Mysore
28
overcast clouds

Social Media

ಬುಧವಾರ, 25 ಜೂನ್ 2025
Light
Dark

ಆರ್ಥಿಕ ಬೆಳವಣಿಗೆಗೆ ರಿಸರ್ವ್ ಬ್ಯಾಂಕ್ ಟಾನಿಕ್

ಪ್ರೊ. ಆರ್.ಎಂ.ಚಿಂತಾಮಣಿ

ಕೇಂದ್ರ ಅಂಕಿ ಸಂಖ್ಯೆ ಕಚೇರಿಯ ಮೇ ೩೦ರ ಪ್ರಕಟಣೆಯಂತೆ ಇದೇ ಏಪ್ರಿಲ್ ತಿಂಗಳಲ್ಲಿ ಹಣದುಬ್ಬರ (Inflation) ದರ (ಗ್ರಾಹಕ ಬೆಲೆ ಸೂಚ್ಯಂಕದ ಆಧಾರದ ಮೇಲೆ ೨೦೨೪ರ ಏಪ್ರಿಲ್ ತಿಂಗಳಿಗೆ ಹೋಲಿಸಿದರೆ) ಶೇ.೩.೨ಕ್ಕೆ ಇಳಿದಿತ್ತು. ಕಳೆದ ೬ ವರ್ಷಗಳಲ್ಲಿಯೇ ಇದು ಅತ್ಯಂತ ಕಡಿಮೆ ಮತ್ತು ಇದು ರಿಸರ್ವ್ ಬ್ಯಾಂಕಿನ ಹಣಕಾಸು ನೀತಿಯ ಮಧ್ಯಮ ಮಿತಿ ಶೇ. ೪.೦ಯ (ಶೇ.೨.೦-ಶೇ.೬.೦) ಮಟ್ಟಕ್ಕಿಂತ ಶೇ.೦.೮ರಷ್ಟು ಕೆಳಗಿರುವುದನ್ನು ಗಮನಿಸಬಹುದು. ಅಂದರೆ ಹಣದುಬ್ಬರವನ್ನು ಕಟ್ಟಿ ಹಾಕುವ ಹೋರಾಟದಲ್ಲಿ ಸದ್ಯಕ್ಕೆ ಜಯ ಸಾಧಿಸಿದಂತಾಗಿದೆ. ಮುಂದಿನ ದಿನಗಳಲ್ಲಿ ಇದು ಮಧ್ಯಮ ಮಿತಿಯನ್ನು ದಾಟದಂತೆ ಎಚ್ಚರ ವಹಿಸಬೇಕಾಗುತ್ತದೆ.

ನಮ್ಮ ರಾಷ್ಟ್ರೀಯ ಒಟ್ಟಾದಾಯವು(ಜಿಡಿಪಿ) ೨೦೨೪-೨೫ರಲ್ಲಿ ಶೇ.೬.೫ರಷ್ಟು ಬೆಳವಣಿಗೆಯಾಗಿದೆ ಎಂದು ಅಂದಾಜುಗಳು ಹೇಳುತ್ತವೆ. ನಮ್ಮ ಅರ್ಥ ವ್ಯವಸ್ಥೆಯು ಸ್ಪಂದಿಸುತ್ತಿದೆ. ಆದರೆ ಅಂತರರಾಷ್ಟ್ರೀಯ ಅನಿಶ್ಚಿತತೆಗಳಿಂದಾಗಿ ೨೦೨೫-೨೬ರಲ್ಲಿಯೂ ಇದೇ ಮಟ್ಟದಲ್ಲಿ ನಿಲ್ಲಬಹು ದೆಂಬ ಆತಂಕ ವ್ಯಕ್ತವಾಗುತ್ತಿದೆ. ಈ ವರ್ಷವೂ ಸೇರಿ ಬರುವ ವರ್ಷಗಳಲ್ಲಿ ನಮ್ಮ ಜಿಡಿಪಿ  ವಾರ್ಷಿಕ ಶೇ. ೭.೫ರಷ್ಟಾದರೂ ಬೆಳೆಯಬೇಕೆಂದು ನಿರೀಕ್ಷಿಸಲಾಗಿದೆ.

ಈ ಹಿನ್ನೆಲೆಯಲ್ಲಿ ರಿಸರ್ವ್ ಬ್ಯಾಂಕು ಕಳೆದ ವಾರಾಂತ್ಯದಲ್ಲಿ ತನ್ನ ದ್ವೈಮಾಸಿಕ ಹಣಕಾಸು ನೀತಿಯನ್ನು ಪ್ರಕಟಿಸಿದೆ. ಅದರಲ್ಲಿ ಮೂರು ಮಹತ್ವದ ಬದಲಾವಣೆಗಳನ್ನು ಮಾಡಲಾಗಿದೆ. ತಾನು ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳಿಗೆ ಅವುಗಳಿಗೆ ಅನಿವಾರ್ಯವಿದ್ದಾಗ ತನ್ನ ಬಾಂಡುಗಳನ್ನೇ ಅಡವಿಟ್ಟುಕೊಂಡು ಕೊಡುವ ಸಾಲದ ಮೇಲೆ ಆಕರಿಸುವ ಬಡ್ಡಿ ದರ ರೆಪೋ ರೇಟನ್ನು (Repossession Rate) ಶೇ.೫೦ರಷ್ಟು ಕಡಿಮೆ ಮಾಡಿ ಶೇ.೫.೫೦ಕ್ಕೆ ಇಳಿಸಿದೆ. ಇದರೊಡನೆ -ಬ್ರವರಿಯಲ್ಲಿ ಕಡಿತಗೊಳಿಸಿದ ಶೇ. ೦.೨೫ ಮತ್ತು ಏಪ್ರಿಲ್‌ನಲ್ಲಿ ಇಳಿಸಿದ ಶೇ .೦.೨೫ನ್ನು ಸೇರಿಸಿದರೆ ಒಟ್ಟು ಶೇ.೧.೦ ಇಳಿಸಿದಂತಾಗುತ್ತದೆ. ಈಗಿನ ಇಳಿಕೆಯ ನಂತರ ರಿಸರ್ವ್ ಬ್ಯಾಂಕು ತನ್ನಲ್ಲಿ ಬಾಂಡ್‌ಗಳು ಇಡುವ ತಾತ್ಕಾಲಿಕ ಅಲ್ಪಾವಧಿ ಠೇವಣಿಗಳ ಮೇಲೆ ಕೊಡುವ ಬಡ್ಡಿ ದರವು (ರಿವರ್ಸ್ ರೆಪೋದರ) ಶೇ.೫.೨೫ಕ್ಕೆ ನಿಲ್ಲುತ್ತದೆ. ಮತ್ತು ಬ್ಯಾಂಕುಮತ್ತು ಹಣಕಾಸು ಕಂಪೆನಿಗಳಿಗೆ ಅವುಗಳ ಕಷ್ಟ ಕಾಲದಲ್ಲಿ ಅಂತಿಮ ಧಣಿ ಯಾಗಿ (Iender of Last Resort) ಸಾಲಗಳ ಮೇಲಿನ ಬಡ್ಡಿದರ (ಬ್ಯಾಂಕ್ ರೇಟು) ಶೇ. ೫.೭೫ಕ್ಕೆ ನಿಲ್ಲುತ್ತದೆ. ಇದರಿಂದ ದೇಶದಲ್ಲಿನ ಎಲ್ಲ ಬಡ್ಡಿ ದರಗಳೂ ಕಡಿಮೆಯಾಗುತ್ತವೆ. ಸಾಲಗಳ ಮೇಲಿನ ವೆಚ್ಚ ಕಡಿಮೆಯಾಗಿ ಹೆಚ್ಚು ಸಾಲಗಳನ್ನು ಅವಶ್ಯವಿದ್ದವರು ಪಡೆಯಲು ಅನುಕೂಲವಾಗುತ್ತದೆ. ಆರ್ಥಿಕ ಚಟುವಟಿಕೆಗಳು ಹೆಚ್ಚಲು ಸಹಾಯವಾಗುತ್ತದೆ.

ಎರಡನೆಯದಾಗಿ ಬ್ಯಾಂಕುಗಳು ತಮ್ಮ ಒಟ್ಟು ಠೇವಣಿಗಳಲ್ಲಿ ರಿಸರ್ವ್ ಬ್ಯಾಂಕಿನಲ್ಲಿ ಕಡ್ಡಾಯವಾಗಿ ಇಡಲೇಬೇಕಾದ ನಗದು ನಿಧಿ ಪ್ರಮಾಣವನ್ನು ನಾಲ್ಕು ಹಂತಗಳಲ್ಲಿ ಪ್ರತಿಯೊಂದರಲ್ಲಿ ಶೇ.೦.೨೫ರಂತೆ ಒಟ್ಟು ಶೇ.ಅ೧.೦ರಷ್ಟು ಕಡಿಮೆ ಮಾಡಿ ಶೇ.೩.೦ಕ್ಕೆ ನಿಲ್ಲಿಸಲಾಗುವುದು. ಗವರ್ನರ್ ಸಂಜೀವ ಮಲ್ಹೋತ್ರಾರವರ ಪ್ರಕಟಣೆಯ ಪ್ರಕಾರ ಈ ಕಡಿತಗಳು ಸೆಪ್ಟೆಂಬರ್ ೦೬, ಅಕ್ಟೋಬರ್ ೦೪, ನವೆಂಬರ್ ೦೧ ಮತ್ತು ನವೆಂಬರ್ ೨೯, ೨೦೨೫ರಂದು ಕಾರ್ಯರೂಪಕ್ಕೆ ಬರುತ್ತವೆ. ಈ ಕ್ರಮದಿಂದ ನವೆಂಬರ್ ೨೦೨೫ರ ಹೊತ್ತಿಗೆ ಒಟ್ಟು ೨.೫ ಲಕ್ಷ ಕೋಟಿ ರೂಪಾಯಿಗಳ ಬ್ಯಾಂಕ್ ಠೇವಣಿಗಳು ಅರ್ಥ ವ್ಯವಸ್ಥೆಗೆ ಸಾಲ ಕೊಡಲು ಲಭ್ಯವಾಗುತ್ತವೆ ಎಂದು ಗವರ್ನರ್ ಹೇಳುತ್ತಾರೆ. ಅಷ್ಟರ ಮಟ್ಟಿಗೆ ವ್ಯವಸ್ಥೆಗೆ ನಗದು ಹರಿವು (Liquidity) ಹೆಚ್ಚಾಗುತ್ತದೆ.

ಇಷ್ಟೆಲ್ಲಾ ಉದಾರ ಧೋರಣೆ ತಳೆದಿರುವ ಹಣಕಾಸು ನೀತಿ ಸಮಿತಿ ಹಿಂದಿನ ತನ್ನ ಸಭೆಯಲ್ಲೇ ಅನುಕೂಲಕರ ನಿಲುವಿಗೆ (Accommodative Stance) ಬದಲಾಯಿಸಿಕೊಂಡಿದ್ದನ್ನು ಈ ಸಭೆಯಲ್ಲಿ ಮತ್ತೆ ತಟಸ್ತ (Neutral) ನಿಲುವಿಗೆ ಹೋಗಿದೆ. ಇದು ಆಡಳಿತಾತ್ಮಕ ಬದಲಾವಣೆ ಇರಬಹುದು. ಶೇ.೮ರ ಜಿಡಿಪಿ ಬೆಳವಣಿಗೆ ಗುರಿ

ಮೊದಲೇ ಹೇಳಿರುವಂತೆ ಅರ್ಥ ವ್ಯವಸ್ಥೆಯ ಚೇತರಿಕೆಯ ಗುರಿ ಎಂಬುದು ಇಲ್ಲಿ ಸ್ಪಷ್ಟವಾಗುತ್ತದೆ. ಕೃಷಿ ವಲಯ ಹಿಂದಿನ ಹಣಕಾಸು ವರ್ಷದಂತೆ ಉತ್ತಮ ಸ್ಥಿತಿಯಲ್ಲಿದೆ. ಉತ್ತಮ ಮಳೆಗಾಲದ ಅಂದಾಜಿದೆ. ದೇಶದಲ್ಲಿ ಎಲ್ಲ ಅಣೆಕಟ್ಟೆಗಳ ನೀರಿನ ಸಂಗ್ರಹಾಲಯಗಳಲ್ಲಿ ಸಾಕಷ್ಟು ನೀರಿನ ಸಂಗ್ರಹವಿದೆ. ೨೦೨೫-೨೬ರ ಮುಂಗಾರು ಮತ್ತು ಹಿಂಗಾರು ಹಂಗಾಮುಗಳಲ್ಲಿ ಕೃಷಿ ಉತ್ಪನ್ನ ಹೆಚ್ಚುವ ನಿರೀಕ್ಷೆ ಇದೆ. ಕೃಷಿ ಚಟುವಟಿಕೆಗಳಿಗೆ ಸಾಲ ಸೌಲಭ್ಯಗಳು ಮತ್ತು ಸೂಕ್ತ ಸಮಯದಲ್ಲಿ ದೊರೆಯುತ್ತವೆಂದು ನಿರೀಕ್ಷಿಸಲಾಗಿದೆ.

ಸೇವಾ ವಲಯವು ಸುಸ್ಥಿತಿಯಲ್ಲಿದ್ದು, ಸಾಕಷ್ಟು ಬೆಳವಣಿಗೆ ಕಾಣುತ್ತಿದೆ. ಆದರೂ ನಿರುದ್ಯೋಗ ಮತ್ತು ಅರೆ ಉದ್ಯೋಗ ಸಮಸ್ಯೆಗಳನ್ನು ಸರ್ಕಾರ ಸೂಕ್ತ ಕ್ರಮಗಳಿಂದ ಸರಿಪಡಿಸಬೇಕು. ರಾಷ್ಟ್ರೀಯ ಒಟ್ಟಾದಾಯಕ್ಕೆ (ಜಿಡಿಪಿ) ಇದರ ಕಾಣಿಕೆ ದೊಡ್ಡದಾಗಿರುವುದರಿಂದ ಸೇವಾ ವಲಯದ ಸಮಸ್ಯೆಗಳನ್ನು ಬೇಗ ಸರಿಪಡಿಸಬೇಕಾಗುತ್ತದೆ.

ಅಂತರರಾಷ್ಟ್ರೀಯ ರಾಜಕೀಯ-ಭೌಗೋಳಿಕ ಸ್ಥಿತಿಯು ಅನಿಶ್ಚಿತತೆಗಳಿಂದ ಕೂಡಿರುವುದರಿಂದ ಅದು ಆರ್ಥಿಕ ಸ್ಥಿತಿಯ ಮೇಲೂ ಪರಿಣಾಮ ಬೀರಲಿದೆ. ನಮ್ಮ ನಿರ್ಯಾತಗಳು (ಸೇವೆಗಳು ಮತ್ತು ಉತ್ಪನ್ನಗಳೂ ಸೇರಿ) ಆರೋಗ್ಯಕರವಾಗಿ ಬೆಳೆಯುತ್ತಿರುವುದರಿಂದ ಕಳೆದ ವರ್ಷದ ಕೊನೆಯಲ್ಲಿ ನಮ್ಮ ಕೊರತೆ ವ್ಯಾಪಾರ ಶೇಷದ ಪ್ರಮಾಣ ಕಡಿಮೆಯಾಗಿತ್ತು. ಅಮೆರಿಕದ ಅಧ್ಯಕ್ಷರ ನಡೆಯನ್ನು ಹೀಗೇ ಎಂದು ಹೇಳಲಿಕ್ಕಾಗುವುದಿಲ್ಲ. ನಾವು ಈಗ ಇಂಗ್ಲೆಂಡ್‌ನೊಂದಿಗೆ ಮಾಡಿಕೊಂಡಿರುವ ಮುಕ್ತ ವ್ಯಾಪಾರ ಒಪ್ಪಂದದಂತೆ ಇತರೆ ದೇಶಗಳೊಡನೆಯೂ ಮಾಡಿಕೊಂಡರೆ ನಮ್ಮ ವಿದೇಶ ವ್ಯಾಪಾರದ ಬೆಳವಣಿಗೆ ನಿರಾತಂಕವಾಗಿ ಬೆಳೆಯುವ ಸಾಧ್ಯತೆ ಇದೆ. ಕೈಗಾರಿಕಾ ಬೆಳವಣಿಗೆಯನ್ನು ತೀವ್ರಗೊಳಿಸುವಲ್ಲಿ ಸರ್ಕಾರದ ಪಾತ್ರವೇ ಹೆಚ್ಚು. ರಿಸರ್ವ್ ಬ್ಯಾಂಕಿನ ಹಣಕಾಸು ನೀತಿ ತನ್ನ ಪಾಲಿನ ಜವಾಬ್ದಾರಿಯನ್ನು ತನ್ನ ಮಿತಿಯಲ್ಲಿ ನಿರ್ವಹಿಸಿದೆ. ಬಂಡವಾಳದ ಬಡ್ಡಿ ವೆಚ್ಚವನ್ನು ಸಾಕಷ್ಟು ಪ್ರಮಾಣದಲ್ಲಿ ಕಡಿಮೆ ಮಾಡುವುದಲ್ಲದೇ ಅರ್ಥ ವ್ಯವಸ್ಥೆಗೆ ಸಾಕಷ್ಟು ನಗದು ಹರಿವಿಗೆ ಅವಕಾಶವನ್ನೂ ಮಾಡಿಕೊಡಲಾಗಿದೆ.

ನಮ್ಮ ವಿದೇಶಿ ವಿನಿಮಯ ನಿಧಿ ಕಳೆದ ಮೇ ೩೦ರಂದು ಇದ್ದಂತೆ ೬೯೧.೧೫ ಬಿಲಿಯನ್ ಡಾಲರ್ ಇದ್ದು, ಮುಂದಿನ ೧೧ ತಿಂಗಳ ಆಯಾತಗಳ ಬೆಲೆ ಕೊಡಲು ಸಾಕಾಗುತ್ತದೆ. ಇದನ್ನು ಸೂಕ್ತವಾಗಿ ಬಳಸಿಕೊಳ್ಳಬೇಕು. ಕೊನೆಯಲ್ಲಿ ರಿಸರ್ವ್ ಬ್ಯಾಂಕ್ ಗವರ್ನರ್ ಹೇಳಿದ ಒಂದು ಮಾತನ್ನು ಇಲ್ಲಿ ದಾಖಲಿಸಬೇಕು. ಅದೆಂದರೆ ‘ಬೆಲೆಗಳಲ್ಲಿಯ ಸ್ಥಿರತೆ ಒಂದು ಅವಶ್ಯಕತೆ ಎಂದು ಹೇಳಬಹುದಾದರೂ ಆರ್ಥಿಕ ಬೆಳವಣಿಗೆಗೆ ಅದಷ್ಟೇ ಸಾಲದು. ಬೆಳವಣಿಗೆಗೆ ಪೂರಕವಾದ ಆರ್ಥಿಕ ನೀತಿ ಬೇಕೇ ಬೇಕು’. ಅಂದರೆ ನಾವು ಇಷ್ಟು ಮಾಡಿದ್ದೇವೆ. ಮುಂದಿನದು ಸರ್ಕಾರದ ಕೆಲಸ ಎಂದರ್ಥವೇ.

” ಬ್ಯಾಂಕುಗಳು ತಮ್ಮ ಒಟ್ಟು ಠೇವಣಿಗಳಲ್ಲಿ ರಿಸರ್ವ್ ಬ್ಯಾಂಕಿನಲ್ಲಿ ಕಡ್ಡಾಯವಾಗಿ ಇಡಲೇಬೇಕಾದ ನಗದು ನಿಧಿ ಪ್ರಮಾಣವನ್ನು ನಾಲ್ಕು ಹಂತಗಳಲ್ಲಿ ಪ್ರತಿಯೊಂದರಲ್ಲಿ ಶೇ.೦.೨೫ರಂತೆ ಒಟ್ಟು ಶೇ.೧.೦ರಷ್ಟು ಕಡಿಮೆ ಮಾಡಿ ಶೇ.೩.೦ಕ್ಕೆ ನಿಲ್ಲಿಸಲಾಗುವುದು. ಗವರ್ನರ್ ಸಂಜೀವ ಮಲ್ಹೋತ್ರಾ ರವರ ಪ್ರಕಟಣೆಯ ಪ್ರಕಾರ ಈ ಕಡಿತಗಳು ಸೆಪ್ಟೆಂಬರ್ ೦೬, ಅಕ್ಟೋಬರ್೦೪, ನವೆಂಬರ್ ೦೧ ಮತ್ತು ನವೆಂಬರ್ ೨೯, ೨೦೨೫ರಂದು ಕಾರ್ಯರೂಪಕ್ಕೆ ಬರುತ್ತವೆ. ಈ ಕ್ರಮದಿಂದ ನವೆಂಬರ್ ೨೦೨೫ರ ಹೊತ್ತಿಗೆ ಒಟ್ಟು ೨.೫ ಲಕ್ಷ ಕೋಟಿ ರೂಪಾಯಿಗಳ ಬ್ಯಾಂಕ್ ಠೇವಣಿಗಳು ಅರ್ಥ ವ್ಯವಸ್ಥೆಗೆ ಸಾಲ ಕೊಡಲು ಲಭ್ಯವಾಗುತ್ತವೆ ಎಂದು ಗವರ್ನರ್ ಹೇಳುತ್ತಾರೆ.”

Tags:
error: Content is protected !!