Mysore
23
scattered clouds

Social Media

ಶುಕ್ರವಾರ, 11 ಜುಲೈ 2025
Light
Dark

ತಾರುಣ್ಯದಲ್ಲೇ ಹೃದಯಾಘಾತ ಯಾಕೆ ಹೀಗೆ?

Why Are Heart Attacks Occurring at Such a Young Age?

ಹಾಸನದಲ್ಲಿ ಒಂದೇ ತಿಂಗ್ಳಲ್ಲಿ ೨೦ ಜನಕ್ಕೆ ಹಾರ್ಟ್ ಅಟ್ಯಾಕ್ ಆಗಿ ಸತ್ತಂತೆ, ಯಾಕ್ಬೇಕು ನಡೀ ಆಸ್ಪತ್ರೆಗೆ ಹೋಗಿ ಟೆಸ್ಟ್ ಮಾಡುಸ್ಕೊಂಡು ಬರೋವಾ! ಬೆಳಿಗ್ಗೇನೆ  ಹೋದ್ರೆ ಮಧ್ಯಾಹ್ನಕ್ಕೆಲ್ಲ ಟೆಸ್ಟ್ ಮಾಡುಸ್ಕೊಂಡು ಬಂದ್ಬುಡಬೌದು… ಬಿಪಿಎಲ್ ಕಾರ‍್ಡು ಇದ್ರೆ ಫ್ರೀ ಟೇಸ್ಟ್ ಮಾಡ್ತಾರಂತೆ…ಕೋವಿಡ್ ಇಂಜೆಕ್ಷನ್ ಕೊಟ್ರಲ್ಲ ಅದ್ರಿಂದ್ಲೆ ಹಿಂಗೆ ಜನ ಸಾಯ್ತಿರೋದಂತೆ… ಹೀಗೆ ಅಂತೆ ಕಂತೆಗಳು ಜನರ ಬಾಯಿಂದ ಬಾಯಿಗೆ ಹರಡುತ್ತಿರುವುದರಿಂದಾಗಿ ಹತ್ತಾರು ವರ್ಷಗಳಿಂದ ನಿಯಮಿತವಾಗಿ ವಾಯು ವಿಹಾರ, ಆಟೋಟಗಳಲ್ಲಿ ತೊಡಗಿ ದೈಹಿಕ ಕಸರತ್ತು ಮಾಡುತ್ತಾ ಆರೋಗ್ಯವಂತರಾಗಿರುವ ಜನರನ್ನೂ ‘ಸಮೂಹಸನ್ನಿ’ ಎಂಬ ಕಾಯಿಲೆ ಹೃದಯ ತಪಾಸಣೆ ಗಾಗಿ ಆಸ್ಪತ್ರೆಗಳತ್ತ  ದೌಡಾಯಿಸುವಂತೆ ಮಾಡಿದೆ.

ಹಾಸನ ಜಿಲ್ಲೆಯಲ್ಲಿ ಕಳೆದ ಒಂದು ತಿಂಗಳ ಅವಧಿಯಲ್ಲಿ ವರದಿಯಾಗಿರುವ (ಸಂಭವಿಸಿರುವ ಅಲ್ಲ) ಸಾಲು ಸಾಲು ಹೃದಯಾಘಾತ ಪ್ರಕರಣಗಳಿಂದ ಸಮೂಹಸನ್ನಿಗೆ ಒಳಗಾಗಿರುವ ಜನ ಹೃದಯ ತಪಾಸಣೆಗಾಗಿ ಆಸ್ಪತ್ರೆಗಳಿಗೆ ದೌಡಾಯಿಸುತ್ತಿರುವುದರಿಂದ ಹೃದ್ರೋಗ ಆಸ್ಪತ್ರೆಗಳಲ್ಲೀಗ ವಿಪರೀತ ಜನದಟ್ಟಣೆ. ಚಲನ ಚಿತ್ರ ನಟರಾದ ಪುನೀತ್ ರಾಜ್‌ಕುಮಾರ್,ಚಿರಂಜೀವಿ ಸರ್ಜಾ ಅಕಾಲಿಕವಾಗಿ ಸಾವನ್ನಪ್ಪಿದಾಗಲೂ ಆತಂಕಕ್ಕೆ ಒಳಗಾದ ಜನ ಆಸ್ಪತ್ರೆಗಳತ್ತ ಓಡೋಡಿ ಬಂದಿದ್ದರು.

ಬದಲಾದ ಜೀವನ ಶೈಲಿ, ಧೂಮಪಾನ, ಮದ್ಯಪಾನ, ಆಹಾರ ಕಲಬೆರಕೆ, ಒತ್ತಡ, ಅಸಾಂಕ್ರಾಮಿಕ ಕಾಯಿಲೆಗಳು, ವಾಯುಮಾಲಿನ್ಯ ಮೊದಲಾದ ಕಾರಣಗಳಿಂದಾಗಿ ಹದಿಹರೆಯದವರಲ್ಲೂ ಹೃದಯಾಘಾತ ಪ್ರಮಾಣ ಹೆಚ್ಚುತ್ತಿದೆ.

ಇತ್ತೀಚಿನ ಒತ್ತಡದ ಬದುಕಿನಲ್ಲಿ ಅನೇಕ ಜನ ಒಂದಲ್ಲ ಒಂದು ರೀತಿಯ ಸಮಸ್ಯೆ, ಆತಂಕಗಳಿಗೆ ಸಿಲುಕಿ ಪರಿತಾಪ ಪಡುತ್ತಾ, ಕೊನೆಗೆ ಮಾನಸಿಕವಾಗಿ ಜರ್ಝರಿತರಾಗುವ ಸಂದರ್ಭಗಳಿವೆ. ಅಲ್ಲದೆ, ಮಾನಸಿಕ ರೋಗ ಬಡವ, ಬಲ್ಲಿದರೆನ್ನದೆ, ನಗರವಾಸಿಗಳು, ಗ್ರಾಮೀಣ ಪ್ರದೇಶದವರೆನ್ನದೆ, ಸ್ತ್ರೀ ಪುರುಷರೆನ್ನದೆ ಎಲ್ಲರನ್ನೂ ಕಾಡುತ್ತಿರುವ ಸಂದರ್ಭದಲ್ಲಿ ಸೂಕ್ತ ಮಾಹಿತಿಯನ್ನು ಒದಗಿಸಬೇಕಾದುದು ನಿಮ್ಹಾನ್ಸ್ ನಂಥ ಸಂಸ್ಥೆಗಳ ಕರ್ತವ್ಯವೂ ಆಗುತ್ತದೆ.

ಹದಿಹರೆಯದವರಲ್ಲಿ ಕಂಡು ಬರುವ ಸಾಮಾನ್ಯ ಮಾನಸಿಕ ಅನಾರೋಗ್ಯಗಳು ಕಾರಣ ಮತ್ತು ಪರಿಹಾರ ಶೇಕಡಾ ೨೦ರಷ್ಟು ಹರೆಯದವರು ಒಂದಲ್ಲ ಒಂದು ಬಗೆಯ ಮಾನಸಿಕ ಅನಾರೋಗ್ಯದಿಂದ ಬಳಲುತ್ತಾರೆ. ಆದರೆ ಅವರಾಗಲೀ, ಅವರ ತಂದೆ ತಾಯಿಗಳಾಗಲೀ ಮನೆಯವರಾಗಲೀ, ಮಾನಸಿಕ ಅನಾರೋಗ್ಯವನ್ನು ಗುರುತಿಸುವುದಿಲ್ಲ. ಸಂಬಂಧಪಟ್ಟ ತಜ್ಞರನ್ನು ಕಾಣುವುದಿಲ್ಲ. ದೀರ್ಘಕಾಲ ಮಾನಸಿಕ ಅನಾರೋಗ್ಯದಿಂದ ಬಳಲುತ್ತಿರುತ್ತಾರೆ.

ಹೃದಯಾಘಾತ ಅಂಟು ರೋಗವಲ್ಲ, ಹೀಗಾಗಿ ಜನತೆ ಆಂತಕಪಡುವ ಅಗತ್ಯವಿಲ್ಲ, ಜತೆಗೆ ಆಸ್ಪತ್ರೆಗಳಿಗೆ ಧಾವಿಸಿ ಬರುವ ಅವಶ್ಯಕತೆಯೂ ಇಲ್ಲ. ಆದರೆ, ಒತ್ತಡ ಮುಕ್ತರಾಗಲು ಜೀವನ ಶೈಲಿ ಬದಲಾಯಿಸಿಕೊಳ್ಳಿ ಎಂದು ಹೃದ್ರೋಗ ತಜ್ಞರು ನೀಡುವ ಸಲಹೆಯನ್ನು ಪರಿಗಣನೆಗೆ ತೆಗೆದು ಕೊಳ್ಳದ ಬಹುತೇಕರು ಊಹಾಪೋಹದ ಗಾಳಿ ಸುದ್ದಿಗೆ ಹೆಚ್ಚು ಮಹತ್ವ ನೀಡುತ್ತಾರೆ.

ಹೃದಯಾಘಾತದಿಂದ ಹದಿಹರೆಯದವರ ಹಠಾತ್ ಸಾವಿನ ಪ್ರಕರಣಗಳು ಹಾಸನ ಜಿಲ್ಲೆಗಷ್ಟೇ ಸೀಮಿತವಾ ಗಿಲ್ಲ. ಇದು ಇಡೀ ದೇಶದ ಸಮಸ್ಯೆಯಾಗಿ ಪರಿಣಮಿಸಿದೆ. ಕೋವಿಡ್-೧೯ ನಂತರ ವಯಸ್ಕರಲ್ಲಿನ ಹಠಾತ್ ಸಾವುಗಳ ಕುರಿತು ಐಸಿಎಂಆರ್ ಮತ್ತು ಏಮ್ಸ್ ಜೀವನಶೈಲಿ ಮತ್ತು ಕೋವಿಡ್ ಪೂರ್ವ ಅಸ್ತಿತ್ವದಲ್ಲಿರುವ ಪರಿಸ್ಥಿತಿಗಳನ್ನು ಪ್ರಮುಖ ಅಂಶಗಳಾಗಿ ಗುರುತಿಸಿ ನಡೆಸಿದ ವ್ಯಾಪಕ ಅಧ್ಯಯನಗಳು ಕೋವಿಡ್-೧೯ ಲಸಿಕೆ ಗಳು ಮತ್ತು ಹಠಾತ್ ಸಾವುಗಳ ನಡುವೆ ಯಾವುದೇ ಸಂಬಂಧವೂ ಇಲ್ಲ ಎಂದು ಹೇಳಿವೆ. ಹಠಾತ್ ಸಾವುಗಳ ಪ್ರಕರಣಗಳನ್ನು ಕುರಿತು ದೇಶದ ಹಲವಾರು ಏಜೆನ್ಸಿಗಳ ಮೂಲಕ ತನಿಖೆ ಮಾಡಲಾಗಿದೆ. ಈ ಅಧ್ಯಯನಗಳು ಕೋವಿಡ್-೧೯ ಲಸಿಕೆ ಮತ್ತು ದೇಶದಲ್ಲಿನ ಹಠಾತ್ ಸಾವುಗಳ ವರದಿಗಳ ನಡುವೆ ಯಾವುದೇ ನೇರ ಸಂಬಂಧವಿಲ್ಲ ಎಂದು ನಿರ್ಣಾಯಕವಾಗಿ ಹೇಳಿವೆ.

ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಮತ್ತು ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರ (ಎನ್‌ಸಿಡಿಸಿ) ನಡೆಸಿದ ಅಧ್ಯಯನಗಳು ಭಾರತದಲ್ಲಿ ಕೋವಿಡ್-೧೯ ಲಸಿಕೆಗಳು ಸುರಕ್ಷಿತ ಮತ್ತು ಪರಿಣಾಮಕಾರಿ ಎಂದು ದೃಢಪಡಿಸಿದ್ದು, ಕೋವಿಡ್ ಲಸಿಕೆಯಿಂದಾಗಿ ಗಂಭೀರ ಅಡ್ಡಪರಿಣಾಮಗಳ ಅತ್ಯಂತ ಅಪರೂಪದ ನಿದರ್ಶನಗಳಿವೆ ಎಂದು ಹೇಳಲಾಗಿದೆ.

ಕೋವಿಡ್-೧೯ ಲಸಿಕೆ ಯುವ ವಯಸ್ಕರಲ್ಲಿ ವಿವರಿಸಲಾಗದ ಹಠಾತ್ ಸಾವಿನ ಅಪಾಯವನ್ನು ಹೆಚ್ಚಿಸುವುದಿಲ್ಲ ಎಂದು ಸಂಶೋಧನೆಗಳು ದೃಢಪಡಿಸಿವೆ. ಹೊಸದಿಲ್ಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ ಯುವ ವಯಸ್ಕರಲ್ಲಿ ಹಠಾತ್ ಸಾವಿಗೆ ಸಾಮಾನ್ಯ ಕಾರಣಗಳನ್ನು ಪತ್ತೆ ಹಚ್ಚಲು ಅಧ್ಯಯನ ನಡೆಸಿದ್ದು, ಈ ಅಧ್ಯಯನದ ದತ್ತಾಂಶದ ಆರಂಭಿಕ ವಿಶ್ಲೇಷಣೆಯು ಹೃದಯಾಘಾತ ಅಥವಾ ಮಯೋಕಾರ್ಡಿಯಲ್ ಇನ್ಛಾರ್ಕ್ಷನ್, ಈ ವಯಸ್ಸಿನ ಗುಂಪಿನಲ್ಲಿ ಹಠಾತ್ ಸಾವಿನ ಪ್ರಮುಖ ಕಾರಣವಾಗಿ ಮುಂದುವರೆದಿದೆ ಎಂದು ಹೇಳಿದೆ.

ಐಸಿಎಂಆರ್ ಮತ್ತು ಏಮ್ಸ್ ಒಟ್ಟಾಗಿ ೧೮ ರಿಂದ ೪೫ ವರ್ಷ ವಯಸ್ಸಿನ ಯುವಜನರಲ್ಲಿ, ವಿಶೇಷವಾಗಿ ವಿವರಿಸಲಾಗದ ಹಠಾತ್ ಸಾವುಗಳ ಹಿಂದಿನ ಕಾರಣಗಳನ್ನು ಅರ್ಥಮಾಡಿಕೊಳ್ಳಲು ಕೆಲಸ ಮಾಡುತ್ತಿವೆ. ಇದನ್ನು ಅನ್ವೇಷಿಸಲು, ವಿಭಿನ್ನ ಸಂಶೋಧನಾ ವಿಧಾನಗಳನ್ನು ಬಳಸಿಕೊಂಡು ಎರಡು ಪೂರಕ ಅಧ್ಯಯನಗಳನ್ನು ಕೈಗೊಳ್ಳಲಾಯಿತು – ಒಂದು ಹಿಂದಿನ ಡೇಟಾವನ್ನು ಆಧರಿಸಿ ಮತ್ತು ಇನ್ನೊಂದು ನೈಜ-ಸಮಯದ ತನಿಖೆಯನ್ನು ಒಳಗೊಂಡಿತ್ತು. ರಾಷ್ಟ್ರೀಯ ಸಾಂಕ್ರಾಮಿಕ ರೋಗಶಾಸ್ತ್ರ ಸಂಸ್ಥೆ ನಡೆಸಿದ ಮೊದಲ ಅಧ್ಯಯನವು ‘ಭಾರತದಲ್ಲಿ ೧೮-೪೫ ವರ್ಷ ವಯಸ್ಸಿನ ವಯಸ್ಕರಲ್ಲಿ ವಿವರಿಸಲಾಗದ ಹಠಾತ್ ಸಾವುಗಳಿಗೆ ಸಂಬಂಧಿಸಿದ ಅಂಶಗಳು – ಬಹುಕೇಂದ್ರಿತ ಹೊಂದಾಣಿಕೆಯ ಪ್ರಕರಣ-ನಿಯಂತ್ರಣ ಅಧ್ಯಯನ’ ಎಂಬ ಶೀರ್ಷಿಕೆಯನ್ನು ಹೊಂದಿತ್ತು. ಕೋವಿಡ್-೧೯ ಲಸಿಕೆ ಅಪಾಯವನ್ನು ಹೆಚ್ಚಿಸುವಂತೆ ಕಾಣುತ್ತಿಲ್ಲ, ಆದರೆ, ಆಧಾರವಾಗಿರುವ ಆರೋಗ್ಯ ಸಮಸ್ಯೆಗಳು, ಆನುವಂಶಿಕ ಪ್ರವೃತ್ತಿ ಮತ್ತು ಅಪಾಯಕಾರಿ ಜೀವನಶೈಲಿಯ ಆಯ್ಕೆಗಳು ವಿವರಿಸಲಾಗದ ಹಠಾತ್ ಸಾವುಗಳಲ್ಲಿ ಪಾತ್ರವಹಿಸುತ್ತವೆ ಎಂದು ತಿಳಿದುಬಂದಿದೆ ಎಂದು ಈ ಅಧ್ಯಯನ ವರದಿಯಲ್ಲಿ ಹೇಳಲಾಗಿದೆ.

: ಗಿರೀಶ್ ಹುಣಸೂರು

Tags:
error: Content is protected !!