ಮಾಮರಶಿ
ಮಳವಳ್ಳಿ ತಾಲ್ಲೂಕಿನ ಕಿರಗಸೂರಿನ ಪರುಷ ಕಲಿಕಾ ಕುಟೀರದ ಸಂಸ್ಥಾಪಕರೂ, ಪಟ್ಟಣದ ರೋಟರಿ ಶಾಲೆಯ ನಿರ್ದೇಶಕರೂ ಆದ ಶಿಕ್ಷಣ ತಜ್ಞೆ ನೇಮಾಂಬ ಅವರ ಮೊಮ್ಮಗಳಾದ ಸುವರ್ಷ ಗೌಡ ಎಂಎಸ್ಸಿ ಮನೋವಿಜ್ಞಾನ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದು ೫ ಚಿನ್ನದ ಪದಕಗಳು ಹಾಗೂ ನಗದು ಬಹುಮಾನ ಗಳಿಸುವ ಮೂಲಕ ಮಂಡ್ಯ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ಸುವರ್ಷ ಗೌಡ ಗ್ರಾಮೀಣ ಪ್ರದೇಶದಲ್ಲಿ ಹುಟ್ಟಿ ಬೆಳೆದ ಹೆಣ್ಣು ಮಗಳು. ಸುಮಾ ಅವರ ಪುತ್ರಿಯಾಗಿರುವ ಸುವರ್ಷ ಅಜ್ಜಿ ನೇಮಾಂಬ ಹಾಗೂ ಸೋದರ ಮಾವ ಡಾ.ಮಹೇಶ್ ಅವರ ಸಹಕಾರದಿಂದ ವಿದ್ಯಾಭ್ಯಾಸವನ್ನು ಮುಂದುವರಿಸಿದರು. ಪ್ರಾಥಮಿಕ ಶಾಲಾ ಹಂತ, ಪ್ರೌಢಶಾಲೆ, ಪದವಿ ಪೂರ್ವ ಹಾಗೂ ಪದವಿ ಹಂತದಲ್ಲಿ ಓದುವುದರಲ್ಲಿ ಸದಾ ಮುಂದಿದ್ದ ಸುವರ್ಷ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಎಂಎಸ್ಸಿ ಮನೋವಿಜ್ಞಾನ ವಿಷಯವನ್ನು ಆಯ್ಕೆ ಮಾಡಿಕೊಂಡು ೫ ಚಿನ್ನದ ಪದಕಗಳು ಹಾಗೂ ನಗದು ಬಹುಮಾನ ಗಳಿಸಿದ್ದಾರೆ.
ಎಸ್‌ಎಸ್‌ಬಿ ಪರೀಕ್ಷೆಯಲ್ಲಿ ಆಯ್ಕೆ: ಕಳೆದ ತಿಂಗಳು ಉತ್ತರ ಪ್ರದೇಶದ ಪ್ರಯಾಗ್ ರಾಜ್‌ನಲ್ಲಿ ನಡೆದ ಯುಪಿಎಸ್‌ಸಿ ಆಯ್ಕೆ ಪ್ರಕ್ರಿಯೆಯಷ್ಟೇ ಕಠಿಣವಾದ ಎಸ್‌ಎಸ್‌ಬಿ ಪರೀಕ್ಷೆಯಲ್ಲಿ ಚೊಚ್ಚಲ ಪ್ರಯತ್ನಲ್ಲೇ ಸೇನೆಗೆ ಆಯ್ಕೆಯಾಗುವ ಮೂಲಕ ಸುವರ್ಷ ಮತ್ತೊಂದು ಸಾಧನೆ ಮಾಡಿದ್ದು, ಈ ತರಬೇತಿಯನ್ನೂ ಪಡೆಯುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.
ಅಭಿನಂದನೆಗಳ ಭರಪೂರ: ಜ.೧೮ರಂದು ಮೈಸೂರು ವಿಶ್ವವಿದ್ಯಾನಿಲಯದ ವಾರ್ಷಿಕ ಘಟಿಕೋತ್ಸವದಲ್ಲಿ ಸುವರ್ಷ ೫ ಚಿನ್ನದ ಪದಕಗಳು ಹಾಗೂ ನಗದು ಬಹುಮಾನ ಪಡೆದಿರುವುದಕ್ಕೆ ತಾಲ್ಲೂಕು ಬೆಸುಗೆ ಸಮಾನ ಮನಸ್ಕರ ಬಳಗ, ಮಾಮರ ಚಾರಿಟಬಲ್ ಟ್ರಸ್ಟ್ ಪದಾಧಿಕಾರಿಗಳು, ಪರುಷ ಕಲಿಕಾ ಕುಟೀರದ ಸಿಬ್ಬಂದಿ, ಕಿರಗಸೂರು ಗ್ರಾಮದ ಜನರು, ವಿವಿಧ ಸಂಘ ಸಂಸ್ಥೆಗಳ ಮುಖಂಡರು ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.
ನಾನು ಶಿಕ್ಷಕಿಯಾಗಿ, ರೋಟರಿ ಸಂಸ್ಥೆಯ ನಿರ್ದೇಶಕಿಯಾಗಿ ಲಕ್ಷಾಂತರ ಮಕ್ಕಳಿಗೆ ಶಿಕ್ಷಣ ನೀಡಿದ್ದೇನೆ. ಸಮಾಜದ ಹಲವು ಸಂಘ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದೇನೆ. ನನ್ನ ಮೊಮ್ಮಗಳಾದ ಸುವರ್ಷಗೌಡ ಶ್ರಮಜೀವಿಯಾಗಿದ್ದು ಹುಟ್ಟಿನಿಂದಲೂ ಅವಳ ಗುರಿ, ಚಿಂತನೆ, ವಿಶ್ವಾಸ ನೋಡಿ ಇವಳು ರಾಜ್ಯಕ್ಕೆ, ದೇಶಕ್ಕೆ ಉತ್ತಮ ಕೂಡುಗೆ ನೀಡಬಲ್ಲಳು ಎಂದುಕೊಂಡಿದ್ದೆ . ಅದರಂತೆ ಅವಳು ಕಠಿಣ ಸಂದರ್ಭದಲ್ಲೂ ಶಿಕ್ಷಣ ಪಡೆದು ಚಿನ್ನದ ಪದಕ ಪಡೆದಿ ರುವುದು ನನಗೆ ಸಂತಸ ತಂದಿದೆ.
-ನೇಮಾಂಬ, ಶಿಕ್ಷಣ ತಜ್ಞರು, ಕಿರಗಸೂರು, ಮಳವಳ್ಳಿ ತಾಲ್ಲೂಕು.
” ಸಾಧನೆ ಮಾಡುವುದು ಸುಲಭವಲ್ಲ. ಸುವರ್ಷಗೌಡಳ ಸಾಧನೆ ಇಡೀ ಯುವ ಸಮುದಾಯಕ್ಕೆ ದಾರಿ ದೀಪವಾಗಿದೆ, ಪ್ರತಿಯೊಬ್ಬರೂ ಗುರು ಹಿರಿಯರ ಮಾರ್ಗದರ್ಶನದಲ್ಲಿ, ಗುರುಗಳ ನೆರಳಿನಲ್ಲಿ ಸಂಸ್ಕಾರ, ಸಂಸ್ಕ ತಿ, ಶಿಸ್ತು, ಸಮಯ ಪ್ರಜ್ಞೆ ಇಟ್ಟುಕೊಂಡು ಶ್ರಮವಹಿಸಿದರೆ ಗುರಿ ಸಾಧನೆ ಸಾಧ್ಯ ಎಂಬುದನ್ನು ಸವರ್ಷಗೌಡ ಮಾಡಿ ತೋರಿಸಿದ್ದಾರೆ.”
-ಮಲ್ಲಿಕಾ ಮಳವಳ್ಳಿ, ಸಾಹಿತಿಗಳು.