Mysore
20
overcast clouds
Light
Dark

ಮಣಿಪುರದ ನಿರಾಶ್ರಿತರಿಗೆ ವ್ಯವಸ್ಥೆ ಕಲ್ಪಿಸಿ : ಸುಪ್ರೀಂಕೋರ್ಟ್ ನಿರ್ದೇಶನ

ಹೊಸದಿಲ್ಲಿ : ಮಣಿಪುರದಲ್ಲಿ ಕಳೆದ ಐದು ದಿನಗಳಿಂದ ನಡೆಯುತ್ತಿರುವ ಹಿಂಸಾಚಾರಕ್ಕೆ ಸುಪ್ರೀಂಕೋರ್ಟ್‌ ಕಳವಳ ವ್ಯಕ್ತಪಡಿಸಿದೆ. ತಕ್ಷಣವೇ ಸಂತ್ರಸ್ತರಿಗೆ ಸೂಕ್ತ ವಸತಿ, ಆಹಾರ, ಔಷಧ ಹಾಗೂ ಇತರೆ ಮೂಲಸೌಕರ್ಯ ಕಲ್ಪಿಸುವಂತೆ ಕೇಂದ್ರ ಹಾಗೂ ರಾಜ್ಯ ಸರಕಾರಗಳಿಗೆ ನಿರ್ದೇಶನ ನೀಡಿದೆ.

ಮಣಿಪುರ ಹಿಂಸಾಚಾರದ ಬಗ್ಗೆ ಎಸ್‌ಐಟಿ ತನಿಖೆಗೆ ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ನಡೆಸಿದ ಸಿಜೆಐ ಡಿವೈ ಚಂದ್ರಚೂಡ್‌, ನ್ಯಾ ಪಿ.ಎಸ್‌. ನರಸಿಂಹ, ನ್ಯಾ ಜೆ.ಬಿ.ಪರಿಧಿವಾಲ ಅವರಿದ್ದ ನ್ಯಾಯಪೀಠ, ತಕ್ಷಣವೇ ಪರಿಸ್ಥಿತಿ ನಿಯಂತ್ರಿಸಿ, ಜನ ಜೀವನ ಸಹಜ ಸ್ಥಿತಿಗೆ ಮರಳುವಂತೆ ಕ್ರಮ ತೆಗೆದುಕೊಳ್ಳಿ. ಹಿಂಸಾಚಾರ, ನಿಯಂತ್ರಣಕ್ಕೆ ಕೈಗೊಳ್ಳಲಾದ ಕ್ರಮ, ಸಂತ್ರಸ್ಥರ ರಕ್ಷಣಾ ಕಾರ್ಯಾಚರಣೆ, ನಿರಾಶ್ರಿತ ಜನರಿಗೆ ನೀಡಲಾದ ಮೂಲಸೌಕರ್ಯಗಳ ಬಗ್ಗೆ 10 ದಿನದಲ್ಲಿ ವರದಿ ನೀಡಿ, ಎಂದು ಕೇಂದ್ರ ಹಾಗೂ ರಾಜ್ಯ ಸರಕಾರಕ್ಕೆ ನಿರ್ದೇಶನ ನೀಡಿದೆ.

ಪರಿಸ್ಥಿತಿ ನಿಯಂತ್ರಣ : ಸರಕಾರದ ಪರವಾಗಿ ಕೋರ್ಟ್‌ಗೆ ಉತ್ತರ ನೀಡಿದ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ, ಹಿಂಸಾಚಾರ ಪೀಡಿತ ಪ್ರದೇಶದಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಜನ ಜೀವನ ನಿಧಾನವಾಗಿ ಸಹಜ ಸ್ಥಿತಿಗೆ ಮರಳುತ್ತಿದೆ. ಕಳೆದ 48 ಗಂಟೆಯಲ್ಲಿ ಯಾವುದೇ ಅತಿರೇಕದ ಘಟನೆಗಳು ನಡೆದಿಲ್ಲ. ನಿರಾಶ್ರಿತರ ರಕ್ಷಣೆಗೆ ಅಗತ್ಯ ಕ್ರಮ ತೆಗೆದುಕೊಳ್ಳಲಾಗಿದೆ. ಸುಮಾರು 23 ಸಾವಿರ ಜನರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ. ವಸತಿ, ಆಹಾರ, ಔಷಧಿ ಸೇರಿ ಅಗತ್ಯ ಸೌಲಭ್ಯ ನೀಡಲಾಗಿದೆ, ಎಂದು ಹೇಳಿದರು.

ಪರಿಶಿಷ್ಟ ಪಂಗಡ ಸ್ಥಾನಮಾನದ ವಿಚಾರವಾಗಿ ಮೈತಿ ಹಾಗೂ ಬುಡಕಟ್ಟು ಸಮುದಾಯದ ನಡುವಿನ ಸಂಘರ್ಷದಿಂದ ಹಿಂಸಾಚಾರ ಸಂಭವಿಸಿದೆ, ಎಂದು ತುಷಾರ್‌ ಮೆಹ್ತಾ ನ್ಯಾಯಪೀಠದ ಗಮನಕ್ಕೆ ತಂದರು.

ವಿದ್ಯಾರ್ಥಿಗಳ ರಕ್ಷಣೆ : ಹಿಂಸಾಚಾರ ಪೀಡಿತ ಮಣಿಪುರದಿಂದ ಹಲವು ರಾಜ್ಯಗಳ ವಿದ್ಯಾರ್ಥಿಗಳನ್ನು ರಕ್ಷಣೆ ಮಾಡಲಾಗಿದೆ. ಬಂಗಾಳದ 18 ವಿದ್ಯಾರ್ಥಿಗಳನ್ನು ವಿಶೇಷ ವಿಮಾನದ ಮೂಲಕ ರಾಜ್ಯಕ್ಕೆ ಕರೆ ತರಲಾಗಿದೆ ಎಂದು ಸಿಎಂ ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ. ದಿಲ್ಲಿ ಮೂಲದ 4 ವಿದ್ಯಾರ್ಥಿಗಳ ರಕ್ಷಣೆಗೆ ಸಿಎಂ ಅರವಿಂದ್‌ ಕೇಜ್ರಿವಾಲ್‌ ಮುಂದಾಗಿದ್ದಾರೆ. ಸಿಎಂ ಬಿರೇನ್‌ ಸಿಂಗ್‌ ಜತೆ ಮಾತುಕತೆ ನಡೆಸಿದ್ದು, ವಿದ್ಯಾರ್ಥಿಗಳ ಸುರಕ್ಷತೆಗೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು. ಆಂಧ್ರಪ್ರದೇಶದ 157 ವಿದ್ಯಾರ್ಥಿಗಳನ್ನು ಸರಕಾರ ರಕ್ಷಣೆ ಮಾಡಿದೆ. ಎರಡು ವಿಶೇಷ ವಿಮಾನದ ಮೂಲಕ ಮಣಿಪುರದಿಂದ ಮರಳಿ ರಾಜ್ಯಕ್ಕೆ ಕರೆ ತಂದಿದೆ. ಬಿಹಾರ, ಮಹಾರಾಷ್ಟ್ರ , ತೆಲಂಗಾಣ ಸರಕಾರಗಳು ಸಹ ಹಿಂಸಾಚಾರ ಪೀಡಿತ ಪ್ರದೇಶದಲ್ಲಿರುವ ತಮ್ಮ ರಾಜ್ಯದ ವಿದ್ಯಾರ್ಥಿಗಳ ರಕ್ಷಣೆಗೆ ವಿಶೇಷ ವ್ಯವಸ್ಥೆ ಮಾಡಿವೆ.

ರಾಜ್ಯದಲ್ಲಿ ಜನಾಂಗೀಯ ಹಿಂಸಾಚಾರದಿಂದ 60 ಮಂದಿ ಸಾವನ್ನಪ್ಪಿದ್ದಾರೆ. 231 ಜನ ಗಾಯಗೊಂಡಿದ್ದಾರೆ. 1700 ಮನೆಗಳು ಬೆಂಕಿಗೆ ಆಹುತಿಯಾಗಿವೆ. ರಾಜ್ಯದ ಜನತೆ ಶಾಂತಿ ಕಾಪಾಡಲು ಸಹಕರಿಸಬೇಕು. ಸಂಕಷ್ಟದಲ್ಲಿರುವವರಿಗೆ ಮೂಲಸ್ಥಾನಕ್ಕೆ ಮರಳಲು ಸರಕಾರ ಅಗತ್ಯ ಸಾರಿಗೆ ವ್ಯವಸ್ಥೆ ಕಲ್ಪಿಸಲಿದೆ ಎಂದು ಮಣಿಪುರ ಮುಖ್ಯಮಂತ್ರಿ ಬಿರೇನ್‌ ಸಿಂಗ್‌ ಹೇಳಿದ್ದಾರೆ.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ