- ತಕ್ಷಣವೇ ನೈಸ್ ರಸ್ತೆ ಟೋಲ್ ಸಂಗ್ರಹಕ್ಕೆ ತಡೆ ಹಾಕಬೇಕು ಎಂದು ಕೇಂದ್ರ ಸಚಿವರ ಅಗ್ರಹ
- ಹೈಕೋರ್ಟ್ ಅಭಿಪ್ರಾಯದಂತೆ ನೈಸ್ ಯೋಜನೆಯನ್ನು ಸರಕಾರ ಸ್ವಾಧೀನಕ್ಕೆ ಪಡೆಯಬೇಕು
ಬೆಂಗಳೂರು : ಕಳೆದ ತಿಂಗಳ ಅಂತ್ಯದಲ್ಲಿ ಬೆಂಗಳೂರು– ಮೈಸೂರು ಇನ್‌ಪ್ರಾಸ್ಟ್ರಕ್ಚರ್ ಕಾರಿಡಾರ್ ಯೋಜನೆ (BMICP) ಅಕ್ರಮಗಳ ಬಗ್ಗೆ ರಾಜ್ಯ ಹೈಕೋರ್ಟ್ ಕಟುವಾದ ಅಭಿಪ್ರಾಯ ದಾಖಲು ಮಾಡಿದ್ದ ಬೆನ್ನಲ್ಲೇ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಪತ್ರ ಬರೆದಿರುವ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು, ಇಡೀ ಯೋಜನೆಯನ್ನು ರಾಜ್ಯ ಸರಕಾರ ಸ್ವಾಧೀನ ಮಾಡಿಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.ise
ಮುಖ್ಯಮಂತ್ರಿಗೆ ಏಳು ಪುಟಗಳ ಸುದೀರ್ಘ ಪತ್ರ ಬರೆದಿರುವ ಕೇಂದ್ರ ಸಚಿವರು; ಪ್ರಮುಖವಾಗಿ ಎರಡು ಒತ್ತಾಯಗಳನ್ನು ಮಾಡಿದ್ದಾರೆ.
ರಾಜ್ಯ ಹೈಕೋರ್ಟ್, ಸುಪ್ರೀಂ ಕೋರ್ಟ್ ತೀರ್ಪುಗಳಲ್ಲಿ ನೀಡಿರುವ ನಿರ್ದೇಶನಗಳಂತೆ ಹಾಗೂ ವಿಧಾನಸಭೆ ಸದನ ಸಮಿತಿ ಮತ್ತು ಸಚಿವ ಸಂಪುಟದ ಉಪ ಸಮಿತಿಗಳ ಶಿಫಾರಸುಗಳಲ್ಲಿ ದಾಖಲಿಸಿರುವಂತೆ ನೈಸ್ ಸಂಸ್ಥೆ ರಸ್ತೆ ಯೋಜನೆ ಅನುಷ್ಠಾನದಲ್ಲಿ ಚೌಕಟ್ಟು ಒಪ್ಪಂದ (Frame Work Agreement-FWA) ಮತ್ತು ಯೋಜನಾ ತಾಂತ್ರಿಕ ಒಪ್ಪಂದ (Project Technical Agreement-PTA) ಗಳಲ್ಲಿರುವ ನಿಬಂಧನೆ ಮತ್ತು ಷರತ್ತುಗಳನ್ನು ಸ್ಪಷ್ಟವಾಗಿ ಉಲ್ಲಂಘಸಿರುವ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಕೂಡಲೇ ಕಠಿಣ ಕ್ರಮ ವಹಿಸಬೇಕು ಎಂದು ಕೇಂದ್ರ ಸಚಿವರು ಆಗ್ರಹಿದ್ದಾರೆ.
ನೈಸ್ ಸಂಸ್ಥೆ ಅನಧಿಕೃತವಾಗಿ ಸಂಗ್ರಹಿಸುತ್ತಿರುವ ಟೋಲ್ ಅನ್ನು ತತ್‌ಕ್ಷಣ ಜಾರಿಗೆ ಬರುವಂತೆ ನಿಷೇಧಿಸಬೇಕು ಹಾಗೂ ಒಂದು ಶಾಸನವನ್ನು ರಚಿಸುವ ಮೂಲಕ ನೈಸ್ ರಸ್ತೆ ಯೋಜನೆಯನ್ನು ರಾಜ್ಯ ಸರಕಾರ ಸ್ವಾಧೀನ ಮಾಡಿಕೊಳ್ಳಬೇಕು ಎಂದು ಸಚಿವ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಒತ್ತಾಯಿಸಿದ್ದಾರೆ.
ಅಲ್ಲದೆ ತಮ್ಮ ಪತ್ರದಲ್ಲಿ ಕೆಲ ಮಹತ್ವದ ಅಂಶಗಳನ್ನು ಪ್ರಸ್ತಾಪ ಮಾಡಿದ್ದಾರೆ.
ಹೈಕೋರ್ಟ್ ವಿಭಾಗೀಯ ಪೀಠ ತನ್ನ ತೀರ್ಮಾನದಲ್ಲಿ ಉಲ್ಲೇಖಿಸಿರುವಂತೆ; 2003 ಮತ್ತು 2009ರಲ್ಲಿ ರೈತರಿಂದ ಭೂಮಿ ಸ್ವಾಧೀನ ಮಾಡಿಕೊಂಡಿದ್ದರೂ ಈವರೆಗೂ ರೈತರಿಗೆ ಸಲ್ಲಬೇಕಾಗಿರುವ ಭೂ ಪರಿಹಾರ ನಿಗದಿಪಡಿಸಿರುವುದಿಲ್ಲ. ಯೋಜನೆ ಅನುಷ್ಠಾನಕ್ಕೆ ಹಲವಾರು ಅಡ್ಡಿ – ಆತಂಕಗಳು ಅಡ್ಡಿ ಬಂದರೂ ವಿವಿಧ ಪ್ರಕರಣಗಳಲ್ಲಿ [State of Karnataka V/S All India Manufacturers Organization (2006) ಮತ್ತು M. Naga Bhushan V/S State of Karnataka (2011)] ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪುಗಳ ಅನ್ವಯ ಭೂಸ್ವಾಧೀನ ಪ್ರಕ್ರಿಯೆಗಳು ಅಂದಿಗೆ ಅಂತ್ಯಗೊಂಡಿವೆ ಮತ್ತು ನೈಸ್ ಯೋಜನೆಯು ಸಹ ಅಂತಿಮ ರೂಪ ಪಡೆದುಕೊಂಡಿದೆ. ಸುಪ್ರೀಂ ಕೋರ್ಟ್‌ನ ಆದೇಶಗಳಲ್ಲಿ ಭೂಸ್ವಾದೀನ ಮತ್ತು ಚೌಕಟ್ಟು ಒಪ್ಪಂದ ಮತ್ತು ತಾಂತ್ರಿಕ ಒಪ್ಪಂದ ಅನುಷ್ಠಾನದಲ್ಲಿ ನೈಸ್ ಸಂಸ್ಥೆಯು ಎಸಗಿರುವ ಅನೇಕ ಅಕ್ರಮ ಮತ್ತು ಅವ್ಯವಹಾರಗಳನ್ನು ಬಯಲಿಗೆ ಎಳೆಯಲಾಗಿದೆ ಎಂಬುದನ್ನು ಸಚಿವರು ತಮ್ಮ ಪತ್ರದಲ್ಲಿ ಉಲ್ಲೇಖ ಮಾಡಿದ್ದಾರೆ.
ಮಾಜಿ ಸಚಿವರಾದ ಟಿ.ಬಿ. ಜಯಚಂದ್ರ ಅವರ ನೇತೃತ್ವದ ಸದನ ಸಮಿತಿಯು ನೀಡಿದ್ದ ವರದಿಯಲ್ಲಿ ನೈಸ್ ಯೋಜನೆ ಅಕ್ರಮಗಳನ್ನು ಎಳೆಎಳೆಯಾಗಿ ಬಿಡಿಸಿಡಲಾಗಿದೆ. 12-12-2016ರಲ್ಲಿ ನೀಡಿರುವ ಸದನ ಸಮಿತಿ ವರದಿಯಲ್ಲಿ ಅಡಕವಾಗಿರುವ ಕ್ರೂಢೀಕೃತ ಶಿಫಾರಸ್ಸುಗಳು ಬಗ್ಗೆ ಕುಮಾರಸ್ವಾಮಿ ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಯೋಜನೆ ಅನುಷ್ಠಾನಕ್ಕೆ ಭೂಸ್ವಾಧೀನ ಮಾಡಿಕೊಂಡ ಜಮೀನುಗಳನ್ನು ಉದ್ದೇಶಿತ ಉದ್ದೇಶಕ್ಕೆ ಬಳಸಬೇಕೆ ಹೊರತು ಯೋಜನಾ ಸಂಸ್ಥೆ ಈ ಜಮೀನುಗಳನ್ನು ಅನ್ಯ ಉದ್ದೇಶಕ್ಕೆ ಬಳಸಿಕೊಂಡಿದೆ. ಭೂಸ್ವಾಧೀನ ಕಾಯ್ದೆ ಪ್ರಕಾರ ಒಂದು ಬಾರಿ ಸರಕಾರ ಪ್ರಾಥಮಿಕ ಅಧಿಸೂಚನೆ ಹೊರಡಿಸಿದ ನಂತರ ಭೂಮಾಲೀಕರು ಮತ್ತು ರೈತರು ಯಾವುದೇ ರೀತಿ ಅಭಿವೃದ್ದಿ ಕಾರ್ಯಗಳನ್ನು ಕೈಗೊಳ್ಳುವಂತಿಲ್ಲ. ಒಂದು ವೇಳೆ ಕೈಗೊಂಡರೆ ಅಂತಹ ಅಭಿವೃದ್ದಿ ಕಾರ್ಯಗಳಿಗೆ ರೈತರಿಗೆ ಮತ್ತು ಭೂಮಾಲೀಕರು ಪರಿಹಾರ ಪಡೆಯಲು ಕಾಯ್ದೆಯಲ್ಲಿ ಅವಕಾಶ ಇರುವುದಿಲ್ಲ. ಈ ರೀತಿಯ ರಾಜ್ಯ ಸರ್ಕಾರದ ಕಾರ್ಯವೈಖರಿ ಭಾದಿತರನ್ನು ತ್ರಿಶಂಕುವಿನಲ್ಲಿ ನಿಲ್ಲಿಸಿದೆ.
ನೈಸ್ ಸಂಸ್ಥೆಯ ಟೋಲ್ ರೋಡ್ ನಿರ್ಮಾಣಕ್ಕೆ 6999 ಎಕರೆ ಹಾಗೂ ಐದು ಟೌನ್‌ಶಿಪ್ ನಿರ್ಮಾಣಕ್ಕೆ 13237 ಎಕರೆ ಸೇರಿ ಒಟ್ಟು 20193 ಎಕರೆ ಭೂಮಿಯನ್ನು ಚೌಕಟ್ಟು ಒಪ್ಪಂದದಂತೆ ಸರ್ಕಾರದಿಂದ ಪಡೆಯಬೇಕು. ಆದರೆ ಈ ಸಂಸ್ಥೆ ಸುಪ್ರಿಂ ಕೋರ್ಟ್‌ನಲ್ಲಿ ಹೂಡಿದ ನ್ಯಾಯಾಂಗ ನಿಂದನೆ ಅರ್ಜಿ
ಕಾರಣಕ್ಕಾಗಿ ಒಪ್ಪಂದಗಳ ನಡುವೆ ವ್ಯತ್ಯಾಸವಾಗಿ ನಮೂದು ಆಗಿರುವ ವಿಸ್ತೀರ್ಣವನ್ನು ದಾಖಲಿಸಿ ಮಂಜೂರಾತಿ ಕೇಳಿತು ಮತ್ತು ಚೌಕಟ್ಟು ಒಪ್ಪಂದದಲ್ಲಿ ನಮೂದು ಆಗಿರುವ 20193 ಎಕರೆಗೆ ಸೀಮಿತವಾಗುವುದಾಗಿ ಹೇಳಿ, ಟೌನ್‌ಶಿಪ್‌ಗಳಿಗೆ ನಿಗದಿಯಾಗಿದ್ದ 13194 ಎಕರೆಗಳ ಪೈಕಿ 2469.86 ಎಕರೆ ಭೂಮಿಯನ್ನು ಟೋಲ್ ರಸ್ತೆಗೆ ಸೇರಿಸಿ ಒಟ್ಟು 9448.86 ಎಕರೆ ಜಮೀನು ಟೋಲ್ ರಸ್ತೆಗೆ ಅವಶ್ಯವೆಂದು ವಾದಿಸಿದೆ. ಸಂಸ್ಥೆಯ ಇಂತಹ ಕ್ರಮಗಳು ಚೌಕಟ್ಟು ಒಪ್ಪಂದ ಮತ್ತು ತಾಂತ್ರಿಕ ಒಪ್ಪಂದಗಳ ನಿಬಂಧನೆ ಮತ್ತು ಷರತ್ತುಗಳ ಸಂಪೂರ್ಣ ಉಲ್ಲಂಘನೆಯಾಗಿದೆ.
ನೈಸ್ ಸಂಸ್ಥೆ 5 ಟೌನ್‌ಶಿಪ್‌ಗಳನ್ನು ಹೊರತುಪಡಿಸಿ ಈ ಯೋಜನೆಗೆ ಜಮೀನು ಕಳೆದುಕೊಂಡ ಭೂಮಾಲೀಕರಿಗೆ ಕೊಮ್ಮಘಟ್ಟದಲ್ಲಿ 42 ಎಕರೆ 32 ಗುಂಟೆ ಪ್ರದೇಶದಲ್ಲಿ ವಸತಿ ಸಮುಚ್ಚಯ ನಿರ್ಮಿಸುವ ಪ್ರಸ್ತಾವ ಇಟ್ಟಿತ್ತು. ಆದರೆ ಪ್ರಸ್ತಾವಿತ ಭೂಮಿ ಟೋಲ್ ರೋಡ್‌ನ ಭಾಗವಾಗಿತ್ತು ಮತ್ತು ಹೂಡಿಕೆಯಿಂದ ಹೊರಗೆ ಉಳಿದಿತ್ತು. ಈ ಪ್ರಸ್ತಾವನೆಯನ್ನು BMICPA (Benagaluru – Mysore Infrastructure Project Planning Authority) ತಿರಸ್ಕರಿಸಿದೆ. ಇದರಿಂದಾಗಿ ಭೂಮಿ ಕಳೆದುಕೊಂಡವರು ಮತ್ತು ನಿವೇಶನರಹಿತರು ವಸತಿಹೀನರಾಗಿ ಇದುವರೆಗೂ ಸೂರು ಪಡೆದುಕೊಂಡಿಲ್ಲ.
ರಾಜ್ಯ ಹೈಕೋರ್ಟ್‌ನ ವಿಭಾಗೀಯ ಪೀಠ 29-07-2026ರ ತನ್ನ ತೀರ್ಪಿನಲ್ಲಿ ಬೆಂಗಳೂರು-ಮೈಸೂರು ಇನ್‌ಸ್ಪ್ರಾಸ್ಟ್ರಕ್ಚರ್ ಯೋಜನೆ ಅನುಷ್ಠಾನದಲ್ಲಿ, ನೈಸ್ ಸಂಸ್ಥೆ, ಕೆಐಎಡಿಬಿ ಮತ್ತು ರಾಜ್ಯ ಸರ್ಕಾರಗಳ ಕಾರ್ಯವೈಖರಿ, ನಡವಳಿಕೆ ಮತ್ತು ನೈಸ್ ಸಂಸ್ಥೆಯ ಅಕ್ರಮ ಮತ್ತು ಅವ್ಯವಹಾರಗಳಲ್ಲಿ ಇವರೆಲ್ಲರೂ ಸಹಭಾಗಿಗಳೆಂದು ತೀವ್ರವಾಗಿ ಟೀಕಿಸಿದೆ ಎಂಬ ಅಂಶವನ್ನು ಸಚಿವರು ಉಲ್ಲೇಖ ಮಾಡಿದ್ದಾರೆ.
ಸರ್ಕಾರದ ಕಾರ್ಯವೈಖರಿ ಮತ್ತು ನಡತೆ ಬಗ್ಗೆ ಅತ್ಯುನ್ನತ ನ್ಯಾಯಾಲಯಗಳು ಉಗ್ರ ಟೀಕೆ-ಟಿಪ್ಪಣಿಗಳನ್ನು ತನ್ನ ತೀರ್ಪುಗಳಲ್ಲಿ ದಾಖಲು ಮಾಡುವ ಮೂಲಕ ಸರ್ಕಾರದ ಘನತೆಗೆ ಧಕ್ಕೆ ಬಂದಿದೆ. ರಾಜ್ಯ ಸರ್ಕಾರ ನೈಸ್ ಸಂಸ್ಥೆಯೊಂದಿಗೆ 4-09-2000ರಂದು ಟೋಲ್ ವಿನಾಯಿತಿ ಒಪ್ಪಂದ (Toll Concession Agreement) ಮಾಡಿಕೊಂಡಿರುವುದು ಸರಿಯಷ್ಠೇ. ಆದರೆ, ಇದುವರೆಗೂ, ಅಂದರೆ; 2008, 2010 ಮತ್ತು 2011ನೇ ಸಾಲಿನವರೆಗೆ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿ ಟೋಲ್ ದರಗಳನ್ನು ಪರಿಷ್ಕರಿಸಿರುವುದು ಸರಿಯಷ್ಟೇ. ತದನಂತರ ರಾಜ್ಯ ಸರ್ಕಾರದ ಅಧಿಸೂಚನೆ ಇಲ್ಲದೆ, ಸಂಸ್ಥೆಯು ಟೋಲ್ ದರವನ್ನು ಅನಧಿಕೃತವಾಗಿ ಹೆಚ್ಚಿಸುತ್ತ ಹೋಗಿರುವುದನ್ನು ನ್ಯಾಯಾಲಯ ಗಮನಿಸಿದೆ.
ವಿಭಾಗೀಯ ಪೀಠ ಮತ್ತು ಸದನ ಸಮಿತಿ ಸಂಪುಟದ ಉಪ ಸಮಿತಿಯು ಕೆಐಎಡಿಬಿಯು ನೈಸ್ ಸಂಸ್ಥೆಗೆ ಹೆಚ್ಚುವರಿಯಾಗಿ ನೀಡಿರುವ 554 ಎಕರೆ ಭೂಮಿಯನ್ನು ರಾಜ್ಯ ಸರ್ಕಾರ ಇದುವರೆಗೂ ಹಿಂಪಡೆಯಲು ಕ್ರಮವಹಿಸಿಲ್ಲ. ಅಲ್ಲದೇ, ಸಾರ್ವಜನಿಕ ಸ್ವತ್ತು ಮತ್ತು ಪರಿಸರ ಸಮತೋಲನ ಕಾಪಾಡುವ ಕೆರೆಕಟ್ಟೆಗಳು ಮತ್ತು ಹಳ್ಳಕೊಳ್ಳಗಳನ್ನು ರಾಜ್ಯ ಸರ್ಕಾರ ನೈಸ್ ಸಂಸ್ಥೆಗೆ ಹಸ್ತಾಂತರಿಸಿದ್ದು, ಇವುಗಳ ಸ್ವರೂಪಕ್ಕೆ ಧಕ್ಕೆ ತಂದಿರುವುದರಿಂದ ಬೆಂಗಳೂರು ನಗರ ಮತ್ತು ಸುತ್ತ ಮುತ್ತಲಿನ ಪ್ರದೇಶಗಳಿಗೆ ಹಾನಿ ಉಂಟಾಗಿರುವ ಬಗ್ಗೆ ಹೈಕೋರ್ಟಿನ ವಿಭಾಗೀಯ ಪೀಠ ತೀವ್ರ ಕಳವಳ ವ್ಯಕ್ತಪಡಿಸಿದೆ.
ವಿಭಾಗೀಯ ಪೀಠವು ನೈಸ್ ಸಂಸ್ಥೆಗೆ ಈ ಯೋಜನೆಯ ಅನುಷ್ಠಾನದಲ್ಲಿ ಆಸಕ್ತಿ ಇಲ್ಲದ ಕಾರಣ ರಾಜ್ಯ ಸರ್ಕಾರ ನೈಸ್ ಯೋಜನೆ ಅನುಷ್ಠಾನ ನೆನೆಗುದಿಗೆ ಬಿದ್ದಿರುವುದರಿಂದ ಈ ಯೋಜನೆ ಅನುಷ್ಠಾನದ ಬಗ್ಗೆ ಕ್ಲಿಷ್ಟವಾಗಿ ವಿಮರ್ಶಿಸಬೇಕು. ಇಲ್ಲವೆಂದರೆ ಈ ಯೋಜನೆಯನ್ನು ರದ್ದು ಪಡಿಸಬೇಕೆಂದು ಸಹ ಸೂಚಿಸಿದೆ.
ಈ ಯೋಜನೆ ಅನುಷ್ಠಾನವನ್ನು ಪರಿಶೀಲಿಸಿ, ಸೂಕ್ತ ಶಿಫಾರಸ್ಸು ಮಾಡಲು ಸಚಿವ ಸಂಪುಟ ಉಪ ಸಮಿತಿಯು ನೈಸ್ ಸಂಸ್ಥೆಗೆ ನೀಡಿರುವ ಹೆಚ್ಚುವರಿ ಜಮೀನು ವಾಪಸ್ ಪಡೆಯಲು, ಅನಧಿಕೃತವಾದ ಟೋಲ್ ಸಂಗ್ರಹಣೆ ನಿಲ್ಲಿಸಲು, ಚೌಕಟ್ಟು ಒಪ್ಪಂದದಿಂದ ಹೊರಗೆ ಉಳಿದಿರುವ ಜಮೀನುಗಳನ್ನು ಅಧಿಸೂಚನೆಯಿಂದ ಕೈಬಿಡಲು. ಭೂ ಸ್ವಾಧೀನಪಡಿಸಿಕೊಂಡು ನೈಸ್ ಹಸ್ತಾಂತರಗೊಳಿಸಿರುವ ಭೂಮಿಯನ್ನು ಆ ಸಂಸ್ಥೆಯು ಅನ್ಯ ಉದ್ದೇಶಕ್ಕೆ ಬಳಸಿರುವುದನ್ನು ಹಿಂಪಡೆಯಲು ಮುಂತಾದವುಗಳು ಒಳಗೊಂಡಂತೆ ಸಚಿವ ಸಂಪುಟ ತೀರ್ಮಾನ ಕೈಗೊಳ್ಳಲು ಶಿಪಾರಸ್ಸು ಮಾಡಿದೆ.
ಭೂಸ್ವಾಧೀನ ಮಾಡಿಕೊಂಡು 23 ವರ್ಷಗಳು ಕಳೆದು ಭೂಮಿ ಕಳೆದುಕೊಂಡ ರೈತರಿಗೆ ಮತ್ತು ಭೂ ಮಾಲೀಕರಿಗೆ ಭೂ ಪರಿಹಾರ ನೀಡದಿರುವುದರಿಂದ ಇವರೆಲ್ಲರೂ ಬೀದಿ ಪಾಲಾಗಿದ್ದಾರೆ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.



