Mysore
18
broken clouds

Social Media

ಮಂಗಳವಾರ, 14 ಜನವರಿ 2025
Light
Dark

ಏಪ್ರಿಲ್‌ 1ರಿಂದ ಆದಾಯ ತೆರಿಗೆ ಸೇರಿ ಬದಲಾಗುತ್ತಿವೆ ಈ 5 ಪ್ರಮುಖ ನಿಯಮಗಳು

ಬೆಂಗಳೂರು : ಏಪ್ರಿಲ್‌ 1ರಿಂದ ಹೊಸ ಹಣಕಾಸು ವರ್ಷ (2023 – 24) ಆರಂಭವಾಗಿದೆ. ಹೊಸ ಹೂಡಿಕೆಗಳಿಗೆ ಮತ್ತು ಹಣಕಾಸು ಯೋಜನೆಗಳಿಗೆ ಇದು ಉತ್ತಮ ಸಮಯವಾಗಿದೆ. ಆದರೆ, ಹೊಸ ವಿತ್ತ ವರ್ಷದ ಆರಂಭದೊಂದಿಗೆ ಹಲವು ಹಣಕಾಸು ನಿಯಮಗಳು ಬದಲಾಗಲಿವೆ.

ಮ್ಯೂಚುವಲ್‌ ಫಂಡ್‌ಗಳ ಮೇಲಿನ ತೆರಿಗೆಯಿಂದ ಹಿಡಿದು ಎನ್‌ಪಿಎಸ್‌ ಹಿಂಪಡೆಯುವಿಕೆ, ಅಂಚೆ ಕಚೇರಿ ಯೋಜನೆವರೆಗೆ ಹಲವು ಹಣಕಾಸು ವಿಷಯಗಳ ನಿಯಮ ಬದಲಾಗುತ್ತಿವೆ. ಈ ಬದಲಾವಣೆಗಳು ನಿಮ್ಮ ಹೂಡಿಕೆಯ ಮೇಲೆ ಹೇಗೆ ಪರಿಣಾಮ ಬೀರಲಿವೆ ಎಂಬ ಮಾಹಿತಿ ಇಲ್ಲಿದೆ.

2023ರ ಬಜೆಟ್‌ನಲ್ಲಿ ಘೋಷಿಸಲಾದ ಆದಾಯ ತೆರಿಗೆ ಸಂಬಂಧಿತ ಬದಲಾವಣೆಗಳು ಏಪ್ರಿಲ್‌ 1ರಿಂದ ಜಾರಿಗೆ ಬರಲಿವೆ. ಇದು ತೆರಿಗೆಗೆ ಸಂಬಂಧಿಸಿದಂತೆ ದೊಡ್ಡ ಬದಲಾವಣೆಯಾಗಿದ್ದು, ಹೊಸ ತೆರಿಗೆ ವ್ಯವಸ್ಥೆಯಲ್ಲಿ ಇದುವರೆಗ 5 ಲಕ್ಷ ರೂ. ಇದ್ದ ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು 7 ಲಕ್ಷ ರೂಪಾಯಿಗೆ ಹೆಚ್ಚಿಸಲಾಗಿದೆ. ಹೊಸ ತೆರಿಗೆ ಸ್ಪ್ಯಾಬ್‌ಗಳು ಏ. 1ರಿಂದ ಅನ್ವಯವಾಗಲಿವೆ.

ರಜೆಯ ಪ್ರಯಾಣ ಭತ್ಯೆ ನಗದೀಕರಣ ಮಿತಿ ಏರಿಕೆ : ಸರಕಾರಿ ಉದ್ಯೋಗಿಗಳ ರಜೆಯ ಪ್ರಯಾಣ ಭತ್ಯೆ ನಗದೀಕರಣ ಮಿತಿ 3 ಲಕ್ಷ ರೂ.ನಿಂದ 25 ಲಕ್ಷ ರೂಪಾಯಿಗೆ ಏರಿಕೆಯಾಗಲಿದೆ. ಇದರೊಂದಿಗೆ ಜೀವ ವಿಮೆಗೆ 5 ಲಕ್ಷಕ್ಕಿಂತ ಹೆಚ್ಚು ಪ್ರೀಮಿಯಂ ನೀಡಿದರೆ ತೆರಿಗೆ ಪಾವತಿಸಬೇಕಾಗುತ್ತದೆ.

ಎಲೆಕ್ಟ್ರಾನಿಕ್‌ ಚಿನ್ನಕ್ಕೆ ಬಂಡವಾಳ ತೆರಿಗೆ ಇಲ್ಲ : ಮಾರುಕಟ್ಟೆ ಸಂಬಂಧಿತ ಡಿಬೆಂಚರ್‌ಗಳಲ್ಲಿನ ಹೂಡಿಕೆಯು ಅಲ್ಪಾವಧಿಯ ಬಂಡವಾಳ ಆಸ್ತಿಯಾಗಿರುತ್ತದೆ ಮತ್ತು ಭೌತಿಕ ಚಿನ್ನವನ್ನು ಎಲೆಕ್ಟ್ರಾನಿಕ್‌ ಚಿನ್ನವಾಗಿ ಪರಿವರ್ತಿಸಿದರೆ ಯಾವುದೇ ಬಂಡವಾಳ ತೆರಿಗೆ ಇರುವುದಿಲ್ಲ.

ಮ್ಯೂಚುಯಲ್‌ ಫಂಡ್‌ಗಳಿಗೆ ಎಲ್‌ಟಿಸಿಜಿ ತೆರಿಗೆ ಪ್ರಯೋಜನ ಇಲ್ಲ : ಏಪ್ರಿಲ್‌ 1ರಿಂದ ಸಾಲ ಮ್ಯೂಚುವಲ್‌ ಫಂಡ್‌ಗಳ ಮೇಲೆ ಎಲ್‌ಟಿಸಿಜಿ ತೆರಿಗೆಯ ಪ್ರಯೋಜನವನ್ನು ನೀಡಲಾಗುವುದಿಲ್ಲ. ಅಲ್ಪಾವಧಿಯ ಲಾಭದ ಶೇ. 35ಕ್ಕಿಂತ ಕಡಿಮೆ ಇರುವ ಈಕ್ವಿಟಿ ಮಾರುಕಟ್ಟೆಯಲ್ಲಿ ಹೂಡಿಕೆಗೆ ಸಹ ತೆರಿಗೆ ವಿಧಿಸಲಾಗುತ್ತದೆ. ಇದು ಪ್ರಸ್ತುತ ತೆರಿಗೆ ವಿನಾಯಿತಿ ಪಡೆಯುವ ವರ್ಗದಲ್ಲಿದೆ.

ಅಂಚೆ ಕಚೇರಿ ಯೋಜನೆಗಳಲ್ಲಿ ಬದಲಾವಣೆ : ಏಪ್ರಿಲ್‌ 1ರಿಂದ, ಸೀನಿಯರ್‌ ಸಿಟಿಜನ್‌ ಸೇವಿಂಗ್ಸ್‌ ಸ್ಕೀಮ್‌ನಲ್ಲಿ ಹೂಡಿಕೆ ಮಿತಿಯನ್ನು 15 ಲಕ್ಷ ರೂ.ನಿಂದ 30 ಲಕ್ಷ ರೂಪಾಯಿಗೆ ಹೆಚ್ಚಿಸಲಾಗುತ್ತದೆ. ಇದಲ್ಲದೇ, ಮಾಸಿಕ ಆದಾಯ ಯೋಜನೆಯಲ್ಲಿ ಹೂಡಿಕೆಯ ಮಿತಿಯನ್ನು 4.5 ಲಕ್ಷ ರೂ.ನಿಂದ 9 ಲಕ್ಷ ರೂ.ಗೆ ಹೆಚ್ಚಿಸಲಾಗಿದೆ. ಜಂಟಿ ಖಾತೆಯಡಿ ಹೂಡಿಕೆ ಮಿತಿಯನ್ನು 9 ಲಕ್ಷ ರೂ.ನಿಂದ 15 ಲಕ್ಷ ರೂ.ಗೆ ಹೆಚ್ಚಿಸಲಾಗಿದೆ. ಈ ಎರಡೂ ಯೋಜನೆಗಳು ಜನರಿಗೆ ನಿಯಮಿತ ಆದಾಯದ ಲಾಭ ನೀಡುತ್ತವೆ.

ಇದಲ್ಲದೆ ಇನ್ನೂ ಹಲವು ಬದಲಾವಣೆಗಳು ಏಪ್ರಿಲ್‌ 1ರಿಂದ ಜಾರಿಗೆ ಬರುತ್ತಿವೆ. ಅವುಗಳಲ್ಲಿ ಪ್ರಮುಖವಾಗಿ ಮಾರುತಿ ಸುಜುಕಿ ಕಾರುಗಳ ದರ ಏರಿಕೆಯಾಗುತ್ತಿದೆ. ಕರ್ನಾಟಕದ 36 ಟೋಲ್‌ಗಳಲ್ಲಿ ಶುಲ್ಕ ಹೆಚ್ಚಳವೂ ಅನ್ವಯವಾಗುತ್ತಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ