Mysore
22
broken clouds
Light
Dark

ಇದು ಪೂರ್ಣ ಪ್ರಮಾಣದ ಗ್ಯಾರಂಟಿ ಬಜೆಟ್| ನಮ್ಮ ಭರವಸೆಗಳು ಬಿಜೆಪಿ ಸರ್ಕಾರಕ್ಕಿಂತ ಭಿನ್ನ: ಸಿಎಂ

ಬೆಂಗಳೂರು: ನಾನು ಪೂರ್ಣ ಪ್ರಮಾಣದ 3,27,747 ಕೋಟಿ ರೂಪಾಯಿ ಗಾತ್ರದ ಬಜೆಟ್ ಮಂಡಿಸಿದ್ದೇನೆ. ಇದು ನಮ್ಮ ಗ್ಯಾರಂಟಿ ಬಜೆಟ್. ನಾವು ಕೊಟ್ಟ ಮಾತಿನಂತೆ 5 ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡುತ್ತಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಹೇಳಿದ್ದಾರೆ.

ಇಂದು ವಿಧಾನಸಭೆಯಲ್ಲಿ 2023-24ನೇ ಸಾಲಿನ ಬಜೆಟ್ ಮಂಡಿಸಿದ ಬಳಿಕ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಸಿಎಂ, ಚುನಾವಣಾ ಪೂರ್ವದಲ್ಲಿ ನಾವು ನೀಡಿದ್ದ 5 ಗ್ಯಾರೆಂಟಿಗಳಿಗೆ ಅನುದಾನ ಒದಗಿಸುವ ಮೂಲಕ ನುಡಿದಂತೆ ನಡೆದಿದ್ದೇವೆ. ರಾಜ್ಯವನ್ನು ಅಭಿವೃದ್ಧಿ ಪಥದಲ್ಲಿ ಮುನ್ನಡೆಸುವ ಸಮತೋಲಿತ ಹಾಗೂ ದೂರದೃಷ್ಟಿಯ ಬಜೆಟ್ ಅನ್ನು ನಾಡಿನ ಜನತೆಗೆ ಅರ್ಪಿಸುತ್ತಿದ್ದೇನೆ ಎಂದರು.

ಬಜೆಟ್​ನಲ್ಲೂ 5 ಗ್ಯಾರಂಟಿ ಯೋಜನೆಗಳಿಗೆ ಹಣ ಒದಗಿಸಿದ್ದೇವೆ. ರಾಜ್ಯ ಆರ್ಥಿಕವಾಗಿ ದಿವಾಳಿ ಆಗದಂತೆ ನೋಡಿಕೊಂಡಿದ್ದೇವೆ. 1.30 ಕೋಟಿ ಕುಟುಂಬದ ಯಜಮಾನಿಗೆ ‘ಗೃಹಲಕ್ಷ್ಮೀ’ ಹಣ ನೀಡುತ್ತೇವೆ. ಜುಲೈ 16ರಿಂದ ಗೃಹಲಕ್ಷ್ಮೀ ಯೋಜನೆಗೆ ನೋಂದಣಿ ಪ್ರಾರಂಭವಾಗಲಿದೆ. ಆಗಸ್ಟ್​ನಿಂದ ಮನೆ ಯಜಮಾನಿ ಖಾತೆಗೆ 2 ಸಾವಿರ ರೂ. ಹಾಕುತ್ತೇವೆ. ಆಗಸ್ಟ್​​ 15 ಅಥವಾ 16ರಂದು ಮನೆ ಯಜಮಾನಿ ಖಾತೆಗೆ ಹಣ ಹಾಕಲಾಗುವುದು ಎಂದರು.

ನಮ್ಮ ಭರವಸೆಗಳು ಈ ಹಿಂದಿನ ಬಿಜೆಪಿ ಸರ್ಕಾರಕ್ಕಿಂತ ಭಿನ್ನವಾಗಿವೆ. ಅವರು ಬಡವರಿಗೆ ನೀಡುತ್ತಿದ್ದ ಏಳು ಕೆಜಿ ಅಕ್ಕಿಯನ್ನು 5 ಕೆಜಿಗೆ ಇಳಿಸಿದ್ದರು. ಹೀಗಾಗಿ ನಾವು 10 ಕೆಜಿ ಉಚಿತ ನೀಡುವುದಾಗಿ ನಮ್ಮ ಪ್ರಣಾಳಿಕೆಯಲ್ಲಿ ಘೋಷಿಸಿದ್ದೇವು. ಐದು ಗ್ಯಾರಂಟಿ ಯೋಜನೆಗಳಿಂದ ರಾಜ್ಯ ಸರ್ಕಾರಕ್ಕೆ ವರ್ಷಕ್ಕೆ 52 ಸಾವಿರ ಕೋಟಿ ರೂಪಾಯಿ ಹೆಚ್ಚುವರಿ ಹೊರೆಯಾಗಲಿದೆ. ಆದರೆ ಈ ಗ್ಯಾರಂಟಿ ಯೋಜನೆಗಳಿಂದ 1.3 ಕೋಟಿ ಕುಟುಂಬಗಳಿಗೆ ಲಾಭವಾಗಲಿದೆ ಎಂದರು.

ಸಾಲ ಜಿಡಿಪಿಯ ಶೇ. 25ರ ಒಳಗೆ ಇರಬೇಕು. ಆದರೆ ನಮ್ಮ ರಾಜ್ಯ ಸರ್ಕಾರದ ಸಾಲ ಶೇ. 23 ಇದೆ ಎಂದು ಸಿಎಂ ಸಿದ್ದರಾಮಯ್ಯ ಅವರು ವಿವರಿಸಿದ್ದಾರೆ.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ