ಬಿಹಾರ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣಾ ಆಯೋಗವು ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ (ಎಸ್‌ಐಆರ್) ಹೆಸರಿನಲ್ಲಿ ವಿರೋಧ ಪಕ್ಷಗಳ ವಿರೋಧದ ನಡುವೆಯೂ ವಿದೇಶಿಗರು, ನಕಲಿ, ಸುಳ್ಳು ವಿಳಾಸ, ವಲಸೆ ಹೋಗಿದ್ದಾರೆ ಮತ್ತು ನಿಧನರಾಗಿದ್ದಾರೆ ಎಂಬ ಹತ್ತಾರು ಕಾರಣಗಳನ್ನು ನೀಡಿ ೬೮ ಲಕ್ಷ ಮತದಾರರ ಹೆಸರನ್ನು ಮತದಾರರ ಪಟ್ಟಿ ಯಿಂದ ಕೈಬಿಟ್ಟಿದೆ. ಈ ಎಲ್ಲ ಗೊಂದಲಗಳ ನಡುವೆಯೇ ರಾಜ್ಯದ ೧೨೧ ಕ್ಷೇತ್ರಗಳಿಗೆ ಮೊದಲ ಹಂತದ ಮತದಾನ ಶಾಂತಿಯುತವಾಗಿ ನಡೆದಿದೆ.
ಚುನಾವಣಾ ಆಯೋಗದ ಎಸ್‌ಐಆರ್ ಪ್ರಕ್ರಿಯೆಯನ್ನು ಕೇಂದ್ರದ ಆಳುವ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಬಿಟ್ಟರೆ ಉಳಿದಂತೆ ಪ್ರತಿಪಕ್ಷಗಳ ಒಕ್ಕೂಟ ಮಹಾಘಟಬಂಧನ್ (ಇಂಡಿಯಾ ಒಕ್ಕೂಟ) ಕಟುವಾಗಿ ಟೀಕಿಸಿದೆ. ಜೊತೆಗೆ ಮತಗಳವು ಯತ್ನ ಬಿಹಾರದಲ್ಲಿಯೂ ನಡೆಯಿತು ಎನ್ನುವ ದೂರಿನ ನಡುವೆ ಶೇ. ೬೪.೬೯ರಷ್ಟು ಮತದಾನ ನಡೆಯಿತು ಎಂದು ಮಾಧ್ಯಮಗಳಲ್ಲಿ ಬಿಂಬಿಸಲಾಗುತ್ತಿದೆ.
ನೂರಾರು ವರ್ಷಗಳಿಂದ ಭೂಮಿಹಾರರು, ಠಾಕೂರರು ಮತ್ತು ಜನಸಂಖ್ಯೆ ಹೆಚ್ಚಿರುವ ಕಡೆ ಯಾದವರು ಹಾಗೂ ಕುರ್ಮಿ ಜನಾಂಗದವರ ದಬ್ಬಾಳಿಕೆ ಹಾಗೂ ರಾಜ್ಯದಾದ್ಯಂತ ವ್ಯವಸ್ಥಿತವಾಗಿ ಮತ್ತು ಜೀವಂತವಾಗಿ ಉಳಿಸಿಕೊಂಡು ಬಂದಿರುವ ಫ್ಯೂಡಲ್ ವ್ಯವಸ್ಥೆಯಿಂದ ಚುನಾವಣೆಯ ಅಕ್ರಮಗಳು ಉತ್ತರ ಪ್ರದೇಶ ಮತ್ತು ಬಿಹಾರದಂತಹ ರಾಜ್ಯಗಳಲ್ಲಿ ನಿರಾತಂಕವಾಗಿ ನಡೆಯುತ್ತಿದೆ. ಈ ಎಲ್ಲ ಸಮಸ್ಯೆಗಳ ನಡುವೆಯೂ ಚುನಾವಣೆ ಶಾಂತಿಯುತವಾಗಿ ನಡೆದಿರುವುದು ಸಮಾಧಾನಕರ ಸಂಗತಿಯಾಗಿದೆ.
ಇದನ್ನು ಓದಿ: ಮಡಿಕೇರಿ ನಗರದಲ್ಲಿ ಅಮೃತ್ 2.0 ಕಾಮಗಾರಿ ಅಧ್ವಾನ
ಈ ಬಾರಿ ಲಾಲೂ ಪ್ರಸಾದ್ ಯಾದವ್ ಅವರ ರಾಷ್ಟ್ರೀಯ ಜನತಾದಳದ ಜೊತೆಗೆ ಹತ್ತಾರು ಪ್ರಗತಿಪರ ಚಿಂತನೆಯ ಪಕ್ಷಗಳು ಹಾಗೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಹಾಘಟಬಂಧನ್ ಮೈತ್ರಿಕೂಟದ ಮುಖ್ಯಮಂತ್ರಿ ಅಭ್ಯರ್ಥಿ ತೇಜಸ್ವಿ ಯಾದವ್ ಜೊತೆಗೆ ಹೆಜ್ಜೆ ಹೆಜ್ಜೆಗೂ ಕೈಜೋಡಿಸಿದ್ದರಿಂದ ಮತ್ತು ಬಿಜೆಪಿ ನೇತೃತ್ವದ ಎನ್‌ಡಿಎ ಅಭ್ಯರ್ಥಿಗಳ ಪರವಾಗಿ ಪ್ರಧಾನಿ ನರೇಂದ್ರ ಮೋದಿ ಅವರೇ ಚುನಾವಣಾ ಪ್ರಚಾರದ ಕಣಕ್ಕಿಳಿದಿದ್ದರಿಂದ ಎರಡೂ ಮೈತ್ರಿಕೂಟಗಳ ಸಮಬಲದ ಪೈಪೋಟಿ ಮೇಲೆ ಚುನಾವಣೆ ನಡೆದಿರುವುದು ಸ್ಪಷ್ಟವಾಗಿ ಕಾಣುತ್ತದೆ.
ಒಂದು ಕಾಲಕ್ಕೆ ಲಾಲೂ ಪ್ರಸಾದ್ ಯಾದವ್ ಅವರ ನೇತೃತ್ವದ ಸರ್ಕಾರದ ಜಂಗಲ್ ರಾಜ್ ಮತ್ತು ಪಪ್ಪು ಯಾದವ್, ಆನಂದ್ ಮೋಹನ್ ಮುಂತಾದ ಗೂಂಡಾ ರಾಜಕಾರಣಿಗಳು ತಮ್ಮ ಗೂಂಡಾಗಿರಿ, ಕೊಲೆ ಸುಲಿಗೆಯ ಆರೋಪಗಳಿಂದ ಹಲವು ಬಾರಿ ಜೈಲು ಸೇರಿದರೂ ವಿಧಾನಸಭೆ ಮತ್ತು ಲೋಕಸಭೆಗೂ ಬಹುಮತದಿಂದ ಆರಿಸಿ ಬಂದಿರುವ ಇತಿಹಾಸ ಬಿಹಾರ ರಾಜ್ಯಕ್ಕಿದೆ.
ಇಲ್ಲಿ ಬಡವರ ಬದುಕು ಮತ್ತು ಅವರ ಜೀವಕ್ಕೆ ಕವಡೆ ಕಾಸಿನ ಕಿಮ್ಮತ್ತಿಲ್ಲ. ಶೋಷಣೆ ಮತ್ತು ದಬ್ಬಾಳಿಕೆ ಮುಂದುವರಿದಿರುವ ಕಾರಣ ಇಲ್ಲಿ ಬಡವರ ಬದುಕು ಮೂರಾಬಟ್ಟೆಯಾಗಿದೆ. ಪ್ರಜಾಪ್ರಭುತ್ವ ಮತ್ತು ಜನರಿಂದ ಆಯ್ಕೆಗೊಂಡ ಆಡಳಿತ ವ್ಯವಸ್ಥೆ ನಮ್ಮ ಸಂವಿಧಾನವನ್ನೇ ವ್ಯಂಗ್ಯ ಮಾಡುವಂತಹ ಸಾಮಾಜಿಕ ಹಾಗೂ ಊಳಿಗಮಾನ್ಯ ವ್ಯವಸ್ಥೆ ಇಲ್ಲಿ ಇನ್ನೂ ಜೀವಂತವಾಗಿದೆ. ಇದು ಬಿಹಾರ ರಾಜ್ಯದ ವಾಸ್ತವ ಸ್ಥಿತಿಯ ಅಸಲಿ ಮುಖ.
ಈ ಬಾರಿಯ ಚುನಾವಣೆಯಲ್ಲಿ ರಾಜ್ಯದಲ್ಲಿ ಆಳುವ ಪಕ್ಷದ ದೊಡ್ಡಣ್ಣನಾಗಿರುವ ಬಿಜೆಪಿಯಲ್ಲಿ ವರ್ಚಸ್ವಿ ನಾಯಕತ್ವದ ಕೊರತೆ ಎದ್ದು ಕಾಣುತ್ತಿದೆ. ಹಾಗಾಗಿಯೇ ಪ್ರಧಾನಿ ನರೇಂದ್ರ ಮೋದಿ ಅವರೇ ನೇರವಾಗಿ ಚುನಾವಣಾ ಅಖಾಡಕ್ಕಿಳಿಯಬೇಕಾಯಿತು. ಚುನಾವಣೆ ಘೋಷಣೆಗೂ ಮುನ್ನವೇ ರಾಜ್ಯದ ಪ್ರತಿಯೊಬ್ಬ ಮಹಿಳೆಯರಿಗೂ ಹತ್ತು ಸಾವಿರ ರೂಪಾಯಿ ಯೋಜನೆಯ ನಗದು ಅವರ ಕೈಸೇರುವಂತೆ ಮಾಡಿದ್ದು ಗುಟ್ಟಿನ ಸಂಗತಿಯೇನಲ್ಲ. ಇತ್ತ ಮಹಾಘಟಬಂಧನ್ ಅಧಿಕಾರಕ್ಕೆ ಬಂದರೆ ಪ್ರತಿಯೊಂದು ಮನೆಗೂ ಸರ್ಕಾರಿ ಉದ್ಯೋಗ ಮತ್ತು ಪ್ರತಿಯೊಬ್ಬ ಮಹಿಳೆಯರಿಗೆ ತಿಂಗಳಿಗೆ ಎರಡೂವರೆ ಸಾವಿರ ರೂ. ಹಣಕಾಸಿನ ನೆರವು ಘೋಷಣೆ ಮಾಡಲಾಯಿತು.
ಈ ಚುನಾವಣೆಯಲ್ಲಿ ಎರಡೂ ಮೈತ್ರಿಕೂಟಗಳ ಸಮಬಲ ಎದ್ದು ಕಾಣುತ್ತಿರುವುದು ವಿಶೇಷ. ಹಲವು ಚುನಾವಣಾ ಸಮೀಕ್ಷೆ ನಡೆಸುವ ಸಂಸ್ಥೆಗಳ ಸಮೀಕ್ಷೆಯ ಪ್ರಕಾರ ಮಹಾಘಟಬಂಧನ್ ಮೈತ್ರಿಕೂಟವೇ ಮೇಲುಗೈ ಸಾಧಿಸಿರುವ ಸತ್ಯಾಸತ್ಯತೆಯನ್ನು ಎರಡನೇ ಹಂತದ ಮತದಾನ ಮುಗಿದು ಫಲಿತಾಂಶ ಹೊರಬಿದ್ದಾಗಲೇ ನೋಡಬಹುದಾಗಿದೆ.
‘ನನಗೆ ಒಂದು ಅವಕಾಶ ನೀಡಿ ರಾಜ್ಯದಲ್ಲಿ ಹಗಲು ರಾತ್ರಿ ಭಯಉಂಟು ಮಾಡಿರುವ ಗೂಂಡಾಗಳನ್ನು ಜೈಲಿಗಟ್ಟುವೆ’ ಎಂದು ಮಹಾಘಟಬಂಧನ್ ದ ಮುಖ್ಯಮಂತ್ರಿ ಅಭ್ಯರ್ಥಿ ಆರ್‌ಜೆಡಿಯ ನಾಯಕ ತೇಜಸ್ವಿಯಾದವ್ ಮತದಾರರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಆದರೆ ಚುನಾವಣೆಗೆ ಸ್ಪರ್ಧಿಸಿರುವವರ ಹಿನ್ನೆಲೆಯನ್ನು ಗಮನಿಸಿದಾಗ ಚುನಾವಣೆಯಲ್ಲಿ ಒಟ್ಟು ೨,೬೦೦ ಮಂದಿ ಕಣದಲ್ಲಿರುವವರ ಪೈಕಿ ೮೩೮ (ಶೇ.೩೨) ಮಂದಿ ಘೋಷಿತ ಅಪರಾಧಗಳ ಹಿನ್ನೆಲೆ ಇರುವವರು. ಹಿಂದಿನ ಚುನಾವಣೆಯಲ್ಲಿ ಅಂದರೆ ೨೦೨೦ರಲ್ಲಿ ನಡೆದ ಚುನಾವಣೆಯಲ್ಲಿ ೩,೭೨೨ ಮಂದಿ ಅಭ್ಯರ್ಥಿಗಳಲ್ಲಿ ೧,೨೦೧ ಮಂದಿ ಘೋಷಿತ ಅಪರಾಧಿಗಳಿದ್ದರು. ಸಂಖ್ಯೆಯ ಪ್ರಮಾಣವನ್ನು ತೆಗೆದುಕೊಂಡರೂ ಆಗಲೂ ಇವರ ಸಂಖ್ಯೆ ಶೇ. ೩೨ ಇತ್ತು ಎನ್ನುವುದು ಅಚ್ಚರಿ.
ಇದನ್ನು ಓದಿ: ಬಿಹಾರ | ರಸ್ತೆ ಬದಿ ವಿವಿಪ್ಯಾಟ್ ಚೀಟಿಗಳ ರಾಶಿ ಪತ್ತೆ ; ಅಧಿಕಾರಿ ಅಮಾನತು
ಮೊದಲ ಹಂತದ ಚುನಾವಣೆಯ ಕಣದಲ್ಲಿರುವ ೮೩೮ ಮಂದಿ ಕ್ರಿಮಿನಲ್ ಅಪರಾಧದ ಹಿನ್ನೆಲೆ ಉಳ್ಳವರ ಪೈಕಿ ೬೯೫ ಅಭ್ಯರ್ಥಿಗಳು ಗಂಭೀರವಾದ ಆರೋಪಗಳನ್ನು ಹೊತ್ತಿರುವವರು. ಅಚ್ಚರಿಯ ಸಂಗತಿ ಎಂದರೆ ಚುನಾವಣೆಯ ಕಾರ್ಯತಂತ್ರ ರೂಪಿಸುವಲ್ಲಿ ನಿಪುಣ ಎನ್ನಲಾದ ಪ್ರಶಾಂತ್ ಕಿಶೋರ್ ನೇತೃತ್ವದ ಜನ ಸುರಾಜ್ ಪಕ್ಷ ತನ್ನ ೨೩೧ ಅಭ್ಯರ್ಥಿಗಳ ಪೈಕಿ ೧೦೮ (ಶೇ.೪೭) ಮಂದಿ ಕ್ರಿಮಿನಲ್ ಹಿನ್ನೆಲೆಯುಳ್ಳವರು. ದೊಡ್ಡ ಮತ್ತು ಹಳೆಯ ಪಕ್ಷಗಳಲ್ಲಿ ಸೀಟು ಸಿಗದವರು ಜನ ಸುರಾಜ್ ಪಕ್ಷ ಸೇರಿ ಸುಲಭವಾಗಿ ಟಿಕೆಟ್ ಪಡೆದಿರುವುದು ಸ್ಪಷ್ಟವಾಗಿ ತಿಳಿಯುತ್ತದೆ. ವಿಪರ್ಯಾಸ ಎಂದರೆ ಅತಿ ಹೆಚ್ಚು ಕ್ರಿಮಿನಲ್ ಹಿನ್ನೆಲೆಯುಳ್ಳವರಲ್ಲಿ ೬೦ ಅಭ್ಯರ್ಥಿಗಳಿರುವ ಕಾಂಗ್ರೆಸ್ಸಿನಲ್ಲಿ ೪೦ ಮಂದಿ (ಶೇ. ೬೭), ಬಿಜೆಪಿಯಲ್ಲಿ ೧೦೧ ಅಭ್ಯರ್ಥಿಗಳಲ್ಲಿ ೩೬ ಮಂದಿ (ಶೇ. ೩೬), ಆರ್ ಜೆಡಿಯಲ್ಲಿ ೧೪೦ ಅಭ್ಯರ್ಥಿಗಳಲ್ಲಿ ೬೧ ಮಂದಿ ( ಶೇ.೬೦), ಜೆಡಿಯು ೧೦೧ ಉಮೇದುವಾರರಲ್ಲಿ ೨೪ ಮಂದಿ (ಶೇ.೨೯), ಆಮ್ ಆದ್ಮಿಯ ೮೩ ಅಭ್ಯರ್ಥಿಗಳಲ್ಲಿ ೪೦ ಮಂದಿ ಅಪರಾಧ ಹಿನ್ನೆಲೆ (ಶೇ. ೬೭) ಮತ್ತು ಬಿಎಸ್ ಪಿಯಲ್ಲಿ ೧೮೦ ಮಂದಿ ಅಭ್ಯರ್ಥಿಗಳಲ್ಲಿ ೯೧ ಮಂದಿ ಇದ್ದು ಶೇಕಡಾವಾರು ಪ್ರಮಾಣದಲ್ಲಿ ಶೇ.೬೫ರಷ್ಟು ಕ್ರಿಮಿನಲ್ ಹಿನ್ನೆಲೆ ಉಳ್ಳವರು ಕಣದಲ್ಲಿದ್ದಾರೆ.
ಈ ಎಲ್ಲ ರಾಜಕೀಯ ಪಕ್ಷಗಳ ಒಟ್ಟು ಅಭ್ಯರ್ಥಿಗಳ ಪೈಕಿ ೯೪ ಮಂದಿ ಮಹಿಳೆಯರ ಮೇಲೆ ದೌರ್ಜನ್ಯ, ಅತ್ಯಾಚಾರದ ಪ್ರಕರಣಗಳಲ್ಲಿ ಬಲವಾದ ಆರೋಪಗಳನ್ನು ಹೊಂದಿರುವವರು. ಇವರಲ್ಲದೆ ೧೬೫ ಮಂದಿ ಕೊಲೆ ಪ್ರಕರಣಗಳಲ್ಲಿ ಗಂಭೀರ ಆರೋಪ ಎದುರಿಸುತ್ತಿರುವವರು. ಇನ್ನು ಶ್ರೀಮಂತಿಕೆಯ ಪ್ರಶ್ನೆಯನ್ನು ತೆಗೆದುಕೊಂಡರೆ ಒಟ್ಟು ೨,೬೦೦ ಮಂದಿಯಲ್ಲಿ ೧,೦೮೧ ಮಂದಿ ಕೋಟ್ಯಧಿಪತಿಗಳು ಶಾಸನ ಮತ್ತು ಆಡಳಿತವನ್ನು ನೋಡಿಕೊಳ್ಳುವ ವಿಧಾನಸಭೆಯನ್ನು ಪ್ರವೇಶಿಸಲು ಮುಂದಾಗಿದ್ದಾರೆ.
ಅಸೋಸಿಯೇಷನ್ ಫಾರ್ ಡೆಮೊಕ್ರಾಟಿಕ್ ಮತ್ತು ನ್ಯಾಷನಲ್ ಎಲೆಕ್ಷನ್ವಾಚ್ ಜಂಟಿಯಾಗಿ ನಡೆಸಿರುವ ಸಮೀಕ್ಷೆ ಮತ್ತು ಮಾಹಿತಿ ಸಂಗ್ರಹವಿದು. ಎರಡು ಸಂಸ್ಥೆಗಳು ಈ ಅಪರಾಧಗಳ ಸಂಖ್ಯೆಯನ್ನು ನಿಯಂತ್ರಿಸಲು ದೇಶದ ಕಾಯ್ದೆ ಕಾನೂನನ್ನು ಮತ್ತು ಸಂವಿಧಾನವನ್ನು ರಕ್ಷಿಸುವ ಸುಪ್ರೀಂ ಕೆಲವು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಹಲವು ಶಿಫಾರಸುಗಳನ್ನು ಮಾಡಿರುವುದು ಗಮನಾರ್ಹ ಸಂಗತಿಯಾಗಿದೆ.
ಈ ಶಿಫಾರಸುಗಳ ವಿವರ ಹೀಗಿದೆ: ಅಪರಾಧದ ಹಿನ್ನೆಲೆಯಿರುವವರಿಗೆ ರಾಜಕೀಯ ಪಕ್ಷಗಳು ಚುನಾವಣೆಗಳಲ್ಲಿ ಟಿಕೆಟ್ ನೀಡಬಾರದು. ಗಂಭೀರವಾದ ಕ್ರಿಮಿನಲ್ ಆರೋಪಿಗಳೆಂದು ಘೋಷಿಸಿ ಇಂತಹವರು ಚುನಾವಣೆಗೆ ನಿಲ್ಲಲು ಅನರ್ಹರೆಂದು ಕಾಯ್ದೆ ರಚಿಸುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು. ಚುನಾವಣೆಯಲ್ಲಿ ರಾಜಕೀಯ ಪಕ್ಷಗಳು ತಮ್ಮ ತತ್ವ ಸಿದ್ಧಾಂತಗಳಿಗೆ ತಕ್ಕಂತೆ ಪ್ರಾಮಾಣಿಕವಾಗಿ ನಡೆದುಕೊಳ್ಳಬೇಕು. ಕ್ರಿಮಿನಲ್ ಹಿನ್ನೆಲೆಯುಳ್ಳ ಅಭ್ಯರ್ಥಿಗಳ ಅಪರಾಧಗಳನ್ನು ಮಾಧ್ಯಮಗಳು ಪ್ರಚಾರ ಮಾಡುವ ಮೂಲಕ ಜನರು ಇಂತಹವರು ಗೆದ್ದು ಬರದಂತೆ ಮತದಾರರಲ್ಲಿ ಅರಿವು ಮೂಡಿಸಬೇಕು. ಚುನಾವಣೆಗಳಲ್ಲಿ ಹಣ ಮತ್ತು ತೋಳ್ಬಲ ಹಾಗೂ ಜಾತಿ ಪ್ರಭಾವವನ್ನು ನಿಯಂತ್ರಿಸುವ ಕಾನೂನು ವ್ಯವಸ್ಥೆಯನ್ನು ಜಾರಿಗೆ ತರುವಂತೆ ಸಂಸತ್ತು ಹಾಗೂ ಚುನಾವಣಾ ಆಯೋಗ ಕ್ರಮಕೈಗೊಳ್ಳಬೇಕು. ಈ ಸಂಸ್ಥೆಗಳು ಹೀಗೆ ಹತ್ತಾರು ಶಿಫಾರಸುಗಳನ್ನು ಮಾಡಿವೆಯಾದರೂ ವಾಸ್ತವ ಪರಿಸ್ಥಿತಿಯನ್ನು ಗಮನಿಸಿದರೆ ಬೆಕ್ಕಿಗೆ ಘಂಟೆ ಕಟ್ಟುವವರು ಯಾರು ಎನ್ನುವ ಪ್ರಶ್ನೆ ಎದುರಾಗುತ್ತದೆ.
ಈ ಎಲ್ಲ ಬೆಳವಣಿಗೆ ಮತ್ತು ಕಳೆದ ಮೂರೂವರೆ ದಶಕಗಳಿಂದ ವಿಶೇಷವಾಗಿ ಟಿ.ಎನ್.ಶೇಷನ್ ಆಡಳಿತಾವಽಯಲ್ಲಿ ಚುನಾವಣಾ ಆಯೋಗ ಕೈಗೊಂಡ ಕಠಿಣ ಕ್ರಮಗಳಿಂದ ಚುನಾವಣೆಗಳು ನಿಷ್ಪಕ್ಷಪಾತವಾಗಿ ನಡೆಯುವ ಹಲವು ಕ್ರಮಗಳು ಬಂದದ್ದು ಇತಿಹಾಸ. ಆದರೆ ಇತ್ತೀಚೆಗೆ ನಡೆದ ಕರ್ನಾಟಕ, ಮಹಾರಾಷ್ಟ್ರ ಮತ್ತು ಹರಿಯಾಣ ರಾಜ್ಯಗಳಲ್ಲಿ ಮತಕಳವು ನಡೆದಿದೆ ಎಂದು ನೂರಾರು ಮಾಹಿತಿಯನ್ನು ನೀಡುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಆರೋಪವನ್ನು ಚುನಾವಣಾ ಆಯೋಗ ಗಂಭೀರವಾಗಿ ತೆಗೆದುಕೊಳ್ಳದೇ ಅವರನ್ನೇ ಅನುಮಾನದಿಂದ ನೋಡುವ ಚುನಾವಣಾ ಆಯೋಗದ ಕಾಕದೃಷ್ಟಿ ದುರಾದೃಷ್ಟಕರ. ಟಿ.ಎನ್. ಶೇಷನ್ ಅವರಂತೆ ದಿಟ್ಟ ಕ್ರಮ ಕೈಗೊಳ್ಳಲು ಆಗದಿದ್ದರೂ ಚುನಾವಣಾ ಪಾವಿತ್ರ್ಯವನ್ನು ಕಾಪಾಡಿಕೊಳ್ಳುವುದು ಆಯೋಗದ ಕರ್ತವ್ಯವಾಗಿದೆ.
” ಈ ಬಾರಿಯ ಚುನಾವಣೆಯಲ್ಲಿ ರಾಜ್ಯದಲ್ಲಿ ಆಳುವ ಪಕ್ಷದ ದೊಡ್ಡಣ್ಣನಾಗಿರುವ ಬಿಜೆಪಿಯಲ್ಲಿ ವರ್ಚಸ್ವಿ ನಾಯಕತ್ವದ ಕೊರತೆ ಎದ್ದು ಕಾಣುತ್ತಿದೆ. ಹಾಗಾಗಿಯೇ ಪ್ರಧಾನಿ ನರೇಂದ್ರ ಮೋದಿ ಅವರೇ ನೇರವಾಗಿ ಚುನಾವಣಾ ಅಖಾಡಕ್ಕಿಳಿಯಬೇಕಾಯಿತು.”
-ದೆಹಲಿ ಕಣ್ಣೋಟ
ಶಿವಾಜಿ ಗಣೇಶನ್





