ನವದೆಹಲಿ: ಮಣಿಪುರ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಬುಧವಾರ ತೀವ್ರ ತರಾಟೆಗೆ ತೆಗೆದುಕೊಂಡ ಕಾಂಗ್ರೆಸ್ ಅಧ್ಯಕ್ಷ ಮತ್ತು ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು, ಭಾರತೀಯ ಜನತಾ ಪಕ್ಷ(ಬಿಜೆಪಿ)ದ ಅಸಮರ್ಥ ಮುಖ್ಯಮಂತ್ರಿಯನ್ನು ಮೊದಲು ವಜಾಗೊಳಿಸುವಂತೆ ಒತ್ತಾಯಿಸಿದರು.
ಸುಂದರ ಮಣಿಪುರ ರಾಜ್ಯವನ್ನು ‘ಯುದ್ಧಭೂಮಿ’ಯನ್ನಾಗಿ ಮಾಡಲಾಗಿದೆ ಎಂದು ಖರ್ಗೆ ಆರೋಪಿಸಿದ್ದಾರೆ.
“147 ದಿನಗಳಿಂದ ಮಣಿಪುರದ ಜನ ನರಳುತ್ತಿದ್ದಾರೆ. ಆದರೆ ಪ್ರಧಾನಿ ಮೋದಿಗೆ ಆ ರಾಜ್ಯಕ್ಕೆ ಭೇಟಿ ನೀಡಲು ಸಮಯವಿಲ್ಲ. ಈ ಹಿಂಸಾಚಾರದಲ್ಲಿ ವಿದ್ಯಾರ್ಥಿಗಳು ಗುರಿಯಾಗುತ್ತಿರುವ ಭಯಾನಕ ಚಿತ್ರಗಳು ಮತ್ತೊಮ್ಮೆ ಇಡೀ ರಾಷ್ಟ್ರವನ್ನು ಬೆಚ್ಚಿಬೀಳಿಸಿದೆ. ಈ ಹಿಂಸಾಚಾರದಲ್ಲಿ ಮಹಿಳೆಯರು ಮತ್ತು ಮಕ್ಕಳನ್ನು ಅಸ್ತ್ರವಾಗಿಸಿಕೊಳ್ಳಲಾಗುತ್ತಿದೆ” ಎಂದು ಖರ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
“ಸುಂದರವಾದ ಮಣಿಪುರ ರಾಜ್ಯ ರಣರಂಗವಾಗಿ ಮಾರ್ಪಟ್ಟಿದೆ, ಎಲ್ಲದಕ್ಕೂ ಬಿಜೆಪಿಯೇ ಕಾರಣ! ಬಿಜೆಪಿಯ ಅಸಮರ್ಥ ಮಣಿಪುರ ಮುಖ್ಯಮಂತ್ರಿ ಬಿರೇನ್ ಸಿಂಗ್ ಅವರನ್ನು ಪ್ರಧಾನಿ ಮೋದಿ ವಜಾಗೊಳಿಸಿಬೇಕು. ಯಾವುದೇ ಪ್ರಕ್ಷುಬ್ಧತೆಯನ್ನು ನಿಯಂತ್ರಿಸಲು ತೆಗೆದುಕೊಳ್ಳಬೇಕಾದ ಮೊದಲ ಕ್ರಮ ಇದಾಗಿದೆ” ಎಂದು ಖರ್ಗೆ ಹೇಳಿದ್ದಾರೆ.
ಮಣಿಪುರದಲ್ಲಿ ಇಬ್ಬರು ಯುವಕರ ಮೃತ ದೇಹಗಳನ್ನು ತೋರಿಸುವ ವಿಡಿಯೋ ವೈರಲ್ ಆದ ನಂತರ ಮತ್ತೆ ಹಿಂಸಾಚಾರ ಭುಗಿಲೆದ್ದಿದ್ದು, ಇಂಟರ್ ನೆಟ್ ಸೇವೆ ಸ್ಥಗಿತಗೊಳಿಸಲಾಗಿದೆ.