Mysore
22
broken clouds

Social Media

ಶುಕ್ರವಾರ, 11 ಜುಲೈ 2025
Light
Dark

ಪ್ರತೀ ನಾಶವೊಂದು ಪಾಠ; ಪ್ರತೀ ಪಾಠವೊಂದು ಅವಕಾಶ

Death of 5 Tigers; Forest Department Needs to Wake Up

ಜೂನ್ ೨೬, ೨೦೨೫ರಂದು  ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ವನ್ಯಧಾಮ ವ್ಯಾಪ್ತಿಯ ಮೀಣ್ಯಂ ಅರಣ್ಯ ವಲಯದಲ್ಲಿ ಸಂಭವಿಸಿದ ತಾಯಿ ಹುಲಿ ಮತ್ತು  ನಾಲ್ಕು ಮರಿಗಳ ಮೃತ್ಯು ಸುದ್ದಿ ರಾಜ್ಯವನ್ನೆಲ್ಲ ತಲುಪಿದ ಮೌನ ನಡುಕವಾಗಿದೆ. ಇದು ಕೇವಲ ಒಂದು ವರ್ಗದ ಜೀವಿಯ ನಾಶವಲ್ಲ – ಇದು ನಮ್ಮ ಸಂರಕ್ಷಣಾ ವ್ಯವಸ್ಥೆಯ, ಮಾನವೀಯ ನೈತಿಕತೆ ಮತ್ತು ಜವಾಬ್ದಾರಿಯ ಬಿರುಕು.

ಈ ಹುಲಿಗಳ ಸಾವಿಗೆ ವಿಷಪ್ರಾಶನ ಕಾರಣ ಎಂಬುದು ವನ್ಯಜೀವಿ ಪ್ರಿಯರನ್ನು ಬೆಚ್ಚಿಬೀಳಿಸಿದೆ. ಮನುಷ್ಯ ಮತ್ತು ವನ್ಯಜೀವಿಗಳ ನಡುವಿನ ಸಂಬಂಧ ಈ ಮಟ್ಟದ ದ್ವೇಷಕ್ಕೆ ಇಳಿಯುವುದು   ಘಾತಕ ಪ್ರವೃತ್ತಿಯ ಸೂಚನೆ.

ಹುಲಿಯ ಕತೆ: ಅರಣ್ಯದ ಬಾಳು ಕೀಲಿ: ಹುಲಿ ಎಂದರೆ ಕೇವಲ ಅರಣ್ಯದ ಗರ್ವವಲ್ಲ. ಅದು ಒಂದು ಪರಿಸರ ವ್ಯವಸ್ಥೆಯ ಸ್ಥಿರತೆಯ ಚಿಹ್ನೆ. ಒಂದು  ತಾಯಿ ಹುಲಿ ತನ್ನ ನಾಲ್ಕು ಮರಿಹುಲಿಗಳೊಂದಿಗೆ ನಾಶವಾದದ್ದು, ನಿಸರ್ಗದಲ್ಲಿ ಮುಂದಿನ ತಲೆಮಾರಿಗೆ ಬಿದ್ದ ಮರ್ಮಾಘಾತ. ಇದು Project Tiger ನಂತಹ ಮಹತ್ವದ ಯೋಜನೆಗಳ ಮೇಲೆ ಬಿದ್ದ ಬೃಹತ್ ಕಪ್ಪುಚುಕ್ಕೆ. ನಾವು ಕೆಲ ವರ್ಷಗಳಿಂದ ಹುಲಿ ಸಂರಕ್ಷಣೆಯಲ್ಲಿ ಸಾಧಿಸಿದ ಯಶಸ್ಸನ್ನು ಒಂದೇ ದಿನದ ಅಸಹಜ (೫ ಹುಲಿಗಳ ಸಾವು) ಘಟನೆಯಿಂದ ಛಿದ್ರ ಮಾಡಿದಂತಾಗಿದೆ.

ಗಂಭೀರ ಪ್ರಶ್ನೆಗಳು: ಈ ದುರ್ಘಟನೆಯ ಹಿಂದೆ ಕೆಲವೊಂದು ಗಂಭೀರ ಪ್ರಶ್ನೆಗಳು ತಲೆಯೆತ್ತಿವೆ. ಅರಣ್ಯ ಇಲಾಖೆಗೆ ಮೊದಲು ಈ ಹುಲಿಗಳ ಚಲನೆಯ ಮಾಹಿತಿ ಏಕೆ ಸಿಕ್ಕಿರಲಿಲ್ಲ? ವಿಷ ಪ್ರಾಷನ ಇಷ್ಟೆಲ್ಲ ವಿಸ್ತಾರವಾಗಿ ಬಳಸಲಾಗುತ್ತಿರುವುದನ್ನು ಎಷ್ಟರ ಮಟ್ಟಿಗೆ ನಾವು ಗಮನದಲ್ಲಿಟ್ಟುಕೊಂಡಿದ್ದೇವೆ? ಮನುಷ್ಯರ ಜೀವನದ ಭದ್ರತೆ ಮತ್ತು ವನ್ಯಜೀವಿಗಳ ಸಂರಕ್ಷಣೆಯ ನಡುವೆ ಹೇಗೆ  ಸಮತೋಲನ ಸಾಧಿಸಬೇಕು?

ಅರಣ್ಯದ ಭದ್ರತೆ  ಕೇವಲ ಪೊಲೀಸ್ ಕೆಲಸವಲ್ಲ: ಅರಣ್ಯ ಸಂರಕ್ಷಣೆಯ ಕೆಲಸ ಕೇವಲ ಗಸ್ತ್ ಪಟ್ರೋಲ್, ಕ್ಯಾಮೆರಾ ಅಳವಡಿಸುವುದು ಅಥವಾ ಡ್ರೋನ್ ಹಾರಿಸುವುದಕ್ಕೆ ಸೀಮಿತವಾಗಬಾರದು. ಇದು ಮಾನವ ಸಮುದಾಯ, ವಿಜ್ಞಾನ, ಶಿಕ್ಷಣ ಮತ್ತು ತಂತ್ರಜ್ಞಾನ ಇವುಗಳ ಸಹಯೋಗದೊಂದಿಗೆ ಸಾಧಿತವಾಗಬೇಕು. ನಮ್ಮ  ಜಂಗಲ್ ಎಂದರೆ ಅದರೊಳಗಿನ ಜೀವಿಗಳೂ, ಗ್ರಾಮೀಣರ ಬದುಕೂ ಒಂದೇ ಸಮಾನವಾಗಿ ಬಾಳುತ್ತವೆ ಎಂಬ ಅರ್ಥವನ್ನು ಮರೆತುಬಿಟ್ಟಿದ್ದೇವೆ. ಹುಲಿಗಳನ್ನು ಉಳಿಸಿಕೊಳ್ಳುವುದೇ ಸವಾಲು: ಕೇಂದ್ರ ಮತ್ತು ರಾಜ್ಯ

ಸರ್ಕಾರಗಳು ಹುಲಿ ಸಂರಕ್ಷಣೆಗೆ ಕೋಟಿ ಕೋಟಿ ರೂ. ಹಣ ಮೀಸಲಿರಿಸಿ ಯೋಜನೆ ರೂಪಿಸಿವೆ. ಆದರೆ ಹುಲಿಗಳ ಹತ್ಯೆಯು ಕ್ರಿಯಾನ್ವಯದ ದುರ್ಬಲತೆಯನ್ನು ತೋರಿಸುತ್ತಿದೆ. ಕಾನೂನಿಗೆ  ತೀಕ್ಷ್ಣತೆ ಇದೆ. ಆದರೆ    ಜಾಗೃತಿಗೆ ಜಡತೆ ಇದೆ. ಈ ಮಧ್ಯೆ ಹುಲಿ ಹಾಗೂ ಅದರ ಗರುಡ ಹೆಜ್ಜೆಗಳು ಮನುಷ್ಯನ ತಪ್ಪು ಹೆಜ್ಜೆಯಿಂದ ನಾಶವಾಗುತ್ತಿವೆ.

ಪ್ರತೀ ನಾಶವೊಂದು ಪಾಠ: ಪ್ರತೀ ಪಾಠವೊಂದು ಅವಕಾಶ: ಹುಲಿಗಳಿಗೆ ಸುರಕ್ಷಿತ ವಾಸಸ್ಥಾನ, ಸ್ಥಳಾಂತರ ಮಾರ್ಗಗಳು (scorridors) ಮತ್ತು ಮಾದರಿ ಸಂರಕ್ಷಣಾ ಶೃಂಖಲೆಗಳು ಕಡ್ಡಾಯ.

ವಿಷ ಪ್ರಾಷನ  ವಿರೋಧಿ ಕಾನೂನು ಜಾಗೃತಿ: ಗ್ರಾಮೀಣ ಪ್ರದೇಶದಲ್ಲಿ ಮನುಷ್ಯರಿಗೆ ಅರಿವು ಮೂಡಿಸುವ ಕೆಲಸವು ಅವಶ್ಯ. ಅರಣ್ಯ ಇಲಾಖೆ ಸ್ವತಃ ಮರುಪರಿಶೀಲನೆಗೆ ಒಳಗಾಗಬೇಕು  ಮತ್ತು ಸಿಬ್ಬಂದಿ ಲಭ್ಯತೆ, ತರಬೇತಿ,  ತಂತ್ರಜ್ಞಾನ ಉಪಯೋಗ, ಸಮರ್ಥ ವರದಿ ವ್ಯವಸ್ಥೆ ಮತ್ತು ಸಾಮಾಜಿಕ ಸಹಭಾಗಿತ್ವ-ಸ್ಥಳೀಯರು ಸಂರಕ್ಷಣೆಯ ಪಾಲುದಾರರಾಗಬೇಕಾದುದು   ಅವಶ್ಯ. ನಾವಿಲ್ಲದ ಸ್ಥಳದಲ್ಲಿ  ಹುಲಿ ಬದುಕಲಾಗದು – ಹುಲಿಯಿಲ್ಲದ ಪರಿಸರದಲ್ಲಿ ನಾವು  ಬದುಕಲಾಗದು.

” ಗ್ರಾಮೀಣ ಪ್ರದೇಶದಲ್ಲಿ ಮನುಷ್ಯರಿಗೆ ಅರಿವು ಮೂಡಿಸುವ ಕೆಲಸವು ಅವಶ್ಯ. ಅರಣ್ಯ ಇಲಾಖೆ ಸ್ವತಃ ಮರುಪರಿಶೀಲನೆಗೆ ಒಳಗಾಗಬೇಕು.  ಸಿಬ್ಬಂದಿ ಲಭ್ಯತೆ, ತರಬೇತಿ, ತಂತ್ರಜ್ಞಾನ ಉಪಯೋಗ,  ಸಮರ್ಥ ವರದಿ ವ್ಯವಸ್ಥೆ ಮತ್ತು  ಸಾಮಾಜಿಕ ಸಹಭಾಗಿತ್ವ – ಸ್ಥಳೀಯರು ಸಂರಕ್ಷಣೆಯ ಪಾಲುದಾರರಾಗಬೇಕಾದುದು ಅವಶ್ಯ.”

ಶ್ರೇಯಸ್ ದೇವನೂರು

Tags:
error: Content is protected !!