ಬೆಂಗಳೂರು-ರಾಜ್ಯ ಚುನಾವಣೆ ಸಮೀಪಿಸುತ್ತಿದ್ದು, ಕೆಲ ದಿನಗಳಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಾಗುವ ಸಾಧ್ಯತೆಗಳಿವೆ. ಇದಕ್ಕೂ ಮೊದಲೇ ರಾಜ್ಯದಾದ್ಯಂತ ಅಕ್ರಮ ಹಣ, ಮದ್ಯ, ಸರಕುಗಳನ್ನು ಸಾಗಟದ ಮೇಲೆ ಹದ್ದಿನ ಕಣ್ಣಿಡಲಾಗಿದೆ.
ಚುನಾವಣೆ ಎಂದರೆ, ಅಕ್ರಮ ಹಣ, ಮದ್ಯ ಹಂಚಿಕೆ ಮಾಮೂಲಿ. ಜತೆಗೆ ಮತದಾರರನ್ನು ಓಲೈಸಿಕೊಳ್ಳಲು ಹಲವು ಮಾದರಿಯ ಗಿಫ್ಟ್ ಗಳನ್ನು ನೀಡಲಾಗುತ್ತದೆ. ಆದರೆ, ಈ ಬಾರಿ ಅಕ್ರಮ ನಗದು, ಮದ್ಯ, ಗಿಫ್ಟ್ ಹಂಚುವುದಕ್ಕೆ ಕಡಿವಾಣ ಹಾಕಲು ರಾಜ್ಯ ಚುನಾವಣಾ ಆಯೋಗವು ಮುಂದಾಗಿದೆ. ಈ ನಿಟ್ಟಿನಲ್ಲಿ ರಾಜ್ಯ ಎಲ್ಲಾ ನಗರಗಳು, ಹೆದ್ದಾರಿಗಳು, ಸುಂಕ ಸಂಗ್ರಹ ಕೇಂದ್ರ (ಟೋಲ್) ಸೇರಿದಂತೆ ಹಲವು ಕಡೆಗಳಲ್ಲಿ ತಪಾಸಣಾ ಕೇಂದ್ರಗಳನ್ನು (ಚೆಕ್ ಪೋಸ್ಟ್) ಕಾರ್ಯಾರಂಭಿಸಲಾಗಿದೆ.
ರಾಜ್ಯಾದ್ಯಂತ ಸ್ಥಾಪಿಸಿರುವ ಚೆಕ್ ಪೋಸ್ಟ್ ಗಳಲ್ಲಿ ಪೊಲೀಸರು ತಪಾಸಣೆ ನಡೆಸುತ್ತಿದ್ದಾರೆ. ಸೂಕ್ತ ದಾಖಲೆ ಇಲ್ಲದೇ ಹಣವನ್ನು ಸಾಗಣೆ ಮಾಡುತ್ತಿದ್ದರೆ ಹಣದ ಬಗ್ಗೆ ಮಾಹಿತಿ ಕೇಳುತ್ತಿದ್ದಾರೆ. ಒಂದು ವೇಳೆ ಹಣದ ದಾಖಲೆ ನೀಡದಿದ್ದರೆ ಕೂಡಲೇ ಹಣ ಮತ್ತು ಆ ವ್ಯಕ್ತಿಗಳನ್ನು ವಶಕ್ಕೆ ಪಡೆದುಕೊಳ್ಳುತ್ತಿದ್ದಾರೆ.
ಚುನಾವಣಾ ನೀತಿ ಸಂಹಿತೆ ಜಾರಿಗೂ ಮುನ್ನವೇ ಬಿಗಿ ಭದ್ರತೆ ಇರುವುದರಿಂದ ಯಾವುದೇ ವ್ಯಕ್ತಿಯು ಒಂದು ಕಡೆಯಿಂದ ಮತ್ತೊಂದು ಕಡೆಗೆ ಸ್ವಂತ ಹಣವನ್ನೂ ಕೂಡಾ ಸಾಗಿಸುವಾಗಿ ಎಚ್ಚರ ವಹಿಸಬೇಕಿದೆ. ಹಣದ ಜತೆ ಬ್ಯಾಂಕ್ ದಾಖಲೆ ಅಥವಾ ಹಣದ ಮೂಲದ ಬಗ್ಗೆ ದಾಖಲೆ, ರಶೀದಿ ಹೊಂದಿರಲೇಬೇಕಿದೆ. ಒಂದು ವೇಳೆ ಮರೆತರೇ ಹಣ ಪೊಲೀಸರ ವಶಕ್ಕೆ ಹೋಗಲಿದೆ ಜೋಕೆ ಎನ್ನತ್ತಾರೆ ಚೆಕ್ ಪೋಸ್ಟ್ ಪೊಲೀಸ್ ಸಿಬ್ಬಂದಿ.
ಒಂದು ಕಡೆಯಿಂದ ಮತ್ತೊಂದು ಕಡೆಗೆ ಯಾವುದೇ ಉಡುಗೊರೆಗಳನ್ನು ದೊಡ್ಡ ಪ್ರಮಾಣದಲ್ಲಿ ಸಾಗಿಸುತ್ತಿದ್ದರೂ ಪೊಲೀಸರು ತಪಾಸಣೆ ನಡೆಸಲಿದ್ದಾರೆ. ಆ ಉಡುಗೊರೆ ಸಾಮಗ್ರಿ ಕೊಂಡುಕೊಂಡ ಬಗ್ಗೆ ರಶೀದಿ ನೀಡಬೇಕು. ಅದಕ್ಕೆ ಸರಕು ಸಾಗಣೆ ತೆರಿಗೆ (ಜಿಎಸ್ ಟಿ) ಪಾವತಿಸಿರುವ ಬಗ್ಗೆ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ತಪಾಸಣೆ ನಡೆಸುತ್ತಿದ್ದಾರೆ.