾರ್ಯರೂಪಕ್ಕೆ ತರುವ ಸಲುವಾಗಿ ‘ಕಾಯಕಲ್ಪ’ ಎಂಬ ಒಂದು ಸರ್ಕಾರೇತರ ಸಂಸ್ಥೆಯನ್ನು ಹುಟ್ಟು ಹಾಕಿದರು. ಅಂದು ಶುರುವಾದ ಕಾಯಕಲ್ಪ ಇಂದಿನವರೆಗೆ ಹತ್ತು ಸಾವಿರಕ್ಕೂ ಹೆಚ್ಚು ವೇಶ್ಯೆಯರ ಬದುಕನ್ನು ಬದಲಾಯಿಸಿದೆ. ಬುಧವಾರ ಪೇಟೆಯ ವೇಶ್ಯಾವಾಟಿಕೆ ಕೇಂದ್ರಗಳಲ್ಲಿ ವೇಶ್ಯೆಯರ ಮಕ್ಕಳು ಅವರೊಂದಿಗೆ ವಾಸಿಸುವುದರಿಂದ ಆ ಮಕ್ಕಳು ತಮ್ಮ ತಾಯಂದಿರು ಗ್ರಾಹಕರ ಜೊತೆ ಮಲಗುವುದನ್ನು ಪ್ರತಿದಿನ ನೋಡುತ್ತ ಅತ್ಯಂತ ಅಗೌರವಯುತ ವಾತಾವರಣದಲ್ಲಿ ಬೆಳೆಯುತ್ತವೆ. ಅಂತಹ ಮಕ್ಕಳು ಮುಂದೆ ಹೇಗೆ ಬೆಳೆಯಬಲ್ಲವು ಎಂಬುದನ್ನು ಯಾರೂ ಊಹಿಸಬಹುದು. ಹಾಗಾಗಿ, ಸೀಮಾ ವಾಗ್ಮೋಡೆ ಪುಣೆಯ ‘ವೈಎಮ್‌ಸಿಎ’ ಜೊತೆಗೆ ಸಹಯೋಗ ಬೆಳೆಸಿಕೊಂಡು ಆ ಮಕ್ಕಳನ್ನು ಅವರ ತಾಯಂದಿರಿಂದ ಪ್ರತ್ಯೇಕವಾಗಿ ಇರಿಸಿಕೊಳ್ಳುವ ಸಲುವಾಗಿ ಒಂದು ‘ಡೇ ಆಂಡ್ ನೈಟ್ ಕೇರ್ ಹೌಸ್’ ಪ್ರಾರಂಭಿಸಿದರು. ಅದೊಂದು ತಾತ್ಕಾಲಿಕ ವ್ಯವಸ್ಥೆಯಾಗಿತ್ತು. ಮುಂದೆ ೨೦೧೪ರಲ್ಲಿ ಸೀಮಾ ವಾಗ್ಮೋಡೆ ತಮ್ಮ ಪತಿಯ ಹೆತ್ತವರಿಂದ ಪುಣೆಯ ಬೋರಿ ಗ್ರಾಮದಲ್ಲಿ ಒಂದು ಜಮೀನನ್ನು ದಾನ ಪಡೆದರು. ಸ್ಕಾಟ್‌ಲ್ಯಾಂಡಿನ ಒಂದು ಚಾರಿಟಿ ಸಂಸ್ಥೆಯಿಂದ ಫಂಡಿಂಗ್ ಪಡೆದು, ಆ ಮಕ್ಕಳಿಗಾಗಿ ಆ ಜಮೀನಿನಲ್ಲಿ ಒಂದು ಖಾಯಂ ಆಶ್ರಯ ತಾಣವನ್ನು ಪ್ರಾರಂಭಿಸಿದರು.
ಬುಧವಾರ ಪೇಟೆಯ ವೇಶ್ಯೆಯರ ಮಕ್ಕಳಲ್ಲದೆ ಬೇರೆಡೆಯ ವೇಶ್ಯೆಯರ ಮಕ್ಕಳೂ ಕಾಯಕಲ್ಪದಲ್ಲಿ ಆಶ್ರಯ ಪಡೆದಿದ್ದಾರೆ. ಒಂದು ದಿನ ಬೆಳಗ್ಗಿನ ಜಾವ ಯಾರೋ ಒಂದು ಹೆಣ್ಣು ಮಗುವನ್ನು ತಂದು ಕಾಯಕಲ್ಪದ ಮೆಟ್ಟಲೆದುರು ಬಿಟ್ಟು ಹೋಗಿದ್ದರು. ಆ ಮಗು ಏಂಜೆಲ್ ಎಂಬ ಹೆಸರಿನಲ್ಲಿ ಕಾಯಕಲ್ಪದಲ್ಲಿ ಬೆಳೆಯುತ್ತಿದೆ. ಪ್ರತಿದಿನ ಬುಧವಾರ ಪೇಟೆಯ ವೇಶ್ಯೆಯರು ಕಾಯಕಲ್ಪಕ್ಕೆ ಬಂದು ಅಲ್ಲಿರುವ ತಮ್ಮ ಮಕ್ಕಳ ಜೊತೆ ಇತರ ಮಕ್ಕಳ ಆರೈಕೆಯನ್ನೂ ಮಾಡುತ್ತಾರೆ. ಮಕ್ಕಳಿಗಾಗಿ ಕಾಯಕಲ್ಪದ ಮೇಲ್ವಿಚಾರಣೆಯಲ್ಲಿ ಈ ವೇಶ್ಯೆಯರು ಒಂದು ಅಡುಗೆ ಮನೆಯನ್ನೂ ನಡೆಸುತ್ತಿದ್ದಾರೆ.
ಬುಧವಾರ ಪೇಟೆಯ ಜನ ಸೀಮಾರನ್ನು ಪ್ರೀತಿಯಿಂದ ಮೇಡಮ್, ದೀದಿ (ಅಕ್ಕ), ಮಾಮಾ ಮತ್ತು ಆಜಿ (ಅಜ್ಜಿ) ಎಂದು ಕರೆಯುತ್ತಾರೆ. ಸೀಮಾ ವಾಗ್ಮೋಡೆಯವರಿಗೆ ೬೦ ವರ್ಷ ತುಂಬಿದಾಗ ವೇಶ್ಯೆವಾಟಿಕೆ ನಡೆಸುವ ಮಹಿಳೆಯರೆಲ್ಲ ಸೇರಿ ಅವರ ಜನ್ಮ ದಿನವನ್ನು ಆಚರಿಸಿ, ೬೦,೦೦೦ ರೂಪಾಯಿ ಸಂಗ್ರಹಿಸಿ ಅದನ್ನು ತಮ್ಮ ಕಾಣಿಕೆಯಾಗಿ ಅವರಿಗೆ ನೀಡಿದರು. ಸೀಮಾ ಆ ೬೦,೦೦೦ರೂ.ಗಳಿಗೆ ತಾನು ಸಂಗ್ರಹಿಸಿದ ೪೦,೦೦೦ ರೂಪಾಯಿ ಸೇರಿಸಿ, ಒಂದು ಹಸುವನ್ನು ಖರೀದಿಸಿದರು. ಆ ಹಸುವಿನ ಹಾಲು ಈಗ ಕಾಯಕಲ್ಪದ ಮಕ್ಕಳ ಹೊಟ್ಟೆ ತುಂಬಿಸುತ್ತಿದೆ. ಇದಲ್ಲದೆ ಕಾಯಕಲ್ಪದಲ್ಲಿ ಬಾತು ಕೋಳಿ ಮತ್ತು ಮೊಲಗಳನ್ನೂ ಸಾಕಲಾಗಿದೆ.
” ೧೯೯೪ರಲ್ಲಿ ಸೀಮಾ ವಾಗ್ಮೋಡೆ ‘ಕಾಯಕಲ್ಪ’ ಎಂಬ ಒಂದು ಸರ್ಕಾರೇತರ ಸಂಸ್ಥೆಯನ್ನು ಹುಟ್ಟು ಹಾಕಿದರು. ಅಂದು ಶುರುವಾದ ಕಾಯಕಲ್ಪ ಇಂದಿನವರೆಗೆ ಹತ್ತು ಸಾವಿರಕ್ಕೂ ಹೆಚ್ಚು ವೇಶ್ಯೆಯರ ಬದುಕನ್ನು ಬದಲಾಯಿಸಿದೆ.”





