Mysore
21
overcast clouds
Light
Dark

ನಿಥಾರಿ ಹತ್ಯಾಕಾಂಡ: ಆರೋಪಿ ಮಣಿಂದರ್ ಸಿಂಗ್ ಪಂಧೇರ್ ಬಿಡುಗಡೆ

ನೋಯ್ಡಾ (ಉತ್ತರ ಪ್ರದೇಶ): ಇಡೀ ಭಾರತ ದೇಶಾದ್ಯಂತ ಸಂಚಲನ ಮೂಡಿಸಿದ್ದ ನಿಥಾರಿ ಹತ್ಯಾಕಾಂಡ ಪ್ರಕರಣದ ಆರೋಪಿ ಮಣಿಂದರ್ ಸಿಂಗ್ ಪಂಧೇರ್ ಜೈಲಿನಿಂದ ಬಿಡುಗಡೆ ಆಗಿದ್ಧಾನೆ. ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದಲ್ಲಿ ಇರುವ ಲುಕ್ಸಾರ್ ಕಾರಾಗೃಹದಿಂದ ಆರೋಪಿ ಮಣಿಂದರ್ ಸಿಂಗ್ ಪಂಧೇರ್‌ನನ್ನು ಬಿಡುಗಡೆ ಮಾಡಲಾಗಿದೆ.

ಕಳೆದ ಸೋಮವಾರ ಉತ್ತರ ಪ್ರದೇಶದ ಅಲಹಾಬಾದ್ ಹೈಕೋರ್ಟ್ 65 ವರ್ಷ ವಯಸ್ಸಿನ ಉದ್ಯಮಿ ಮಣಿಂದರ್ ಸಿಂಗ್ ಪಂಧೇರ್‌ನನ್ನು ದೋಷ ಮುಕ್ತಗೊಳಿಸಿತ್ತು. ಈ ಪ್ರಕರಣದ ಪ್ರಮುಖ ಆರೋಪಿ ಮಣಿಂದರ್ ಸಿಂಗ್ ಪಂಧೇರ್ ಮನೆ ಕೆಲಸದ ಆಳು ಸುರೇಂದರ್ ಕೋಲಿ ವಿರುದ್ಧದ ದಾಖಲಾಗಿದ್ದ ಹಲವು ಪ್ರಕರಣಗಳ ಪೈಕಿ 12 ಪ್ರಕರಣಗಳಲ್ಲಿ ದೋಷ ಮುಕ್ತಗೊಳಿಸಿತ್ತು.
2005 – 2006ರ ನಡುವೆ ನಡೆದಿದ್ದ ಸರಣಿ ಹತ್ಯಾಕಾಂಡ ಪ್ರಕರಣಗಳಲ್ಲಿ ಸರ್ಕಾರಿ ವಕೀಲರು ಆರೋಪಿಗಳ ವಿರುದ್ಧದ ದೋಷಾರೋಪವನ್ನು ಸಾಬೀತು ಮಾಡಲು ವಿಫಲರಾದ ಹಿನ್ನೆಲೆಯಲ್ಲಿ ಆರೋಪಿಗಳ ವಿರುದ್ಧ ದಾಖಲಾಗಿದ್ದ ಪ್ರಕರಣಗಳಲ್ಲಿ ಆರೋಪಿಗಳನ್ನು ಖುಲಾಸೆ ಮಾಡಲಾಗಿತ್ತು. ಹಾಗೂ ಪೊಲೀಸರ ತನಿಖಾ ಪ್ರಕ್ರಿಯೆ ಬಗ್ಗೆಯೇ ಅನುಮಾನಗಳು ವ್ಯಕ್ತವಾಗಿವೆ. ಕೇವಲ ಅನುಮಾನದ ಆರೋಪದ ಮೇಲೆ ಆರೋಪಿಗಳನ್ನು ಬಂಧಿಸಿ ಅವರ ವಿರುದ್ಧ ದೋಷಾರೋಪಪಟ್ಟಿ ದಾಖಲು ಮಾಡಲಾಗಿದ್ದು, ಆರೋಪಿಗಳ ವಿರುದ್ಧ ಆರೋಪಿಸಲಾಗಿದ್ದ ಅನುಮಾನಾಸ್ಪದ ಕೃತ್ಯವನ್ನು ಸಾಬೀತು ಮಾಡಲು ಸರ್ಕಾರಿ ವಕೀಲರು ವಿಫಲರಾಗಿದ್ದರೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತ್ತು.
ಸೋಮವಾರವೇ ನ್ಯಾಯಾಲಯ ನಿಥಾರಿ ಹತ್ಯಾಕಾಂಡ ಪ್ರಕರಣದಲ್ಲಿ ಮಣಿಂದರ್ ಸಿಂಗ್ ಪಂಧೇರ್ ದೋಷ ಮುಕ್ತ ಎಂದು ಹೇಳಿತ್ತು. ಇದೀಗ ಆರೋಪಿಯ ಬಿಡುಗಡೆಗೆ ಎರಡನೇ ಆದೇಶವೂ ನ್ಯಾಯಾಲಯದಿಂದ ಸಿಕ್ಕಿದೆ. ಹೀಗಾಗಿ, ಆತನನ್ನು ಬಿಡುಗಡೆ ಮಾಡಲಾಗುತ್ತಿದೆ ಎಂದು ಲುಕ್ಸಾರ್ ಕಾರಾಗೃಹದ ವರಿಷ್ಠಾಧಿಕಾರಿ ಅರುಣ್ ಪ್ರತಾಪ್ ಸಿಂಗ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಜೈಲಿನ ವರಿಷ್ಠಾಧಿಕಾರಿಗಳು ಮಾಧ್ಯಮಗಳಿಗೆ ಮಾಹಿತಿ ನೀಡಿದ ಒಂದು ಗಂಟೆ ಬಳಿಕ ಕಾರಾಗೃಹದ ಎಲ್ಲಾ ಪ್ರಕ್ರಿಯೆಗಳನ್ನೂ ಮುಕ್ತಾಯಗೊಳಿಸಿ ಆರೋಪಿಯನ್ನು ಬಿಡುಗಡೆ ಮಾಡಲಾಗಿದೆ.
ಇನ್ನು ನಿಥಾರಿ ಹತ್ಯಾಕಾಂಡ ಪ್ರಕರಣದ ಪ್ರಮುಖ ಆರೋಪಿ ಸುರೇಂದರ್ ಕೋಲಿ ಇನ್ನೂ ಕೂಡಾ ಜೈಲಿನಲ್ಲೇ ಇದ್ದಾನೆ. ಈತನನ್ನು ಉತ್ತರ ಪ್ರದೇಶದ ಗಾಜಿಯಾಬಾದ್‌ನ ದಸ್ನಾ ಕಾರಾಗೃಹದಲ್ಲಿ ಇರಿಸಲಾಗಿದೆ. ಆರೋಪಿಗಳಿಗೆ ಈ ಹಿಂದೆ ಕೆಳ ನ್ಯಾಯಾಲಯ ವಿಧಿಸಿದ್ದ ಮರಣ ದಂಡನೆ ಶಿಕ್ಷೆಯನ್ನು ರದ್ದು ಮಾಡಲಾಗಿದೆ. ಒಟ್ಟು 18 ಪ್ರಕರಣಗಳ ಪೈಕಿ 12 ಪ್ರಕರಣಗಳಲ್ಲಿ ಸುರೇಂದರ್ ಕೋಲಿ ಖುಲಾಸೆ ಆಗಿದ್ದಾನೆ. ಇನ್ನೂ 4 ಪ್ರಕರಣಗಳು ಆತನ ಮೇಲಿವೆ. ಈ ಪ್ರಕರಣಗಳ ಅಡಿ ಆರೋಪಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾನೆ. 14 ವರ್ಷದ ಬಾಲಕಿಯ ಹತ್ಯೆ ಪ್ರಕರಣದ ಅಡಿ ಆರೋಪಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದಾನೆ.

ನೋಯ್ಡಾದ ನಿಥಾರಿಯಲ್ಲಿ ನಡೆದ ಮಕ್ಕಳ ಹಾಗೂ ಯುವತಿಯೊಬ್ಬಳ ಸರಣಿ ಹತ್ಯಾಕಾಂಡ ಹಾಗೂ ಅತ್ಯಾಚಾರ ಪ್ರಕರಣ ಸಂಬಂಧ ಮಣಿಂದರ್ ಸಿಂಗ್ ಪಂಧೇರ್ ಹಾಗೂ ಸುರೇಂದರ್ ಕೋಲಿಯನ್ನು ಪ್ರಮುಖ ಆರೋಪಿಗಳು ಎಂದು ಪರಿಗಣಿಸಲಾಗಿತ್ತು. ಕೆಳ ನ್ಯಾಯಾಲಯ ಆರೋಪಿಗಳಿಗೆ ಅತ್ಯಾಚಾರ ಹಾಗೂ ಕೊಲೆ ಆರೋಪದ ಅಡಿ ಮರಣ ದಂಡನೆ ಶಿಕ್ಷೆ ವಿಧಿಸಿತ್ತು.

ಬಳಿಕ ಒಂದೊಂದೇ ಪ್ರಕರಣಗಳಲ್ಲಿ ಆರೋಪಿಗಳು ದೋಷ ಮುಕ್ತರಾಗಿದ್ದಾರೆ. ಪ್ರಕರಣದ 2ನೇ ಆರೋಪಿ ಮಣಿಂದರ್ ಸಿಂಗ್ ಪಂಧೇರ್ ಜೈಲಿನಿಂದ ಹೊರಬಂದಿದ್ದು, ಮೊದಲ ಹಾಗೂ ಪ್ರಮುಖ ಆರೋಪಿ ಸುರೇಂದರ್ ಕೋಲಿ ಇನ್ನೂ ಜೈಲಿನಲ್ಲೇ ಇದ್ದಾನೆ. ಆತನ ವಿರುದ್ಧ ಇನ್ನೂ 4 ಪ್ರಕರಣಗಳು ಬಾಕಿ ಇವೆ.
ನೋಯ್ಡಾದ ಚರಂಡಿಗಳಲ್ಲಿ ಮಕ್ಕಳ ಅಸ್ಥಿ ಪಂಜರ ಪತ್ತೆಯಾಗುವ ಮೂಲಕ ಈ ಪ್ರಕರಣ ಬೆಳಕಿಗೆ ಬಂದಿತ್ತು. ಪೊಲೀಸರ ತನಿಖೆ ಮುಂದುವರೆದಂತೆ ಹಲವು ಅಸ್ಥಿ ಪಂಜರಗಳು ಪತ್ತೆಯಾದವು. ಈ ಮೂಲಕ ಈ ಪ್ರಕರಣ ದೇಶಾದ್ಯಂತ ಸುದ್ದಿಯಾಯ್ತು. ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ, ಅತ್ಯಾಚಾರ, ಭೀಕರ ಕೊಲೆ, ನರ ಮಾಂಸ ಭಕ್ಷಣೆ ಸೇರಿದಂತೆ ಹಲವು ಆರೋಪಗಳು ಇಬ್ಬರೂ ಆರೋಪಿಗಳ ಮೇಲಿವೆ.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ