Mysore
24
overcast clouds

Social Media

ಗುರುವಾರ, 27 ಆಗಸ್ಟ್ 2026
Light
Dark

101 ತಾಲ್ಲೂಕುಗಳು ಬರಪೀಡಿತ ; ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಘೋಷಣೆ

Parameshwar

89 ತಾಲ್ಲೂಕುಗಳಲ್ಲಿ ತೀವ್ರ, 12 ತಾಲ್ಲೂಕುಗಳಲ್ಲಿ ತುಸು ಕಡಿಮೆ
ಶೇ. 31ರಷ್ಟು ಮಳೆ ಕೊರತೆ ಶೇ.71ರಷ್ಟು ಬೆಳೆಗಳಿಗೆ ಹಾನಿ

ಬೆಂಗಳೂರು : ರಾಜ್ಯದಲ್ಲಿ ಮಳೆ ಕೊರತೆಯಿಂದಾಗಿ ಮೈಸೂರು ಜಿಲ್ಲೆಯ 8, ಮಂಡ್ಯ ಜಿಲ್ಲೆಯ 5, ಚಾ.ನಗರ ಜಿಲ್ಲೆಯ 4 ತಾಲ್ಲೂಕುಗಳು ಸೇರಿದಂತೆ ರಾಜ್ಯದ 1011 ತಾಲ್ಲೂಕುಗಳನ್ನು ಬರಪೀಡಿತ ತಾಲ್ಲೂಕುಗಳೆಂದು ಘೋಷಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬರ ಘೋಷಣೆಗೆ ಸಂಬಂಧಿಸಿದ ಎಲ್ಲ ಪ್ರಕ್ರಿಯೆಗಳನ್ನೂ ಪೂರ್ಣಗೊಳಿಸಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಬರದಿಂದ ಉಂಟಾಗಿರುವ ನಷ್ಟದ ಸಂಪೂರ್ಣ ಅಂದಾಜು ಇನ್ನೂ ಸಿದ್ಧವಾಗಿಲ್ಲ ಎಂದು ತಿಳಿಸಿದರು.

ರಾಜ್ಯದಲ್ಲಿ 2023-24ನೇ ಸಾಲಿನಲ್ಲಿ ಸುಮಾರು 39 ಸಾವಿರ ಕೋಟಿ ರೂ. ನಷ್ಟವಾಗಿದ್ದು, 18 ಸಾವಿರ ಕೋಟಿ ರೂ. ಪರಿಹಾರ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಈ ಪೈಕಿ 3,500 ಕೋಟಿ ರೂ. ನೀಡುವುದಾಗಿ ಕೇಂದ್ರದಿಂದ ಭರವಸೆ ದೊರೆತಿದ್ದರೂ ಹಣ ಬಿಡುಗಡೆಯಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ದಿಲ್ಲಿಯಲ್ಲಿಯಲ್ಲಿ ಪ್ರತಿಭಟನೆ ನಡೆಸಿ, ಬಳಿಕ ಸರ್ವೋಚ್ಚ ನ್ಯಾಯಾಲಯದ ಮೊರೆ ಹೋಗಬೇಕಾಯಿತು. ನ್ಯಾಯಾಲಯದ ನಿರ್ದೇಶನದ ನಂತರ ಹಣ ಬಿಡುಗಡೆಯಾಗಿತ್ತು ಎಂದು ಪರಮೇಶ್ವರ್ ವಿವರಿಸಿದರು.

ಈ ಬಾರಿ ಅಂತಹ ಪರಿಸ್ಥಿತಿ ಮರುಕಳಿಸಬಾರದು. ಜನರು ಹಾಗೂ ಜಾನುವಾರುಗಳ ಹಿತದೃಷ್ಟಿಯಿಂದ ಕೇಂದ್ರ ಸರ್ಕಾರ ಶೀಘ್ರವೇ ಬರ ಪರಿಹಾರ ಬಿಡುಗಡೆ ಮಾಡಬೇಕು ಎಂದು ಅವರು ಒತ್ತಾಯಿಸಿದರು.
ಈ ತಿಂಗಳ ಅಂತ್ಯದಲ್ಲಿ ದೆಹಲಿಗೆ ತೆರಳಿ ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಕೇಂದ್ರ ಕೃಷಿ ಸಚಿವರನ್ನು ಭೇಟಿ ಮಾಡಿ ಬರ ನಿರ್ವಹಣೆಗೆ ಆರ್ಥಿಕ ನೆರವು ಕೋರುವುದಾಗಿ ತಿಳಿಸಿದರು.

134 ತಾಲ್ಲೂಕುಗಳ ಪರಿಶೀಲನೆ
ರಾಜ್ಯದಲ್ಲಿ ಆರಂಭಿಕವಾಗಿ 134 ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸುವ ಸಾಧ್ಯತೆ ಇತ್ತು. ಈ ಹಿನ್ನೆಲೆಯಲ್ಲಿ ವಾಸ್ತವ ಪರಿಸ್ಥಿತಿ ಪರಿಶೀಲಿಸಲು ತಂಡಗಳನ್ನು ಕಳುಹಿಸಲಾಗಿತ್ತು. ಪರಿಶೀಲನೆ ಬಳಿಕ 101 ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಲು ಅರ್ಹವೆಂದು ಗುರುತಿಸಲಾಗಿದೆ. ಈ ಪೈಕಿ 89 ತಾಲ್ಲೂಕುಗಳು ತೀವ್ರ ಬರಪೀಡಿತವಾಗಿದ್ದು, 12 ತಾಲ್ಲೂಕುಗಳಲ್ಲಿ ತುಸು ಕಡಿಮೆ ಪ್ರಮಾಣದ ಬರ ಪರಿಸ್ಥಿತಿ ಇದೆ ಎಂದು ಪರಮೇಶ್ವರ್ ಹೇಳಿದರು.

Tags:
error: Content is protected !!