ಬೆಂಗಳೂರು : 15ನೇ ಹಣಕಾಸು ಆಯೋಗದ ಶಿಫಾರಸಿನಂತೆ ವಿಶೇಷ ಅನುದಾನ ಮತ್ತು ರಾಜ್ಯದ ವಿಶೇಷ ಅನುದಾನ ಬಿಡುಗಡೆ ಕುರಿತಾಗಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ಗೆ ಸಿಎಂ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ.
15ನೇ ಹಣಕಾಸು ಆಯೋಗದ 2020 – 21 ರ ಪ್ರಕಾರ ವಿಶೇಷ ಅನುದಾನವಾಗಿ 5,495 ಕೋಟಿ ರೂ. ಶಿಫಾರಸು ಆಗಿತ್ತು. ಆದರೆ ರಾಜ್ಯಕ್ಕೆ ಯಾವುದೇ ವಿಶೇಷ ಅನುದಾನ ಬಿಡುಗಡೆಯಾಗಿಲ್ಲ. ಹಾಗಾಗಿ ಕೂಡಲೇ ವಿಶೇಷ ಅನುದಾನ ಬಿಡುಗಡೆ ಮಾಡಬೇಕೆಂದು ಪತ್ರದ ಮೂಲಕ ಸಿಎಂ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.
2021-26 ಹಣಕಾಸು ಆಯೋಗ 6 ಸಾವಿರ ಕೋಟಿ ರೂ. ಬೆಂಗಳೂರಿನ ನೀರಾವರಿ ಕಾಮಗಾರಿ ಹಾಗೂ ಪೆರಿಪೆಲರ್ ರಸ್ತೆ ನಿರ್ಮಾಣಕ್ಕೆ ನೀಡಿತ್ತು. ಆದರೆ ಯಾವುದೇ ಅನುದಾನ ಕರ್ನಾಟಕ ಸರ್ಕಾರಕ್ಕೆ ನೀಡಿಲ್ಲ. ಇದರಿಂದ ರಾಜ್ಯದ ಹಣಕಾಸು ಸ್ಥಿತಿಗೆ ಹಿನ್ನಡೆ ಆಗಿದೆ. ರಾಜ್ಯದ ಹಣಕಾಸು ಸ್ಥಿತಿಯನ್ನು ಅರ್ಥಮಾಡಿಕೊಂಡು ವಿಶೇಷ ಅನುದಾನ ಮತ್ತು ನಿರ್ದಿಷ್ಟ ಅನುದಾನ ಮೊದಲ ಆದ್ಯತೆ ನೀಡಬೇಕೆಂದು ಪತ್ರದಲ್ಲಿ ಆಗ್ರಹಿಸಿದ್ದಾರೆ.
ಈ ಹಿಂದೆ 14 ನೇ ಹಣಕಾಸು ಆಯೋಗವು ಶಿಫಾರಸು ಮಾಡಿದ ಶೇಕಡಾ 4.71 ತೆರಿಗೆ ಹಂಚಿಕೆಯಲ್ಲಿ ಕರ್ನಾಟಕದ ಪಾಲನ್ನು 3.647 ಪ್ರತಿಶತಕ್ಕೆ ಇಳಿಸಲಾಗಿದೆ. ಆಯೋಗವು ನಿಗದಿ ಪಡಿಸಿದ್ದ ಆದಾಯದ ಮಾನದಂಡಗಳನ್ನು ಕರ್ನಾಟಕವು ಕಳೆದುಕೊಂಡಿದೆ. 2011-12ರಲ್ಲಿ ರಾಜ್ಯದ ಜಿಎಸ್‌ಡಿಪಿಯನ್ನು 30 ಪ್ರತಿಶತದಷ್ಟು ಹೆಚ್ಚಿಸಲಾಗಿದ್ದು, ಎಲ್ಲಾ ರಾಜ್ಯಗಳು ಸೇರಿದಂತೆ 9 ಪ್ರತಿಶತಕ್ಕಿಂತ ಕಡಿಮೆ ಸರಾಸರಿ ಹೆಚ್ಚಳವಾಗಿದೆ.
2011-12ರಲ್ಲಿ ಐಟಿ ಸಂಬಂಧಿತ ಸೇವೆಗಳಲ್ಲಿ ರಾಜ್ಯದ ಜಿಎಸ್‌ಡಿಪಿಯನ್ನು ಗಣನೀಯವಾಗಿ ಹೆಚ್ಚಳವಾಗಿದೆಯಾದರೂ ಐಟಿ ಸೇವೆಗಳ ರಫ್ತು ಶೂನ್ಯ ದರವನ್ನು ಹೊಂದಿರುವುದರಿಂದ ರಾಜ್ಯದ ತೆರಿಗೆಗಳಿಗೆ ಈ ಸೇವೆಗಳು ಯಾವುದೆ ಸಹಕಾರಿಯಾಗಿಲ್ಲ. 14 ನೇ ಹಣಕಾಸು ಆಯೋಗದ ಶಿಫಾರಸಿಗೆ ಹೋಲಿಸಿದರೆ 15 ನೇ ಹಣಕಾಸು ಆಯೋಗದಲ್ಲಿ ಕರ್ನಾಟಕಕ್ಕೆ ತೆರಿಗೆ ಹಂಚಿಕೆ ಪಾಲು ಕಡಿಮೆಯಾಗಿದೆ. ಕಳೆದ ನಾಲ್ಕು ವರ್ಷಗಳಲ್ಲಿ ರಾಜ್ಯಕ್ಕೆ ಒಟ್ಟು ತೆರಿಗೆ ಹಂಚಿಕೆಯಲ್ಲಿ 37,011 ಕೋಟಿ ರೂ. ಕಡಿಮೆ ಮಾಡಿದೆ.
15ನೇ ಹಣಕಾಸು ಆಯೋಗದ 2020 – 21 ರ ಪ್ರಕಾರ ವಿಶೇಷ ಅನುದಾನವಾಗಿ ಕರ್ನಾಟಕಕ್ಕೆ 5,495 ಕೋಟಿ ರೂ. ಶಿಫಾರಸು ಆಗಿತ್ತು. ಆದರೆ ಕೇಂದ್ರ ಸರ್ಕಾರ ಆಯೋಗದ ಶಿಫಾರಸನ್ನು ಪರಿಗಣಿಸಿಲ್ಲ. ರಾಜ್ಯದ ಸಂಪನ್ಮೂಲಗಳು ಮತ್ತು ಕೇಂದ್ರ ಸರ್ಕಾರದ ಹಣಕಾಸಿನ ಬದ್ಧತೆಗಳನ್ನು ಗಮನದಲ್ಲಿಟ್ಟುಕೊಂಡು, ವಿಶೇಷ ಅನುದಾನಗಳ ಶಿಫಾರಸನ್ನು ಸೂಕ್ತವಾಗಿ ಪರಿಗಣಿಸಲಾಗುವುದು ಎಂದು ಹೇಳಿದೆ.
ಆದರೆ, ಕರ್ನಾಟಕ ರಾಜ್ಯಕ್ಕೆ ಇದುವರೆಗೆ ಯಾವುದೇ ಅನುದಾನ ಬಿಡುಗಡೆಯಾಗಿಲ್ಲ ಮತ್ತು ತೆರಿಗೆ ಹಂಚಿಕೆಯಲ್ಲಿ ತೀವ್ರ ಕಡಿತ ಮಾಡಲಾಗಿದೆ. ಈಗಾಗಲೇ ಸಂಕಷ್ಟದಲ್ಲಿರುವ ರಾಜ್ಯದ ಹಣಕಾಸಿನ ಸ್ಥಿತಿಗೆ ಇದು ದೊಡ್ಡ ಹಿನ್ನಡೆಯಾಗಿದೆ ಎಂದು ಸಿಎಂ ಸಿದ್ಧರಾಮಯ್ಯ ಪತ್ರದಲ್ಲಿ ಉಲ್ಲೇಖಸಿದ್ದಾರೆ.