Mysore
23
overcast clouds
Light
Dark

ಡಾ ಸತೀಶ್‌ ಮೇಲೆ ದೂರುಗಳಿವೆ, ಭ್ರೂಣ ಹತ್ಯೆ ಪ್ರಕರಣದಲ್ಲಿ ನಮ್ಮ ಇಲಾಖೆಯ ಹಲವರು ಶಾಮೀಲಾಗಿದ್ದಾರೆ: ದಿನೇಶ್‌ ಗುಂಡೂರಾವ್‌

ಕಳೆದ ಕೆಲ ದಿನಗಳಿಂದ ಹೆಚ್ಚು ಸುದ್ದಿಗೊಳಗಾಗುತ್ತಿರುವ ಪ್ರಕರಣವೆಂದರೆ ಅದು ಭ್ರೂಣ ಹತ್ಯೆ ಜಾಲವೊಂದು ಪೊಲೀಸರಿಗೆ ಸಿಕ್ಕಿ ಬಿದ್ದಿರುವುದು. ಇಡೀ ಮನುಕುಲವೇ ತಲೆ ತಗ್ಗಿಸುವಂತಹ ಅಪರಾಧವನ್ನು ಎಸಗಿದ್ದ 9 ಜನರ ಗ್ಯಾಂಗ್‌ ಒಂದನ್ನು ಬೈಯ್ಯಪ್ಪನಹಳ್ಳಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. 2 ವರ್ಷಗಳಲ್ಲಿ 900ಕ್ಕೂ ಹೆಚ್ಚು ಭ್ರೂಣಗಳನ್ನು ಈ ತಂಡ ಹತ್ಯೆ ಮಾಡಿತ್ತು ಎಂಬ ಆಘಾತಕಾರಿ ಸುದ್ದಿ ಸಹ ಹೊರಬಿದ್ದಿತ್ತು.

ಇಷ್ಟು ದೊಡ್ಡ ಮಟ್ಟದ ಹಗರಣವೊಂದು ಹೊರಬಿದ್ದ ಬೆನ್ನಲ್ಲೇ ಕುಶಾಲನಗರ ಸಮೀಪ ನಿನ್ನೆ ( ಡಿಸೆಂಬರ್‌ 1 ) ಡಾ ಸತೀಶ್‌ ಎಂಬ ಆಯುಷ್‌ ವೈದ್ಯರೊಬ್ಬರು ತಮ್ಮದೇ ಕಾರಿನಲ್ಲಿ ಶವವಾಗಿ ಪತ್ತೆಯಾಗಿದ್ದರು. ಎಡಗೈಗೆ ಸಿರಿಂಜ್‌ ಚುಚ್ಚಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದ್ದರಿಂದ ಇದು ಆತ್ಮಹತ್ಯೆ ಎಂಬ ಅನುಮಾನಗಳು ವ್ಯಕ್ತವಾಗಿದ್ದವು.

ಪಾಂಡವಪುರದ ಶಿವಳ್ಳಿಯಲ್ಲಿ ಆಲೋಪತಿ ಪ್ರಾಕ್ಟಿಸ್‌ ಮಾಡುತ್ತಿದ್ದ ಸತೀಶ್‌ಗೂ ಈ ಭ್ರೂಣ ಹತ್ಯೆಗೂ ಸಂಬಂಧವಿದೆ ಎಂದು ಅಲ್ಲಿನ ಸ್ಥಳೀಯರು ಸ್ಥಳ ಪರಿಶೀಲನೆಗೆ ಬಂದಿದ್ದ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಅವರಿಗೆ ಮಾಹಿತಿಯನ್ನು ನೀಡಿದ್ದರು. ಇದನ್ನು ಆಲಿಸಿದ ಸಚಿವರು ಅವರನ್ನೂ ವಿಚಾರಿಸಿ ಎಂದು ಸೂಚನೆ ನೀಡಿದ್ದರು.

ಹೀಗೆ ಭ್ರೂಣ ಹತ್ಯೆ ಪ್ರಕರಣದಲ್ಲಿ ತನ್ನ ಹೆಸರು ಕೇಳಿಬಂದ ಕಾರಣ ಸತೀಶ್‌ ಆತ್ಮಹತ್ಯೆ ಮಾಡಿಕೊಂಡಿಬಹುದು ಎಂಬ ಶಂಕೆ ವ್ಯಕ್ತವಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಇದೀಗ ಸ್ವತಃ ದಿನೇಶ್‌ ಗುಂಡೂರಾವ್‌ ಅವರೇ ಮಂಗಳೂರಿನಲ್ಲಿ ಪ್ರತಿಕ್ರಿಯಿಸಿದ್ದಾರೆ. “ನಾನು ಎಲ್ಲಾ ಕಡೆ ಭೇಟಿ ಕೊಟ್ಟು ಜನಗಳ ಜತೆ ಮಾತನಾಡಿ ಮಾಹಿತಿಯನ್ನು ಕಲೆಹಾಕಿದ್ದೆ. ಇದು ವಿವಿಧ ಜಿಲ್ಲೆಗಳ ಪ್ರಕರಣವಾಗಿರುವ ಕಾರಣ ಕೇವಲ ಬೆಂಗಳೂರು ಪೊಲೀಸರು ತನಿಖೆ ನಡೆಸಿದರೆ ಆಗುವುದಿಲ್ಲ, ಇದನ್ನು ಸಿಐಡಿಗೆ ವಹಿಸಬೇಕು ಎಂದು ಸಿಎಂ ಅವರಿಗೆ ಮನವಿ ಮಾಡಿದ್ದೆ, ಅವರೂ ಸಹ ಸಮ್ಮತಿಸಿದ್ರು. ನಮ್ಮ ಇಲಾಖೆಯ ಯಾರಲ್ಲಿ ಲೋಪ ಕಂಡುಬಂದಿದೆಯೋ ಅಂತಹ ಇಬ್ಬರನ್ನು ಈಗಾಗಲೇ ಸಸ್ಪೆಂಡ್‌ ಮಾಡಿದ್ದೇವೆ. ಇನ್ನು ಉಳಿದಿರುವ ಮಾಹಿತಿ ಬಂತು. ಈ ಸತೀಶ್‌ ಕೂಡ ಇದರಲ್ಲಿ ಶಾಮೀಲಾಗಿದ್ದಾರೆ ಎಂಬ ಮಾಹಿತಿಯೂ ನಮಗೆ ಬಂತು. ಆದರೆ ನಾವು ಅದರ ಬಗ್ಗೆ ತನಿಖೆ ನಡೆಸಬೇಕಾದ ಸನ್ನಿವೇಶವಿತ್ತು. ಈಗ ಅವರು ಯಾವ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೋ ನನಗೆ ಗೊತ್ತಿಲ್ಲ. ಇವರಿಗೂ ಭ್ರೂಣ ಹತ್ಯೆಗೂ ಲಿಂಕ್‌ ಇದೆಯಾ ಎಂಬುದನ್ನು ನೋಡಬೇಕಿದೆ. ನಮ್ಮ ಇಲಾಖೆಯ ಕೆಲವು ಅಧಿಕಾರಿಗಳು ಇದರಲ್ಲಿ ಶಾಮೀಲಾಗಿದ್ದಾರೆ ಅನ್ನೋ ಮಾಹಿತಿ ಇದೆ. ಸತೀಶ್‌ ಸಹ ನಮ್ಮ ಆಯುಷ್‌ ಅಧಿಕಾರಿ. ಅವರ ಬಗ್ಗೆನೂ ಹೇಳಿದ್ರು. ಅವರು ಪಿರಿಯಾಪಟ್ಟಣದಲ್ಲಿ ಆಯುಷ್‌ ಅಧಿಕಾರಿಯಾಗಿದ್ದಾರೆ, ಶಿವಳ್ಳಿಗೆ ಬಂದು ಅಲೋಪತಿ ಪ್ರಾಕ್ಟಿಸ್‌ ಮಾಡ್ತಿದ್ದಾರೆ ಅಂತ ಜನರೇ ಆಪಾದನೆ ಮಾಡಿದ್ರು. ಇವರೇ ಅದಕ್ಕೆ ಮುಖ್ಯ ಅಂತ ಹೇಳಿದ್ರು. ಅದನ್ನ ನೀವು ಟಿವಿಯಲ್ಲೂ ನೋಡಬಹುದು. ಮೈಸೂರಿನಲ್ಲೂ ಸಹ ಹಲವಾರು ಜನ ಹೇಳಿದ್ರು. ಅದೆಲ್ಲಾ ತನಿಖೆಯಲ್ಲಿ ಗೊತ್ತಾಗುತ್ತೆ. ಆದರೆ ಆತ್ಮಹತ್ಯೆ ಬಗ್ಗೆ ನಾನು ಮಾತನಾಡೋಕೋಗಲ್ಲ. ಅದನ್ನು ಪೊಲೀಸ್‌ ನೋಡಿಕೊಳ್ತಾರೆ” ಎಂದು ದಿನೇಶ್‌ ಗುಂಡೂರಾವ್ ಹೇಳಿಕೆ ನೀಡಿದ್ದಾರೆ.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ