Mysore
13
clear sky

Social Media

ಶನಿವಾರ, 13 ಡಿಸೆಂಬರ್ 2025
Light
Dark

ದೇಶದ ರಫ್ತು ವಹಿವಾಟಿನಲ್ಲಿ ಮುಂದುವರಿದ ಕುಸಿತ, ಮೇನಲ್ಲಿ 10.3% ಇಳಿಕೆ

ನವದೆಹಲಿ: ಸತತ ನಾಲ್ಕನೇ ತಿಂಗಳು ಭಾರತದ ರಫ್ತು ವಹಿವಾಟು ಶೇ. 10.3ರಷ್ಟು ಕುಸಿತ ಕಂಡಿದ್ದು, ಮೇ ತಿಂಗಳಲ್ಲಿ 34.98 ಬಿಲಿಯನ್‌ ಡಾಲರ್‌ ಮೌಲ್ಯದ ರಫ್ತು ದಾಖಲಾಗಿದೆ ಎಂದು ಕೇಂದ್ರ ವಾಣಿಜ್ಯ ಸಚಿವಾಲಯ ಗುರುವಾರ ಬಿಡುಗಡೆ ಮಾಡಿರುವ ಅಂಕಿ – ಅಂಶಗಳು ತಿಳಿಸಿವೆ.

ಇದರಿಂದ ವ್ಯಾಪಾರ ಕೊರತೆ 22.12 ಬಿಲಿಯನ್‌ ಡಾಲರ್‌ಗಳಿಗೆ ತಲುಪಿದ್ದು, ಐದು ತಿಂಗಳ ಗರಿಷ್ಠ ಮಟ್ಟ ದಾಖಲಾಗಿದೆ. ಪ್ರಮುಖ ಉತ್ಪನ್ನಗಳಾದ ಪೆಟ್ರೋಲಿಯಂ ವಸ್ತುಗಳು, ಚಿನ್ನಾಭರಣ, ಎಂಜಿನಿಯರಿಂಗ್‌ ಸರಕುಗಳು, ಜವಳಿ ಮತ್ತು ಸಿದ್ಧ ಉಡುಪುಗಳು ಹಾಗೂ ರಾಸಾಯನಿಕ ವಸ್ತುಗಳ ರಫ್ತಿನಲ್ಲಿ ನಕಾರಾತ್ಮಕ ಬೆಳವಣಿಗೆ ಕಂಡುಬಂದಿದೆ.

ಆಮದು ಪ್ರಮಾಣದಲ್ಲಿ ಕೂಡ ಸತತ ಆರನೇ ತಿಂಗಳು ಶೇ. 6.6ರಷ್ಟು ಕುಸಿತ ಕಂಡುಬಂದಿದ್ದು, ವಹಿವಾಟಿನ ಪ್ರಮಾಣ 61.13 ಬಿಲಿಯನ್‌ ಡಾಲರ್‌ನಿಂದ 57.1 ಬಿಲಿಯನ್‌ ಡಾಲರ್‌ಗೆ ಇಳಿಕೆಯಾಗಿದೆ. ಕಳೆದ 2022ರಲ್ಲಿ ವ್ಯಾಪಾರ ಕೊರತೆ 22.13 ಬಿಲಿಯನ್‌ ಡಾಲರ್‌ನಷ್ಟಿತ್ತು. 2022ರ ಡಿಸೆಂಬರ್‌ನಲ್ಲಿ ಅತಿ ಕನಿಷ್ಠ 23.89 ಬಿಲಿಯನ್‌ ಡಾಲರ್‌ಗಳಿಗೆ ಕುಸಿದಿತ್ತು.

ಈ ವರ್ಷದ ಏಪ್ರಿಲ್‌ – ಮೇ ತಿಂಗಳಿನಲ್ಲಿ ಸಂಚಿತ ರಫ್ತು ವಹಿವಾಟು 69.72 ಬಿಲಿಯನ್‌ ಡಾಲರ್‌ಗಳಷ್ಟಿದ್ದು, ಕೇಂದ್ರ ಸರಕಾರದ ಅಂದಾಜಿಗಿಂತ ಶೇ. 11.41ರಷ್ಟು ಕಡಿಮೆಯಾಗಿದೆ. ಅಲ್ಲದೇ ಆಮದು ವಹಿವಾಟು 107 ಬಿಲಿಯನ್‌ ಡಾಲರ್‌ನಷ್ಟು ಆಗಿದ್ದು, ಇದು ಕೂಡ ಅಂದಾಜಿಗಿಂತ ಶೇ. 10.24ರಷ್ಟು ಕಡಿಮೆಯಾಗಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಕೇಂದ್ರ ವಾಣಿಜ್ಯ ಸಚಿವಾಲಯದ ಕಾರ್ಯದರ್ಶಿ ಸುನಿಲ್‌ ಬಥ್‌ರ್‌ವಾಲ್ ”ವಿಶ್ವ ವ್ಯಾಪಾರದಲ್ಲಿ ಆರ್ಥಿಕ ಹಿಂಜರಿತದ ಮತ್ತು ನಿಧಾನಗತಿಯ ಚಟುವಟಿಕೆಯ ಕಾರಣದಿಂದ ಭಾರತದ ಆಮದು – ರಫ್ತು ವಹಿವಾಟಿನ ಮೇಲಿನ ಪರಿಣಾಮ ಮುಂದುವರಿದಿದೆ. ಆದಷ್ಟು ಬೇಗನೇ ಆರ್ಥಿಕ ಸ್ಥಿತಿ ಸುಧಾರಿಸಿದಲ್ಲಿ ಬೇಡಿಕೆ ಹೆಚ್ಚಳಗೊಳ್ಳಲಿದೆ. ಆದಾಗ್ಯೂ ಸಚಿವಾಲಯ ವ್ಯಾಪಾರ ವೃದ್ಧಿಗೆ ಪೂರಕವಾಗಿ ಕೆಲವು ಕ್ರಮಗಳನ್ನು ಕೈಗೊಳ್ಳುತ್ತಿದೆ,” ಎಂದು ಹೇಳಿದರು.

ಜುಲೈ 11ರಂದು ಜಿಎಸ್‌ಟಿ ಮಂಡಳಿ ಸಭೆ

ಹೊಸದಿಲ್ಲಿ: ಸರಕು ಹಾಗೂ ಸೇವೆಗಳ ತೆರಿಗೆ (ಜಿಎಸ್‌ಟಿ) ಮಂಡಳಿಯ 50ನೇ ಸಭೆಯು ಮಂಡಳಿಯ ಅಧ್ಯಕ್ಷರೂ ಆದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅಧ್ಯಕ್ಷತೆಯಲ್ಲಿ ಜುಲೈ 11ರಂದು ಹೊಸದಿಲ್ಲಿಯ ವಿಜ್ಞಾನ ಭವನದಲ್ಲಿ ನಡೆಯಲಿದೆ. ಈ ಕುರಿತು ಜಿಎಸ್‌ಟಿ ಮಂಡಳಿ ಗುರುವಾರ ಟ್ವಿಟರ್‌ ಮೂಲಕ ಮಾಹಿತಿ ಹಂಚಿಕೊಂಡಿದೆ.

ಸುಪ್ರೀಂ ಕೋರ್ಟ್‌ ನಿರ್ದೇಶನದ ಅನುಸಾರ ದೇಶದಲ್ಲಿ ಆನ್‌ಲೈನ್‌ ಗೇಮಿಂಗ್‌ ಹಾಗೂ ಟ್ರೇಡಿಂಗ್‌ ಕುರಿತಂತೆ ತಜ್ಞರ ಸಮಿತಿ ಸಿದ್ಧಪಡಿಸಿರುವ ವರದಿ ಕುರಿತಂತೆ ಜಿಎಸ್‌ಟಿ ಸಭೆಯಲ್ಲಿ ಪ್ರಮುಖವಾಗಿ ಚರ್ಚೆಗೆ ಬರುವ ಸಾಧ್ಯತೆಗಳಿವೆ. ಅಲ್ಲದೇ ಜಿಎಸ್‌ಟಿ ಕರ ನಿರ್ಧರಣೆ ಸಮಿತಿಯ ಸಂಚಾಲಕರಾಗಿದ್ದ ಬಸವರಾಜ ಬೊಮ್ಮಾಯಿ ಅವರು ಕರ್ನಾಟಕದ ಸಿಎಂ ಸ್ಥಾನಕ್ಕೆ ವಿಧಾನಸಭೆ ಚುನಾವಣೆ ಫಲಿತಾಂಶದ ಬಳಿಕ ರಾಜೀನಾಮೆ ನೀಡಿದ ಕಾರಣದಿಂದ ಸಂಚಾಲಕ ಹುದ್ದೆಗೆ ಹೊಸ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಕೂಡ ಜಿಎಸ್‌ಟಿ ಮಂಡಳಿ ಸಭೆಯಲ್ಲಿ ನಡೆಯಲಿದೆ.

ಬುಧವಾರವಷ್ಟೇ ಕರ್ನಾಟಕದಿಂದ ಜಿಎಸ್‌ಟಿ ಮಂಡಳಿ ಪ್ರತಿನಿಧಿಯಾಗಿ ಸಿಎಂ ಸಿದ್ದರಾಮಯ್ಯ ಅವರು ಸಚಿವ ಕೃಷ್ಣ ಬೈರೇಗೌಡ ಅವರನ್ನು ನೇಮಕ ಮಾಡಿರುವ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅಧ್ಯಕ್ಷರಾಗುವ ಪ್ರಶ್ನೆ ಈಗ ಉದ್ಭವಿಸುವುದಿಲ್ಲ. ಹೀಗಾಗಿ ಜಿಎಸ್‌ಟಿ ಕರ ನಿರ್ಧರಣೆ ಸಮಿತಿಯ ನೇತೃತ್ವ ಯಾರಿಗೆ ವಹಿಸಲಾಗುತ್ತದೆ ಎಂಬುದು ಈಗ ಕುತೂಹಲ ಕೆರಳಿಸಿದೆ. ಆದರೆ ಜಿಎಸ್‌ಟಿ ಮಂಡಳಿ ಸಭೆಯ ಅಜೆಂಡಾ ಕುರಿತಂತೆ ಮಂಡಳಿಯು ಅಧಿಕೃತವಾಗಿ ಯಾವುದೇ ಹೇಳಿಕೆ ನೀಡಿಲ್ಲ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!