Mysore
23
scattered clouds

Social Media

ಶುಕ್ರವಾರ, 11 ಜುಲೈ 2025
Light
Dark

ಫುಟ್‌ಬಾಲ್ ಮೂಲಕ ಸ್ಲಮ್ ಮಕ್ಕಳಿಗೆ ಬದುಕು ಕೊಡಿಸುವ ‘ಏಂಜಲ್’!

ಪಂಜು ಗಂಗೊಳ್ಳಿ

೫೦ರ ದಶಕದಲ್ಲಿ ಸಿಲ್ವೆಸ್ಟರ್ ಪೀಟರ್ರ ಕುಟುಂಬ ಚೆನ್ನೈಯಿಂದ ದೆಹಲಿಗೆ ನೆಲೆ ಬದಲಾಯಿಸಿತು. ಅವರ ಅಣ್ಣ ತಮ್ಮಂದಿರಿಗಾಗಲೀ, ಅಕ್ಕ ತಂಗಿಯರಿ ಗಾಗಲೀ ಅವರ ಮಾತೃಭಾಷೆ ತಮಿಳು ಬರುತ್ತಿರಲಿಲ್ಲ. ಅವರ ತಾಯಿ ತಮ್ಮ ಒಂದು ಮಗುವಾದರೂ ತಮಿಳು ಕಲಿಯಲಿ ಎಂಬ ಉದ್ದೇಶ ದಿಂದ ಕ್ರಿಶ್ಚಿಯನ್ ಕಾನ್ವೆಂಟಿನಲ್ಲಿ ಕಲಿಯುತ್ತಿದ್ದ ಸಿಲ್ವೆಸ್ಟರ್ರನ್ನು ಅಲ್ಲಿಂದ ಬಿಡಿಸಿ ‘ದೆಹಲಿ ತಮಿಳ್ ಎಜುಕೇಶನ್ ಅಸೋಸಿಯೇಶನ್’ಗೆ ಸೇರಿಸಿದರು.

ಆ ಶಾಲೆಯಲ್ಲಿ ಕಲಿಯಲು ಬರುತ್ತಿದ್ದ ಹೆಚ್ಚಿನ ಮಕ್ಕಳು ಅಕ್ಕಪಕ್ಕದ ಸ್ಲಮ್ಮುಗಳ, ಕಡು ಬಡ ಕುಟುಂಬಗಳಿಗೆ ಸೇರಿದವರಾಗಿದ್ದರು. ಸ್ನಾನ ಕಾಣದ ಮೈ, ಕೆದರಿದ ತಲೆಗೂದಲು, ಹರಿದ ಅಥವಾ ತೇಪೆ ಹಾಕಿದ ಬಟ್ಟೆ ಬರೆ, ಚಪ್ಪಲಿಯಿಲ್ಲದ ಕಾಲುಗಳನ್ನು ನೋಡಿ ಸಿಲ್ವೆಸ್ಟರ್ ಪೀಟರ್ಗೆ ಅದೇಕೆಂದು ಅರ್ಥವಾಗುತ್ತಿರಲಿಲ್ಲ. ಒಂದು ದಿನ ಸಿಲ್ವೆಸ್ಟರ್ ಅವರ ಸಹಪಾಠಿ ಹುಡುಗನೊಬ್ಬನ ಹುಟ್ಟಿದ ದಿನದಂದು ಪಾರ್ಟಿ ಕೊಡು ಎಂದು ಅವನನ್ನು ಕೇಳಿದರು. ಆದರೆ, ಆ ಹುಡುಗನಿಗೆ ‘ಪಾರ್ಟಿ’ ಎಂದರೆ ಏನೆಂದೇ ಅರ್ಥವಾಗಲಿಲ್ಲ. ಏಕೆಂದರೆ, ಚಿಂದಿ ಆಯುವ ಕುಟುಂಬದಿಂದ ಬಂದಿದ್ದ ಆ ಹುಡುಗ ಹಿಂದೆ ಯಾವತ್ತೂ ತನ್ನ ಜನ್ಮ ದಿನವನ್ನು ಆಚರಿಸಿಕೊಂಡಿರಲಿಲ್ಲ.

ಸಿಲ್ವೆಸ್ಟರ್ ಗೆ ತನ್ನ ಸಹಪಾಠಿಯ ಸ್ಥಿತಿಯ ಬಗ್ಗೆ ಬಹಳ ಬೇಸರ, ದುಃಖವಾಯಿತು. ಅಷ್ಟರವರೆಗೂ ಬಡತನವೆಂದರೆ ಏನೆಂಬುದರ ಅರಿವಿಲ್ಲದ ಅವರಿಗೆ ಅಂದು ಅದರ ನೇರ ಪರಿಚಯವಾಯಿತು. ಅದು ಅವರನ್ನು ಬಹಳವಾಗಿ ಕಾಡತೊಡಗಿತು. ಪ್ರತಿದಿನ ಮನೆಯಿಂದ ಒಳ್ಳೆಯ ಊಟ ತೆಗೆದುಕೊಂಡು ಹೋಗಿ ಶಾಲೆಯಲ್ಲಿ ಉಣ್ಣುತ್ತಿದ್ದ ಸಿಲ್ವೆಸ್ಟರ್ ಆ ದಿನದಿಂದ ತುಸು ಹೆಚ್ಚಿಗೆ ಊಟ ತೆಗೆದುಕೊಂಡು ಹೋಗಿ, ಇತರ ಮಕ್ಕಳೊಂದಿಗೆ ಹಂಚಿಕೊಂಡು ತಿನ್ನಲು ಶುರು ಮಾಡಿದರು. ತನ್ನ ತರಗತಿಯ ಬಡ ಮಕ್ಕಳಿಗೆ ಸಹಾಯ ಮಾಡುವ ಸಲುವಾಗಿ ಒಂದು ಮರದಡಿ ಕುಳಿತು ಒಂದು ಕಾರ್ಯಕ್ರಮವನ್ನು ಶುರು ಮಾಡಿ, ಅದಕ್ಕೆ ‘ಮೈ ಏಂಜಲ್ಸ್’ ಎಂದು ಹೆಸರಿಟ್ಟರು. ಆ ಕಾರ್ಯಕ್ರಮದಡಿ, ಬೇರೆ ಮಕ್ಕಳು ಸಿಲ್ವೆಸ್ಟರ್ ಜೊತೆ ಆಡಬೇಕಿದ್ದರೆ ಅವರು ಸ್ನಾನ ಮಾಡಿ ಬರಬೇಕಿತ್ತು; ಪೆನ್ಸಿಲ್ ಬೇಕಿದ್ದರೆ ಆ ಮಕ್ಕಳು ತಮ್ಮ ಉಗುರುಗಳನ್ನು ನೀಟಾಗಿ ಕತ್ತರಿಸಿಕೊಳ್ಳಬೇಕಿತ್ತು. ಹೀಗೇ ಮಾಡುತ್ತ ಸಿಲ್ವೆಸ್ಟರ್ ಆ ಮಕ್ಕಳಿಗೆ ನಿಧಾನವಾಗಿ ಸ್ವಚ್ಛತೆ, ಶಿಸ್ತು, ಆರೋಗ್ಯದ ಬಗ್ಗೆ ತಿಳಿವಳಿಕೆ ಹುಟ್ಟುವಂತೆ ಮಾಡಿದರು. ಅದರ ಜೊತೆಯಲ್ಲಿ, ಅವರಿಗೆ ಪಾಠವನ್ನೂ ಹೇಳಿಕೊಡುತ್ತಿದ್ದರು. ಮತ್ತು, ತನ್ನಿಂದಾದ ಇತರ ಸಹಾಯಗಳನ್ನು ಮಾಡುತ್ತಿದ್ದರು. ಆಗ ಅವರಿಗೆ ಕೇವಲ ೧೩ ವರ್ಷ ಪ್ರಾಯ.

ಕೆಲವು ದಿನಗಳಲ್ಲಿ, ಸಿಲ್ವೆಸ್ಟರ್ ತನ್ನ ಸಹಪಾಠಿ ಮಕ್ಕಳಿಗೆ ಸಹಾಯ ಮಾಡುತ್ತಿರುವ ವಿಚಾರ ಅವರ ಹೆತ್ತವರಿಗೆ ತಿಳಿಯಿತು. ಅವರು ಸಿಲ್ವೆಸ್ಟರ್ನ್ನು ತರಾಟೆಗೆ ತೆಗೆದುಕೊಂಡು ಆ ಕಾರ್ಯಕ್ರಮವನ್ನು ನಿಲ್ಲಿಸಿ, ತನ್ನ ಶಿಕ್ಷಣದ ಕಡೆ ಗಮನ ಕೊಡುವಂತೆ ಗದರಿಸಿದರು. ಆದರೆ, ಸಿಲ್ವೆಸ್ಟರ್ ತನ್ನ ಹೆತ್ತವರ ಕಣ್ಣು ತಪ್ಪಿಸಿ, ಬೆಳಿಗ್ಗೆ ಮೂರು ಗಂಟೆಗೆಲ್ಲ ಎದ್ದು, ಆ ಮರದಡಿ ಹೋಗಿ, ಆ ಮಕ್ಕಳಿಗೆ ಕಲಿಸುವುದು, ಸಹಾಯ ಮಾಡುವುದನ್ನು ಮುಂದುವರಿಸಿದರು. ಮುಂದೆ, ೨೦೦೯ ರಲ್ಲಿ ತಮ್ಮ ‘ಮೈ ಏಂಜಲ್ಸ್’ ಕಾರ್ಯಕ್ರಮವನ್ನು ‘ಮೈ ಏಂಜಲ್ಸ್ ಅಕಾಡೆಮಿ’ ಎಂಬ ಹೆಸರಲ್ಲಿ ರಿಜಿಸ್ಟರ್ ಮಾಡಿಸಿ, ಇಂದಿನವರೆಗೂ ಅದನ್ನು ಮುಂದುವರಿಸಿಕೊಂಡು ಬಂದಿದ್ದಾರೆ.

ಸಿಲ್ವೆಸ್ಟರ್ ಪೀಟರ್ ಕೇವಲ ೧೩ ವರ್ಷ ಪ್ರಾಯದವರಾಗಿದ್ದಾಗ ತನ್ನ ಬಡ ಸ್ನೇಹಿತರಿಗಾಗಿ ಶುರು ಮಾಡಿದ ‘ಮೈ ಏಂಜಲ್ಸ್ ಅಕಾಡೆಮಿ’ ಇಂದು ಫುಟ್ ಬಾಲ್ ಆಟದ ಮೂಲಕ ಸ್ಲಮ್ಮುಗಳಲ್ಲಿ ವಾಸಿಸುವ, ಚಿಂದಿ ಹೆಕ್ಕುತ್ತಿದ್ದ, ಭಿಕ್ಷೆ ಬೇಡುತ್ತಿದ್ದ, ಡ್ರಗ್ ವ್ಯಸನಿಗಳಾಗಿದ್ದ ನೂರಾರು ದಾರಿ ತಪ್ಪಿದ ಮಕ್ಕಳನ್ನು ಇಂದು ರಾಷ್ಟ್ರಮಟ್ಟದ ಫುಟ್ ಬಾಲ್ ಆಟಗಾರರನ್ನಾಗಿಸಿದೆ; ಬೇರೆ ಬೇರೆ ಉದ್ಯೋಗಗಳಲ್ಲಿ ಅವರನ್ನು ತೊಡಗಿಸಿದೆ. ಉದಾಹರಣೆಗೆ, ೧೮ ವರ್ಷಗಳ ಹಿಂದೆ ಸಂದೀಪ್ ಎಂಬ ಹುಡುಗ ಮೈ ಏಂಜಲ್ಸ್ ಅಕಾಡೆಮಿ ಸೇರಿದಾಗ ಚಿಂದಿ ಹೆಕ್ಕುತ್ತಿದ್ದ. ಮಾದಕ ದ್ರವ್ಯದ ವ್ಯಸನಿಯೂ ಆಗಿದ್ದ. ಬದುಕಿನ ಬಗ್ಗೆ ಸಂಪೂರ್ಣವಾಗಿ ಋಣಾತ್ಮಕ ಧೋರಣೆಯನ್ನು ಬೆಳೆಸಿಕೊಂಡಿದ್ದ. ಅದೇ ಸಂದೀಪ್ ಈಗ ಒಬ್ಬ ಯಶಸ್ವೀ ಬ್ಯಾಂಕರ್ ಆಗಿ ಬೆಳೆದು, ಗೌರವಯುತ ಬದುಕು ನಡೆಸುತ್ತಿದ್ದಾನೆ. ಅವನು ಮೈ ಏಂಜಲ್ಸ್ ಅಕಾಡೆಮಿಗೆ ನಿಯಮಿತ ವಾಗಿ ಬರುತ್ತಿರುವುದಲ್ಲದೆ, ತನ್ನ ಸಂಬಳದಲ್ಲಿ ೫೦% ನ್ನು ಅಕಾಡೆಮಿಯ ಮಕ್ಕಳ ನೆರವಿಗೆಂದು ಕೊಡುತ್ತಿದ್ದಾನೆ. ಮತ್ತು, ತನ್ನ ಜೀವಿತದ ಅವಧಿಯುದ್ದಕ್ಕೂ ಅದನ್ನು ಮುಂದುವರಿಸುವುದಾಗಿ ವಾಗ್ದಾನ ಮಾಡಿದ್ದಾನೆ.

ದೆಹಲಿಯ ವಿಕಾಸ್ ಪುರಿಯ ಒಂದು ಚಿಕ್ಕ ಕೋಣೆಯಲ್ಲಿ ಸಿಲ್ವೆಸ್ಟರ್ ಪೀಟರ್ ‘ಮೈ ಏಂಜಲ್ಸ್ ಅಕಾಡೆಮಿ’ಯನ್ನು ನಡೆಸುತ್ತಿದ್ದಾರೆ. ಫುಟ್ ಬಾಲ್ ಆಟದ ಮೂಲಕ ಅವರು ಸ್ಲಮ್ ಮಕ್ಕಳಿಗೆ ದೈಹಿಕ ಸ್ವಚ್ಛತೆ, ಪರಿಸರ ರಕ್ಷಣೆ, ಲೈಂಗಿಕ ಶಿಕ್ಷಣ, ಲಿಂಗ ಸಮಾನತೆ, ಶಿಕ್ಷಣ, ಜೀವನ ಕೌಶಲ ಮುಂತಾದ ಬದುಕಿನ ಪಾಠವನ್ನು ಕಲಿಸಿ ಹೇಳಿಕೊಡುತ್ತಿದ್ದಾರೆ. ಅದರ ಜೊತೆಯಲ್ಲಿ, ನೃತ್ಯ, ಪೇಂಟಿಂಗ್ ಮೊದಲಾದ ಕಲೆಗಳನ್ನೂ ಕಲಿಸುತ್ತಿದ್ದಾರೆ.

ಸುಮಾರು ೧೪೦ ಮಕ್ಕಳು ಫುಟ್ ಬಾಲ್ ಆಡುವ ಸಲುವಾಗಿ ಬೆಳಗಿನ ಜಾವ ನಾಲ್ಕು ಗಂಟೆಗೆ ಸೇರುತ್ತಾರೆ. ಇವರಲ್ಲಿ ಗಂಡು ಮತ್ತು ಹೆಣ್ಣು ಮಕ್ಕಳಿದ್ದಾರೆ. ಲಿಂಗ ಸಮಾನತೆ ‘ಮೈ ಏಂಜಲ್ಸ್ ಅಕಾಡೆಮಿ’ಯ ಪ್ರಮುಖ ವಿಚಾರಗಳಲ್ಲೊಂದು. ಎಲ್ಲರೂ ಸೇರಿ ತಾವು ಆಡುವ ಜಾಗವನ್ನು ಸ್ವಚ್ಛಗೊಳಿಸುತ್ತಾರೆ. ತಮ್ಮ ಪ್ರತಿನಿತ್ಯದ ಚಟುವಟಿಕೆ ಮತ್ತು ಅಭಿವೃದ್ಧಿಯನ್ನು ಲೆಡ್ಜರಲ್ಲಿ ಗುರುತಿಸುತ್ತಾರೆ. ಎಲ್ಲರೂ ರಾತ್ರಿ ಮಲಗುವ ಮುನ್ನ ಹಲ್ಲುಜ್ಜುವುದು ಕಡ್ಡಾಯ. ಗಂಡು ಹೆಣ್ಣು ಎಂಬ ಭೇದವಿಲ್ಲದೆ ಎಲ್ಲಾ ಮಕ್ಕಳಿಗೂ ಕೌನ್ಸಿಲಿಂಗ್ ಮಾಡಿ ಮಾನಸಿಕ ಸ್ಛೂರ್ತಿ ನೀಡಿ ಅವರೆಲ್ಲರೂ ಬದುಕಿನಲ್ಲಿ ಸರಿಯಾದ ದಾರಿಯಲ್ಲಿ ನಡೆಯುವಂತೆ ನೋಡಿಕೊಳ್ಳುತ್ತಾರೆ.

ಒಮ್ಮೆ ಅಕಾಡೆಮಿಯ ಒಬ್ಬ ಹುಡುಗನಿಗೆ ಅಪಘಾತವಾಗಿ ಆಸ್ಪತ್ರೆ ಸೇರಿದನು. ಆಗ ಉಳಿದೆಲ್ಲ ಮಕ್ಕಳು ಸರತಿಯಂತೆ ಆಸ್ಪತ್ರೆಗೆ ಹೋಗಿ ಅವನ ಯೋಗಕ್ಷೇಮ ವಿಚಾರಿಸಿದರು. ಅಷ್ಟೇ ಅಲ್ಲ, ಆಸ್ಪತ್ರೆಯಲ್ಲಿದ್ದ ಇತರ ರೋಗಿಗಳಿಗೂ ತಮ್ಮಿಂದಾದ ಸಹಾಯ ಮಾಡಿದರು. ಕೆಲವರು ಸಂಬಂಧಿಕರಿಲ್ಲದ ರೋಗಿಗಳಿಗೆ ಅವರಿಗೆ ಬೇಕಾದ ಸಣ್ಣಪುಟ್ಟ ವಸ್ತುಗಳನ್ನು ತಂದು ಕೊಟ್ಟರು; ಇನ್ನು ಕೆಲವರು ಆಧಾರವಿಲ್ಲದೆ ನಡೆಯಲಾರದ ರೋಗಿಗಳ ಕೈ ಹಿಡಿದು ನಡೆಸಿದರು; ಮತ್ತು ಕೆಲವರು ಅಶಕ್ತ ರೋಗಿಗಳು ಶೌಚಾಲಯಕ್ಕೆ, ವಾಶ್ ರೂಮಿಗೆ ಹೋಗಿ ಬರಲು ಸಹಕರಿಸಿದರು. ಹೀಗೆ ಆ ಮಕ್ಕಳು ಇಡೀ ಆಸ್ಪತ್ರೆಯ ಕಣ್ಮಣಿಗಳಾಗಿ ಎಲ್ಲರ ಮೆಚ್ಚುಗೆ ಗಳಿಸಿದರು.

ಮೈ ಏಂಜಲ್ಸ್ ಅಕಾಡೆಮಿಯ ಒಬ್ಬ ಹುಡುಗ ಪೂನಾದ ಲಿವರ್ಪೂಲ್ ಇಂಟರ್ನ್ಯಾಷನಲ್ ಫುಟ್ ಬಾಲ್ ಅಕಾಡೆಮಿಗೆ ಆಯ್ಕೆಯಾಗಿದ್ದನು. ಆದರೆ, ಆರ್ಥಿಕ ಮುಗ್ಗಟ್ಟಿನ ಕಾರಣಕ್ಕೆ ಹೋಗಲಾಗಲಿಲ್ಲ. ರಾಜಕುಮಾರ್ ಮತ್ತು ಆನಂದ ಎಂಬ ಇಬ್ಬರು ಹುಡುಗರು ಫ್ರಾನ್ಸಿನ ಎಫ್ಸಿ ಮೆಟ್ಸ್ ಕ್ಲಬ್ನಲ್ಲಿ ಫುಟ್ ಬಾಲ್ ತರಬೇತಿ ಪಡೆದು ಬಂದರು. ಮೂವರು ಮಕ್ಕಳು ‘ಬಾರ್ಸೆಲೋನಾ ಫುಟ್ ಬಾಲ್ ಕ್ಯಾಂಪ್’ ಲ್ಲಿ ಆಡಿ ಬಂದರು. ಒಂದು ಕಾಲದಲ್ಲಿ ರಸ್ತೆ ಬದಿಗಳಲ್ಲಿ ಚಿಂದಿ ಹೆಕ್ಕುತ್ತ, ಭಿಕ್ಷೆ ಬೇಡುತ್ತ, ಕಳ್ಳತನ ಮಾಡುತ್ತ, ಮಾದಕ ವಸ್ತುಗಳ ದಾಸರಾಗಿ ಬದುಕು ಕಳೆದುಕೊಳ್ಳುತ್ತಿದ್ದ ಈ ಮಕ್ಕಳು ಇಂದು ಉತ್ತಮ ಶಿಕ್ಷಣ ಪಡೆದು, ಬದುಕಿನಲ್ಲಿ ಧನಾತ್ಮಕ ಗುಣಗಳನ್ನು ಬೆಳೆಸಿಕೊಂಡು, ಫುಟ್ಬಾಲ್ ಆಟಗಾರರಾಗಿ ಬದಲಾಗಿರುವುದು ಒಂದು ಚಮತ್ಕಾರವೇ ಸೈ.

ಆದರೆ, ಈ ಚಮತ್ಕಾರ ಸಾಧಿಸಲು ಸಿಲ್ವೆಸ್ಟರ್ ಪೀಟರ್ ಅನುಭವಿಸಿದ ಕೋಟಲೆಗಳು ಒಂದೆರಡಲ್ಲ. ಮೊದಲಿಗೆ ಅವರ ತನ್ನ ಹೆತ್ತವರ ಅಸಮಾಧಾನವನ್ನು ಎದುರಿಸಬೇಕಾಯಿತು. ಮದುವೆಯಾದ ಹೆಂಡತಿಯಿಂದ ವಿಚ್ಛೇದನ ಪಡೆಯಬೇಕಾಯಿತು. ಅವರ ನೆರೆಹೊರೆಯ ಕೆಲವರು ಸ್ಲಮ್ ಮಕ್ಕಳು ರೋಗ, ಅಪರಾಧ ಮನೋಭಾವ ಹರಡುತ್ತಾರೆಂದು ಆರೋಪಿಸಿ, ಪೊಲೀಸರಿಗೆ ಲಂಚ ಕೊಟ್ಟು ಅವರ ಅಕಾಡೆಮಿಯನ್ನು ತೆರವು ಮಾಡುವ ಪ್ರಯತ್ನಿಸಿದರು. ಇನ್ನು ಕೆಲವು ಮೂಲಗಳಿಂದ ಜೀವ ಬೆದರಿಕೆಗಳು ಬಂದವು. ಎಲ್ಲಕ್ಕೂ ಮಿಗಿಲಾಗಿ, ನಿರಂತರವಾಗಿ ಆರ್ಥಿಕ ಅಡಚಣೆಯನ್ನು ಎದುರಿಸಬೇಕಾಯಿತು. ಇಷ್ಟೆಲ್ಲವನ್ನು ದಾಟಿ ಬಂದ ಮೇಲೆ ಮೈ ಏಂಜಲ್ಸ್ ಅಕಾಡೆಮಿ ಇಂದು ಭದ್ರವಾಗಿ ತಳವೂರಿದೆ. ಈಗ ೪೨ ವರ್ಷ ಪ್ರಾಯ ವಾಗಿರುವ ಸಿಲ್ವೆಸ್ಟರ್ ಪೀಟರ್ಗೆ ತನ್ನೆಲ್ಲ ಕೆಲಸಗಳಲ್ಲಿ ಬೆಂಬಲಿಸುವ ಒಬ್ಬಳು ಅನುರೂಪ ಹೆಂಡತಿಯೂ ದೊರಕಿದ್ದಾರೆ.

ದೆಹಲಿಯ ವಿಕಾಸ್ ಪುರಿಯ ಒಂದು ಚಿಕ್ಕ ಕೋಣೆಯಲ್ಲಿ ಸಿಲ್ವೆಸ್ಟರ್ ಪೀಟರ್ ‘ಮೈ ಏಂಜಲ್ಸ್ ಅಕಾಡೆಮಿ’ಯನ್ನು ನಡೆಸುತ್ತಿದ್ದಾರೆ. ಫುಟ್ ಬಾಲ್ ಆಟದ ಮೂಲಕ ಅವರು ಸ್ಲಮ್ ಮಕ್ಕಳಿಗೆ ದೈಹಿಕ ಸ್ವಚ್ಛತೆ, ಪರಿಸರ ರಕ್ಷಣೆ, ಲೈಂಗಿಕ ಶಿಕ್ಷಣ, ಲಿಂಗ ಸಮಾನತೆ, ಶಿಕ್ಷಣ, ಜೀವನ ಕೌಶಲ ಮುಂತಾದ ಬದುಕಿನ ಪಾಠವನ್ನು ಕಲಿಸಿ ಹೇಳಿಕೊಡುತ್ತಿದ್ದಾರೆ. ಅದರ ಜೊತೆಯಲ್ಲಿ, ನೃತ್ಯ, ಪೇಂಟಿಂಗ್ ಮೊದಲಾದ ಕಲೆಗಳನ್ನೂ ಕಲಿಸುತ್ತಿದ್ದಾರೆ.

Tags:
error: Content is protected !!