ರಾಯಚೂರು : ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಯಚೂರು ಜಿಲ್ಲೆಯ ಸಿಂಧನೂರಿಗೆ ಪ್ರಚಾರ ಕಾರ್ಯಕ್ರಮಕ್ಕೆ ಆಗಮಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಭದ್ರತಾ ಸಿಬ್ಬಂದಿಯ ಸೇನಾ ಪಡೆಯ ಹೆಲಿಕಾಪ್ಟರ್ ಭತ್ತದ ಗದ್ದೆಯಲ್ಲಿ ಮಾಡಲಾಗಿದ್ದ ಹೆಲಿಪ್ಯಾಡ್‌ನಲ್ಲಿ ಸಿಲುಕಿಕೊಂಡಿದೆ.
ಕರ್ನಾಟಕದ ಭತ್ತದ ಕಣಜ ರಾಯಚೂರು ಜಿಲ್ಲೆಯ ಸಿಂಧನೂರಿನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಪ್ರಚಾರಕ್ಕೆ ಬೃಹತ್ ವೇದಿಕೆಯನ್ನು ಸಿದ್ಧಪಡಿಸಲಾಗಿತ್ತು. ಈ ವೇಳೆ ಕಾರ್ಯಕ್ರಮಕ್ಕೆ ಹೆಲಿಕಾಪ್ಟರ್‌ನಲ್ಲಿ ಆಗಮಿಸುತ್ತಿದ್ದ ನರೇಂದ್ರ ಮೋದಿ ಅವರಿಗೆ ಹೆಲಿಪ್ಯಾಡ್ ಸಿದ್ಧಪಡಿಸಲಾಗಿತ್ತು. ಆದರೆ, ಅವರ ಭದ್ರತಾ ಸಿಬ್ಬಂದಿಗೂ ಹೆಲಿಪ್ಯಾಡ್ ನಿರ್ಮಾಣ ಮಾಡುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದರಿಂದ ತರಾತುರಿಯಲ್ಲಿ ಭತ್ತದ ಗದ್ದೆಯಲ್ಲಿ ಮಣ್ಣನ್ನು ಹಾಕಿ ಹೆಲಿಪ್ಯಾಡ್ ನಿರ್ಮಿಸಲಾಗಿತ್ತು. ಭಾರತೀಯ ಭದ್ರತಾ ಪಡೆಯ ಹೆಲಿಕಾಪ್ಟರ್ ಲ್ಯಾಂಡ್ ಆದ ತಕ್ಷಣ ಗದ್ದೆಯಲ್ಲಿ ಸಿಕ್ಕಿಕೊಂಡಿದೆ. ಸುಮಾರು 3 ಗಂಟೆಗಳಿಂದ ಹೆಲಿಕಾಪ್ಟರ್ ತೆರವು ಕಾರ್ಯಾಚರಣೆ ಮಾಡಲಾಗುತ್ತಿದ್ದರೂ ಸಫಲವಾಗಿಲ್ಲ.