Mysore
23
overcast clouds
Light
Dark

ಎಫ್‌ಎಂಸಿಜಿ ಕಂಪೆನಿಗಳ ಚಿತ್ತ ಕಿರಾಣಿ ಅಂಗಡಿಗಳತ್ತ

  • ಪ್ರೊ.ಆರ್.ಎಂ.ಚಿಂತಾಮಣಿ

ಭಾರತದಾದ್ಯಂತ ಹಳ್ಳಿ, ಪಟ್ಟಣ ಮತ್ತು ಮಹಾನಗರಗಳಲ್ಲಿ ೧.೨೫ ಕೋಟಿಗೂ ಹೆಚ್ಚು ದಿನಸಿ ಅಂಗಡಿಗಳೆಂದೂ ಕರೆಯಲ್ಪಡುವ ಸಣ್ಣ, ದೊಡ್ಡ ಕಿರಾಣಿ ಅಂಗಡಿಗಳಿವೆ.

ಬೀದಿ ಬೀದಿಗಳಲ್ಲಿ ಸುತ್ತಮುತ್ತಲಿನ ಕುಟುಂಬಗಳಿಗೆ ನಿತ್ಯೋಪಯೋಗಿ ವಸ್ತುಗಳನ್ನು ಪೂರೈಸುವ ಸಣ್ಣ ಅಂಗಡಿಗಳು ಮತ್ತು ಕೇಂದ್ರ ಸ್ಥಳಗಳಲ್ಲಿಯ ಪೇಟೆಗಳಲ್ಲಿರುವ ಸಾಲು ಸಾಲು ಅಂಗಡಿಗಳು ಇವುಗಳಲ್ಲಿ ಸೇರಿರುತ್ತವೆ. ಅಲ್ಲದೆ ವಾರದ ಸಂತೆಗಳಲ್ಲಿ ತಾತ್ಕಾಲಿಕ ಕಟ್ಟೆ ಅಂಗಡಿಗಳ ಮೂಲಕ ಆಹಾರ ಧಾನ್ಯಗಳೂ ಸೇರಿ ಜನರ ಅವಶ್ಯಕತೆಗಳನ್ನು ಇವರು ಪೂರೈಸುತ್ತಾರೆ. ಇವರು ಮೂಟೆಗಟ್ಟಲೆ ದೊಡ್ಡ ಗಾತ್ರದಲ್ಲಿಯೂ ಮಾರಬಲ್ಲರು. ಎರಡು ಕಪ್ ಟೀ, ಕಾಫಿಗಾಗುವ ಪೌಡರ್ ಗಳನ್ನು ತಾವೇ ಪಟ್ಟಣ ಕಟ್ಟಿಯೋ ಉತ್ಪಾದಕ ಕಂಪೆನಿಗಳಿಂದಲೇ ಪ್ಯಾಕೇಜ್ ಆಗಿ ಬಂದಿರುವ ಸಣ್ಣ ಸ್ಯಾಚೆಗಳನ್ನೋ ಮಾರಬಲ್ಲರು. ಒಂದು ರೂಪಾಯಿ ಬೆಲೆಯ ಚಾಕಲೇಟ್‌ನಿಂದ ನೂರಾರು ರೂಪಾಯಿ ಬೆಲೆಯ ಉತ್ಪನ್ನಗಳವರೆಗೆ ಎಲ್ಲ ಪದಾರ್ಥಗಳೂ ಇಲ್ಲಿ ದೊರೆಯುತ್ತವೆ.

ವಿಶೇಷವೆಂದರೆ ಇವರಿಗೆ ಬಹುತೇಕ ಎಲ್ಲ ಗ್ರಾಹಕರ ಪರಿಚಯವಿರುತ್ತದೆ. ಇವರ ಬಗ್ಗೆ ಅವರಿಗೂ ಗೊತ್ತಿರುತ್ತದೆ. ಇದರಿಂದ ಗ್ರಾಹಕರಿಗೆ ಹಲವು ರೀತಿಯ ಸಲಹೆ ಮತ್ತು ಸೇವೆಗಳು ದೊರೆಯುತ್ತಿರುತ್ತವೆ. ಇಲ್ಲಿ ಕೊಳ್ಳುವಾಗ ಗ್ರಾಹಕರಿಗೆ ವಸ್ತುಗಳನ್ನು ಮುಟ್ಟಿ ನೋಡುವ ಮತ್ತು ಅವುಗಳ ಗುಣಲಕ್ಷಣಗಳ ಬಗ್ಗೆ ಚರ್ಚಿಸುವ ಹಾಗೂ ಬೆಲೆ ಹೋಲಿಕೆಯ ಖರೀದಿಯಲ್ಲಿಯ ವಿಶಿಷ್ಟ ಅನುಭವವಾಗುತ್ತದೆ.

ಹೀಗಾಗಿ ವಿತರಣಾ ಸರಪಳಿಯಲ್ಲಿ ಇವರೇ ಗ್ರಾಹಕರಿಗೆ ಅತಿ ಸಮೀಪವಿರುವ ಕೊನೆಯ ಕೊಂಡಿ. ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಇವರದು ಮಹತ್ವದ ಪಾತ್ರ. ಕೃಷಿಯೂ ಸೇರಿದಂತೆ ಎಲ್ಲ ಉತ್ಪಾದಕ, ಸಂಸ್ಕರಣ ಮತ್ತು ಪ್ಯಾಕೇಜಿಂಗ್ ಬ್ರಾಂಡೆಡ್ ಉದ್ದಿಮೆಗಳ ಅಥವಾ ಉತ್ಪನ್ನಗಳನ್ನು ಅಂತಿಮ ಉಪಭೋಗಕರಿಗೆ ತಲುಪಿಸುವಲ್ಲಿ ಇವರ ಅವಶ್ಯಕತೆ ಗೊತ್ತಿರುವ ವಿಷಯ.

ಆದರೆ ಹಲವು ದಶಕಗಳಿಂದ ಡಿಪಾರ್ಟ್‌ಮೆಂಟಲ್ ಸ್ಟೋರ್‌ಗಳು ಮತ್ತು ಸೂಪರ್ ಮಾರ್ಕೆಟ್‌ಗಳ ಹಾವಳಿಯಿಂದ ಕಿರಾಣಿ ಅಂಗಡಿಗಳ ವ್ಯವಹಾರ ನಗರಗಳಲ್ಲಿ ಕಡಿಮೆಯಾಗಿದೆ ಎಂದು ಮೇಲ್ನೋಟಕ್ಕೆ ಅನಿಸುತ್ತಿದೆ. ತೀರ ಇತ್ತೀಚೆಗೆ ಆನ್‌ಲೈನ್ ಮಾರಾಟ ತಾಣಗಳು ದೊಡ್ಡ ಸದ್ದು ಮಾಡುತ್ತಿದ್ದು, ಇದರಿಂದಲೂ ಏಟು ಬಿದ್ದಿರುವ ಸಾಧ್ಯತೆ ಇದೆ. ಆದರೆ ಇವುಗಳಲ್ಲಿ ಗ್ರಾಹಕರಿಗೆ ಕೊಳ್ಳುವ ಅನುಭವ ಕಡಿಮೆ. ಹೀಗಾಗಿ ಕಿರಾಣಿಗಳು ತಮ್ಮ ಬಹುಮುಖಿ ಸೇವೆಗಳಿಂದ ಮತ್ತು ಉಪಭೋಗಕರ ನಾಡಿಮಿಡಿತ ಬಲ್ಲವರಾದ್ದರಿಂದ ಇಂದಿಗೂ ಮುಂದೂ ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳುವುದಲ್ಲದೆ ತಮ್ಮ ಅನಿವಾರ್ಯತೆಯನ್ನು ಸಾರುತ್ತ ಬೆಳೆಯುತ್ತಿರುವುದು ಗಮನಾರ್ಹ. ಈ ಸತ್ಯವನ್ನು ತಡವಾಗಿಯಾದರೂ ತೀವ್ರ ಮಾರಾಟವಾಗುವ ಗ್ರಾಹಕ ವಸ್ತುಗಳ (ಊZoಠಿ ಞಟqಜ್ಞಿಜ ಟ್ಞoಞಛ್ಟಿ ಜಟಟboಎಫ್.ಎಂ.ಸಿ.ಜಿ.) ಕಂಪೆನಿಗಳೆಂದು ಕರೆಯಲ್ಪಡುವ ಪ್ಯಾಕೇಜ್ಡ್ ನಿತ್ಯೋಪಯೋಗಿ ಸರಕುಗಳ ಕಂಪೆನಿಗಳು ಕಂಡುಕೊಂಡಂತೆ ಕಾಣುತ್ತದೆ.

ಎಫ್‌ಎಂಸಿಜಿಗಳಿಂದ ಕಿರಾಣಿಗಳಿಗೆ ಆದ್ಯತೆ: ಇಂದಿಗೂ ಡಾಬರ್, ಇಮಾಮಿ, ಟಾಟಾ ಕನ್ಸ್ಯೂಮರ‍್ಸ್, ಬಜಾಜ್ ಕನ್ಸ್ಯೂಮರ‍್ಸ್, ಎಚ್‌ಯುಎಲ್, ಐ.ಟಿ.ಸಿ., ಪಾರ್ಲೆ, ಮಾರಿಕೊ, ನೆಸ್ಲೆ, ಪಿ ಅಂಡ್ ಜಿ, ಪೆಪ್ಸಿಕೋ, ಕೋಲ್ಗೇಟ್ ಮುಂತಾದ ನೂರಾರು ಎಫ್.ಎಂ.ಸಿ.ಜಿ. ಕಂಪೆನಿಗಳ ಸಾವಿರಾರು ಬ್ರಾಂಡೆಡ್ ಉತ್ಪನ್ನಗಳು ಶೇ.೭೫ರಷ್ಟು ಕಿರಾಣಿ ಅಂಗಡಿಗಳ ಮೂಲಕವೇ ಅಂತಿಮ ಉಪಭೋಗಕರ ಕೈ ಸೇರುತ್ತವೆ ಎಂದು ವರದಿಗಳು ಹೇಳುತ್ತವೆ.

ಉಳಿದ ಶೇ.೨೫ರಷ್ಟು ಮಾತ್ರ ಸೂಪರ್ ಮಾರ್ಕೆಟ್‌ಗಳು ಮತ್ತು ಆನ್‌ಲೈನ್ ತಾಣಗಳಿಂದ ಮಾರಾಟವಾಗುತ್ತವೆ. ಗ್ರಾಮೀಣರು ಮತ್ತು ಗ್ರಾಹಕರ ಪಿರಮಿಡ್ (ಇಟ್ಞoಞಛ್ಟಿ PqsZಞಜಿb) ತಳದಲ್ಲಿರುವ ದೊಡ್ಡ ಸಂಖ್ಯೆಯ ಸಣ್ಣ ಆದಾಯದವರು ನಂಬಿರುವುದು ಮತ್ತು ಅವಲಂಬಿಸುವುದು ಅಂದಿನಿಂದ ಬಂದಿರುವ ಕಿರಾಣಿ ಅಂಗಡಿಗಳನ್ನೇ. ಕಂಪೆನಿಗಳಿಗೂ ಇದು ಗೊತ್ತು. ಸೂಪರ್ ಮಾರ್ಕೆಟ್‌ಗಳು ಮತ್ತು ಆನ್‌ಲೈನ್ ಮಾರಾಟ ಹೆಚ್ಚು ಆಕರ್ಷಕವಾಗಿ ಕಂಡರೂ ಮತ್ತು ಸಾಗಾಣಿಕೆ ಮುಂತಾದ ವೆಚ್ಚಗಳು ಕಡಿಮೆ ಅನಿಸಿದರೂ ಸುಸ್ಥಿರ ಬೆಳವಣಿಗೆಗಾಗಿ ಹಳೆಯ ಮಾಧ್ಯಮ (ಕಿರಾಣಿಗಳು) ಅನಿವಾರ್ಯವೆಂದೂ ಎಲ್ಲ ಗ್ರಾಹಕ ವರ್ಗಗಳನ್ನು ತಲುಪಲು ಎರಡೂ ಬೆಳೆಯಬೇಕೆಂದೂ ಕಂಪೆನಿಗಳಿಗೆ ಅರ್ಥವಾಗಿದೆ. ಅದರಂತೆ ತಂತ್ರಗಳನ್ನು ರೂಪಿಸಲಾಗುತ್ತಿದೆ.

ಆದರೂ ಇತ್ತೀಚಿನ ದಿನಗಳಲ್ಲಿ ಕಿರಾಣಿಗಳ ಮೂಲಕ ಮಾರಾಟದ ಬೆಳವಣಿಗೆ ಕಡಿಮೆಯಾಗುತ್ತಿರುವುದು ವರದಿಯಾಗಿದೆ. ಉದಾಹರಣೆಗೆ ಕಳೆದ ತ್ರೆ ಮಾಸಿಕದಲ್ಲಿ (ಜುಲೈ, ಆಗಸ್ಟ್, ಸೆಪ್ಟೆಂಬರ್) ಹಿಂದಿನ ವರ್ಷದ ಇದೇ ತ್ರೆ ಮಾಸಿಕಕ್ಕೆ ಹೋಲಿಸಿದರೆ ಆನ್‌ಲೈನ್ ಮತ್ತು ಸೂಪರ್ ಮಾರ್ಕೆಟ್‌ಗಳಲ್ಲಿ ಮಾರಾಟದ ಬೆಳವಣಿಗೆ ಶೇ.೧೯.೫ರಷ್ಟಿದ್ದರೆ ಅದು ಕಿರಾಣಿಗಳಲ್ಲಿ ಕೇವಲ ಶೇ.೭.೫ರಷ್ಟು ಇತ್ತು. ಇದು ಕಂಪೆನಿಗಳ ಮಾರಾಟ ಮ್ಯಾನೇಜರ್‌ರ ಕಳವಳಕ್ಕೆ ಕಾರಣವಾಗಿದೆ.

ಕಾರಣಗಳನ್ನು ಹುಡುಕುತ್ತಾ ಹೋದರೆ ಕಂಪೆನಿಗಳ ಕಡೆಯಿಂದ ಆನ್‌ಲೈನ್ ವಲಯದಲ್ಲಿ ಪರಿಚಯಿಸಿದಷ್ಟು ಹೊಸ ಉತ್ಪನ್ನಗಳನ್ನು (ಬ್ರಾಂಡುಗಳನ್ನು) ಕಿರಾಣಿ ವಲಯದಲ್ಲಿ ಪರಿಚಯಿಸದಿರುವುದು ಒಂದು ಕಾರಣವೆನ್ನಲಾಗಿದೆ. ಅದರಲ್ಲಿಯೂ ಕಡಿಮೆ ಬೆಲೆಯ ಪ್ಯಾಕೆಟ್‌ಗಳಲ್ಲಿ ಹೊಸ ವಸ್ತುಗಳನ್ನು ಪರಿಚಯಿಸದೇ ಇರುವುದು ಬೆಳವಣಿಗೆ ಮೇಲೆ ಪೆಟ್ಟು ಕೊಟ್ಟಿರಬಹುದು.

ಪ್ರಾದೇಶಿಕ ವಿತರಕರು (ಈಜಿoಠ್ಟಿಜಿಚ್ಠಿಠಿಛ್ಟಿo) ರಿಟೇಲ್ ಅಂಗಡಿಗಳಿಗೆ ಪೂರೈಸಿದ ಉತ್ಪನ್ನಗಳ ಮೌಲ್ಯವನ್ನು ಪಾವತಿಸಲು ಇದುವರೆಗೆ ಒದಗಿಸುತ್ತಿದ್ದ ವಾರ, ೧೫ ದಿನಗಳ ಅವಽಯ ಸೌಲಭ್ಯವನ್ನು ತಮ್ಮದೇ ಆದ ಕಾರಣಗಳಿಗಾಗಿ ನಿಲ್ಲಿಸಿದ್ದರಿಂದ ಕಿರಾಣಿಗಳು ಕಡಿಮೆ ಪ್ರಮಾಣದಲ್ಲಿ ಖರೀದಿಸುವುದು ಮತ್ತು ಕಡಿಮೆ ಸ್ಟಾಕ್ ಇಡುವಂತಾಗಿರುವುದು ಇನ್ನೊಂದು ಕಾರಣ.

ಮೂರನೇ ಸಾಮಾನ್ಯ ಕಾರಣವೆಂದರೆ ದೇಶದಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ಬೇಡಿಕೆ ಕಡಿಮೆಯಾಗಿರುವುದು. ಇದನ್ನು ಸರಿಪಡಿಸಲು ಸರ್ಕಾರ ಕೂಡಲೇ ನರೇಗಾ, ಗ್ರಾಮಸಡಕ್ ಮುಂತಾದ ಗ್ರಾಮೀಣ ಉದ್ಯೋಗ ಭರವಸೆಯ ಯೋಜನೆಗಳನ್ನು ಆರಂಭಿಸಿ ಜನರ ಕೈಯಲ್ಲಿ ಕೊಳ್ಳುವ ಶಕ್ತಿಯನ್ನು ತುಂಬಬೇಕು. ಇದು ತುರ್ತು ಬೇಕಾಗಿದೆ.

ಕಂಪೆನಿಗಳು ತಮ್ಮ ಪೂರೈಕೆ ತಂತ್ರಗಳನ್ನು ಸುಧಾರಿಸಿ ಹೊಸ ಬ್ರಾಂಡುಗಳು ಸೇರಿ ಎಲ್ಲ ಬ್ರ್ಯಾಂಡುಗಳಲ್ಲಿ ಕಡಿಮೆ ಬೆಲೆಯ ಪ್ಯಾಕೆಟ್‌ಗಳನ್ನು (೫, ೧೦ ರೂಪಾಯಿ ಬೆಲೆಯ) ಹೆಚ್ಚಿನ ಸಂಖ್ಯೆಯಲ್ಲಿ ಕಿರಾಣಿಗಳಿಗೆ ಪೂರೈಸುವ ವ್ಯವಸ್ಥೆ ಮಾಡುತ್ತಿವೆ. ಅಲ್ಲದೆ ಒಳಗಿರುವುದನ್ನು ನೋಡುವುದರ ಅನುಭವಕ್ಕಾಗಿ ಪ್ಯಾಕೆಟ್ ಅಥವಾ ಸ್ಯಾಚೆಯ ಒಂದು ಬದಿಯನ್ನು ಪಾರದರ್ಶಕ ಮಾಡಲಾಗುತ್ತಿದೆ.

ಕಿರಾಣಿಗಳ ಅಭಿಪ್ರಾಯ ಪಡೆದು ಆದ್ಯತೆಯ ಮೇರೆಗೆ ವಿತರಕ ಕ್ರೆಡಿಟ್ ಸೌಲಭ್ಯವನ್ನು ಮರು ಆರಂಭ ಮಾಡುವ ದಿಕ್ಕಿನಲ್ಲಿ ಕಂಪೆನಿಗಳು ಕಾರ್ಯೋನ್ಮುಖವಾಗಿವೆ. ರಿಟೇಲರೊಡನೆ ನೇರ ಸಂಪರ್ಕ ಹೊಂದುವ ದಿಕ್ಕಿನಲ್ಲಿಯೂ ಚಿಂತಿಸಲಾಗುತ್ತಿದೆ. ನಿರಂತರ ಕಿರಾಣಿಗಳೊಡನೆ ಸಂಪರ್ಕದಲ್ಲಿವೆ.

ಇನ್ನೊಂದು ಸಮಸ್ಯೆ ಎಂದರೆ ಕೆಲವು ಸೂಪರ್ ಮಾರ್ಕೆಟ್‌ಗಳಲ್ಲಿ ನಿತ್ಯವೂ ಎಂ.ಆರ್.ಪಿ.ಗಿಂತ ಕಡಿಮೆ ಬೆಲೆ ‘ನಮ್ಮ ಬೆಲೆ’ ಎಂದು ಮಾರುತ್ತಿರುವುದು ಕಿರಾಣಿಗಳೂ ಸೇರಿ ಇತರ ಎಲ್ಲ ಮಾರಾಟಗಾರರಿಗೂ ತೊಂದರೆ. ಇದನ್ನು ತಪ್ಪಿಸಬೇಕು.

ಒಂದು ಮಾತು: ಕಿರಾಣಿ ಅಂಗಡಿಗಳು ಎಲ್ಲ ಉತ್ಪಾದಕರಿಗೂ ಉಪಭೋಗಕರಿಗೂ ಜೀವನಾಡಿ ಇದ್ದಂತೆ.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ