Mysore
26
broken clouds

Social Media

ಬುಧವಾರ, 15 ಜನವರಿ 2025
Light
Dark

ಆರಗ ಆಸ್ತಿಯಲ್ಲಿ ಬಿಡಿಎ ನಿವೇಶನ

ಬೆಂಗಳೂರು : ಸುಪ್ರೀಂ ಕೋರ್ಟ್‌ ಆದೇಶದಂತೆ ಹಂಚಿಕೆ ರದ್ದುಪಡಿಸಿ, ಬಿಡಿಎ ವಶಕ್ಕೆ ಸ್ವತ್ತನ್ನು ಹಿಂಪಡೆಯಲು ಪ್ರಕ್ರಿಯೆ ಆರಂಭಿಸಿರುವ ವಿವಾದಿತ ನಿವೇಶನವನ್ನೂ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ತಮ್ಮ ಆಸ್ತಿ ಪಟ್ಟಿಯಲ್ಲಿ ಉಲ್ಲೇಖಿಸಿದ್ದಾರೆ.

ಎಚ್‌ಎಸ್‌ಆರ್‌ ಬಡಾವಣೆಯಲ್ಲಿ ಸಚಿವರಿಗೆ 2006ರಲ್ಲಿ 40×60 ಚದರ ಅಡಿ ವಿಸ್ತೀರ್ಣದ ನಿವೇಶನ ಹಂಚಿಕೆ ಮಾಡಲಾಗಿತ್ತು. ಜ್ಞಾನೇಂದ್ರ ಅವರ ಕೋರಿಕೆಯಂತೆ ಆ ಹಂಚಿಕೆಯನ್ನು ರದ್ದು ಮಾಡಿ, 2009ರಲ್ಲಿ ಅದೇ ಬಡಾವಣೆಯಲ್ಲಿ 50×80 ಚ. ಅಡಿ ವಿಸ್ತೀರ್ಣದ ನಿವೇಶನ ಹಂಚಿಕೆ ಮಾಡಲಾಗಿತ್ತು.

ಕಾನೂನು ತೊಡಕಿನ ಕಾರಣದಿಂದ 2021ರಲ್ಲಿ ಆರ್‌ಎಂವಿ ಎರಡನೇ ಹಂತದ ಬಡಾವಣೆಯಲ್ಲಿ 50×80 ಚ. ಅಡಿ ವಿಸ್ತೀರ್ಣದ ಬದಲಿ ನಿವೇಶನ ಹಂಚಿಕೆ ಮಾಡಲಾಗಿತ್ತು.

ಬಿಡಿಎ ನಿವೇಶನ ಹಂಚಿಕೆ ನಿಯಮಗಳ ಸೆಕ್ಷನ್‌ 11–ಎ ಉಲ್ಲಂಘನೆಯಾಗಿರುವ ಕಾರಣದಿಂದ ಈ ಬದಲಿ ನಿವೇಶನ ಹಂಚಿಕೆಯನ್ನು ರದ್ದುಮಾಡಿ, ಸ್ವತ್ತನ್ನು ಪ್ರಾಧಿಕಾರದ ವಶಕ್ಕೆ ಪಡೆಯುವಂತೆ ಸುಪ್ರೀಂ ಕೋರ್ಟ್‌ ನಿರ್ದೇಶನ ನೀಡಿತ್ತು.

ಗೃಹ ಸಚಿವರಿಗೆ ನೋಟಿಸ್‌ ಜಾರಿ ಮಾಡಿದ್ದ ಬಿಡಿಎ, ಸ್ವತ್ತನ್ನು ಪ್ರಾಧಿಕಾರದ ವಶಕ್ಕೆ ಮರಳಿಸುವಂತೆ ಸೂಚಿಸಿತ್ತು. ಬಳಿಕ ಮನವಿಯೊಂದನ್ನು ಸಲ್ಲಿಸಿದ್ದ ಸಚಿವರು, ‘ಬಿಡಿಎ ತಪ್ಪಿನಿಂದಲೇ ಸಮಸ್ಯೆ ಉದ್ಭವಿಸಿದೆ. ನನಗೆ ಬೇರೊಂದು ನಿವೇಶನ ಮಂಜೂರು ಮಾಡಿ’ ಎಂದು ಕೋರಿದ್ದರು.

ಮನವಿಯನ್ನು ಬಾಕಿ ಇರಿಸಿಕೊಂಡಿರುವ ಬಿಡಿಎ ಆಡಳಿತ ಮಂಡಳಿ, ಜ್ಞಾನೇಂದ್ರ ಅವರಿಂದ ನಿವೇಶನವನ್ನು ವಶಕ್ಕೆ ಪಡೆಯಲು ನಗರದ ಸಿಟಿ ಸಿವಿಲ್ ನ್ಯಾಯಾಲಯದಲ್ಲಿ ಅಸಲು ದಾವೆ ಹೂಡಿದೆ.

ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದಿಂದ ಮರು ಆಯ್ಕೆ ಬಯಸಿ ನಾಮಪತ್ರ ಸಲ್ಲಿಸಿರುವ ಜ್ಞಾನೇಂದ್ರ, ವಿವಾದಿತ ಬಿಡಿಎ ನಿವೇಶನವನ್ನೂ ತಮ್ಮ ಆಸ್ತಿ ಪಟ್ಟಿಯಲ್ಲಿ ಉಲ್ಲೇಖಿಸಿದ್ದಾರೆ. ಬೆಂಗಳೂರಿನ ಆರ್‌ಎಂವಿ ಎರಡನೇ ಹಂತದ ಬಡಾವಣೆಯ ಭೂಪಸಂದ್ರದಲ್ಲಿ ನಿವೇಶನ ಸಂಖ್ಯೆ 2 ಅನ್ನು ಹೊಂದಿರುವುದಾಗಿ ಘೋಷಿಸಿದ್ದಾರೆ.

‘ಎಚ್‌ಎಸ್‌ಆರ್‌ ಬಡಾವಣೆಯಲ್ಲಿ ಹಂಚಿಕೆಯಾಗಿದ್ದ ನಿವೇಶನಕ್ಕೆ ಬದಲಿಯಾಗಿ ಹಂಚಿಕೆ ಮಾಡಿರುವ ಈ ನಿವೇಶನಕ್ಕೆ ₹ 13.94 ಲಕ್ಷ ಪಾವತಿಸಲಾಗಿದೆ. ಅಭಿವೃದ್ಧಿ ಕೆಲಸಗಳಿಗೆ ₹ 3 ಲಕ್ಷ ವೆಚ್ಚ ಮಾಡಲಾಗಿದೆ. ಪ್ರಸ್ತುತ ಈ ನಿವೇಶನದ ಮಾರುಕಟ್ಟೆ ಮೌಲ್ಯ ₹ 4 ಕೋಟಿ’ ಎಂದು ನಾಮಪತ್ರದ ಜತೆ ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ತಿಳಿಸಿದ್ದಾರೆ.

‘ಸಚಿವರಿಗೆ ಆರ್‌ಎಂವಿ ಬಡಾವಣೆಯಲ್ಲಿ ಹಂಚಿಕೆಯಾಗಿದ್ದ ನಿವೇಶನವನ್ನು ವಾಪಸ್‌ ಪಡೆಯಲು ನಗರ ಸಿವಿಲ್‌ ನ್ಯಾಯಾಲಯದಲ್ಲಿ ಅಸಲು ದಾವೆ ಹೂಡಿದ್ದೇವೆ. ಸಚಿವರ ಮನವಿಯೂ ಪ್ರಾಧಿಕಾರದಲ್ಲಿ ಬಾಕಿ ಇದೆ’ ಎಂದು ಬಿಡಿಎ ಕಾರ್ಯದರ್ಶಿ ಶಾಂತರಾಜು ವೈ.ಬಿ. ಹೇಳಿದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ