Mysore
20
overcast clouds

Social Media

ಸೋಮವಾರ, 17 ನವೆಂಬರ್ 2025
Light
Dark

ಸಿಎಂ ಸ್ಥಾನದ ಬಿಕ್ಕಟ್ಟು ; ಹೈಕಮಾಂಡ್‌ಗೆ ಇಕ್ಕಟ್ಟು

ಆರ್.ಟಿ.ವಿಠ್ಠಲಮೂರ್ತಿ

ಪ್ರಬಲವಾಗಿ ತಮ್ಮ ಅಭಿಪ್ರಾಯ ದಾಖಲಿಸುತ್ತಿರುವ ಸಿದ್ದು ಪಡೆ

ಅಧಿಕಾರ ಕೈತಪ್ಪಿದರೆ ಸರ್ಕಾರ ಅಲುಗಾಡಿಸುವಷ್ಟು  ಸ್ಟ್ರಾಂಗ್  ಸಿದ್ದು ಗ್ಯಾಂಗ್

ಬೆಂಗಳೂರು: ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಸಿಎಂ ಸ್ಥಾನಕ್ಕೆ ಬರುತ್ತಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಆ ಸಾಧ್ಯತೆ ಇದೆಯೆ, ಸಿದ್ದರಾಮಯ್ಯ ಅವರ ಸ್ಥಾನಕ್ಕೆ ಮತ್ತೊಬ್ಬರನ್ನು ಕೂರಿಸಲು ಅವಕಾಶ ಇದೆಯೇ. ಡಿಕೆಶಿಗೆ ಅಧಿಕಾರ ಕೊಟ್ಟರೆ ಏನಾಗ ಬಹುದು ಎಂಬ ಪ್ರಶ್ನೆ ಜನರ ಮುಂದೆ ಬಂದಿದೆ.

ಒಂದು ವೇಳೆ ಅಧಿಕಾರ ಬಿಟ್ಟುಕೊಡುವಂತೆ ಸಿಎಂ ಸಿದ್ದರಾಮಯ್ಯ ಅವರಿಗೆ ಸೂಚನೆ ನೀಡಿದರೆ ಕಾಂಗ್ರೆಸ್ ವರಿಷ್ಠರೇ ತೀವ್ರ ಮುಜುಗರಕ್ಕೆ ಸಿಲುಕುವ ಲಕ್ಷಣಗಳು ಕಾಣಿಸಿಕೊಂಡಿವೆ. ಹೈಕಮಾಂಡ್ ಸಿದ್ದರಾಮಯ್ಯ ಅವರಿಗೆ ಅಧಿಕಾರವನ್ನು ಬಿಟ್ಟುಕೊಡಬೇಕು ಎಂದು ಸೂಚಿಸಿ ದರೆ ದೊಡ್ಡ ರಾಜಕೀಯ ಚದುರಂಗದಾಟವೇ ನಡೆಯಬಹುದು ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿವೆ. ಇದಕ್ಕೆ ಪೂರಕ ಎಂಬಂತೆ ಸಿದ್ದು ಗ್ಯಾಂಗ್ ಬಹಳ ಪ್ರಬಲವಾಗಿ ತಮ್ಮ ಅಭಿಪ್ರಾಯಗಳನ್ನು ದಾಖಲಿಸುತ್ತಿದೆ.

ಈ ಹಿಂದೆ ರಾಜಸ್ತಾನದಲ್ಲಿ ಸಿಎಂ ಆಗಿದ್ದ ಅಶೋಕ್ ಗೆಹ್ಲೋಟ್ ಅವರಿಗೆ ಅಧಿಕಾರ ಬಿಟ್ಟು ಕೊಡುವಂತೆ ಸ್ವತಃ ಸೋನಿಯಾ ಗಾಂಧಿ ಅವರೇ ಸೂಚಿಸಿದರೂ ಗೆಹ್ಲೋಟ್ ಅದನ್ನು ಪಾಲಿಸಿರಲಿಲ್ಲ. ಕಾರಣ ಕೇಳಿದರೆ ರಾಜಸ್ತಾನದಲ್ಲಿರುವ ಪಕ್ಷದ ಶಾಸಕರು ತಾವು ಅಧಿಕಾರ ಬಿಟ್ಟು ಕೆಳಗಿಳಿಯುವು ದನ್ನು ಒಪ್ಪುತ್ತಿಲ್ಲ ಎಂದು ಸೋನಿಯಾ ಗಾಂಧಿ ಅವರಿಗೇ ಅಶೋಕ್ ಗೆಹ್ಲೋಟ್ ಅವರು ತಿರುಗೇಟು ಹೊಡೆದು ದಕ್ಕಿಸಿಕೊಂಡಿದ್ದರು.

ಈ ಮಧ್ಯೆ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರನ್ನು ರಾಜಸ್ತಾನಕ್ಕೆ ಕಳುಹಿಸಿ ಅಶೋಕ್ ಗೆಹ್ಲೋಟ್ ಅವರ ಮನವೊಲಿಸಲು ಸೋನಿಯಾ ಗಾಂಧಿ ಪ್ರಯತ್ನಿಸಿದ್ದರೂ ಅದು ಸಫಲವಾಗಿರಲಿಲ್ಲ. ಇದರ ಪರಿಣಾಮವಾಗಿ ಅಶೋಕ್ ಗೆಹ್ಲೋಟ್ ಅವರು ತೆರವು ಮಾಡುವ ಜಾಗಕ್ಕೆ ಬರಬೇಕು ಎಂದು ಕನಸು ಕಂಡಿದ್ದ ಸಚಿನ್ ಪೈಲಟ್ ನಿರಾಶರಾಗಿದ್ದಲ್ಲದೆ ತಮ್ಮದೇ ದಾರಿ ಹಿಡಿಯುವ ಪರಿಸ್ಥಿತಿ ನಿರ್ಮಾಣವಾಯಿತು.

ಹೀಗೆ ಅವತ್ತು ರಾಜಸ್ತಾನದಲ್ಲಿ ನಡೆದ ಬೆಳವಣಿಗೆ ಕರ್ನಾಟಕದಲ್ಲೂ ಘಟಿಸುವ ಲಕ್ಷಣಗಳು ದಟ್ಟವಾಗಿದ್ದು ಬಿಹಾರ ವಿಧಾನಸಭಾ ಚುನಾವಣೆ ಫಲಿತಾಂಶ ಬಂದ ನಂತರ ಈ ಆಟ ಶುರುವಾಗುವುದು ಬಹುತೇಕ ಖಚಿತ. ಮೂಲಗಳ ಪ್ರಕಾರ, ರಾಹುಲ್ ಗಾಂಧಿಯವರೇ ಖುದ್ದಾಗಿ ಅಧಿಕಾರ ತ್ಯಾಗ ಮಾಡುವಂತೆ ಸಿದ್ದರಾಮಯ್ಯ ಅವರಿಗೆ ಹೇಳಿದರೆ ಸಿದ್ದರಾಮಯ್ಯ ವಿವಶರಾಗಬಹುದು ಮತ್ತು ಅಧಿಕಾರ ತ್ಯಾಗಕ್ಕೆ ಮುಂದಾಗಬಹುದು. ಆದರೆ ಇಂತಹ ಸನ್ನಿವೇಶ ನಿರ್ಮಾಣವಾದರೆ ಯಾವ ಕಾರಣಕ್ಕೂ ತಮ್ಮ ಜಾಗಕ್ಕೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಬರುವುದನ್ನು ಸಿದ್ದರಾಮಯ್ಯ ಅವರು ಒಪ್ಪುವುದಿಲ್ಲ.

ಇದಕ್ಕೆ ಮುಖ್ಯ ಕಾರಣವೆಂದರೆ ರಾಜ್ಯ ಸಚಿವ ಸಂಪುಟದಲ್ಲಿರುವ ಬಹುತೇಕ ಸಚಿವರು ಸೇರಿದಂತೆ ಕಾಂಗ್ರೆಸ್ ಪಕ್ಷದ ಬಹುತೇಕ ಶಾಸಕರು ಸಿದ್ದರಾಮಯ್ಯ ಕೆಳಗಿಳಿಯುವುದನ್ನಾಗಲೀ, ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿಯಾಗುವುದನ್ನಾಗಲೀ ಒಪ್ಪುತ್ತಿಲ್ಲ. ಈ ಹಿನ್ನೆಲೆಯಲ್ಲಿಯೇ ಮಾಜಿ ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರ ನಿವಾಸದಲ್ಲಿ ನಡೆಯಲಿರುವ ಮಹತ್ವದ ಔತಣಕೂಟ ಇದೇ ನಿಲುವನ್ನು ತೆಗೆದುಕೊಳ್ಳಲಿದೆಯಲ್ಲದೆ, ಸಿದ್ದರಾಮಯ್ಯ ಯಾವ ಕಾರಣಕ್ಕೂ ಕೆಳಗಿಳಿಯಬಾರದು. ಒಂದು ವೇಳೆ ಅವರೇ ಒಪ್ಪಿದರೂ ಅವರ ಜಾಗಕ್ಕೆ ಡಿ.ಕೆ.ಶಿವಕುಮಾರ್ ಬದಲು ಬೇರೊಬ್ಬರು ಮುಖ್ಯಮಂತ್ರಿಯಾಗಬೇಕು ಎಂದು ವರಿಷ್ಠರನ್ನು ಆಗ್ರಹ ಮಾಡಲಿದೆ. ಅಷ್ಟೇ ಅಲ್ಲ, ವರಿಷ್ಠರು ನಿಮ್ಮನ್ನು ದಿಲ್ಲಿಗೆ ಕರೆಸಿ ಅಧಿಕಾರ ಬಿಟ್ಟುಕೊಡುವಂತೆ ಹೇಳಿದರೆ ನೀವು ತಕ್ಷಣ ಒಪ್ಪದೆ ಕರ್ನಾಟಕಕ್ಕೆ ವಾಪಸ್ಸು ಬಂದು ನಮ್ಮ ಜತೆ ಚರ್ಚೆ ನಡೆಸಿ, ಆನಂತರ ಮುಂದಿನ ಹೆಜ್ಜೆ ಇಡುವುದಾಗಿ ವರಿಷ್ಠರಿಗೆ ತಿಳಿಸಿ ಎಂದು ಸಿದ್ದರಾಮಯ್ಯ ಅವರನ್ನು ಒತ್ತಾಯಿಸಲಿದೆ.

ಮೂಲಗಳ ಪ್ರಕಾರ, ವರಿಷ್ಠರು ಅಧಿಕಾರ ತ್ಯಾಗದ ಸೂಚನೆ ಕೊಟ್ಟರೆ ಕರ್ನಾಟಕಕ್ಕೆ ವಾಪಸ್ಸಾಗಲಿರುವ ಸಿದ್ದರಾಮಯ್ಯ ತಮ್ಮ ಇಚ್ಛೆಯ ನಾಯಕರೊಬ್ಬರು ಸಿಎಂ ಆಗಲಿ ಎಂದು ವರಿಷ್ಠರಿಗೆ ಸಂದೇಶ ಕಳಿಸುತ್ತಾರೆ. ಬೇಕಿದ್ದರೆ ಶಾಸಕಾಂಗ ಸಭೆಯಲ್ಲಿ ಪರ್ಯಾಯ ನಾಯಕನ ಆಯ್ಕೆಯಾಗಲಿ ಎನ್ನುತ್ತಾರೆ. ಈ ಬೆಳವಣಿಗೆ ನಡೆಯದಿದ್ದರೆ ತಾವು ಸಿಎಂ ಹುದ್ದೆಗೆ ರಾಜೀನಾಮೆ ಕೊಡುವುದಿಲ್ಲ ಎಂದು ಸಿದ್ದರಾಮಯ್ಯ ಪಟ್ಟು ಹಿಡಿದರೆ ಆಗ ವರಿಷ್ಠರು ಪೇಚಿಗೆ ಸಿಲುಕುತ್ತಾರಲ್ಲದೆ, ಮುಂದೇನು ಮಾಡಬೇಕು? ಎಂದು ತೋಚದೆ ಅಸಹಾಯಕರಾಗುತ್ತಾರೆ.ಒಂದು ವೇಳೆ ಸಿದ್ದರಾಮಯ್ಯ ಅವರ ಮಾತಿನಿಂದ ಕೋಪಗೊಂಡು ಅವರು ಕಠಿಣ ಕ್ರಮಕ್ಕೆ ಮುಂದಾದರೆ ಆಗ ಸರ್ಕಾರ ಅಲುಗಾಡಲಿದೆಯಷ್ಟೇ ಅಲ್ಲದೆ, ಕರ್ನಾಟಕದ ಅಹಿಂದ ಮತ ಬ್ಯಾಂಕ್ ಕಾಂಗ್ರೆಸ್ ತೆಕ್ಕೆಯಿಂದ ಕಳಚಿಕೊಳ್ಳುವ ಪ್ರಕ್ರಿಯೆ ಆರಂಭವಾಗಲಿದೆ. ಇಂತಹ ಎಲ್ಲ ಸಾಧ್ಯತೆಗಳ ಹಿನ್ನೆಲೆಯಲ್ಲಿ ಪಕ್ಷದ ವರಿಷ್ಠರು ಸಿದ್ದರಾಮಯ್ಯ ಅವರಿಗೆ ಅಧಿಕಾರ ತ್ಯಾಗ ಮಾಡುವಂತೆ ಸೂಚಿಸುವ ಧೈರ್ಯ ತೋರಲಿದ್ದಾರೆಯೇ? ಎಂಬ ಕುತೂಹಲ ಇದೀಗ ರಾಜಕೀಯ ವಲಯಗಳನ್ನು ಕಾಡತೊಡಗಿದ್ದು, ಮುಂದೇನಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ

ಸಿದ್ದು ಕೆಳಗಿಳಿಯುವುದನ್ನು ಒಪ್ಪದ ಬಹುತೇಕ ಶಾಸಕರು:  ಸಿದ್ದರಾಮಯ್ಯ ಅಧಿಕಾರ ತ್ಯಾಗ ಮಾಡುವ ಸನ್ನಿವೇಶ ನಿರ್ಮಾಣವಾದರೆ ಯಾವ ಕಾರಣಕ್ಕೂ ತಮ್ಮ ಜಾಗಕ್ಕೆ ಉಪಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್ ಅವರು ಬರುವುದನ್ನು ಸಿದ್ದರಾಮಯ್ಯ ಅವರು ಒಪ್ಪುವುದಿಲ್ಲ. ಇದಕ್ಕೆ ಮುಖ್ಯ ಕಾರಣವೆಂದರೆ ರಾಜ್ಯ ಸಚಿವ ಸಂಪುಟದಲ್ಲಿರುವ ಬಹುತೇಕ ಸಚಿವರು ಸೇರಿದಂತೆ ಕಾಂಗ್ರೆಸ್ ಪಕ್ಷದ ಬಹುತೇಕ ಶಾಸಕರು ಸಿದ್ದರಾಮಯ್ಯ ಕೆಳಗಿಳಿಯುವುದನ್ನಾಗಲೀ, ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿ ಯಾಗುವುದನ್ನಾಗಲಿ ಒಪ್ಪುತ್ತಿಲ್ಲ

Tags:
error: Content is protected !!