Light
Dark

ರಾಜಕೀಯ ಮೇಲಾಟದ ಕೇಂದ್ರವಾದ BASE – ಭಾಗ-1

 ಐದು ವರ್ಷಗಳಿಂದ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿರುವ ಒಂದು ಶೈಕ್ಷಣಿಕ ಸಂಸ್ಥೆಯ ಮರು ಉದ್ಘಾಟನೆ ಇತಿಹಾಸದ ವ್ಯಂಗ್ಯ! 

ನಾ ದಿವಾಕರ

ಮೈಸೂರಿನಲ್ಲಿ ನಡೆದ ಅಂತಾರಾಷ್ಟ್ರೀಯ ಯೋಗದಿನದ ಹಿನ್ನೆಲೆಯಲ್ಲಿ ಕರ್ನಾಟಕಕ್ಕೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿನಲ್ಲಿ ಹಲವು ಹೊಸ ಯೋಜನೆಗಳಿಗೆ ಚಾಲನೆ ನೀಡಿದ್ದು, ರಾಜ್ಯಕ್ಕೆ ೩೩ ಸಾವಿರ ಕೋಟಿ ರೂಗಳ ಬಂಡವಾಳ ಹೂಡಿಕೆಗೆ ಬಾಗಿಲು ತೆರೆದುಹೋಗಿದ್ದಾರೆ. ಇತ್ತೀಚೆಗೆ ಮೈಸೂರಿನಲ್ಲಿ ೨೨,೯೦೦ ಕೋಟಿ ರೂ.ಗಳ ಸೆಮಿ ಕಂಡಕ್ಟರ್ ಘಟಕ ಸ್ಥಾಪಿಸುವ ಪ್ರಸ್ತಾಪವನ್ನು ಹೊರತುಪಡಿಸಿದರೆ, ಕಳೆದ ಹಲವು ವರ್ಷಗಳಿಂದ ಯಾವುದೇ ಬೃಹತ್ ಉದ್ಯಮದ ಬಂಡವಾಳ ಹೂಡಿಕೆಯನ್ನೇ ಕಾಣದ ಕರ್ನಾಟಕಕ್ಕೆ ಇದು ಆಶಾದಾಯಕವಾಗಿ ಕಾಣಬಹುದು. ಆದರೆ ಬಂಡವಾಳ ಹೂಡಿಕೆಯ ಪ್ರಸ್ತಾವನೆಗೂ, ಹೂಡಿಕೆಗೂ ಇರುವ ಅಪಾರ ಅಂತರದ ನಡುವೆ ಸಾಕಷ್ಟು ಬದಲಾವಣೆಗಳು ಸಂಭವಿಸಿ, ಅಂತಿಮವಾಗಿ ಏನು ಲಭಿಸುತ್ತದೆ ಎನ್ನುವುದನ್ನು ಕಾಲವೇ ನಿರ್ಧರಿಸುತ್ತದೆ.

ಈ ನಡುವೆಯೇ ಪ್ರಧಾನಿ ಮೋದಿ ಬೆಂಗಳೂರಿನ ಪ್ರತಿಷ್ಠಿತ ವಿಶ್ವವಿದ್ಯಾಲಯವೊಂದರ ಉದ್ಘಾಟನೆಯನ್ನೂ ಮಾಡಿದ್ದಾರೆ. ಸಾಮಾನ್ಯವಾಗಿ ಶಿಲಾನ್ಯಾಸ ಎಂದರೆ ಒಂದು ಸಂಸ್ಥೆಯ ಕಟ್ಟಡಕ್ಕೆ ಹಸಿರು ನಿಶಾನೆ ನೀಡುವ ಮತ್ತು ಭೂಮಿಪೂಜೆ ಮಾಡುವ ಪಾರಂಪರಿಕ, ಸಾಂಪ್ರದಾಯಿಕ ಪ್ರಕ್ರಿಯೆ. ಉದ್ಘಾಟನೆ ಎಂದರೆ ಒಂದು ಸಂಸ್ಥೆಯ ನಿರ್ಮಾಣ ಪೂರ್ಣಗೊಂಡ ನಂತರದಲ್ಲಿ ಸಂಸ್ಥೆಯ ಕಾರ್ಯಚಟುವಟಿಕೆಗಳು ಆರಂಭವಾಗಲು ನೀಡುವ ಹಸಿರು ನಿಶಾನೆ. ಒಂದು ವೇಳೆ ಕಟ್ಟಡ ನಿರ್ಮಾಣ ಪೂರ್ಣವಾಗದಿದ್ದರೂ, ಕಾರ್ಯಚಟುವಟಿಕೆ ಆರಂಭವಾಗುವ ಸಂದರ್ಭಗಳೂ ಇದ್ದೇ ಇರುತ್ತವೆ. ಇಂತಹ ಯಾವುದೇ ಸಂಸ್ಥೆಯ ಉದ್ಘಾಟನೆ ಮಾಡುವ ಮೂಲಕ, ಉನ್ನತ ಮಟ್ಟದ ನಾಯಕರು ಬೌದ್ಧಿಕ ಚಟುವಟಿಕೆಗೆ ಚಾಲನೆ ನೀಡುವುದು ಸಂಪ್ರದಾಯ.

ಭಾರತದ ರಾಜಕಾರಣದಲ್ಲಿ ಈ ಎರಡೂ ಪ್ರಕ್ರಿಯೆಗಳಿಗೆ ಬೌದ್ಧಿಕ ಮೌಲ್ಯಕ್ಕಿಂತಲೂ ಹೆಚ್ಚು ರಾಜಕೀಯ ಮೌಲ್ಯವೇ ಇರುವುದನ್ನು ಸ್ವಾತಂತ್ರ್ಯಾನಂತರದ ಚರಿತ್ರೆಯುದ್ದಕ್ಕೂ ಗಮನಿಸಬಹುದು. ರಾಜಕೀಯ ನಾಯಕರಿಂದ ಉದ್ಘಾಟನೆಯಾಗದೆ ಭಾರತದಲ್ಲಿ ಒಂದು ಶೌಚಾಲಯವೂ ಬಾಗಿಲು ತೆರೆಯದಂತಹ ಪರಿಸ್ಥಿತಿಯನ್ನು ನಮ್ಮ ರಾಜಕೀಯ ಪಕ್ಷಗಳು ಸೃಷ್ಟಿಸಿಬಿಟ್ಟಿವೆ. (ಮೈಸೂರಿನಲ್ಲಿ ಸಿದ್ಧರಾಮಯ್ಯ ಅವರ ಮನೆಯ ಬಳಿಯಲ್ಲೇ ಒಂದು ಹಸಿರು ಶೌಚಾಲಯ ಹೀಗೆಯೇ ಹಲವು ವರ್ಷಗಳಿಂದ ಅನಾಥವಾಗಿ ಬಿದ್ದಿದೆ).

ಜನಸಾಮಾನ್ಯರಲ್ಲಿ ಒಂದು ಸಂಸ್ಥೆಯ ಬಗ್ಗೆ ಸದಭಿಲಾಷೆ ಮತ್ತು ಸದಾಶಯಗಳನ್ನು ಮೂಡಿಸುವ ನಿಟ್ಟಿನಲ್ಲಿ ಪ್ರತಿಷ್ಠಿತರಿಂದ ಉದ್ಘಾಟನೆ ಮಾಡುವುದು ತಪ್ಪೇನೂ ಆಗುವುದಿಲ್ಲ. ಆದರೂ ಹಲವಾರು ಸಂದರ್ಭಗಳಲ್ಲಿ ಅಧಿಕಾರ ರಾಜಕಾರಣದ ಶಿಷ್ಟಾಚಾರಗಳು ಮತ್ತು ಆಡಳಿತಾರೂಢ ಪಕ್ಷಗಳ ರಾಜಕೀಯ ಅನಿವಾರ್ಯತೆಗಳು ಉದ್ಘಾಟನೆಯ ಪ್ರಕ್ರಿಯೆಯನ್ನು ರಾಜಕೀಯ ಮೇಲಾಟದ ವಸ್ತುವನ್ನಾಗಿ ಮಾಡಿಬಿಡುತ್ತವೆ.

ಇಂತಹುದೇ ಪ್ರಸಂಗ ಬೆಂಗಳೂರಿನಲ್ಲಿ ನಡೆದಿದೆ. ಐದು ವರ್ಷಗಳ ಹಿಂದೆ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಉದ್ಘಾಟನೆಯಾಗಿದ್ದ ಡಾ ಬಿ ಆರ್ ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ (ಬೇಸ್) ವಿಶ್ವವಿದ್ಯಾಲಯವನ್ನು ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಉದ್ಘಾಟನೆ ಮಾಡುವ ಮೂಲಕ ಹೊಸ ಪರಂಪರೆಗೆ ನಾಂದಿ ಹಾಡಿದ್ದಾರೆ.

ಬೇಸ್ ವಿಶ್ವವಿದ್ಯಾಲಯದ ಸ್ಥಾಪನೆ

ಸಾರ್ವಜನಿಕ ಅನುಕೂಲಕ್ಕಾಗಿಯೇ ಸ್ಥಾಪಿಸಲಾಗಿರುವ ಬೇಸ್ ವಿಶ್ವವಿದ್ಯಾಲಯದ ಧ್ಯೇಯೋದ್ದೇಶಗಳೂ ಸಹ ಉದಾತ್ತತೆಯಿಂದ ಕೂಡಿದ್ದು, ಅರ್ಥಶಾಸ್ತ್ರ ಮತ್ತು ಇತರ ಸಮಾಜ ವಿಜ್ಞಾನಗಳ ಕಲಿಕೆಗೆ ಉತ್ಕೃಷ್ಟ ಮಟ್ಟದ ಬೌದ್ಧಿಕ ಪರಿಕರಗಳನ್ನು ಒದಗಿಸುವ ಒಂದು ಸಂಸ್ಥೆಯನ್ನಾಗಿ ರೂಪಿಸಿದೆ. ಭಾರತದ ಸಂವಿಧಾನ ಕರ್ತೃ ಡಾ ಬಿ ಆರ್ ಅಂಬೇಡ್ಕರ್ ಅರ್ಥಶಾಸ್ತ್ರದಲ್ಲೂ ಪರಿಣತಿ ಹೊಂದಿರುವವರಾಗಿದ್ದು, ಅವರ ಅನೇಕ ಆರ್ಥಿಕ ಚಿಂತನೆಗಳನ್ನು ಭಾರತ ಸರ್ಕಾರ ತನ್ನ ಆಡಳಿತ ನೀತಿಗಳಲ್ಲಿ ಅಳವಡಿಸುತ್ತಾ ಬಂದಿದೆ. ಬೌದ್ಧಿಕ ವಿಕಾಸ ಮತ್ತು ಶೈಕ್ಷಣಿಕ ಮುನ್ನಡೆಯ ದೃಷ್ಟಿಯಿಂದ ಸ್ಥಾಪನೆಯಾಗುವ ಯಾವುದೇ ಒಂದು ವಿದ್ಯಾಸಂಸ್ಥೆಯ ಮೂಲ ಧ್ಯೇಯ ಶಿಕ್ಷಣಾರ್ಥಿಗಳ ಬೌದ್ಧಿಕ ವಿಕಸನದೊಂದಿಗೇ ಸಾಮಾಜಿಕ ಪ್ರಜ್ಞೆಯನ್ನೂ ಉನ್ನತ ಮಟ್ಟಕ್ಕೆ ಕೊಂಡೊಯ್ಯುವುದಾಗಿರಬೇಕು ಎಂಬ ಅಂಬೇಡ್ಕರ್ ಅವರ ತಾತ್ವಿಕ ನಿಲುವು ಸಾರ್ವಕಾಲಿಕ ಪ್ರಸ್ತುತತೆಯನ್ನು ಪಡೆಯುತ್ತದೆ. ಈ ದಿಕ್ಕಿನಲ್ಲೇ ಅಂಬೇಡ್ಕರ್ ಹೀಗೆ ಹೇಳುತ್ತಾರೆ :
‘ಹೀಗೆ ತರಬೇತುಗೊಂಡ ವಿದ್ಯಾರ್ಥಿಗೆ , ವಸ್ತುನಿಷ್ಠ ಸಂಗತಿಗಳು ಯಾವುವು, ಅಭಿಪ್ರಾಯದ ಸಂಗತಿಗಳು ಯಾವುವು ಎಂಬವುಗಳಲ್ಲಿರುವ ಭೇದವು ಮನದಟ್ಟಾಗಿರಬೇಕು. ಅವನಿಗೆ ನೈಜ ವಾಸ್ತವಿಕ ಅಂಶಗಳಲ್ಲಿನ ವ್ಯತ್ಯಾಸಗಳು ತಿಳಿಯಬೇಕು. ಅವುಗಳನ್ನು ತನ್ನಇಷ್ಟದ ಸಿದ್ಧಾಂತಗಳಿಗೆ ಹೋಲಿಸಿಕೊಳ್ಳದೆ ಅವುಗಳ ಆಂತರಿಕ ಹಿರಿಮೆ ಗರಿಮೆಗಳ ಪ್ರಶೆಗಳಿಗೆ ಭಿನ್ನತೆಗಳು ತಿಳಿದಿರಬೇಕು. ಇತರರು ಪ್ರತಿಪಾದಿಸಿದ ಅಭಿಪ್ರಾಯಗಳಿಗೆ ತನ್ನದೇ ಆದ ತರ್ಕವನ್ನು ಹೊಂದಿಸಿ ವಿಮರ್ಶೆಗೊಳಪಡಿಸಿ ಅವುಗಳಿಗೆ ಹೊಸ ಮೌಲ್ಯ ನೀಡಲು ಬರಬೇಕು’ ( ಡಾ ಬಿ ಆರ್ ಅಂಬೇಡ್ಕರ್ ಬರಹಗಳು ಮತ್ತು ಭಾಷಣಗಳು ಸಂಪುಟ ೨ ಪುಟ ೨೯೬-೨೯೭).

ಅಂಬೇಡ್ಕರ್ ಅವರ ಈ ಆಶಯಗಳನ್ನು ಮತ್ತು ಧ್ಯೇಯೋದ್ದೇಶಗಳನ್ನು ಗಮನದಲ್ಲಿಟ್ಟುಕೊಂಡೇ ಬೇಸ್ ವಿಶ್ವವಿದ್ಯಾಲಯವನ್ನು ಸ್ಥಾಪಿಸಲಾಗಿದ್ದು, ಸರ್ಕಾರ ಸಾರ್ವಜನಿಕ ವಲಯ, ಖಾಸಗಿ ವಲಯ ಮತ್ತು ಶೈಕ್ಷಣಿಕ ಸಂಸ್ಥೆಗಳಲ್ಲಿ ಸಕ್ರಿಯವಾಗಿರುವ ಭಾಗೀದಾರರ ಮೂಲಕ ಎಲ್ಲರನ್ನೂ ಒಳಗೊಳ್ಳುವ ಒಂದು ಸಮಾಜವನ್ನು ನಿರ್ಮಿಸಲು ಅವಶ್ಯವಾಗುವ ಆರ್ಥಿಕ ಮಾನವ ಸಂಪನ್ಮೂಲವನ್ನು ಸೃಷ್ಟಿಸಲು ಬೇಸ್ ವಿಶ್ವವಿದ್ಯಾಲಯ ಆಶಿಸುತ್ತದೆ. ಈ ಆಶಯಗಳೊಂದಿಗೇ ಅರ್ಥಶಾಸ್ತ್ರ ಮತ್ತು ಇತರ ಜ್ಞಾನಶಿಸ್ತುಗಳಲ್ಲಿ ಉತ್ಕೃಷ್ಟತೆಯನ್ನು ಪಡೆಯುವ ಗುರಿಯೊಂದಿಗೆ ಸಿದ್ಧರಾಮಯ್ಯ ನೇತೃತ್ವದ ಕರ್ನಾಟಕ ಸರ್ಕಾರವು ೨೦೧೬ರಲ್ಲಿ ಒಂದು ಉನ್ನತ ಮಟ್ಟದ ತಜ್ಞರನ್ನೊಳಗೊಂಡ ಸಮಿತಿಯನ್ನು ನೇಮಿಸಿತ್ತು. ಕರ್ನಾಟಕ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಮತ್ತು ಕೆಎಸ್‌ಎಚ್‌ಇಸಿ ಸಂಸ್ಥೆಯ ಉಪಾಧ್ಯಕ್ಷರಾಗಿದ್ದ ಎಸ್ ವಿ ರಂಗನಾಥ್ ಅವರ ಅಧ್ಯಕ್ಷತೆಯಲ್ಲಿ ರಚಿಸಲಾದ ಈ ಸಮಿತಿಯು ನೀಡಿದ ವರದಿಯನ್ನಾಧರಿಸಿ ಕರ್ನಾಟಕ ಸರ್ಕಾರವು ಬೇಸ್ ವಿಶ್ವವಿದ್ಯಾಲಯದ ಸ್ಥಾಪನೆಗೆ ಅನುಮೋದನೆ ನೀಡಿ, ೩೫೦ ಕೋಟಿ ರೂ.ಗಳ ವೆಚ್ಚದಲ್ಲಿ, ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಆವರಣದಲ್ಲಿ ೪೩.೪೫ ಎಕರೆ ಭೂಮಿಯನ್ನೂ ಮಂಜೂರು ಮಾಡಿತ್ತು. ಮೂಲ ಹೂಡಿಕೆಗೆ ೨೭೫ ಕೋಟಿ ರೂ.ಗಳನ್ನು ಕರ್ನಾಟಕ ಸರ್ಕಾರವೂ, ೭೫ ಕೋಟಿ ರೂ.ಗಳನ್ನು ಖಾಸಗಿ, ಕಾರ್ಪೋರೇಟ್ ವಲಯವೂ ಹೂಡಿತ್ತು. ವಿಶ್ವವಿದ್ಯಾಲಯದ ಕಾರ್ಯಾರಂಭವಾದ ನಂತರ ೨೦೧೬-೧೭ರ ವಾರ್ಷಿಕ ನಿರ್ವಹಣೆಗೆ ರಾಜ್ಯ ಸರ್ಕಾರ ೧೦೭ ಕೋಟಿ ರೂ.ಗಳ ನೆರವನ್ನೂ ನೀಡಿತ್ತು.

ಕರ್ನಾಟಕ ಸೊಸೈಟೀಸ್ ನೋಂದಣಿ ಕಾಯ್ದೆ ೧೯೬೦ರ ಅಡಿಯಲ್ಲಿ ಸ್ಥಾಪಿಸಲಾದ ಈ ವಿಶ್ವವಿದ್ಯಾಲಯಕ್ಕೆ ಅಂದಿನ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಡಾ ಅಂಬೇಡ್ಕರ್ ಅವರ ೧೨೫ನೆಯ ಜನ್ಮದಿನಾಚರಣೆಯ ಅಂಗವಾಗಿ, ೨೦೧೭ರ ಏಪ್ರಿಲ್ ೧೪ರಂದು ಶಂಕುಸ್ಥಾಪನೆ ಮಾಡಿದ್ದರು. ಬಿಎಸ್ಸಿ (ಆನರ್ಸ್) ಪದವಿಯ ಮೊದಲ ಬ್ಯಾಚ್‌ಗೆ ೨೦೧೭ರ ಜೂನ್ ಜುಲೈ ತಿಂಗಳಲ್ಲಿ ಪ್ರವೇಶಾವಕಾಶ ಕಲ್ಪಿಸಲಾಗಿತ್ತು. ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ ಅಖಿಲಭಾರತ ಪ್ರವೇಶಾತಿ ಪರೀಕ್ಷೆಯ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ, ೨೦೧೭ರ ಆಗಸ್ಟ್ ೨೮ರಂದು ಪ್ರಪ್ರಥಮ ತರಗತಿಯನ್ನು ಆರಂಭಿಸಲಾಗಿತ್ತು. ಬೇಸ್ ವಿಶ್ವವಿದ್ಯಾಲಯದ ಶೈಕ್ಷಣಿಕ ಪಯಣಕ್ಕೆ ೨೦೧೭ರ ಅಕ್ಟೋಬರ್ ೪ರಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಔಪಚಾರಿಕವಾಗಿ ಚಾಲನೆ ನೀಡಿದ್ದರು. ಈ ಸಂದರ್ಭದಲ್ಲಿ ಭಾರತೀಯ ರಿಸರ್ವ್ ಬ್ಯಾಂಕಿನ ಮಾಜಿ ಗವರ್ನರ್ ಮತ್ತು ಅಂದಿನ ಪ್ರಧಾನಮಂತ್ರಿಗಳ ಆರ್ಥಿಕ ಸಲಹಾ ಮಂಡಲಿಯ ಅಧ್ಯಕ್ಷರಾಗಿದ್ದ ಡಾ ಸಿ ರಂಗರಾಜನ್ ಮುಖ್ಯ ಉಪನ್ಯಾಸ ನೀಡಿದ್ದರು. ಸರ್ಕಾರದ ಅಧಿಸೂಚನೆ ಸಂಖ್ಯೆ ಇಡಿ/ಯುಬಿವಿ/೨೦೧೮(ಪಿ ೨), ದಿನಾಂಕ ೩೦ ಅಕ್ಟೋಬರ್ ೨೦೧೯ರ ಅನುಸಾರ ಈ ಸಂಸ್ಥೆಯನ್ನು ಅರ್ಥಶಾಸ್ತ್ರ ಮತ್ತು ಸಮಾಜ ವಿಜ್ಞಾನದ ಏಕೀಭೂತ ವಿಶ್ವವಿದ್ಯಾಲಯ ಎಂದು ಘೋಷಿಸಲಾಯಿತು. (ಮುಂದುವರೆಯಲಿದೆ..)