ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರು ಕನ್ನಡಿಗರಿಗೆ ಮಾಡುತ್ತಿರುವ ಬ್ಲಾಕ್‌ಮೇಲ್ ಮತ್ತು ಬೆದರಿಕೆ ತಂತ್ರವನ್ನು ತೀವ್ರವಾಗಿ ಖಂಡಿಸುವುದಾಗಿ ವಿಧಾನ ಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ ಪ್ರಕಾಶ್ ರಾಥೋಡ್ ಹೇಳಿದ್ದಾರೆ.
ಚುನಾವಣಾ ಪ್ರಚಾರಕ್ಕೆಂದು ರಾಜ್ಯಕ್ಕೆ ಬಂದಿದ್ದ ಸಂದರ್ಭದಲ್ಲಿ, ‘ಕೇಂದ್ರದಿಂದ ಪ್ರಧಾನಿ ಮೋದಿ ಕಳುಹಿಸುವ ಹಣ ಪಡೆಯಲು ಕರ್ನಾಟಕದಲ್ಲಿ ಬಿಜೆಪಿ ಅಧಿಕಾರದಲ್ಲಿ ಇರಬೇಕು’ಎಂದು ಹೇಳಿದ್ದೀರಿ. ಇದು ಭಾರತದ ಒಕ್ಕೂಟ ತತ್ವಕ್ಕೆ ವಿರುದ್ಧವಾದ ಅಹಂಕಾರದ ಮಾತಾಗಿದೆ.
ನಿಮ್ಮದು ಒಕ್ಕೂಟ ಸರ್ಕಾರ ಎನ್ನುವುದನ್ನು ಮರೆತು ಕನ್ನಡಿಗರಿಗೆ ಧಮ್ಕಿ ಹಾಕುವ ರೀತಿಯಲ್ಲಿ ಮಾತನಾಡಿದ್ದೀರಿ. ಕರ್ನಾಟಕದಲ್ಲಿ ಬಿಜೆಪಿಯೇತರ ಸರ್ಕಾರ ಇದ್ದರೆ ಕೇಂದ್ರದಿಂದ ಹಣ ಬರುವುದಿಲ್ಲ ಎನ್ನುವ ಅರ್ಥದಲ್ಲಿ ನಿಮ್ಮ ಮಾತು ಧ್ವನಿಸುತ್ತಿದೆ ಎಂದು ಪ್ರಕಾಶ್ ರಾಥೋಡ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕರ್ನಾಟಕದಲ್ಲಿ ಬಿಜೆಪಿಯೇತರ ಸರ್ಕಾರ ಇದ್ದರೆ ನೀವು ಕನ್ನಡಿಗರ ತೆರಿಗೆ ಹಣವನ್ನು ಸ್ವೀಕರಿಸುವುದಿಲ್ಲವೇ? ಕನ್ನಡಿಗರು ಕನ್ನಡ ದ್ರೋಹಿಯಾದ ಬಿಜೆಪಿ ಸರ್ಕಾರಕ್ಕೆ ತೆರಿಗೆ ಹಣ ನೀಡುವುದಿಲ್ಲ ಎಂದು ಹಠಕ್ಕೆ ಬಿದ್ದರೆ ಅದರ ಪರಿಣಾಮ ಏನಾಗಬಹುದು ಎನ್ನುವ ಕಲ್ಪನೆಯಾದರೂ ನಿಮಗೆ ಇದೆಯೇ? ಭಾರತದ ಅಡಿಪಾಯ ಒಕ್ಕೂಟ ತತ್ವದ ಕಾರಣದಿಂದ ಈ ಕ್ಷಣಕ್ಕೂ ವಜ್ರದಷ್ಟು ಗಟ್ಟಿಯಾಗಿದೆ. ಇದನ್ನು ದುರ್ಬಲಗೊಳಿಸುವ ಪ್ರಯತ್ನ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ದಿನದಿಂದಲೂ ನಡೆಯುತ್ತಿದೆ.
ಕರ್ನಾಟಕದ ಬ್ಯಾಂಕ್‌ಗಳನ್ನು ನುಂಗಿದಿರಿ. ಅದೇ ರೀತಿ ಕನ್ನಡಿಗರ ಪಾಲಿನ ಉದ್ಯೋಗದ ಅವಕಾಶಗಳು ಮತ್ತು ಬದುಕಿನ ಅವಕಾಶಗಳನ್ನು ನಿರಂತರವಾಗಿ ಕಿತ್ತುಕೊಳ್ಳುತ್ತಲೇ ಇದ್ದೀರಿ. ಈಗ ಕನ್ನಡದ ಮಕ್ಕಳು ಕುಡಿಯುವ ನಂದಿನಿ ಹಾಲಿನ ಮೇಲೂ ನಿಮ್ಮ ಕಣ್ಣು ಬಿದ್ದಿದೆ. ಇವೆಲ್ಲದರ ಆಚೆಗೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದರೆ ಮಾತ್ರ ಕೇಂದ್ರದ ಅನುದಾನ ಎನ್ನುವ ಅರ್ಥದಲ್ಲಿ ಮಾತನಾಡಿ ಬೆದರಿಕೆ ಹಾಕಿರುವುದನ್ನು ಕನ್ನಡಿಗರು ಎಂದಿಗೂ ಸಹಿಸುವುದಿಲ್ಲ ಎಂದಿದ್ದಾರೆ.
ನಿಮ್ಮ ಬಿಜೆಪಿಗೆ ಇರುವುದು ನಿನ್ನೆ ಮೊನ್ನೆಯ ಇತಿಹಾಸ. ಕನ್ನಡ ಸಂಸ್ಕೃತಿ ಮತ್ತು ಕನ್ನಡತನ ಹಾಗೂ ಕನ್ನಡ ನೆಲಕ್ಕೆ ಸಾವಿರಾರು ವರ್ಷಗಳ ಇತಿಹಾಸ, ಚರಿತ್ರೆ ಇದೆ. ಇದನ್ನು ಕೆಣಕುವ ಪ್ರಯತ್ನ ಮಾಡಬೇಡಿ. ನೀವು ಹಿಮಾಚಲ ಪ್ರದೇಶದಿಂದ ಬಂದು ಕನ್ನಡಿಗರ ಸಹನೆ ಮತ್ತು ಸ್ವಾಭಿಮಾನ ಕೆಣಕಬಾರದು. ನಿಮ್ಮ ರಾಜ್ಯದಲ್ಲೇ ನೀವು ನಿಮ್ಮ ಬಿಜೆಪಿಯನ್ನು ರಕ್ಷಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಇನ್ನು ಕರ್ನಾಟಕಕ್ಕೆ ಬಂದು ಈಗಾಗಲೇ ತುರ್ತುನಿಗಾ ಘಟಕದಲ್ಲಿ ಏದುಸಿರುವ ಬಿಡುತ್ತಿರುವ ಬಿಜೆಪಿಯ ಕುತ್ತಿಗೆ ಹಿಚುಕಬೇಡಿ ಎಂದು ರಾಥೋಡ್ ವಾಗ್ದಾಳಿ ನಡೆಸಿದ್ದಾರೆ.
ಕನ್ನಡಿಗರ ಸಾರ್ವಭೌಮತ್ವವನ್ನು ಕೆಣಕುವ ಪ್ರಯತ್ನ ಮಾಡಬೇಡಿ ಎಂದು ಪ್ರಕಾಶ್ ರಾಥೋಡ್ ಅವರು, ತಮ್ಮ ಪತ್ರಿಕಾ ಹೇಳಿಕೆಯಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷರ ಹೇಳಿಕೆಯನ್ನು ಖಂಡಿಸಿದ್ದಾರೆ.