ಪ್ರಸ್ತುತ ನಡೆಯುತ್ತಿರುವ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿ ನಾಕ್‌ಔಟ್ ಹಂತ ತಲುಪಿದ್ದು, ಭಾರತ, ಸೌತ್ ಆಫ್ರಿಕಾ, ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ತಂಡಗಳು ಸೆಮಿಫೈನಲ್ ತಲುಪಿವೆ. ಟೂರ್ನಿಯಲ್ಲಿ ಭಾಗವಹಿಸಿದ್ದ ಒಟ್ಟು ಹತ್ತು ತಂಡಗಳ ಪೈಕಿ ಈ 4 ತಂಡಗಳು ಸೆಮೀಸ್ ತಲುಪಿದ್ದು ಉಳಿದ 6 ತಂಡಗಳು ಲೀಗ್ ಹಂತದಲ್ಲಿಯೇ ಟೂರ್ನಿಯಿಂದ ಹೊರಬಿದ್ದಿದ್ದವು.
ಇನ್ನು ಈ ಬಾರಿಯ ವಿಶ್ವಕಪ್ ಟೂರ್ನಿ ಆರಂಭವಾಗುವ ಮುನ್ನವೇ ಸೆಮಿಫೈನಲ್ ತಲುಪಬಹುದಾದ ತಂಡ ಎಂದು ಹಲವರಿಂದ ಊಹಿಸಲ್ಪಟ್ಟಿದ್ದ ಪಾಕಿಸ್ತಾನ ಲೀಗ್ ಹಂತದಲ್ಲಿಯೇ ಟೂರ್ನಿಯಿಂದ ಹೊರ ಬೀಳುವ ಮೂಲಕ ತೀವ್ರ ಮುಖಭಂಗಕ್ಕೆ ಒಳಗಾಗಿತ್ತು.
ಒಟ್ಟು 9 ಲೀಗ್ ಪಂದ್ಯಗಳಲ್ಲಿ ಕಣಕ್ಕಿಳಿದಿದ್ದ ಪಾಕಿಸ್ತಾನ ತಂಡ ಕೇವಲ 4 ಪಂದ್ಯಗಳಲ್ಲಿ ಮಾತ್ರ ಗೆದ್ದು ಸೆಮಿಫೈನಲ್ ಅರ್ಹತೆ ಪಡೆದುಕೊಳ್ಳಲಾಗದೇ ಅಂಕಪಟ್ಟಿಯಲ್ಲಿ ಐದನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ಹೀಗೆ ಟೂರ್ನಿಯಲ್ಲಿ ತಂಡ ಕಳಪೆ ಪ್ರದರ್ಶನ ನೀಡಿದ ಬೆನ್ನಲ್ಲೇ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಮ್ ನಾಯಕತ್ವದಿಂದ ಕೆಳಗಿಳಿದಿದ್ದಾರೆ. ಪಾಕಿಸ್ತಾನ ತಂಡವನ್ನು ಎಲ್ಲಾ ಮೂರೂ ಮಾದರಿಯಲ್ಲಿಯೂ ಮುನ್ನಡೆಸುತ್ತಿದ್ದ ಬಾಬರ್ ಅಜಮ್ ನಾಯಕತ್ವಕ್ಕೆ ರಾಜೀನಾಮೆ ಘೋಷಿಸಿದ್ದು ಎಲ್ಲಾ ಮಾದರಿಯಲ್ಲಿಯೂ ಆಟಗಾರನಾಗಿ ಕಣಕ್ಕಿಳಿಯುವುದಾಗಿ ಹೇಳಿಕೆ ನೀಡಿದ್ದಾರೆ.
ರಾಜೀನಾಮೆ ಘೋಷಿಸುವ ಸಮಯದಲ್ಲಿ ಮಾತಾನಾಡಿರುವ ಬಾಬರ್ ಅಜಮ್ “2019ರಲ್ಲಿ ಪಾಕಿಸ್ತಾನವನ್ನು ಮುನ್ನಡೆಸಲು ಪಿಸಿಬಿಯಿಂದ ಕರೆ ಬಂದ ಕ್ಷಣವನ್ನು ನಾನು ನೆನಪಿಸಿಕೊಳ್ಳುತ್ತೇನೆ. ಕಳೆದ ನಾಲ್ಕು ವರ್ಷಗಳಲ್ಲಿ ನಾನು ಮೈದಾನದ ಹೊರಗೆ ಮತ್ತು ಮೈದಾನದ ಒಳಗೆ ಅನೇಕ ಏಳು ಬೀಳುಗಳನ್ನು ಕಂಡಿದ್ದೇನೆ. ಆದರೆ ತುಂಬು ಹೃದಯದಿಂದ ಕ್ರಿಕೆಟ್ ಜಗತ್ತಿನಲ್ಲಿ ಪಾಕಿಸ್ತಾನದ ಹೆಮ್ಮೆ ಮತ್ತು ಗೌರವವನ್ನು ಕಾಪಾಡಿಕೊಳ್ಳುವ ಗುರಿಯನ್ನು ಹೊಂದಿದ್ದೇನೆ” ಎಂದು ಬಾಬರ್ ಅಜಮ್ ಹೇಳಿಕೆ ನೀಡಿದ್ದಾರೆ.
ಇನ್ನೂ ಮುಂದುವರಿದು ಮಾತನಾಡಿದ ಬಾಬರ್ ಅಜಮ್ “ಇಂದು ನಾನು ಪಾಕಿಸ್ತಾನದ ಎಲ್ಲಾ ಮಾದರಿಯ ನಾಯಕತ್ವದಿಂದ ಕೆಳಗಿಳಿಯುತ್ತಿದ್ದೇನೆ. ಇದು ಕಠಿಣ ನಿರ್ಧಾರ ಆದರೆ ಈ ಕರೆಗೆ ಇದು ಸರಿಯಾದ ಸಮಯ ಎಂದು ನಾನು ಭಾವಿಸುತ್ತೇನೆ. ನಾನು ಎಲ್ಲಾ ಮೂರು ಮಾದರಿಗಳಲ್ಲಿ ಆಟಗಾರನಾಗಿ ಪಾಕಿಸ್ತಾನವನ್ನು ಪ್ರತಿನಿಧಿಸುವುದನ್ನು ಮುಂದುವರಿಸುತ್ತೇನೆ. ನನ್ನ ಅನುಭವ ಮತ್ತು ಸಮರ್ಪಣೆಯೊಂದಿಗೆ ಹೊಸ ನಾಯಕ ಮತ್ತು ತಂಡವನ್ನು ಬೆಂಬಲಿಸಲು ಸಿದ್ಧನಿದ್ದೇನೆ, ಈ ಮಹತ್ವದ ಜವಾಬ್ದಾರಿಯನ್ನು ನನಗೆ ವಹಿಸಿದ್ದಕ್ಕಾಗಿ ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ನನ್ನ ಪ್ರಾಮಾಣಿಕ ಧನ್ಯವಾದಗಳನ್ನು ವ್ಯಕ್ತಪಡಿಸಲು ಬಯಸುತ್ತೇನೆ” ಎಂದು ಹೇಳಿದ್ದಾರೆ.