ಹೌದು, ಎನ್ನುತ್ತದೆ ನ್ಯಾಷನಲ್ ಕ್ರೈಂ ರಿಪೋರ್ಟಿಂಗ್ ಬ್ಯೂರೋ ವರದಿ ೨೦೨೩ರ ವರೆಗೆ ಲಭ್ಯವಿರುವ ಅಂಕಿಸಂಖ್ಯೆಗಳ ಆಧಾರದ ಮೇಲೆ. ೨೦೨೩ರಲ್ಲಿ ದಿನಗೂಲಿ ಕಾರ್ಮಿಕರ ಆತ್ಮಹತ್ಯೆಗಳು ೪೭,೧೭೦ಕ್ಕೆ ತಲುಪಿದ್ದು, ಇದು ಕಳೆದ ಐದು ವರ್ಷಗಳಲ್ಲಿ (೨೦೧೯ರಿಂದ) ಶೇ.೪.೫ರಷ್ಟು ಹೆಚ್ಚಾಗಿದೆ ಎಂದು ವರದಿ ಹೇಳುತ್ತದೆ. ದೇಶದಲ್ಲಿಯ ಎಲ್ಲ ಆತ್ಮಹತ್ಯೆ ಅಪರಾಧ ಪ್ರಕರಣಗಳ ಅಧ್ಯಯನ ಮಾಡಿ ವಿಶ್ಲೇಷಿಸಿದಾಗ ೨೦೨೩ ರಲ್ಲಿ ಈ ದಿನಗೂಲಿ ಕಾರ್ಮಿಕರ ಆತ್ಮಹತ್ಯೆ ಪ್ರಕರಣಗಳು ಶೇ.೨೭.೫ರಷ್ಟಿದ್ದು ಅತಿದೊಡ್ಡ ಭಾಗವಾಗಿದ್ದು ಕಂಡು ಬರುತ್ತದೆ. ಇದು ಒಂದೇ ವರ್ಷದಲ್ಲಿ (೨೦೨೨ರಿಂದ ) ಶೇ.೧.೧ರಷ್ಟು ಹೆಚ್ಚಾದದ್ದು ಕಂಡು ಬಂದಿದೆ.
ದಿನಗೂಲಿ ನೌಕರರ(ಕಾರ್ಮಿಕರ) ಸಂಖ್ಯೆಯು ಕೃಷಿ ಚಟುವಟಿಕೆಗಳೂ ಸೇರಿದಂತೆ ಅಸಂಘಟಿತ ವಲಯದಲ್ಲಿಯೇ ಹೆಚ್ಚಾಗಿದ್ದು, ಸಂಘಟಿತ ವಲಯದಲ್ಲೂ ಗಣನೀಯ ಪ್ರಮಾಣದಲ್ಲಿದೆ. ನಮ್ಮಲ್ಲಿ ಇಂದಿಗೂ ಅಸಂಘಟಿತ ವಲಯವೇ ದೊಡ್ಡದಾಗಿದ್ದು ಸ್ವಾಭಾವಿಕವಾಗಿಯೇ ಅಲ್ಲಿ ದಿನಗೂಲಿ ಕಾರ್ಮಿಕರ ಸಂಖ್ಯೆಯೂ ಹೆಚ್ಚಾಗಿರುವುದು ವರದಿಗಳಿಂದ ತಿಳಿದುಬರುತ್ತದೆ.
ಈ ಪ್ರಕರಣಗಳಿಗೆ ಮೇಲ್ನೋಟಕ್ಕೆ ಕಡಿಮೆ ಸಂಬಳ, ಕೆಲಸದ ಅನಿಶ್ಚಿತತೆ ಮತ್ತು ಭವಿಷ್ಯತ್ತಿನ ಭದ್ರತೆಯು ಇಲ್ಲದೇ ಇರುವುದು ಅಥವಾ ಇದ್ದರೂ ತೀರಾ ನಗಣ್ಯ ಎನ್ನುವ ಮಟ್ಟದಲ್ಲಿ ಇರುವುದು ಕಾರಣಗಳಾಗಿರ ಬಹುದು. ಕೆಲಸದ ಸ್ಥಳದಲ್ಲಿ ಅಸಮಾನತೆಗಳು (ಒಂದೇ ರೀತಿಯ ಕೆಲಸ ಮಾಡುವವರಲ್ಲಿ) ಮತ್ತು ಹೋಲಿಕೆಗಳು ಕಾರಣವಾಗಿರಬಹುದು. ಸಾಮರ್ಥ್ಯ, ಅನುಭವ ಮತ್ತು ಕೌಶಲಗಳಿಗೆ ಪುರಸ್ಕಾರವಿಲ್ಲದಿರುವುದೂ ಕಾರಣವಾಗಿರ ಬಹುದು. ಇಂಥ ನೌಕರರ (ಕಾರ್ಮಿಕರ) ಆತ್ಮಗೌರವಕ್ಕೆ ಧಕ್ಕೆಯಾಗುವುದೂ ಕಾರಣವಾಗಿರಬಹುದು. ಕೌಟುಂಬಿಕ ಮತ್ತು ಸಾಮಾಜಿಕ ಸಮಸ್ಯೆಗಳೂ ಕಾರಣವಿರಬಹುದು. ಕಾರ್ಮಿಕ ವ್ಯಾಜ್ಯಗಳು, ವ್ಯಾಜ್ಯಗಳಲ್ಲಿ ಸೋಲು ಮತ್ತು ಅದರಿಂದುಂಟಾಗುವ ಅನಿಶ್ಚಿತತೆಗಳೂ ಕಾರಣವಿರಬಹುದು. ಇನ್ನಷ್ಟು ಅಂಕಿ ಸಂಖ್ಯೆಗಳು ೨೦೨೦-೨೨ರ ಸುಮಾರಿನಲ್ಲಿ ಕೋವಿಡ್ ರೋಗವು ತೀವ್ರವಾಗಿದ್ದ ಅವಧಿಯಲ್ಲಿ ಆರ್ಥಿಕ ಚಟುವಟಿಕೆಗಳಿಗೆ ದೊಡ್ಡ ಪೆಟ್ಟು ಬಿದ್ದದ್ದು ಈಗ ಇತಿಹಾಸ. ಆಗ ಕಾರ್ಮಿಕರನ್ನು ಕೆಲಸದಿಂದ ತೆಗೆಯುವುದು ಅನಿವಾರ್ಯವಾಗಿತ್ತು. ಕಾರ್ಮಿಕರಲ್ಲಿ ಅರೆ ಉದ್ಯೋಗ ಮತ್ತು ನಿರುದ್ಯೋಗ ಹೆಚ್ಚಿರುವುದು ಸ್ವಾಭಾವಿಕ.
ಇದನ್ನು ಓದಿ: ಕಲ್ಕಟ್ಟ ಕೆರೆ, ವಿಜಯಪುರ ಕೆರೆ ತುಂಬಿಸಲು ಆಗ್ರಹ
ಕಾರ್ಮಿಕರಿಗೆ ಆರ್ಥಿಕ ತೊಂದರೆಗಳು ಹೆಚ್ಚಾಗಿರುವುದೂ ನಿಜ. ಅದರಲ್ಲಿಯೂ ದಿನಗೂಲಿ ಕಾರ್ಮಿಕರಿಗೆ ತೊಂದರೆಗಳು ಮತ್ತು ಕಷ್ಟಗಳು ಹೆಚ್ಚಾಗಿರುವುದು ವರದಿಗಳಿಂದ ತಿಳಿಯುತ್ತದೆ. ಅರ್ಥ ವ್ಯವಸ್ಥೆ ತೀವ್ರವಾಗಿ ಸುಧಾರಿಸಿಕೊಳ್ಳುತ್ತಿದ್ದರೂ ದಿನಗೂಲಿ ಉದ್ಯೋಗಾವಕಾಶಗಳ ಸೃಷ್ಟಿ ನಿಧಾನವಾಗುತ್ತದೆ. ಈ ಅವಧಿಯಲ್ಲಿಯ ದಿನಗೂಲಿ ಕಾರ್ಮಿಕರ ಆತ್ಮಹತ್ಯೆ ಅಂಕಿ ಸಂಖ್ಯೆಗಳನ್ನು ಇಲ್ಲಿರುವ ಸಂಖ್ಯಾಪಟ್ಟಿ ೧ರಲ್ಲಿ ಕಾಣಬಹುದು.
ಈ ಸಂಖ್ಯಾಪಟ್ಟಿಯನ್ನು ಗಮನಿಸಿದರೆ ದಿನಗೂಲಿ ಕಾರ್ಮಿಕರ ಆತ್ಮಹತ್ಯೆಗಳು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೆ ಇವೆ. ಅಲ್ಲದೇ ದೇಶದಲ್ಲಿ ಸಂಭವಿಸಿದ ಒಟ್ಟುಆತ್ಮಹತ್ಯೆ ಪ್ರಕರಣಗಳಲ್ಲಿ ಇವುಗಳ ಪ್ರಮಾಣವೂ ಹೆಚ್ಚುತ್ತಿದೆ. ಒಟ್ಟು ಆತ್ಮಹತ್ಯೆಗಳು ಹೆಚ್ಚುತ್ತಿವೆ. ಇವುಗಳನ್ನು ತಡೆಯಲು ಗಂಭೀರ ಪ್ರಯತ್ನ ನಡೆಯಬೇಕು. ಇದಿಷ್ಟು ದೇಶದಲ್ಲಿಯ ಒಟ್ಟಾರೆ ಕಾರ್ಮಿಕರ ಸ್ಥಿತಿಯಾದರೆ (ವಿಶೇಷವಾಗಿ ದಿನಗೂಲಿ ಕಾರ್ಮಿಕರ ಸ್ಥಿತಿ) ಗ್ರಾಮೀಣ ಮತ್ತು ಕೃಷಿ ಕಾರ್ಮಿಕರ ಸ್ಥಿತಿ ಇದಕ್ಕಿಂತ ಭಿನ್ನವಾಗೇನೂ ಇಲ್ಲ. ಇದು ಅಸಂಘಟಿತ ವಲಯವಾದ್ದರಿಂದ ದಾಖಲೆಯಾಗದೇ ಇರುವ ಸಮಸ್ಯೆಗಳೇ ಹೆಚ್ಚು. ಇಲ್ಲಿರುವ ಸಂಖ್ಯಾ ಪಟ್ಟಿ ೨ರಲ್ಲಿ ಇದೇ ಐದು ವರ್ಷಗಳಲ್ಲಿ ರೈತರ ಮತ್ತು ಕೃಷಿ ಕಾರ್ಮಿಕರ ಆತ್ಮಹತ್ಯೆಗಳ ವಿವರಗಳಿವೆ. ಇಲ್ಲಿಯೂ ಕೃಷಿ ಕಾರ್ಮಿಕರ ಆತ್ಮಹತ್ಯೆಗಳು ಹೆಚ್ಚುತ್ತಿದ್ದು, ರೈತರ ಆತ್ಮಹತ್ಯೆಗಳು ಕಡಿಮೆಯಾಗಿರುವುದನ್ನು (ಅತಿ ಸಣ್ಣ ಪ್ರಮಾಣದಲ್ಲಿ ಯಾದರೂ) ಕಾಣಬಹುದು.
ಇಲ್ಲಿ ರೈತರ (ಭೂಮಿ ಮಾಲೀಕರಾದ ರೈತರ) ಆತ್ಮಹತ್ಯೆಗಳು ಕಡಿಮೆಯಾಗುತ್ತಿವೆಯಾದರೂ ಗಣನೀಯವಾಗಿ ಕಡಿಮೆಯಾಗಿಲ್ಲ. ಕೃಷಿ ಕಾರ್ಮಿಕರ ಆತ್ಮಹತ್ಯೆಗಳು ಏರುತ್ತಿರುವುದು ಆತಂಕಕಾರಿ. ಸರ್ಕಾರ ಮತ್ತು ಸಮಾಜ ಈ ಎಲ್ಲ ಆತ್ಮಹತ್ಯೆಗಳ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು. ನಮ್ಮಲ್ಲಿ ಸಾಕಷ್ಟು ಕಾರ್ಮಿಕ ಕಲ್ಯಾಣ ಕಾನೂನುಗಳಿವೆ. ರೈತರ ರಕ್ಷಣಾ ವ್ಯವಸ್ಥೆಗಳಿವೆ. ಆದರೂ ಆತ್ಮಹತ್ಯೆಗಳೇಕೆ ಹೆಚ್ಚುತ್ತಿವೆ? ಸಮಸ್ಯೆಯ ಆಳಕ್ಕೆ ಇಳಿದು ಕಾರಣಗಳನ್ನು ಕಂಡು ಹಿಡಿದು ಪರಿಹಾರಗಳನ್ನು ಅನುಷ್ಠಾನಗೊಳಿಸಬೇಕು. ಈ ಕೆಲಸ ಬೇಗ ಆಗಬೇಕು.
” ದಿನಗೂಲಿ ನೌಕರರ (ಕಾರ್ಮಿಕರ) ಸಂಖ್ಯೆಯು ಕೃಷಿ ಚಟುವಟಿಕೆಗಳೂ ಸೇರಿದಂತೆ ಅಸಂಘಟಿತ ವಲಯ ದಲ್ಲಿಯೇ ಹೆಚ್ಚಾಗಿದ್ದು, ಸಂಘಟಿತ ವಲಯದಲ್ಲೂ ಗಣನೀಯ ಪ್ರಮಾಣ ದಲ್ಲಿದೆ. ನಮ್ಮಲ್ಲಿ ಇಂದಿಗೂ ಅಸಂಘಟಿತ ವಲಯವೇ ದೊಡ್ಡದಾಗಿದ್ದು ಸ್ವಾಭಾವಿಕವಾಗಿಯೇ ಅಲ್ಲಿ ದಿನಗೂಲಿ ಕಾರ್ಮಿಕರ ಸಂಖ್ಯೆಯೂ ಹೆಚ್ಚಾಗಿರುವುದು ವರದಿಗಳಿಂದ ತಿಳಿದುಬರುತ್ತದೆ.”
–ಪ್ರೊ.ಆರ್.ಎಂ.ಚಿಂತಾಮಣಿ





