ಯಡಿಯೂರಪ್ಪ ವಿರುದ್ಧ ಅರೆಸ್ಟ್‌ ವಾರೆಂಟ್ ಜಾರಿ

ಬೆಂಗಳೂರು: ಪೋಕ್ಸೊ ಪ್ರಕರಣವೊಂದರಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪಗೆ ಜಾಮೀನು ರಹಿತ ಅರೆಸ್ಟ್‌ ವಾರೆಂಟ್ ಜಾರಿ ಮಾಡಿ ವಿಶೇಷ ನ್ಯಾಯಾಲಯ ಗುರುವಾರ(ಜೂ.13) ಆದೇಶಿಸಿದೆ.

ಪೋಕ್ಸೋ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಅವರು ಅರೋಪಿಯಾಗಿದ್ದು, ಅವರನ್ನು ಕೂಡಲೇ ಬಂಧಿಸಿ ವಿಚಾರಣೆ ನಡೆಸಲು ನ್ಯಾಯಾಲಯ ಅನುಮತಿ ನೀಡಬೇಕು. ಆರೋಪಿಯು ತುಂಬಾ ಬಲಾಢ್ಯರು. ನಾಲ್ಕು ಬಾರಿ ಮುಖ್ಯಮಂತ್ರಿಯಾಗಿದ್ದವರು. ಮಕ್ಕಳು ಕೂಡ ಪ್ರಭಾವಿಗಳು. ಇಂತಹವರು ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ನೋಟಿಸ್‌ ಕೊಟ್ಟರೂ ವಿಚಾರಣೆಗೆ ಹಾಜರಾಗುತ್ತಿಲ್ಲ. ಹೀಗಾಗಿ ಇವರನ್ನು ಬಂಧಿಸಲು ನಿರ್ದೇಶಿಸಬೇಕು ಎಂದು ಪ್ರಕರಣದ ವಿಶೇಷ ಪ್ರಾಸಿಕ್ಯೂಟರ್‌ ಅಶೋಕ್‌ ನಾಯಕ್‌ ನ್ಯಾಯಾಲಯವನ್ನು ಕೋರಿದರು.

ಕೋರಿಕೆಯನ್ನು ಮಾನ್ಯ ಮಾಡಿದ ವಿಶೇಷ ನ್ಯಾಯಾಲಯ ಯಡಿಯೂರಪ್ಪರನ್ನು ಬಂಧಿಸಿ ವಿಚಾರಣೆ ನಡೆಸುವಂತೆ ಆದೇಶಿಸಿದೆ.

ಏನಿದು ಪ್ರಕರಣ?
53 ವರ್ಷದ ಮಹಿಳೆಯೊಬ್ಬರು ತನ್ನ ಮಗಳ ಮೇಲೆ ಅತ್ಯಾಚಾರ ನಡೆದಿದೆ ನನಗೆ ನ್ಯಾಯ ಕೊಡಿಸಿ ಎಂದು 2024ರ ಮಾರ್ಚ್‌ 14 ರಂದು ಸದಾಶಿವ ನಗರ ಪೊಲೀಸ್‌ ಠಾಣೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ವಿರುದ್ಧ ದೂರು ದಾಖಲಿಸಿದ್ದರು. ಈ ಸಂಬಂಧ 354(A) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.

ಈ ಪ್ರಕರಣದಲ್ಲಿ ದೂರು ನೀಡಿದ ಸಂತ್ರಸ್ತೆಯ ತಾಯಿ ಮರಣ ಹೊಂದಿದ ಬಳಿಕ ಸಂತ್ರಸ್ತೆ ಅಣ್ಣ ಕೋರ್ಟ್‌ಗೆ ರಿಟ್‌ ಅರ್ಜಿ ಸಲ್ಲಿಸಿದ್ದಾರೆ.

ಇನ್ನು ಈ ಸಂಬಂಧ ಸದಾಶಿವ ನಗರದಲ್ಲಿ ಬಿಎಸ್‌ವೈ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿದ್ದು, ಪ್ರಕರಣ ಸಂಬಂಧ ವಿಚಾರಣೆಗೆ ಬರುವಂತೆ ಸೂಚಿಸಿದ್ದರು. ಸಿಐಡಿ ಅಧಿಕಾರಿಗಳು ಬಿಎಸ್‌ವೈ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಬುಧವಾರ (ಜೂನ್‌. 12) ನೋಟಿಸ್‌ ಜಾರಿ ಮಾಡಿದ್ದರು. ಆದರೆ ಬಿಎಸ್‌ವೈ ಅವರು ಜೂನ್‌.17 ರಂದು ಹಾಜರಾಗುವುದಾಗಿ ವಿಚಾರಣೆಯಿಂದ ಹಿಂದೆ ಸರಿದಿದ್ದರು.