ಬೆಂಗಳೂರು : ರಾಜ್ಯದ ಅಥ್ಲೀಟ್ ಬಿಂದು ರಾಣಿ ಮೇಲೆ ರಾಜ್ಯದ ಸೀನಿಯರ್ ಕೋಚ್ ಯತೀಶ್ ಅವರ ಪತ್ನಿ ದೌರ್ಜನ್ಯ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ. ಸೀನಿಯರ್ ಕೋಚ್ ಯತೀಶ್ ಅವರ ಪತ್ನಿ ಬಿಂದು ರಾಣಿ ಅವರಿಗೆ ಚಪ್ಪಲಿ ತೋರಿಸಿ ತಳ್ಳಾಟ ನಡೆಸಿರುವ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಬಿಂದು ರಾಣಿ ಟೆಡ್ ಎಕ್ಸ್ ಶೋನಲ್ಲಿ ಭಾಗಹಿಸಿದ್ದರ ಕುರಿತಂತೆ ಸೀನಿಯರ್ ಕೋಚ್ ಯತೀಶ್ ಅವರ ಪತ್ನಿ ಇದೀಗ ಬಿಂದು ರಾಣಿ ಮೇಲೆ ಆಕ್ರೋಶ ಹೊರಹಾಕಿದ್ದಾರೆ. ಟೆಡ್ ಎಕ್ಸ್ ಶೋನಲ್ಲಿ ದೊಡ್ಡ ದೊಡ್ಡ ಸೆಲಿಬ್ರಿಟಿಗಳು ಭಾಗವಹಿಸಿ ಮಾತನಾಡುತ್ತಾರೆ.
ನಮ್ಮ ಕಂಠೀರವ ಸ್ಟೇಡಿಯಂ ಗ್ರೂಪ್‌ನಲ್ಲಿ ನನ್ನ ಪ್ರದರ್ಶನದ ಬಗ್ಗೆ ವಾಟ್ಸಾಪ್ ಗ್ರೂಪ್‌ನಲ್ಲಿ ಯತೀಶ್ ಪೋಸ್ಟ್ ಮಾಡಿದ್ದರು. ನಾನು ಖೇಲ್ ರತ್ನ ಸ್ಟಾರ್ ಅಲ್ಲ ಅಂತೆಲ್ಲಾ ಹಾಕಿದ್ರು. ಇನ್ನು ಅಥ್ಲೀಟ್ ಹೆಸರಲ್ಲಿ ದುಡ್ಡು ಮಾಡ್ತೀಯಾ ಅಂತ ಇನ್ನೊಂದು ಪೋಸ್ಟ್ ಹಾಕಿದ್ರು. ಹೀಗಾಗಿ ನನ್ನ ಗಂಡ ಸೀನಿಯರ್ ಕೋಚ್‌ಗೆ ಫೋನ್ ಮಾಡಿ ಮಾತನಾಡಿದ್ರು. ಈ ವೇಳೆ ಅವರ ಪತ್ನಿ ಫೋನ್ ರಿಸೀವ್ ಮಾಡಿ ಏಕವಚನದಲ್ಲೇ ಮಾತನಾಡಿದ್ರು ಎಂದು ಬಿಂದು ರಾಣಿ ಆರೋಪಿಸಿದ್ದಾರೆ.
ಇಂದು ಬೆಳಗ್ಗೆ ಇಲ್ಲಿನ ಕಂಠೀರವ ಸ್ಟೇಡಿಯಂಗೆ ಬಂದು ಮತ್ತೆ ಆ ವಿಚಾರದ ಕುರಿತಂತೆ ನನ್ನ ಮೇಲೆ ನಿಂದನೆ ಮಾಡಿದ್ದಾರೆ. ನಮ್ಮ ಅಸೋಸಿಯೇಷನ್‌ನಿಂದ ಬಂದು ಯಾರಾದ್ರೂ ಪ್ರಶ್ನೆ ಮಾಡಿದ್ರೆ ಉತ್ತರ ಕೊಡ್ತಿದ್ದೆ. ನನಗೂ ಹಾಗೂ ಅವರಿಗೂ ಈ ಹಿಂದೆ ಯಾವುದೇ ಪರಿಚಯವಿಲ್ಲ. ಅವರು ಕೋಚ್ ಹೆಂಡತಿಯಷ್ಟೇ. ಗಂಡನ ಜತೆ ಈ ಹಿಂದೆ ಅಲ್ಲಿಗೆ ಬರ್ತಿದ್ರು ಎಂದು ಬಿಂದು ರಾಣಿ ಹೇಳಿದ್ದಾರೆ.
ಕೋಚ್ ಯತೀಶ್ ಅವರ ಪತ್ನಿ ಓರ್ವ ಅಂತಾರಾಷ್ಟ್ರೀಯ ಟೆನಿಸ್ ಆಟಗಾರ್ತಿ ಎಂದು ಸ್ವತಃ ಸೀನಿಯರ್ ಕೋಚ್ ತಿಳಿಸಿದ್ದು, ತಮ್ಮ ಮೇಲೆ ಫೋನ್ ಮಾಡಿ ಟಾರ್ಗೆಟ್ ಮಾಡಲಾಗಿದೆ ಎಂದು ಹೇಳಿದ್ದಾರೆ. ಇಂದು ಬೆಳಗ್ಗೆ ಬಿಂದು ರಾಣಿ ಕಂಠೀರವ ಸ್ಟೇಡಿಯಂನಲ್ಲಿ ಅಭ್ಯಾಸ ನಡೆಸುತ್ತಿದ್ದ ವೇಳೆ ಸೀನಿಯರ್ ಕೋಚ್ ಯತೀಶ್ ಪತ್ನಿ, ಬಿಂದು ಅವರ ಬಳಿ ಬಂದು ಏಕವಚನದಲ್ಲಿ, ಏನೇ ನಿನ್ನ ಸಾಧನೆ. ಚಪ್ಪಲಿ ತೋರಿಸಿ ಇದು ನಿನ್ನ ನಿಜವಾದ ಅವಾರ್ಡ್ ಎಂದು ಆಕ್ರೋಶ ಹೊರಹಾಕಿದ್ದಾರೆ.ಇನ್ನೊಂದು ಸಲ ಹೀಗೆ ಮಾಡಬಾರದು. ಒಂದು ವೇಳೆ ಮಾಡಿದ್ರೆ ಮುಖಕ್ಕೆ ಚಪ್ಪಲಿ ಬೀಳ್ತಾವೆ ಎಂದು ಚಪ್ಪಲಿಯನ್ನು ಕೈಯಲ್ಲಿ ಹಿಡಿದುಕೊಂಡು ಸೀನಿಯರ್ ಕೋಚ್ ಯತೀಶ್ ಪತ್ನಿ, ಅಥ್ಲೀಟ್ ಬಿಂದು ರಾಣಿ ಅವರಿಗೆ ಬೆದರಿಕೆ ಹಾಕಿದ್ದಾರೆ.