Mysore
30
light rain

Social Media

ಗುರುವಾರ, 03 ಅಕ್ಟೋಬರ್ 2024
Light
Dark

ಗೃಹ ಲಕ್ಷ್ಮಿ ಯೋಜನೆ ಉದ್ಘಾಟನೆ: ಕಾರ್ಯಕ್ರಮಕ್ಕೆ ಎಲ್ಲಾ ಶಾಸಕರನ್ನು ಆಹ್ವಾನಿಸಿದ ಡಿಕೆ ಶಿವಕುಮಾರ್

ಮೈಸೂರು:  ಆಗಸ್ಟ್ 30ರಂದು ಮೈಸೂರಿನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಗೃಹಲಕ್ಷ್ಮಿ ಯೋಜನೆಗೆ ಚಾಲನೆ ನೀಡುವಂತೆ ಆಡಳಿತ ಮತ್ತು ವಿರೋಧ ಪಕ್ಷಗಳ ಎಲ್ಲಾ ಶಾಸಕರಿಗೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಗುರುವಾರ ಆಹ್ವಾನ ನೀಡಿದ್ದಾರೆ.

ಇಲ್ಲಿನ ಮಹಾರಾಜ ಕಾಲೇಜು ಮೈದಾನದಲ್ಲಿನ ಸಿದ್ಧತೆಗಳನ್ನು ಪರಿಶೀಲಿಸಿದ ನಂತರ ಮಾತನಾಡಿದ ಅವರು, ರಾಜ್ಯದಾದ್ಯಂತ 1.1 ಕೋಟಿ ಕುಟುಂಬಗಳ ಮುಖ್ಯಸ್ಥೆಯರು ಈ ಯೋಜನೆಗೆ ನೋಂದಾಯಿಸಿಕೊಂಡಿದ್ದಾರೆ. ಈ ಯೋಜನೆಯಡಿಯಲ್ಲಿ ಪ್ರತಿ ಮನೆಯ ಮುಖ್ಯಸ್ಥೆಗೆ ಮಾಸಿಕ 2 ಸಾವಿರ ರೂ. ನೀಡಲಾಗುತ್ತದೆ ಎಂದರು.

ಮೈಸೂರಿನಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದು, ಮೈಸೂರು, ಚಾಮರಾಜನಗರ, ಮಂಡ್ಯ, ಹಾಸನ, ಕೊಡಗು ಜಿಲ್ಲೆಗಳಿಂದ 2 ಸಾವಿರ ಬಸ್‌ಗಳಲ್ಲಿ 1 ಲಕ್ಷ ಫಲಾನುಭವಿಗಳು ಪಾಲ್ಗೊಳ್ಳಲಿದ್ದಾರೆ.

ರಾಜ್ಯದಲ್ಲಿ ಬರ ಹಿನ್ನೆಲೆಯಲ್ಲಿ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಕಾರ್ಯಕ್ರಮ ಆರಂಭಿಸುವ ಅಗತ್ಯತೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಮೈಸೂರಿನಲ್ಲಿ ಆರಂಭವಾಗಲಿರುವ ಕಾರ್ಯಕ್ರಮವನ್ನು ಇತರ ತಾಲೂಕುಗಳಲ್ಲಿಯೂ ನೋಡಲ್‌ ಅಧಿಕಾರಿಗಳ ಉಸ್ತುವಾರಿಯಲ್ಲಿ ಏಕಕಾಲಕ್ಕೆ ಆರಂಭಿಸಲಾಗುವುದು ಎಂದರು.

ತಮಿಳುನಾಡಿಗೆ ಕಾವೇರಿ ನೀರು ಬಿಡುವ ಕುರಿತು ಪ್ರತಿಕ್ರಿಯಿಸಿದ ಅವರು, ಕರ್ನಾಟಕದ ಹಿತಾಸಕ್ತಿ ಕಾಪಾಡಲು ಸರ್ಕಾರ ಬದ್ಧವಾಗಿದೆ ಮತ್ತು ಸುಪ್ರೀಂ ಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿದೆ ಎಂದು ತಿಳಿಸಿದರು.

‘ಯಾವುದೇ ರಾಜಕೀಯ ಕಾರಣಗಳಿಲ್ಲ’

ಬೆಳಗಾವಿಯಿಂದ ಮೈಸೂರಿಗೆ ಗೃಹ ಲಕ್ಷ್ಮಿ ಯೋಜನೆಗೆ ಚಾಲನೆ ನೀಡುವ ಕಾರ್ಯಕ್ರಮದ ಸ್ಥಳಾಂತರದ ಕುರಿತು ಪ್ರತಿಕ್ರಿಯಿಸಿದ ಶಿವಕುಮಾರ್, ಈ ಕ್ರಮದ ಹಿಂದೆ ಯಾವುದೇ ರಾಜಕೀಯವಿಲ್ಲ. ಬೆಳಗಾವಿಯಲ್ಲಿ ಮತ್ತೊಂದು ಕಾರ್ಯಕ್ರಮ ಪ್ರಾರಂಭಿಸಲು ಸರ್ಕಾರ ಯೋಜಿಸಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಘೋಷಿಸಿದ ಖಾತರಿ ಯೋಜನೆಗಳು ದೇಶದಾದ್ಯಂತ ಜನಪ್ರಿಯವಾಗುತ್ತಿವೆ ಎಂದು ಅವರು ಹೇಳಿದರು.

ಕಾಂಗ್ರೆಸ್‌ನ ಈ ಖಾತರಿಗಳನ್ನು ಟೀಕಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಈಗ ಮಧ್ಯಪ್ರದೇಶದಲ್ಲಿ ಅಂತಹ ಯೋಜನೆಗಳನ್ನೇ ಪ್ರಾರಂಭಿಸುತ್ತಿದ್ದಾರೆ ಎಂದು ಅವರು ಹೇಳಿದರು.

ಗೃಹ ಲಕ್ಷ್ಮಿ ಯೋಜನೆಗೆ ಬೆಂಗಳೂರಿನಲ್ಲೇ ಚಾಲನೆ ನೀಡಲು ಸರ್ಕಾರ ಯೋಜಿಸಿತ್ತು. ಆದರೆ, ದೊಡ್ಡ ಪ್ರಮಾಣದ ಕಾರ್ಯಕ್ರಮವು ರಾಜ್ಯ ರಾಜಧಾನಿಯಲ್ಲಿ ಟ್ರಾಫಿಕ್ ಜಾಮ್ ಉಂಟುಮಾಡಬಹುದು. ಹೀಗಾಗಿ, ಮೈಸೂರಿನಲ್ಲಿ ಚಾಲನೆ ನೀಡಲು ನಿರ್ಧರಿಸಿದೆ ಎಂದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ