ಬೆಂಗಳೂರು : ದೇಶದಲ್ಲಿ ಪ್ರತಿ ಮನೆಯ ಆರ್ಥಿಕ ಉಳಿತಾಯ 50 ವಷಗಳ ಹಿಂದಿನ ಪರಿಸ್ಥಿತಿಗಿಂತಲೂ ಕೆಳಮಟ್ಟಕ್ಕೆ ಕುಸಿದಿದ್ದು, ದೈನಂದಿನ ಅಗತ್ಯತೆಗಳ ವೆಚ್ಚ ದುಬಾರಿಯಾಗಿದೆ. ಇದನ್ನು ಮರೆಮಾಚಲು ಕೇಂದ್ರ ಬಿಜೆಪಿ ಸರ್ಕಾರ ನಾನಾ ವಿವಾದಗಳನ್ನು ಸೃಷ್ಟಿಸುತ್ತಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಆಕ್ರೋಶ ಹೊರಹಾಕಿದ್ದಾರೆ.
ಮೋದಿ ಅವರ ಸರ್ಕಾರ ಆರ್ಥಿಕ ಬೆಳವಣಿಗೆಯ ದತ್ತಾಂಶಗಳನ್ನು ತಿರುಚುತ್ತಿದೆ ಎಂದು ಕಿಡಿಕಾರಿದ್ದಾರೆ.
ವೈದ್ಯಕೀಯ ಕ್ಷೇತ್ರದ ವೆಚ್ಚಗಳು ಏಷ್ಯಾ ದೇಶಗಳಲ್ಲೇ ಭಾರತದಲ್ಲಿ ಅತ್ಯಧಿಕವಾಗಿವೆ. ಕಳೆದ 5 ವರ್ಷಗಳಲ್ಲಿ ಚಿಕಿತ್ಸೆಯ ವೆಚ್ಚ ದುಪ್ಪಟ್ಟುಗೊಂಡಿದೆ. ಶಿಕ್ಷಣ ಕ್ಷೇತ್ರದ ವೆಚ್ಚಗಳು ಶೇ.12 ಕ್ಕಿಂತ ದುಬಾರಿಯಾಗಿವೆ ಎಂದು ವಿವರಿಸಿದ್ದಾರೆ.
ದೇಶದ ಶೇ. 74 ರಷ್ಟು ಜನ ಆರೋಗ್ಯಕರ ಆಹಾರಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ತರಕಾರಿಗಳ ಬೆಲೆ ಶೇ. 24 ರಷ್ಟು ಹೆಚ್ಚಾಗಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಮನೆಗಳ ನಿವ್ವಳ ಆಸ್ತಿ 2021 ರಲ್ಲಿ 22.8 ರಷ್ಟು ಶತಕೋಟಿಯಷ್ಟಿತ್ತು. 2022 ರಲ್ಲಿ ಅದು 16.96 ಶತಕೋಟಿ, ಪ್ರಸಕ್ತ ಸಾಲಿಗೆ 13.76 ಶತಕೋಟಿಗೆ ಕುಸಿದಿದೆ. ಮೋದಿ ಸರ್ಕಾರ ಈ ದತ್ತಾಂಶಗಳನ್ನ ಮರೆಮಾಚುತ್ತಿದೆ. ಅದೇ ಕಾರಣಕ್ಕಾಗಿ ಭಾರತ/ಇಂಡಿಯಾ, ಸನಾತನ ಧರ್ಮ ವಿವಾದಗಳು, ಹೊಸ ಸಂಸತ್ ಉದ್ಘಾಟನೆ, ಜಿ20 ಸಮ್ಮೇಳನದಂತಹ ವಿಷಯಗಳನ್ನು ವೈಭವೀಕರಿಸಲಾಗುತ್ತದೆ. ಈ ಎಲ್ಲಾ ವಿಷಯಗಳು ಮೂಲ ಸಮಸ್ಯೆಗಳಿಂದ ಜನರ ಗಮನವನ್ನು ಬೇರೆಡೆ ಗಮನ ಸೆಳೆಯುವಂತೆ ಮಾಡುತ್ತಿವೆ ಎಂದು ಆರೋಪಿಸಿದರು.
ವೈದ್ಯಕೀಯ, ಶಿಕ್ಷಣದ ವೆಚ್ಚ ದುಬಾರಿಯಾಗಿರುವುದು ತರಕಾರಿ ಬೆಲೆ ಹೆಚ್ಚಳ, ಗೃಹ ಆದಾಯ ಕುಸಿತದಂತಹ ಸಮಸ್ಯೆಗಳ ಬಗ್ಗೆ ಬಿಜೆಪಿ ಸರ್ಕಾರ ಎಂದಿಗೂ ಬಾಯಿ ಬಿಡುತ್ತಿಲ್ಲ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.