Mysore
34
scattered clouds

Social Media

ಗುರುವಾರ, 27 ಮಾರ್ಚ್ 2025
Light
Dark

೨೦೨೫-೨೬ರ ಮುಂಗಡಪತ್ರ: ಚಿತ್ರೋದ್ಯಮದ ಹಲವು ಬೇಡಿಕೆಗಳಿಗೆ ಪೂರಕ ಕ್ರಮದ ಭರವಸೆ

ಬಾ.ನಾ.ಸುಬ್ರಹ್ಮಣ್ಯ 

ಕಳೆದ ಶುಕ್ರವಾರ ಅರ್ಥ ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ೨೦೨೫-೨೬ರ ಸಾಲಿನ ಮುಂಗಡ ಪತ್ರವನ್ನು ವಿಧಾನಮಂಡಲದಲ್ಲಿ ಮಂಡಿಸಿದರು. ಚಿತ್ರೋದ್ಯಮಕ್ಕೆ ಈ ಬಾರಿ ಭರಪೂರ ಕೊಡುಗೆಗಳ ಪ್ರಸ್ತಾಪ ಇತ್ತು. ಕಳೆದ ವರ್ಷದ ಮುಂಗಡಪತ್ರದಲ್ಲಿ ಚಿತ್ರೋದ್ಯಮಕ್ಕೆ ಸಂಬಂಧಪಟ್ಟಂತೆ ಒಂದೇ ಒಂದು ಮಾತೂ ಇದ್ದಂತಿರಲಿಲ್ಲ. ಆದರೆ ಈ ವರ್ಷ ಹಾಗಿಲ್ಲ. ಉದ್ಯಮದ ಬಹುತೇಕ ಬೇಡಿಕೆಗಳಿಗೆ ಹಸಿರು ನಿಶಾನೆ ತೋರಿಸಿದೆ ಮುಂಗಡ ಪತ್ರ.

ಅವುಗಳಲ್ಲಿ ಅತ್ಯಂತ ಮುಖ್ಯವಾಗಿರುವುದು ಚಿತ್ರಮಂದಿರಗಳಲ್ಲಿನ ಪ್ರವೇಶ ಶುಲ್ಕ. ‘ರಾಜ್ಯದ ಮಲ್ಟಿಪ್ಲೆಕ್ಸ್‌ಗಳೂ ಸೇರಿದಂತೆ ಎಲ್ಲ ಚಿತ್ರಮಂದಿರಗಳಲ್ಲಿ ಪ್ರದರ್ಶಿಸಲಾಗುವ ಪ್ರತಿ ಪ್ರದರ್ಶನಕ್ಕೆ ಪ್ರವೇಶ ದರವನ್ನು ೨೦೦ ರೂ.ಗಳಿಗೆ ಸೀಮಿತಗೊಳಿಸಲಾಗುವುದು’ ಎಂದು ಹೇಳಿದ್ದಾರೆ. ನೆರೆಯ ತಮಿಳುನಾಡು ಮತ್ತು ಆಂಧ್ರಪ್ರದೇಶಗಳಲ್ಲಿ ಇರುವಂತೆ ಇಲ್ಲೂ ಪ್ರವೇಶ ದರದ ಗರಿಷ್ಟ ಮಿತಿಯನ್ನು ಸರ್ಕಾರವೇ ನಿಗದಿಪಡಿಸಬೇಕು ಎಂದು ಉದ್ಯಮ ಮೊದಲಿನಿಂದಲೂ ಒತ್ತಾಯಿಸುತ್ತಿತ್ತು. ಮುಂಗಡಪತ್ರದಲ್ಲಿ ಅದನ್ನು ಹೇಳಲಾಗಿದೆ.

ಈ ಹಿಂದೆ ಇಂತಹದೊಂದು ಆದೇಶ ಸರ್ಕಾರದಿಂದ ಬಂದಾಗ ಅದರ ವಿರುದ್ಧ ಮಲ್ಟಿಪ್ಲೆಕ್ಸ್‌ಗಳು ನ್ಯಾಯಾಲಯದ ಮೆಟ್ಟಿಲೇರಿ ತಡೆಯಾಜ್ಞೆ ತಂದಿದ್ದವು. ಅದನ್ನು ತೆರವುಗೊಳಿಸಲು ಸಂಬಂಧಪಟ್ಟ ಅಽಕಾರಿಗಳಿಗೆ ಆದೇಶವಿತ್ತಾದರೂ, ಅವರು ಮೀನಮೇಷ ಎಣಿಸಿದ್ದರು ಎನ್ನುವುದು ಉದ್ಯಮದ ಆರೋಪ. ಸದ್ಯ ಇದರ ಪ್ರಸ್ತಾಪ ಮುಂಗಡಪತ್ರದಲ್ಲೇ ಆಗಿದೆ. ನೆರೆಯ ಆಂಧ್ರಪ್ರದೇಶದಲ್ಲಿ ಪ್ರವೇಶ ದರ ಚಿತ್ರಮಂದಿರಗಳು ಇರುವ ಜಾಗವನ್ನು ಅನುಸರಿಸಿ ಬದಲಾಗುತ್ತದೆ.

ಉದ್ಯಮದ ಪ್ರತಿನಿಧಿಗಳ ಜೊತೆ ಹಲವು ಸುತ್ತಿನ ಮಾತುಕತೆ, ಚರ್ಚೆಗಳ ನಂತರ, ಅಲ್ಲಿ ಚಿತ್ರಮಂದಿರಗಳ ಸೌಲಭ್ಯಕ್ಕೆ ಅನುಗುಣವಾಗಿ, ಮುನ್ಸಿಪಲ್ ಕಾರ್ಪೊರೇಶನ್‌ಗಳಲ್ಲಿ ರೂ.೪೦ರಿಂದ ೧೫೦ರ ವರೆಗೆ, ಮುನಿಸಿಪಾಲಿಟಿ ಪ್ರದೇಶಗಳಲ್ಲಿ ರೂ. ೩೦ರಿಂದ ೧೨೫ರ ವರೆಗೆ ಮತ್ತು ಗ್ರಾಮ ಪಂಚಾಯತ್ ಪ್ರದೇಶಗಳಲ್ಲಿ ರೂ. ೨೦ರಿಂದ ೧೦೦ರ ವರೆಗೆ ಪ್ರವೇಶದರ ವಿಧಿಸಬಹುದು. ರಿಕ್ಲೆ ನರ್ ಸೀಟ್‌ಗಳು ಇರುವ ಚಿತ್ರಮಂದಿರಗಳು ಗರಿಷ್ಟ ರೂ. ೨೫೦ ಪ್ರವೇಶ ದರ ವಿಧಿಸಬಹುದು. ಚಿತ್ರಮಂದಿರಗಳಲ್ಲಿ ಐದು ಪ್ರದರ್ಶನಗಳು ಇದ್ದರೆ, ಅದರಲ್ಲಿ ಒಂದನ್ನು ಕಡಿಮೆ ವೆಚ್ಚದ ಚಿತ್ರ ಪ್ರದರ್ಶನಕ್ಕೆ ಮೀಸಲಿಡಬೇಕು.

ಪ್ರವೇಶ ದರ ಕಡಿಮೆ ಇರುವುದರಿಂದ ಮಧ್ಯಮ ಮತ್ತು ಕೆಳಮಧ್ಯಮ ವರ್ಗದ ಪ್ರೇಕ್ಷಕರಿಗೆ ಚಿತ್ರಗಳನ್ನು ವೀಕ್ಷಿಸಲು ಸಾಧ್ಯವಾಗುತ್ತದೆ. ಆದ್ದರಿಂದಲೇ ತಮಿಳು, ತೆಲುಗು ಚಿತ್ರಗಳಿಗೆ ಹೆಚ್ಚು ಮಂದಿ ಪ್ರೇಕ್ಷಕರು ಹೋಗುತ್ತಾರೆ ಎನ್ನಲಾಗುತ್ತಿದೆ. ಕರ್ನಾಟಕದಲ್ಲೋ, ನಗರ ಪ್ರದೇಶಗಳ ಮಲ್ಟಿಪ್ಲೆಕ್ಸ್‌ಗಳು ದುಬಾರಿ ಪ್ರವೇಶ ದರ ವಿಧಿಸುತ್ತಿರುವುದು ಕೂಡ ಕನ್ನಡ ಚಿತ್ರಗಳಿಗೆ ಮಾರಕವಾಗಿದೆ ಎನ್ನುವ ಮಾತಲ್ಲಿ ಹುರುಳಿಲ್ಲದೆ ಇಲ್ಲ. ಗರಿಷ್ಟ ೨೦೦ ರೂ. ಪ್ರವೇಶ ದರದ ಆದೇಶವನ್ನು ಸರ್ಕಾರ ಹೇಗೆ ಜಾರಿಗೆ ತರಲಿದೆ ಎನ್ನುವುದನ್ನು ಮುಂದಿನ ದಿನಗಳು ಹೇಳಲಿವೆ.

ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವ ಸಂದರ್ಭದಲ್ಲಿ ಚರ್ಚೆಯಾಗುವ ವಿಷಯ, ಚಲನಚಿತ್ರ ಅಕಾಡೆಮಿ ಇರುವ ಜಾಗದಲ್ಲಿ ಚಲನಚಿತ್ರ ಸಂಕೀರ್ಣವೊಂದನ್ನು ಕಟ್ಟಿ ಅಲ್ಲಿಯೇ ಚಲನಚಿತ್ರಗಳ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಬಾರದೇಕೆ ಎನ್ನುವುದು. ಜೊತೆಗೆ ಚಲನಚಿತ್ರ ಭಂಡಾರದ ಸ್ಥಾಪನೆ. ಈ ಎರಡೂ ವಿಷಯಗಳನ್ನು ಮುಂಗಡಪತ್ರದಲ್ಲಿ ಪ್ರಸ್ತಾಪಿಸಲಾಗಿದೆ. ‘ಅಲ್ಲಿರುವ ೨.೫ ಎಕರೆ ನಿವೇಶನದಲ್ಲಿ ಬಹುಪರದೆಗಳಿರುವ ಚಿತ್ರಮಂದಿರ ಸಮುಚ್ಚಯವನ್ನು ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿ ಪಡಿಸಲಾಗುವುದು’ ಮತ್ತು ‘ಸಾಮಾಜಿಕ, ಚಾರಿತ್ರಿಕ ಹಾಗೂ ಸಾಂಸ್ಕ ತಿಕ ಮೌಲ್ಯಗಳನ್ನು ಬಿಂಬಿಸುವ ಕನ್ನಡ ಚಲನಚಿತ್ರಗಳನ್ನು ಡಿಜಿಟಲ್ ಹಾಗೂ ನಾನ್ ಡಿಜಿಟಲ್ ಮಾದರಿಯಲ್ಲಿ ಸಂರಕ್ಷಿಸಲು ೩ ಕೋಟಿ ರೂ. ವೆಚ್ಚದಲ್ಲಿ ಚಲನಚಿತ್ರ ಭಂಡಾರವನ್ನು ಸ್ಥಾಪಿಸಲಾಗುವುದು’ – ಈ ಪ್ರಸ್ತಾವನೆಗಳಿವೆ.

ಬಹಳ ವರ್ಷಗಳಿಂದ ಇದ್ದ ಬೇಡಿಕೆ ಇದು. ಚಲನಚಿತ್ರ ಭಂಡಾರದಲ್ಲಿ ಮೇಲೆ ಪ್ರಸ್ತಾಪಿಸಿರುವ ಚಲನಚಿತ್ರಗಳು ಮಾತ್ರವಲ್ಲ, ಚಲನಚಿತ್ರ ಸಂಬಂಧಪಟ್ಟ ಗ್ರಂಥಾಲಯ, ಹಳೆಯ ಪತ್ರಿಕೆಗಳು, ಸಿನಿಮಾ ಸಂಬಂಧಪಟ್ಟ ಇತರ ಸಾಮಗ್ರಿ, ಮುಂತಾದವುಗಳನ್ನು ಸಂಗ್ರಹ ಮಾಡುವುದರ ಮೂಲಕ, ಸಿನಿಮಾ ಅಧ್ಯಯನಾಕಾಂಕ್ಷಿಗಳಿಗೆ ಬೇಕಾದ ಆಕರ ಸಾಮಗ್ರಿ ದೊರೆಯುವಂತೆ ಮಾಡಬೇಕು. ಚಲನಚಿತ್ರ ಅಕಾಡೆಮಿ ಸ್ಥಾಪನೆ ಆದ ಹೊಸದರಲ್ಲೇ ಬೆಂಗಳೂರು ಅಭಿವೃದ್ಧಿ ಪ್ರಾಽಕಾರ ಇದಕ್ಕಾಗಿ ಆರ್ಥಿಕ ನೆರವು ನೀಡಲು ಮುಂದೆ ಬಂದಿತ್ತು. ಮಾತ್ರವಲ್ಲ, ಮುಂಗಡವಾಗಿ ಒಂದು ಕೋಟಿ ರೂ.ಗಳನ್ನು ನೀಡಿತ್ತು. ಅಕಾಡೆಮಿಯ ಮೂಲ ಉದ್ದೇಶವಾದ ‘ಚಲನಚಿತ್ರದಲ್ಲಿ ಶಿಕ್ಷಣ; ಶಿಕ್ಷಣದಲ್ಲಿ ಚಲನಚಿತ್ರ’ ಘೋಷವಾಕ್ಯಕ್ಕೆ ಪೂರಕವಾದ ವಾತಾವರಣ, ಸೌಲಭ್ಯ ಅಲ್ಲಿ ಸಿಗುವಂತಾಗಬೇಕು.

ಮೈಸೂರಿನಲ್ಲಿ ಚಿತ್ರನಗರಿಯ ಸ್ಥಾಪನೆಯ ಪ್ರಸ್ತಾಪವೂ ಈ ಬಾರಿಯ ಮುಂಗಡ ಪತ್ರದಲ್ಲಿ ಇದೆ. ಅದಕ್ಕಾಗಿ ೧೫೦ ಎಕರೆ ಜಮೀನನ್ನು ಕಾಯ್ದಿರಿಸಿದ್ದು, ಮುಂದಿನ ವರ್ಷಗಳಲ್ಲಿ ಚಿತ್ರನಗರಿ ಸ್ಥಾಪಿಸಲು ಸರ್ಕಾರ ಬದ್ಧವಾಗಿದೆ ಎಂದು ಹೇಳಿದೆ. ಅಂತಾರಾಷ್ಟ್ರೀಯದರ್ಜೆಯ ಚಿತ್ರನಗರಿಯನ್ನು ಪಿಪಿಪಿ ಮಾದರಿಯಲ್ಲಿ ಅಂದಾಜು ೫೦೦ ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುವುದು ಎಂದೂ ಅವರು ಹೇಳಿದ್ದಾರೆ. ಕಳೆದ ವರ್ಷ ಮುಂಗಡ ಪತ್ರದಲ್ಲಿ ಚಿತ್ರೋದ್ಯಮಕ್ಕೆ ಯಾವುದೇ ಕೊಡುಗೆ ಇಲ್ಲದೆ ಇದ್ದರೂ, ಅದಕ್ಕೂ ಮೊದಲು ಇದೇ ಪ್ರಸ್ತಾಪ ಇತ್ತು.

ಚಿತ್ರನಗರಿಯಲ್ಲಿ ಸಿನಿಮಾ ಶಿಕ್ಷಣ ನೀಡುವ, ಅಂತಾರಾಷ್ಟ್ರೀಯ ಮಟ್ಟದ ಕೇಂದ್ರವನ್ನು ಕೂಡ ಸ್ಥಾಪಿಸಬಹುದು. ಈಗಾಗಲೇ ಬೇರೆಬೇರೆ ಕಾಲೇಜುಗಳಲ್ಲಿ ಸಿನಿಮಾಗೆ ಸಂಬಂಧಿಸಿದ, ವಿಶೇಷವಾಗಿ ಅನಿಮೇಶನ್, ವರ್ಚುವಲ್ ಎಫೆಕ್ಟ್ , ಗೇಮಿಂಗ್, ಕಾಮಿಕ್ಸ್ – ಎಕ್ಸ್‌ಆರ್ ತರಗತಿಗಳು ನಡೆಯುತ್ತಿವೆ. ಶಾಲೆಗಳಲ್ಲಿ ಈ ಕೌಶಲ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ನಿಟ್ಟಿನಲ್ಲೂ ಪ್ರಸ್ತಾಪಗಳಿವೆ. ದೇಶದಲ್ಲಿ ಎವಿಜಿಸಿ ನೀತಿಯನ್ನು ಮೊದಲು ತಂದ ರಾಜ್ಯ ಕರ್ನಾಟಕ. ಈಗ ಕೆಲವು ರಾಜ್ಯಗಳಲ್ಲಿ ಈ ನೀತಿ ಬಂದಿದೆ. ಕೇಂದ್ರ ಸರ್ಕಾರವೂ ಈಗಾಗಲೇ ಈ ಕುರಿತು ಕಾರ್ಯಪ್ರವೃತ್ತವಾಗಿದೆ. ಡಿಜಿಟಲ್ ತಂತ್ರಜ್ಞಾನಕ್ಕೆ ಸಂಬಂಧಿಸಿದ ತರಬೇತಿ ಸೇರಿದಂತೆ ಸಿನಿಮಾ ಕಲಿಸುವ ಅಂತಾರಾಷ್ಟ್ರೀಯ ಮಟ್ಟದ ತರಬೇತಿ ಕೇಂದ್ರವನ್ನು ಉದ್ದೇಶಿತ ಚಿತ್ರನಗರಿಯಲ್ಲಿ ಸ್ಥಾಪಿಸಬಹುದು.

ಕನ್ನಡ ಚಲನಚಿತ್ರಗಳ ಪ್ರೋತ್ಸಾಹಕ್ಕಾಗಿ ಒಟಿಟಿ ವೇದಿಕೆಯನ್ನು ಸರ್ಕಾರ ಸ್ಥಾಪಿಸುವ ಪ್ರಸ್ತಾಪ ಮುಂಗಡಪತ್ರದಲ್ಲಿದೆ. ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘದ ಕಟ್ಟಡದ ಉದ್ಘಾಟನೆಯ ಸಮಾರಂಭದಲ್ಲಿ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷ ಸಾಧುಕೋಕಿಲ ಅವರು, ಇನ್ನು ಆರು ತಿಂಗಳುಗಳಲ್ಲಿ ಕನ್ನಡ ಚಿತ್ರಗಳಿಗೆ ನಮ್ಮದೇ ಆದ ಒಟಿಟಿ ಬರಲಿದೆ ಎಂದಿದ್ದರು. ಕೇರಳ ಸರ್ಕಾರ ಈಗಾಗಲೇ ಇಂತಹದೊಂದು ಪ್ರಯೋಗ ಮಾಡಿದೆ.

ಅಲ್ಲಿ ಕೇರಳ ಚಲನಚಿತ್ರೋದ್ಯಮ ಅಭಿವೃದ್ಧಿ ನಿಗಮದ ಮೇಲುಸ್ತುವಾರಿಯಲ್ಲಿ ಒಟಿಟಿ ವೇದಿಕೆ ಸ್ಥಾಪನೆ ಆಗಿದೆ. ಸದಭಿರುಚಿಯ ಕಡಿಮೆ ನಿರ್ಮಾಣ ವೆಚ್ಚದ ಮಲಯಾಳ ಚಿತ್ರಗಳಿಗೆ ವೇದಿಕೆ ಒದಗಿಸಲು ಈ ತಾಣವನ್ನು ಸ್ಥಾಪಿಸಲಾಗಿದೆ. ಇತರ ಒಟಿಟಿ ತಾಣಗಳಂತೆ ಇದನ್ನು ಬಳಸಬಹುದು. ಪ್ರತಿ ಚಿತ್ರ ವೀಕ್ಷಿಸಲು ನಿಗದಿತ ಮೊತ್ತ ನೀಡಬೇಕು. ಅಲ್ಲಿ ಸಿ ಸ್ಪೇಸ್ ಹೆಸರಿನ ಒಟಿಟಿ ಆರಂಭವಾಗಿ ಕಳೆದ ವಾರಕ್ಕೆ ವರ್ಷ ತುಂಬಿದೆ. ಮೊದಲ ವರ್ಷ ಅಷ್ಟೇನೂ ಉತ್ತೇಜನಕಾರಿಯಾಗಿಲ್ಲ ಎನ್ನುವ ಮಾತು ಇದರ ಕುರಿತಂತೆ ಕೇಳಿಬರುತ್ತಿದೆ. ಒಟಿಟಿ ವೇದಿಕೆಯ ಕುರಿತಂತೆ ಸಕ್ರಿಯವಾಗಿರುವ ಸರ್ಕಾರ, ಇದನ್ನು ಕೂಡ ಖಾಸಗಿಯವರ ಸಹಯೋಗದೊಂದಿಗೆ ಮಾಡಬಹುದು.

ಒಟ್ಟಿನಲ್ಲಿ ಗಳಿಕೆಯ ಅರ್ಧಕ್ಕಿಂತ ಹೆಚ್ಚು ಮೊತ್ತವನ್ನು ಬಾಡಿಗೆ ಲೆಕ್ಕದಲ್ಲಿ ವಸೂಲಿ ಮಾಡುವ ಮಲ್ಟಿಪ್ಲೆಕ್ಸ್‌ಗಳಿಗಿಂತ, ಇಂತಹ ಒಟಿಟಿ ತಾಣಗಳು ನಿರ್ಮಾಪಕರ ಪಾಲಿಗೆ ನೆರವಾಗಬಲ್ಲವು. ಸರ್ಕಾರ, ಸಿನಿಮಾ ಕ್ಷೇತ್ರವನ್ನು ಸಂಪೂರ್ಣವಾಗಿ ಉದ್ಯಮ ಎಂದು ಪರಿಗಣಿಸುವ ನಿರ್ಧಾರ, ಆ ಮೂಲಕ ಕೈಗಾರಿಕಾ ನೀತಿಯ ಅಡಿ ಒದಗಿಸಲಾಗುವ ಸೌಲಭ್ಯಗಳನ್ನು ಸಿನಿಮಾ ಕ್ಷೇತ್ರಕ್ಕೆ ಒದಗಿಸುವ ನಿರ್ಧಾರವನ್ನು ಚಿತ್ರೋದ್ಯಮ ಸ್ವಾಗತಿಸಿದೆ. ಈ ಮೂಲಕ ಚಲನಚಿತ್ರವನ್ನು ಕೊನೆಗೂ ಉದ್ಯಮ ಎಂದು ಹೇಳಲಾಯಿತೇ ಹೊರತು, ಅದು ಕಲೆಯೂ ಹೌದು ಎನ್ನುವುದನ್ನು ಹೇಳುವುದರಲ್ಲಿ ಹಿಂದುಳಿಯಿತು. ಹಾಗೆ ನೋಡಿದರೆ, ರಾಜ್ಯದ ಸಾಂಸ್ಕ ತಿಕ ನೀತಿಯಲ್ಲಿ ಚಲನಚಿತ್ರಗಳ ಪ್ರಸ್ತಾಪವೂ ಇರಬಹುದಿತ್ತು.

ಇದೊಂದು ಕಲೆಯೂ ಹೌದು, ಉದ್ಯಮವೂ ಹೌದು; ಹಾಗಾಗಿ ಇದನ್ನು ಕಲೋದ್ಯಮ ಎಂದು ಕರೆಯಬೇಕು ಎಂದು ಬರಗೂರರು ಹೇಳಿದ್ದರು. ೨೦೨೫ -೨೬ರ ಮುಂಗಡ ಪತ್ರ ಚಿತ್ರೋದ್ಯಮದ ಪಾಲಿಗೆ ಹರ್ಷ ತಂದಿದೆ.ಚಲನಚಿತ್ರ ವಾಣಿಜ್ಯ ಮಂಡಳಿ ಅದಕ್ಕಾಗಿ ಮುಖ್ಯಮಂತ್ರಿಗಳನ್ನು ಅಭಿನಂದಿಸುವ ಪೂರ್ಣ ಪುಟದ ಜಾಹೀರಾತನ್ನು ದೈನಿಕಗಳಲ್ಲಿ ಪ್ರಕಟಿಸಿ, ತನ್ನ ಕೃತಜ್ಞತೆ ಸಲ್ಲಿಸಿದೆ. ಮುಂಗಡ ಪತ್ರದ ಮೇಲೆ ಚರ್ಚೆ ನಡೆದಿದೆ. ಯಾವ ಯಾವ ಪ್ರಸ್ತಾಪಗಳು ಈಡೇರುತ್ತವೆ ಕಾದು ನೋಡಬೇಕು.

” ಮೈಸೂರಿನಲ್ಲಿ ಚಿತ್ರನಗರಿಯ ಸ್ಥಾಪನೆಯ ಪ್ರಸ್ತಾಪವೂ ಈ ಬಾರಿಯ ಮುಂಗಡ ಪತ್ರದಲ್ಲಿ ಇದೆ. ಅದಕ್ಕಾಗಿ ೧೫೦ ಎಕರೆ ಜಮೀನನ್ನು ಕಾಯ್ದಿರಿಸಿದ್ದು, ಮುಂದಿನ ವರ್ಷಗಳಲ್ಲಿ ಚಿತ್ರನಗರಿ ಸ್ಥಾಪಿಸಲು ಸರ್ಕಾರ ಬದ್ಧವಾಗಿದೆ ಎಂದು ಹೇಳಿದೆ. ಅಂತಾರಾಷ್ಟ್ರೀಯ ದರ್ಜೆಯ ಚಿತ್ರನಗರಿಯನ್ನು ಪಿಪಿಪಿ ಮಾದರಿಯಲ್ಲಿ ಅಂದಾಜು ೫೦೦ ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುವುದು ಎಂದೂ ಹೇಳಲಾಗಿದೆ. ಕಳೆದ ವರ್ಷ ಮುಂಗಡ ಪತ್ರದಲ್ಲಿ ಚಿತ್ರೋದ್ಯಮಕ್ಕೆ ಯಾವುದೇ ಕೊಡುಗೆ ಇಲ್ಲದೆ ಇದ್ದರೂ, ಅದಕ್ಕೂ ಮೊದಲು ಇದೇ ಪ್ರಸ್ತಾಪ ಇತ್ತು.”

Tags: