Mysore
20
overcast clouds
Light
Dark

ಕಾರ್ಯಕರ್ತರ ಮುಂದೆಯೇ ನಿರಾಣಿ – ಯತ್ನಾಳ್‌ ವಾರ್‌ : ಹೆಸರೇಳದೇ ಪರಸ್ಪರ ಟೀಕಿಸಿದ ನಾಯಕರು

ಬಾಗಲಕೋಟೆ : ಭಾನುವಾರ ಬೆಳಗಾವಿಯಲ್ಲಷ್ಟೇ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಹಾಗೂ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ನಡುವೆ ಪರೋಕ್ಷ ವಾಕ್ಸಮರ ನಡೆದಿತ್ತು. ಅದರ ಮುಂದುವರಿದ ಭಾಗದಂತೆ ಬಸನಗೌಡ ಪಾಟೀಲ್‌ ಯತ್ನಾಳ್‌ ಹಾಗೂ ಮುರುಗೇಶ್‌ ನಿರಾಣಿ ನಡುವೆ ಸೋಮವಾರ ಬಾಗಲಕೋಟೆಯಲ್ಲಿ ವಾಕ್ಸಮರ ನಡೆದಿದೆ. ಕಾರ್ಯಕರ್ತರ ಸಭೆಯಲ್ಲಿ ಉಭಯ ನಾಯಕರು ಪರಸ್ಪರ ಹೆಸರೇಳದೇ ವಾಗ್ದಾಳಿ ನಡೆಸಿದ್ದಾರೆ.

ಬಾಗಲಕೋಟೆಯಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌, ನನ್ನ ಸೋಲಿಸಲು ಎಷ್ಟೋ ಜನ ಮುಂದಾದರು. ಗೌಡನನ್ನು ಸೋಲಿಸ್ತೀವಿ ಎಂದವರು ಏನಾದ್ರೂ ನಿಮಗೆ ಗೊತ್ತಾಗಿದೆ. ತಪ್ಪುಗಳು ಆಗೋದು ಸಹಜ, ನಾನು ಸಹ ಸೋತಿದ್ದೇನೆ. ಇನ್ಮುಂದೆ ಡಂ, ಡುಂ ಎನ್ನುವಂತಿಲ್ಲ. 20 ವರ್ಷ ನಾನು ಇರೋದೆ ಎಂದು ಹೇಳಿದರು.

ಬಿಜೆಪಿಯಲ್ಲಿನ ದೇವರಂತಹ ಕಾರ್ಯಕರ್ತರು ಎಲ್ಲಿಯೂ ಸಿಗೋದಿಲ್ಲ, ನಾನು ಯಡಿಯೂರಪ್ಪ, ಅನಂತ ಕುಮಾರ್ ಜೊತೆ ಬೆಳೆದವನು, ನಾನು ನಾಲ್ಕನೇ ಲೀಡರ್. ಯಡಿಯೂರಪ್ಪನವರು ನಮ್ಮನ್ನು ಮಂತ್ರಿ ಮಾಡಲಿಲ್ಲ. ಬೊಮ್ಮಾಯಿ ಮಾಡ್ತಿದ್ರು ಆದರೆ, ಅನುಮತಿ ಸಿಗಲಿಲ್ಲ. ನಾವೇನು ಇಲ್ಲಿ ಗುಂಡಾಗಿರಿ ಮಾಡೋಕೆ ಬಂದಿಲ್ಲ, ಹಿಂದೂ ಆಗಿ ಹಿಂದೂಗಳ ವಿರುದ್ಧ ನಿಲ್ಲುವವರೇ ಹಿಜಡಾಗಳು, ನಮ್ಮ ಪಾರ್ಟಿಯಲ್ಲಿದ್ದು ನಮ್ಮವರನ್ನು ಸೋಲಿಸೋದು ಆಗಬಾರದು. ರಾಜ್ಯದಲ್ಲಿ ನಮ್ಮ ಕೆಲವು ನಾಯಕರು ಮಾಡಿದ್ದು ರಾಷ್ಟ್ರೀಯ ನಾಯಕರಿಗೆ ಗೊತ್ತಿದೆ. ಬಾಗಲಕೋಟೆ ರಾಜಕಾರಣ ಹದಗೆಟ್ಟ ಹೈದರಾಬಾದ್‌ ಆಗಿದೆ ಎಂದರು.

ಯತ್ನಾಳ್‌ ಹೆಸರು ಹೇಳದೇ ನಿರಾಣಿ ಖಡಕ್‌ ಎಚ್ಚರಿಕೆ : ಬಸನಗೌಡ ಪಾಟೀಲ್‌ ಯತ್ನಾಳ್‌ ಭಾಷಣಕ್ಕೆ ವೇದಿಕೆಯಲ್ಲಿಯೇ ಯತ್ನಾಳ್‌ ಹೆಸರು ಹೇಳದೇ ತಿರುಗೇಟು ನೀಡಿದ ಮುರುಗೇಶ್‌ ನಿರಾಣಿ, ನಾವು ಸಹ ಕೃಷ್ಣಾ ನದಿ ನೀರು ಕುಡಿದೀವಿ. ಬಾಗಲಕೋಟೆ, ವಿಜಯಪುರ ಗಾಳಿನೇ ಸೇವಿಸಿದ್ದೇವೆ. ಯಾರು ಏನು ಮಾತಾಡ್ತಾರೆ ಅದರ ಹತ್ತರಷ್ಟು ಶಬ್ದ ನಮ್ಮ ಬಾಯಲ್ಲಿ ಇವೆ. ಶಿಸ್ತಿನಿಂದ ಇದ್ದರೆ ನಾವು ಶಿಸ್ತಿನಿಂದ ಇರ್ತೇವೆ. ನೀವು ಏನಾದರೂ ಉಪದ್ಯಾಪಿ ಮಾಡಲು ಬಂದಿದ್ರೆ ನಾವು ಬೇರೆ ಭಾಷೆಯಲ್ಲಿ ಮಾತಾಡುತ್ತೇವೆ ಎಂದು ಕಿಡಿಕಾರಿದರು.

ನಮ್ಮಲ್ಲಿ ನಿಷ್ಠೆ ಇರಲಿಲ್ಲ, ವೇದಿಕೆಯಲ್ಲಿ ಇರುವ ಅಥವಾ ಪ್ರಮುಖರ ತಪ್ಪಿನಿಂದ ಸೋತಿದ್ದೇವೆ. ವಿನಃ ಕಾರ್ಯಕರ್ತರಿಂದಲ್ಲ, ನಾನು 35 ವರ್ಷದಿಂದ ಬಿಜೆಪಿಯಲ್ಲಿ ಇದ್ದೇನೆ. ಬಿಜೆಪಿ ನನ್ನ ತಾಯಿ, ಇಲ್ಲೆ ಇದ್ದೇನೆ, ಇಲ್ಲೆ ಇರ್ತೇನೆ ನಾನು ಮತ್ತೊಬ್ಬರ ತರಹ ನಾಟಕ ಆಡಿ, ಈ ಕಡೆ ಒಂದು ಕಡೆ, ಆ ಕಡೆ ಒಂದು ಕಡೆ ಹೋಗಿ, ತಲೆಮೇಲೆ ಟೊಪಿ ಹಾಕಿಕೊಂಡು ನಮಾಜ್ ಬಿಟ್ಟು ಮಾತಾಡುವವನು ಅಲ್ಲ ಈ ಮುರುಗೇಶ್ ನಿರಾಣಿ ಎಂದರು.

ನೀವು ಸೋತಿದ್ರಿ ಎಂದು ಮುರುಗೇಶ್‌ ನಿರಾಣಿ ತಿರುಗೇಟು : ಯಾರನ್ನೋ ಸೋಲಿಸಲು ಹೋಗಿ ಡುಮುಕ್ ಅಂದ್ರಂತೆ, ನೀವು ಡುಮುಕ್‌ ಆಗಿದ್ರಲ್ಲ. ಅಸೆಂಬ್ಲಿಯಲ್ಲೂ ಸೋತಿರಿ, ಪಾರ್ಲಿಮೆಂಟಲ್ಲೂ ಸೋತಿರಿ. ಅದನ್ನು ಮರೆತಿರಿ. ಅಟಲ್ ಬಿಹಾರಿ ವಾಜಪೇಯಿ, ದೇವೇಗೌಡರು, ಯಡಿಯೂರಪ್ಪ, ಸಿದ್ದರಾಮಯ್ಯ ಸೋತಿದ್ದಾರೆ ಎಂದ ಅವರು, ನಮ್ಮ ಪಾರ್ಟಿಯಲ್ಲಿ ಒಳ ಒಪ್ಪಂದ ಮಾಡಿಕೊಂಡವರು ಯಾರೆಲ್ಲಾ ಇದ್ದಾರೆ ಅಂದ್ರೇ ವಿಜಯಪುರದಲ್ಲಿ ಒಬ್ಬ ಮಂತ್ರಿ ಇದ್ದಾರೆ. ಅವರ ಚೇಲಾ ಆಗಿ ಕೆಲಸ ಮಾಡ್ತಾರೆ. ಮತ್ತೊಬ್ಬರಿಗೆ ಬೆರಳು ಮಾಡಿ ತೋರಿಸ್ತಾರೆ. ಅಂತಹವರು ಎಷ್ಟು ಮಂದಿ ಹೇಳಲಿ ನಾನು ಎಂದು ಹೇಳಿದರು.

ಎಲ್ಲರೂ ಸಗಣಿ ತಿನ್ನೋರು ಇದಾರ. ಅದೆಲ್ಲಾ ಮರೆತು ಬಿಡೋಣ. ಇವತ್ತಿನಿಂದ ಹೊಸ ಮನುಷ್ಯರಾಗೋಣ. ಇಲ್ಲಿವರೆಗೂ ಅವರು ಮಾತಾಡಿದರೂ ನಾನು ಸುಮ್ಮನಿದ್ದೇನೆ ಅಂದ್ರೆ ನಾನು ತಪ್ಪುಗಾರ ಅಂತಾನೂ ಅಲ್ಲ. ಆದರೆ, ಇಲಿ ಬಡಿಯಲು ಹೋಗಿ ಗಣಪನಿಗೆ ಪೆಟ್ಟು ಬೀಳಬಾರದು. ಎನ್ನುವ ಒಂದೇ ಒಂದೇ ಕಾರಣಕ್ಕೆ ಬಹಳ ತಾಳ್ಮೆಯಿಂದ ಇದ್ದೇನೆ. ನಾನು ಇಷ್ಟಕ್ಕೆ ಸುಮ್ಮನಿರುತ್ತೇನೆ. ಯಾರಾದ್ರೂ ನನ್ನ ಬಗ್ಗೆ ಮಾತಾಡಿದ್ರೆ, ಅವರ ಗತಿನೇ ಬೇರೆ ಆಗುತ್ತೆ ಎಂದು ಬಹಳ ಎಚ್ಚರಿಕೆಯಿಂದ ಹೇಳ್ತೇನೆ ಎಂದು ಕಿಡಿಕಾರಿದರು.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ