Mysore
25
overcast clouds
Light
Dark

ವಾರಕ್ಕೆ 70 ಗಂಟೆ ಕೆಲಸ : ʼಎನ್ನಾರೆನ್‌ʼ ಸಲಹೆ

ಪ್ರೊ.ಆರ್.ಎಂ.ಚಿಂತಾಮಣಿ

ಹಿರಿಯ ಇಂಜಿನಿಯ‌ರ್, ದೇಶದ ದೊಡ್ಡ ಸಾಫ್ಟ್‌ವೇರ್ ಕಂಪೆನಿಗಳಲ್ಲಿ ಒಂದಾದ ಇನ್ಫೋಸಿಸ್ ಸ್ಥಾಪಕರಲ್ಲಿ ಪ್ರಮುಖರಾದ ಮತ್ತು ಸಾಮಾಜಿಕ ಕಳಕಳಿಯುಳ್ಳ ಕನ್ನಡಿಗ . ನಾರಾಯಣಮೂರ್ತಿಯವರು ಇತ್ತೀಚೆಗೆ ಹೊಸ ಪೀಳಿಗೆಗೆ ಸಲಹೆಯೊಂದನ್ನು ಕೊಟ್ಟಿದ್ದಾರೆ. ಅದು ಬಹುತೇಕ ಎಲ್ಲ ಬೆಳೆಯುತ್ತಿರುವ ದೇಶಗಳಿಗೂ ಅನ್ವಯಿಸುತ್ತದೆ. ಅದರ ಬಗ್ಗೆ ಜಗತ್ತಿನಾದ್ಯಂತ ಎಲ್ಲ ವಲಯಗಳಲ್ಲೂ ಚರ್ಚೆಗಳು ಮುಂದುವರಿಯುತ್ತಿವೆ. ತಜ್ಞರಲ್ಲಿ ಭಿನ್ನಾಭಿಪ್ರಾಯಗಳೂ ವ್ಯಕ್ತವಾಗುತ್ತಿವೆ. ಇದಕ್ಕೊಂದು ತಾರ್ಕಿಕ ಅಂತ್ಯ ಕಾಣಬೇಕಾಗಿದೆ.

ಅವರು ಹೇಳಿದ್ದಿಷ್ಟು: ‘ಭಾರತದ ಮಾನವ ಸಂಪನ್ಮೂಲದ ಉತ್ಪಾದಕತೆ (Productivity) ಜಗತ್ತಿನಲ್ಲಿಯೇ ಅತಿ ಕಡಿಮೆ ಇರುವ ದೇಶಗಳಲ್ಲಿ ಒಂದಾಗಿದೆ. ನಾವು ಇದರಲ್ಲಿ ಸುಧಾರಣೆ ಮಾಡದಿದ್ದರೆ ಈಗಾಗಲೇ ದೊಡ್ಡ ಪ್ರಮಾಣದಲ್ಲಿ ಪ್ರಗತಿ ಸಾಧಿಸಿರುವ ದೇಶಗಳೊಡನೆ ನಾವು ಸ್ಪರ್ಧೆಗಿಳಿಯುವುದು ಸಾಧ್ಯವಿಲ್ಲ. ನಮಗೆಲ್ಲ ತಿಳಿದಿರುವಂತೆ ಎರಡನೇ ಮಹಾಯುದ್ಧದ ನಂತರ ಜರ್ಮನಿ ಮತ್ತು ಜಪಾನ್ ದೇಶಗಳಲ್ಲಿ ಯುವ ಜನತೆ ತಮ್ಮ ಅರ್ಥ ವ್ಯವಸ್ಥೆಗಳ ಪುನರ್ನಿರ್ಮಾಣಕ್ಕಾಗಿ ಮತ್ತು ಪ್ರಗತಿ ಮುಂದುವರಿಸಲು ಹೆಚ್ಚು ಸಮಯ ಕೆಲಸ ಮಾಡಲು ಮುಂದೆ ಬಂದಿದ್ದರು. ಆದ್ದರಿಂದ ನಮ್ಮ ಯುವ ಪೀಳಿಗೆಗೆ ನನ್ನ ವಿನಂತಿಯೇನೆಂದರೆ ಈ ನಮ್ಮ ದೇಶದ ಏಳಿಗೆಗಾಗಿ ವಾರಕ್ಕೆ 70 ಗಂಟೆ ಕೆಲಸ ಮಾಡಲು ಮುಂದೆ ಬರಬೇಕು’.

ಮೊದಲು ಮೂರ್ತಿಯವರ ಸಲಹೆಯನ್ನು ಸಕಾರಾತ್ಮಕ ದೃಷ್ಟಿಕೋನದಿಂದ ನೋಡೋಣ. ಅವರ ಮೊದಲ ಮಾತೇ ಉತ್ಪಾದಕತೆಯೊಂದಿಗೆ ಆರಂಭವಾಗುತ್ತದೆ. ಅವರ ಪ್ರಕಾರ ನಮ್ಮ ದೇಶದಲ್ಲಿ ದುಡಿಯುವವರ ಪ್ರತಿ ಗಂಟೆಯ ದುಡಿಮೆಯ ಉತ್ಪಾದಕತೆ ಕಡಿಮೆ ಇದ್ದು, ಇದೇ ದರದಲ್ಲಿ ಮುಂದು ವರಿಯುವುದಾದರೆ ಏರುಮುಖದಲ್ಲಿ ಶಕ್ತಿ ಮತ್ತು ಸಾಮರ್ಥ್ಯವಿರುವ ನಮ್ಮ ಯುವ ಪೀಳಿಗೆಯವರು ವಾರಕ್ಕೆ ಕನಿಷ್ಠ 70 ಗಂಟೆಗಳಷ್ಟಾದರೂ ದುಡಿದರೆ ನಮ್ಮ ದೇಶದ ಒಟ್ಟು ಉತ್ಪಾದಕತೆಯನ್ನು ಇತರೆ ದೇಶಗಳ ಮಟ್ಟಕ್ಕೆ ಒಯ್ದು ಅವರೊಡನೆ ಸ್ಪರ್ಧಿಸಬಹುದು ಎಂಬ ಅರ್ಥವಿರಬಹುದು ಅನಿಸುತ್ತದೆ. ಉತ್ಪಾದಕತೆಯು (ಒಬ್ಬ ದುಡಿಯುವವನ ಪ್ರತಿ ಗಂಟೆಯ ಉತ್ಪಾದನೆಯ ದರ ಹೆಚ್ಚಿದಂತೆಲ್ಲ ದುಡಿಮೆಯ ಅವಧಿಯನ್ನು ಕಡಿಮೆ ಮಾಡುತ್ತಾ ಹೋಗಬಹುದು ಎನ್ನುವ ಅಭಿಪ್ರಾಯವೂ ಇರಬಹುದು. ಒಟ್ಟಿನಲ್ಲಿ ನಮ್ಮ ದುಡಿಮೆ ಸ್ಪರ್ಧಾತ್ಮಕವಾಗಿರಬೇಕೆನ್ನುವುದು ಮುಖ್ಯ.

ಇಂದಿನ ಕೆಲಸದ ಸಮಯ ಮತ್ತು ಉತ್ಪಾದಕತೆ : ಇದೇ ವರ್ಷದ ಏಪ್ರಿಲ್ ತಿಂಗಳಲ್ಲಿ ವಿಶ್ವ ಕಾರ್ಮಿಕ ಸಂಸ್ಥೆ ಬಿಡುಗಡೆ ಮಾಡಿರುವ ಅಂಕಿ ಸಂಖ್ಯೆಗಳಂತೆ ನಮ್ಮ ದೇಶದಲ್ಲಿ ಒಬ್ಬ ವ್ಯಕ್ತಿ ಸರಾಸರಿ ವಾರಕ್ಕೆ 47.7 ಗಂಟೆ ಕೆಲಸ ಮಾಡುತ್ತಾನೆ. 163 ದೇಶಗಳ ಪಟ್ಟಿಯಲ್ಲಿ ಐದು ದೇಶಗಳು ಮಾತ್ರ ನಮಗಿಂತ ಹೆಚ್ಚು ಗಂಟೆಗಳ ಕೆಲಸ ಮಾಡುತ್ತವೆ. ಅವುಗಳಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್ (52.6 ಗಂಟೆ) ಮತ್ತು ಅತಿ ಸಣ್ಣ ಮತ್ತು ಕಡಿಮೆ ಜನಸಂಖ್ಯೆ ಹೊಂದಿರುವ ಭೂತಾನ್, ಕಾಂಗೊ, ಜಾಂಬಿಯಾ, ಲೆಸೊಥೊ ಇರುತ್ತವೆ. ಚೀನಾ ಸೇರಿದಂತೆ ಇತರ ಏಷ್ಯಾದ ದೇಶಗಳಲ್ಲಿ ವಾರಕ್ಕೆ ಸರಾಸರಿ 39.3 ರಿಂದ 46.1 ಗಂಟೆಗಳ ಕೆಲಸದ ಅವಧಿ ಇದೆ. ಶ್ರೀಮಂತ ದೇಶಗಳಲ್ಲಿ ವಾರಕ್ಕೆ 35 ಗಂಟೆಗಳ ಆಸುಪಾಸಿನಲ್ಲಿ ಕೆಲಸ ಮಾಡುತ್ತಾರೆ.

ಭಾರತದಲ್ಲಿಯ ವಿವರಗಳಿಗೆ ಬಂದರೆ ಸರ್ಕಾರಿ ನೌಕರರು, ಸೇವಾ ವಲಯದಲ್ಲಿರುವವರು ಮತ್ತು ಫ್ಯಾಕ್ಟರಿ ಕಾರ್ಮಿಕರು ವಾರಕ್ಕೆ 40 ಗಂಟೆಗಳಷ್ಟು ಕೆಲಸ ಮಾಡುತ್ತಿದ್ದಾರೆ. ಕೃಷಿ ವಲಯದಲ್ಲಿ ಕೆಲಸ ಮಾಡುವ ಬಹು ಸಂಖ್ಯೆಯ ಜನರು ವಾರಕ್ಕೆ 55ರಿಂದ 60 ಗಂಟೆಗಳ ಕೆಲಸ ಮಾಡುತ್ತಿರುವುದು ಕಂಡು ಬರುತ್ತದೆ. ಇದರಂತೆ ನಮ್ಮವರು ಈಗಾಗಲೇ ನಮ್ಮಂತೆ ತೀವ್ರವಾಗಿ ಬೆಳೆಯುತ್ತಿರುವ ದೇಶಗಳಿಗಿಂತ ಹೆಚ್ಚು ಅವಧಿ ದುಡಿಯುತ್ತಿರುವುದನ್ನು ಕಾಣಬಹುದು.

ಉತ್ಪಾದಕತೆಯ ವಿಷಯಕ್ಕೆ ಬಂದರೆ ಎರಡು ಮಾನದಂಡಗಳಿಂದ ಅದನ್ನು ಅಳೆಯಬಹುದು. ಒಂದು: ಪ್ರತಿ ವ್ಯಕ್ತಿ ತನ್ನ ಪ್ರತಿ ಗಂಟೆಯ ದುಡಿತದಿಂದ ಎಷ್ಟು ಆರ್ಥಿಕ ಮೌಲ್ಯವನ್ನು ಉತ್ಪಾದಿಸುತ್ತಾನೆ ಎಂಬುದು. ಇದನ್ನು ರಾಷ್ಟ್ರೀಯ ಒಟ್ಟಾದಾಯದ (ಜಿಡಿಪಿ) ಮೌಲ್ಯದಲ್ಲಿ ಅಳೆಯಬಹುದು. ಪ್ರತಿ ವ್ಯಕ್ತಿ ಪ್ರತಿ ಗಂಟೆ ಉತ್ಪಾದಿಸುವ ಜಿಡಿಪಿ ಲೆಕ್ಕದಲ್ಲಿ. ಇನ್ನೊಂದು: ಒಬ್ಬ ವ್ಯಕ್ತಿಯ ಪ್ರತಿ ಗಂಟೆಯ ದುಡಿಮೆಯಿಂದ ಜಿಡಿಪಿ ವರ್ಷದಿಂದ ವರ್ಷಕ್ಕೆ ಎಷ್ಟು ಹೆಚ್ಚಾಯಿತು ಎಂಬುದನ್ನು ಪ್ರತಿಶತ (ಶೇಕಡಾವಾರು) ಪ್ರಮಾಣದಲ್ಲಿ ಹೆಚ್ಚಾದುದನ್ನು ಅಥವಾ ಕಡಿಮೆಯಾದುದನ್ನು ಲೆಕ್ಕ ಹಾಕುವುದು. ವಿಶ್ವ ಕಾರ್ಮಿಕ ಸಂಸ್ಥೆ ಎರಡನ್ನೂ ಲೆಕ್ಕ ಹಾಕಿದೆ.

ಮೊದಲನೆಯದನ್ನು 2015ರ ವಿಶ್ವ ಜಿಡಿಪಿ ಆಧಾರದ ಮೇಲೆ ಆಯಾ ದೇಶಗಳ ನಾಣ್ಯಗಳ ಕೊಳ್ಳುವ ಸಾಮರ್ಥ್ಯ (ವಿಶ್ವಪೇಟೆಯಲ್ಲಿ)ವನ್ನಾಧರಿಸಿ ಅಮೆರಿಕನ್ ಡಾಲರ್‌ಗಳಲ್ಲಿ ಲೆಕ್ಕ ಹಾಕಲಾದ ಅಂಕಿಸಂಖ್ಯೆಗಳು ಲಭ್ಯವಿವೆ. ಅದೇ ರೀತಿ ಎರಡನೆಯದನ್ನೂ ಲೆಕ್ಕಹಾಕಿದ ವಾರ್ಷಿಕ ಬೆಳವಣಿಗೆಯ ಪ್ರಮಾಣಗಳೂ ಶೇಕಡಾವಾರು ರೂಪದಲ್ಲಿ ದೊರೆಯುತ್ತವೆ.

ಅದರಂತೆ ಭಾರತದಲ್ಲಿ ಒಬ್ಬ ದುಡಿಯುವವನ ಸರಾಸರಿ ಒಂದು ಗಂಟೆಯ ಜಿಡಿಪಿ ಉತ್ಪಾದನೆ 2021ರಲ್ಲಿ 8.47 ಡಾಲರ್ ಇತ್ತು. ಈ ಮಾನದಂಡದಂತೆ ನಾವು 189 ದೇಶಗಳ ಪಟ್ಟಿಯಲ್ಲಿ 131ನೇ ಸ್ಥಾನದಲ್ಲಿದ್ದೇವೆ. ನಾವು ಹೆಚ್ಚಾಗಿ ವ್ಯವಹರಿಸುವ ದೇಶಗಳಾದ ವಿಯೇಟ್ನಾಂ, ಫಿಲಿಪೈನ್ಸ್, ಇಂಡೊನೇಶಿಯಾ, ಚೀನಾ, ಮೆಕ್ಸಿಕೊ ಮತ್ತು ಮಲೇಷಿಯಾಗಳಲ್ಲಿ ಈ ಸಂಖ್ಯೆಯು ಅನುಕ್ರಮವಾಗಿ 10.22 9, 10.07 geg, 12.96 9, 13.35 99, 20.23 ಡಾಲರ್ ಮತ್ತು 25.59 ಡಾಲರ್ ಇರುತ್ತದೆ.

ವಾರ್ಷಿಕ ಬೆಳವಣಿಗೆಯ ದೃಷ್ಟಿಯಿಂದಲೂ ನಾವು ಹಿಂದೆ ಇದ್ದೇವೆ. 2022ರಲ್ಲಿ ನಮ್ಮ ಉತ್ಪಾದಕತೆಯ ಬೆಳವಣಿಗೆಯು ಶೇ.3.1 ಇದ್ದರೆ ಅದು ಚೀನಾದಲ್ಲಿ ಶೇ.3.4, ಕಾಂಬೋಡಿಯಾದಲ್ಲಿ ಶೇ.3.6 ಇತ್ತು. ನಮ್ಮ ಪಕ್ಕದ ಬಾಂಗ್ಲಾದೇಶದಲ್ಲಿ ಶೇ.4.1 ಇತ್ತು. ಇತರ ಪ್ರಮುಖ ದೇಶಗಳು ನಮಗಿಂತ ಹೆಚ್ಚು ಉತ್ಪಾದಕತೆಯನ್ನು ಹೊಂದಿವೆ ಎಂಬುದನ್ನು ಬೇರೆ ಹೇಳಬೇಕಿಲ್ಲ. ಕೋವಿಡ್-19 ಸಾಂಕ್ರಾಮಿಕ ರೋಗದ ಅವಧಿಯಲ್ಲಿ ನಮ್ಮಲ್ಲಿಯ ಉತ್ಪಾದಕತೆ ಗಣನೀಯವಾಗಿ ಕುಸಿದಿದ್ದೂ ಇದಕ್ಕೆ ಕಾರಣವಿರಬಹುದು.

ಮುಂದಿನ ಸವಾಲುಗಳು: ಮೊದಲು ಮಾಡಬೇಕಾದ ಕೆಲಸವೆಂದರೆ ಉತ್ಪಾದಕತೆ ಹೆಚ್ಚಿಸುವುದು. ಅದಕ್ಕಾಗಿ ಸಂಶೋಧನೆಯಲ್ಲಿ ಹೆಚ್ಚು ಹೂಡಿಕೆಗಳನ್ನು ಮಾಡುವುದಲ್ಲದೆ ಅದರ ಪರಿಣಾಮಗಳು ಆರ್ಥಿಕ ಚಟುವಟಿಕೆಗಳಲ್ಲಿ ಅನ್ವಯವಾಗುವಂತೆ ಉತ್ಪಾದನೆ ಮತ್ತು ಉತ್ಪಾದಕತೆ ಎರಡೂ ಹೆಚ್ಚಾಗುವಂತೆ ಮಾಡಬೇಕಾದದ್ದು ಅತ್ಯವಶ್ಯ.

ಎರಡನೆಯದಾಗಿ ಕೌಶಲಾಭಿವೃದ್ಧಿ ಎಲ್ಲ ರಂಗಗಲ್ಲೂ ಎಲ್ಲ ವಯಸ್ಸಿನವರಿ ಬೇಕೇಬೇಕು. ಹೊಸ ಕೌಶಲಗಳಲ್ಲದೆ ಒಬ್ಬರಿಗೆ ಎರಡಕ್ಕಿಂತ ಹೆಚ್ಚು ಕೌಶಲಗಳನ್ನು ಕಲಿಸಬೇಕು. ಮಾನವ ಸಂಪನ್ಮೂಲ ಯಾವಾಗಲೂ ಹೊಸತನ ಹೊಂದಿರಬೇಕು.

ಮೂರನೆಯದಾಗಿ ಕಾರ್ಮಿಕ ರಂಗದಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಕಡಿಮೆ ಇದ್ದು, ಈ ಪ್ರಮಾಣ ಹೆಚ್ಚುವಂತೆ ಮಹಿಳಾ ಉದ್ಯೋಗಿಗಳಿಗೆ ಉತ್ತೇಜನ ಕೊಡಬೇಕು. ಕೃಷಿಯಲ್ಲಿ ಹೆಚ್ಚು ಜನರು ತೊಡಗಿಸಿಕೊಂಡಿದ್ದು, ಅವರ ಉತ್ಪಾದಕತೆ ಕಡಿಮೆ ಇದೆ. ಅಲ್ಲಿಂದ ಹೆಚ್ಚು ಜನ ಉದ್ಯಮಗಳಿಗೆ ಮತ್ತು ಸೇವಾ ವಲಯಗಳಿಗೆ ಬರುವಂತೆ ಮಾಡಬೇಕು. ಕೆಲವು ವಲಯಗಳಲ್ಲಿ ಸಂಬಳ ಕೂಲಿಗಳು ಹೆಚ್ಚಾಗಬೇಕಿದೆ. ಅಸಂಘಟಿತ ವಲಯವು ಕಡಿಮೆಯಾಗಿ ಅವರೆಲ್ಲ ಹೆಚ್ಚು ಉತ್ಪಾದಕ ವಲಯಗಳಿಗೆ ಬರಬೇಕು.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ