ಮಂಡ್ಯ : ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ಹೈವೇನಲ್ಲಿ ವೇಗಮಿತಿ ಉಲ್ಲಂಘನೆ ಮಾಡಿ ವಾಹನ ಚಾಲನೆ ಮಾಡುತ್ತಿರುವವರ ವಿರುದ್ಧ ಮದ್ದೂರು ಪೊಲೀಸರು ಮೋಟಾರು ವಾಹನ ಕಾಯ್ದೆಯಡಿ ಪ್ರಕರಣ ದಾಖಲು ಮಾಡಿ, ಸ್ಥಳದಲ್ಲೇ ಒಂದು ಲಕ್ಷ ರೂಪಾಯಿ ದಂಡ ವಸೂಲಿ ಮಾಡಿದ್ದಾರೆ. ಮದ್ದೂರು ಠಾಣೆ ಇನ್ಸ್‌ಪೆಕ್ಟರ್ ಸಂತೋಷ್ ಮಾರ್ಗದರ್ಶನದಲ್ಲಿ ಎಕ್ಸ್‌ಪ್ರೆಸ್‌ವೇನಲ್ಲಿ ರಾಡಾರ್‌ಗನ್ ಸಮೇತ ಕಾರ್ಯಾಚರಣೆಗಿಳಿದ ಸಂಚಾರಿ ಠಾಣೆ ಪಿಎಸ್‌ಐಗಳಾದ ಸಿದ್ದರಾಜು, ಆಯ್ಯನ್‌ಗೌಡ, ಕಾನೂನು ಸುವ್ಯವಸ್ಥೆ ವಿಭಾಗದ ಪಿಎಸ್‌ಐ ಆರ್.ಬಿ. ಉಮೇಶ್ ಹಾಗೂ ಸಿಬ್ಬಂದಿ ಜಂಟಿ ಕಾರ್ಯಾಚರಣೆ ನಡೆಸಿದ್ದಾರೆ.
ಈ ವೇಳೆ ಮಿತಿ ಮೀರಿದ ವೇಗದಲ್ಲಿ ಚಾಲನೆ ಮಾಡುತ್ತಿದ್ದ ನೂರಾರು ವಾಹನಗಳ ಚಾಲಕರ ವಿರುದ್ಧ ಪ್ರಕರಣ ದಾಖಲು ಮಾಡಿಕೊಂಡು ಸುಮಾರು ಒಂದು ಲಕ್ಷ ರೂಪಾಯಿ ದಂಡ ವಿಧಿಸಿದ್ದಾರೆ. ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಅಪಘಾತಗಳು ಹೆಚ್ಚಾಗಿ ಸಾವು-ನೋವು ಸಂಭವಿಸುತ್ತಲೇ ಇವೆ. ಈ ಹಿನ್ನೆಲೆಯಲ್ಲಿ ಅಪಘಾತ ತಡೆಯಲು ರಸ್ತೆ ಸುರಕ್ಷತೆ ಮತ್ತು ಸಂಚಾರ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ಮೀತಿ ಮೀರಿದ ವೇಗಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ವಾಹನ ಚಾಲಕರ ವಿರುದ್ಧ ಕಾನೂನು ಕ್ರಮ ಜರುಗಿಸಲು ಆದೇಶ ನೀಡಿದ್ದರು.
ಆದ್ದರಿಂದ ಪೊಲೀಸರು ಪ್ರಥಮ ಹಂತದಲ್ಲಿ ಹೆದ್ದಾರಿಯಲ್ಲಿ ಅತಿ ವೇಗದಲ್ಲಿ ವಾಹನ ಚಾಲನೆ ಮಾಡುವ ಚಾಲಕರಿಗೆ ಸ್ವಯಂ ಕಡಿವಾಣ ಹಾಕುವಂತೆ ಕರ ಪತ್ರದ ಮೂಲಕ ಜಾಗೃತಿ ಮೂಡಿಸಿದ್ದರೂ ಪ್ರಯೋಜನ ಆಗಿರಲಿಲ್ಲ. ಇದನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಕಳೆದ ಮೂರು ದಿನಗಳಿಂದ ಕಾರ್ಯಾಚರಣೆ ನಡೆಸಿ ಅತಿ ವೇಗವಾಗಿ ವಾಹನ ಚಲಾಯಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಂಡಿದ್ದಾರೆ.