Mysore
23
mist

Social Media

ಶನಿವಾರ, 06 ಡಿಸೆಂಬರ್ 2025
Light
Dark

೨೦೨೫ರ ಫ್ಯಾಷನ್ ಪವರ್! ಯೂತ್ಸ್ ಖದರ್

2025 Fashion

ವಸ್ತ್ರಗಳು ವಯಸ್ಸನ್ನು ಮೀರಿ ಎಲ್ಲರನ್ನೂ ಸೆಳೆಯುವ ಬದುಕಿನ ಪ್ರೀತಿ. ಅದಕ್ಕೆ ಸ್ವಲ್ಪ ವಿಭಿನ್ನ ಟಚ್ ಕೊಟ್ಟರೆ ಅದು ಫ್ಯಾಷನ್. ವರ್ಷಗಳು ಬದಲಾದಂತೆ ಫ್ಯಾಷನ್ ಟ್ರೆಂಡ್‌ಗಳು ಹೊಸ ಮಗ್ಗುಲಿಗೆ ಹೊರಳುತ್ತಿವೆ. ಅದರಲ್ಲೂ ಯುವ ಮನಸ್ಸಿನವರು ಹೊಸ ಫ್ಯಾಷನ್‌ಗೆ ಬೇಗ ಮನಸೋಲುತ್ತಾರೆ. ಜೊತೆಗೆ ತಮ್ಮ ಬದುಕನ್ನು ಹೊಸ ಬದಲಾವಣೆಯಾಗಿ ಅಳವಡಿಸಿಕೊಳ್ಳುವುದು ಎಲ್ಲ ಕಾಲದಲ್ಲೂ ನಡೆದು ಬರುತ್ತಲೇ ಇದೆ.

ಸಾಮಾನ್ಯವಾಗಿ ಸಿನಿಮಾಗಳು ಫ್ಯಾಷನ್‌ಗಳ ರೂವಾರಿ. ಬಾಲಿವುಡ್, ಹಾಲಿವುಡ್ ಸೇರಿದಂತೆ ದಕ್ಷಿಣದ ಎಲ್ಲಾ ವುಡ್‌ಗಳು ಫ್ಯಾಷನ್ ಕ್ಷೇತ್ರಕ್ಕೆ ತಮ್ಮ ಕೊಡುಗೆ ನೀಡುತ್ತಲೇ ಬಂದಿವೆ. ಇದಿಷ್ಟೇ ಅಲ್ಲದೆ ಪ್ರತಿನಿತ್ಯ ಹೊಸ ಹೊಸ ಡಿಸೈನರ್ ಔಟ್ ಫಿಟ್‌ಗಳು ರ‍್ಯಾಂಪ್ ವಾಕ್ ಮೂಲಕ ಫ್ಯಾಷನ್ ಪ್ರಿಯರ ಮನಗೆಲ್ಲುತ್ತಿವೆ. ಕೇವಲ ಸೆಲೆಬ್ರಿಟಿಗಳಿಗೆ ಮಾತ್ರ ಮೀಸಲಿದ್ದ ಈ ಡಿಸೈನರ್ ಔಟ್‌ಫಿಟ್‌ಗಳು, ಇಂದು ಸಾಮಾನ್ಯಜನರ ಕೈಗೆಟುಕುತ್ತಿವೆ. ರೆಂಟೆಡ್ ಔಟ್‌ಫಿಟ್‌ಗಳು ಎಲ್ಲರ ಫ್ಯಾಷನ್ ಕನಸನ್ನು ನನಸು ಮಾಡಿವೆ. ಅಲ್ಲದೇ ಅವುಗಳ ರೆಪ್ಲಿಕಾಗಳು ಫ್ಯಾಷನ್ ಜಗತ್ತಿನಲ್ಲಿ ಹೊಸ ಭರವಸೆ ಮೂಡಿಸಿವೆ. ಒಂದು ಕಾಲದಲ್ಲಿ ಸಾಮಾನ್ಯ ಜನರಿಗೆ ಅದರಲ್ಲೂ ಯುವ ಸಮುದಾಯಕ್ಕೆ ನೋಡಿ ಖುಷಿಪಡಲು ಅಷ್ಟೇ ಸೀಮಿತವಾಗಿದ್ದ ಫ್ಯಾಷನ್ ಇಂದು ಅವರ ಬದುಕಿನ ಬಹುಮುಖ್ಯ ವಿಷಯ ವಾಗಿದೆ. ಅದರಲ್ಲೂ ೨೦೨೫ರಲ್ಲಿ ಫ್ಯಾಷನ್ ಟ್ರೆಂಡ್ ವೈಬ್ಸ್ ಸಿಕ್ಕಾಪಟ್ಟೆ ಹೈ ಇದೆ.

ಹಾಗಿದ್ದರೆ ೨೦೨೫ರಲ್ಲಿ ಯಾವೆಲ್ಲಾ ಔಟ್‌ಫಿಟ್‌ಗಳು, ಮೆಟಿರಿಯಲ್‌ಗಳು, ಸ್ಟೈಲ್, ಡಿಸೈನ್‌ಗಳು ಫ್ಯಾಷನ್ ಲೋಕದಲ್ಲಿ ಹುಬ್ಬೇರಿಸುತ್ತಿವೆ ಎಂಬುದನ್ನು ತಿಳಿದು ಕೊಳ್ಳೋಣ ಬನ್ನಿ. ಈ ಬಗ್ಗೆ ಸ್ಯಾಂಡಲ್‌ವುಡ್ ಮತ್ತು ಬಾಲಿವುಡ್‌ನ ಖ್ಯಾತ ಸ್ಟೈಲಿಸ್ಟ್, ಸೆಲೆಬ್ರೆಟಿ ಡಿಸೈನರ್ ಲಕ್ಷ್ಮೀ ಕೃಷ್ಣಾ ಅವರು ಅನೇಕ ವಿಷಯಗಳನ್ನು ತಿಳಿಸಿಕೊಟ್ಟಿದ್ದಾರೆ. ಕನ್ನಡದ ಕೆಲವೇ ಕೆಲವು ಡಿಸೈನರ್ಸ್‌ಗಳು ಬಾಲಿವುಡ್‌ನಲ್ಲಿ ಕೆಲಸ ಮಾಡುತ್ತಾರೆ, ಅಂತಹ ಬೆರಳೆಣಿಕೆ ಮಂದಿಯಲ್ಲಿ ಲಕ್ಷ್ಮೀ ಕೃಷ್ಣಾ ಕೂಡ ಒಬ್ಬರು. ಅವರ ಫ್ಯಾಷನ್ ಗ್ಯಾನ್ ನಿಮಗಾಗಿ ಇಲ್ಲಿದೆ.

೨೦೨೫ರಲ್ಲಿ ಯಾವ ಸ್ಟೈಲ್ ಟ್ರೆಂಡ್‌ನಲ್ಲಿದೆ?: ಮೊದಲೆಲ್ಲಾ ಶಾಪಿಂಗ್ ಸ್ಟ್ರೀಟ್‌ಗಳಲ್ಲಿ ಬಟ್ಟೆ ಕೊಳ್ಳುತ್ತಿದ್ದ ಜನರು ಇಂದು ಇನ್ ಸ್ಟಾ, ವೆಬ್ ಪೇಜ್ ಮೂಲಕ ಕಣ್ಣಿಗೆ ಕಾಣುವ ಬಟ್ಟೆಗಳನ್ನು ಕೊಳ್ಳುತ್ತಿದ್ದಾರೆ. ಇದರ ಹಿಂದೆ ಅನೇಕ ಡಿಸೈನರ್ಸ್, ಇನ್‌ಫ್ಲುಯೆನ್ಸರ್‌ಗಳ ಶ್ರಮವಿದೆ. ಇಂದು ಸಿನಿಮಾ ನಟಿಯರು ಮತ್ತು ಸಾಮಾನ್ಯರ ವಸ್ತ್ರಗಳ ನಡುವೆ ಅಷ್ಟೇನೂ ಅಂತರವಿಲ್ಲ. ಸೋಶಿಯಲ್ ಮೀಡಿಯಾಗಳ ರೀಲ್‌ಗಳಲ್ಲಿ ಗಮನಿಸಿದರೆ ಹೀರೋಯಿನ್‌ಗಿಂತಲೂ ಸಾಮಾನ್ಯ ಜನರೇ ಒಂದು ಕೈ ಹೆಚ್ಚು ಫ್ಯಾಷನಬಲ್ ಆಗಿ ಕಾಣುತ್ತಿದ್ದಾರೆ. ಔಟ್‌ಫಿಟ್‌ಗಳಲ್ಲಿ ಇವತ್ತು ಹೆಚ್ಚು ಡ್ರಾಮಾ ಕಾಣುತ್ತಿದೆ.

ನೋಡಿದ ಕೂಡಲೇ ಹುಬ್ಬೇರಿಸುವಂತಿರುತ್ತವೆ. ಚರ್ಚೆಗೂ ಒಳಗಾಗುತ್ತದೆ. ಪ್ರತಿಯೊಬ್ಬರೂ ಇಂದು ಎಕ್ಸ್‌ಪರಿಮೆಂಟ್ ಮಾಡಲು ಉತ್ಸುಕರಾಗಿದ್ದಾರೆ. ಸ್ಕೂಬಾ, ನೆಟ್ಟೆಡ್ ಫ್ಯಾಬ್ರಿಕ್, ಲೆದರ್ ಇವೆಲ್ಲಾ ಮತ್ತೆ ಟ್ರೆಂಡ್‌ನಲ್ಲಿವೆ. ವಿಭಿನ್ನ ಫ್ಯಾಬ್ರಿಕ್ಗಳನ್ನು ಸೇರಿಸಿ ಹೊಸ ಸ್ಟೈಲ್‌ಗಳನ್ನು ಮೌಲ್ಡ್ ಮಾಡಲು ಶ್ರಮಿಸಬೇಕಾಗುತ್ತದೆ. ಬಾಡಿ ಫಿಟ್ಟೆಡ್ ಗೌನ್ ವಿಥ್ ಫ್ಲಂಚ್ ನೆಕ್ ಲೈನ್, ಬಸ್ಟಿಯರ್ ಗೌನ್ ಈಗ ಟ್ರೆಂಡ್‌ನಲ್ಲಿದೆ. ಸಾಮಾನ್ಯವಾಗಿ ಪಾಶ್ಚಿಮಾತ್ಯರನ್ನೇ ಹೆಚ್ಚು ಅನುಸರಿಸುವ ನಾವು ಈಗ ಅದರ ಜೊತೆಗೆ ಕಂಫರ್ಟ್‌ಗೂ ಆದ್ಯತೆ ನೀಡುವಷ್ಟು ಲಿಬರಲ್ ಆಗಿದ್ದೇವೆ.

ಯೂಥ್ಸ್ ಫ್ಯಾಷನ್ ಟ್ರೆಂಡ್ ಏನಿದೆ?: ಸ್ಟೇಟ್ ಮೆಂಟ್ ಮೇಕಿಂಗ್ ಡಿಸೈನ್ಸ್, ಬೋಲ್ಡ್ ಪ್ಯಾಟರ್ನ್ಸ್, ಅನಿಮಲ್ ಪ್ರಿಂಟ್, ಅಬ್ಸಾಟ್ರ್ಯಾಕ್ಟ್ ಡಿಸೈನ್‌ಗಳ ಔಟ್‌ಫಿಟ್‌ಗಳು ತುಂಬಾ ಟ್ರೆಂಡ್ ನಲ್ಲಿವೆ. ಇನ್ನೂ ಆಕ್ಸೆಸರೀಸ್ ವಿಷಯಕ್ಕೆ ಬಂದರೆ, ಲಿಪ್ ಶೇಪ್, ಕ್ಲಚ್ಚಸ್, ಚಂಕಿಸ್ನೀಕರ್ಸ್, ಪರ್ಲ್ ಸ್ನೀಕರ್, ವೆಡ್ಡಿಂಗ್ ಲೆಹೆಂಗಾ, ಕಣ್ಣು ಕೋರೈಸುವ ಜ್ಯುವೆಲ್ಲರಿಗಳು ಇವತ್ತಿನ ಫ್ಯಾಷನ್ ಟ್ರೆಂಡ್‌ನಲ್ಲಿ ಟಾಪ್ ಪ್ಲೇಸ್‌ನಲ್ಲಿದೆ. ಇನ್ನೂ ಮಿನಿಮಲಿಸಿಮ್ ಕೂಡ ಟ್ರೆಂಡ್‌ನಲ್ಲಿದೆ. ಬೋಲ್ಡ್ ಪ್ರಿಂಟ್ಸ್ ಕೂಡ ಇವತ್ತು ಎಲ್ಲರನ್ನೂ ಆಕರ್ಷಿಸುತ್ತಿದೆ. ಜೊತೆಗೆ ಪ್ಲಸ್ ಸೈಜ್ ಫ್ಯಾಷನ್‌ಗಳು ಕೂಡ ಫ್ಯಾಷನ್ ಲೋಕಕ್ಕೆ ದೊಡ್ಡ ಕೊಡುಗೆ ನೀಡಿದೆ. ದಪ್ಪಗಿರುವವರು ಕೂಡ ಇಂದು ಪ್ಲಸ್ ಸೈಝ್ ಔಟ್‌ಫಿಟ್ ಮೂಲಕ ವಿಶೇಷವಾಗಿ ಗಮನ ಸೆಳೆಯುತ್ತಿದ್ದಾರೆ. ಇದು ನಿಜಕ್ಕೂ ಆಶಾದಾಯಕ ಬೆಳವಣಿಗೆ. ಮೊದಲೆಲ್ಲಾ ವೈಡ್ ಲೆಗ್, ಬೂಟ್ ಕಟ್ ಜೀನ್ಸ್ ಹೆಚ್ಚು ಟ್ರೆಂಡ್‌ನಲ್ಲಿತ್ತು. ಈಗ ಜೀನ್ಸ್ ಮೇಲೆ ಪರ್ಲ್ ವರ್ಕ್, ಬೇರೆ ಬೇರೆ ಫ್ಯಾಬ್ರಿಕ್‌ಗಳ ಜೊತೆಗೂ ಟೋನ್, ಶೇಡೆಡ್ ಜೀನ್ಸ್ ಅತ್ಯಾಕರ್ಷಕವಾಗಿ ಹೊರಹೊಮ್ಮುತ್ತಿದೆ. ಮೆಷ್ ಟಾಪ್ಸ್, ಕ್ರಾಪ್ ಕಾರ್ಡಿಗಲ್, ಟ್ಯೂಲಿ ಡ್ರೆಸಸ್ಸ್, ಫ್ಲಾಪರ್ ಸ್ಟೈಲ್ ಡ್ರೆಸ್‌ಗಳು ಹೆಚ್ಚು ಫ್ಯಾಷನ್‌ಬಲ್ ಆಗಿವೆ. ಬ್ಯಾಂಬೋ ಜಾಕೆಟ್, ಟ್ರ್ಯಾಕ್ ಜೀನ್ ಜಾಕೆಟ್ಸ್ ಯುವ ಸಮುದಾಯದ ಮನ ಸೆಳೆಯುತ್ತಿದೆ. ಪ್ಲೈನ್ ಮತ್ತು ಸಟಲ್ ಕೂಡ ಈ ನಿಟ್ಟಿನಲ್ಲಿ ಹಿಂದೆ ಬಿದ್ದಿಲ್ಲ. ಈಗ ಯುವ ಸಮುದಾಯ ತಾವು ಚೆನ್ನಾಗಿ ಕಾಣುವುದಕ್ಕಿಂತಲೂ ಹೆಚ್ಚಾಗಿ ಇನ್‌ಸ್ಟಾಗ್ರಾಂಗಳಲ್ಲಿ, ಫೋಟೋ, ವಿಡಿಯೋಗಳಲ್ಲಿ, ಶಾರ್ಟ್ ವಿಡಿಯೋಗಳಲ್ಲಿ ಹೆಚ್ಚು ಚೆನ್ನಾಗಿ ಕಾಣಲು ಬಯಸುತ್ತಾರೆ. ಯುವಜನತೆಯ ಈ ಮಿಡಿತವನ್ನು ಫ್ಯಾಷನ್ ಜಗತ್ತು , ಕ್ರಿಯೆಟರ್ಸ್ ಚೆನ್ನಾಗಿಯೇ ಅರ್ಥಮಾಡಿಕೊಂಡಿದ್ದಾರೆ. ಅದೇ ರೀತಿ ಪ್ರತಿನಿತ್ಯ ಯೂನಿಕ್ ಡಿಸೈನ್, ಫ್ಯಾಬ್ರಿಕ್ ಫ್ಯಾಷನ್ ಲೋಕದಲ್ಲಿ ಧಮಾಕ ಸೃಷ್ಟಿಸುತ್ತಿವೆ.

ಪ್ರತಿ ವರ್ಷ ಹೊಸ ಮಗ್ಗುಲಿಗೆ ಹೊರಳುವ ಫ್ಯಾಷನ್ ಟ್ರೆಂಡ್: ಸ್ಯಾಂಡಲ್‌ವುಡ್‌ ಮತ್ತು ಬಾಲಿವುಡ್‌  ಗಮನಿಸಿದಾಗ ಸ್ಯಾಂಡಲ್‌ವುಡ್ ನಟಿಯರು ಈಗಲೂ ಅಭಿಮಾನಿಗಳ ಮಾತಿಗೆ ಮನ್ನಣೆ ನೀಡುತ್ತಾರೆ. ಕೆಲವು ಡಿಸೈನ್‌ಗಳನ್ನು ಧರಿಸಲು ಯೋಚಿಸುತ್ತಾರೆ. ಆದರೆ ಕೆಲವರು ಹೊಸತನವನ್ನು ಅಳವಡಿಸಿಕೊಳ್ಳಲುಮುಂದಾಗುತ್ತಾರೆ. ಟ್ರೆಂಡ್‌ಗೆ ಹೊಂದುವಂತೆ ನಡೆಯುತ್ತಾರೆ. ಆದರೆ ಬಾಲಿವುಡ್ನಲ್ಲಿ ಸಂಪೂರ್ಣ ಬಾಡಿ ಶೋ, ವೆಸ್ಟರ್ನ್‌ಗೆ ಹೆಚ್ಚು ಮಾನ್ಯತೆ ನೀಡುತ್ತಾರೆ. ನಿರಂತರ ಪಾಪರಾಜಿಗಳ ಕಣ್ಗಾವಲಿನಲ್ಲೇ ಇರುವ ಅವರು ಔಟ್ ಆಫ್ ದಿ ಬಾಕ್ಸ್ ಯೋಚಿಸಲೇ ಬೇಕಾಗುತ್ತದೆ. ನಮ್ಮ ನಟಿಯರು ಸೀರೆಯಲ್ಲೇ ಇಂದಿಗೂ ಹೆಚ್ಚು ಕಂಫರ್ಟಬಲ್ ಮತ್ತು ಸ್ಟೈಲ್ ಫೀಲ್ ಮಾಡುತ್ತಾರೆ.

ಟೆಕ್ಸ್‌ಟೈಲ್ಸ್ ಮತ್ತು ಫ್ಯಾಷನ್ ಇಂಡಸ್ಟ್ರಿ ನಮ್ಮ ದೇಶದ ಎಕಾನಮಿಗೆ ದೊಡ್ಡ ಕೊಡುಗೆಯನ್ನು ನೀಡುತ್ತಿದೆ. ದೇಶದ ಜಿಡಿಪಿಗೆ ಶೇ.೨ರಷ್ಟು ಮತ್ತು ಇಂಡಸ್ಟ್ರಿಯಲ್ ಪ್ರೊಡಕ್ಷನ್‌ಗೆ ಶೇ.೧೦ರಷ್ಟು, ಶೇ.೮ರಿಂದ ೯ರಷ್ಟು ಭಾರತದ ರಫ್ತು ಕ್ಷೇತ್ರಕ್ಕೆ ಕೊಡುಗೆ ನೀಡುತ್ತಿದೆ. ಅಂಬಾನಿ, ಟಾಟಾ ಅವರು ಟೆಕ್ ಟೈಲ್ಸ್ ಇಂಡಸ್ಟ್ರಿಗೆ ಬಂದ ನಂತರ ಚೈನೀಸ್ ಬ್ರ್ಯಾಂಡ್‌ಗಳು ಭಾರತದಿಂದ ಕಣ್ಮರೆಯಾಗತೊಡಗಿದವು. ಭಾರತದ ಕಚ್ಚಾ ವಸ್ತುಗಳು, ಪರಂಪರೆಗೆ ಹೆಚ್ಚು ಆದ್ಯತೆ ನೀಡಲಾಗುತ್ತಿದೆ. ಅಲ್ಲದೇ ಅನೇಕ ಲಕ್ಷಾಂತರ ಜನರಿಗೆ ಉದ್ಯೋಗಾವಕಾಶವನ್ನು ಒದಗಿಸಿದೆ. ಫ್ಯಾಷನ್ ಪ್ರತಿಕ್ಷಣವೂ ಬದಲಾಗುತ್ತದೆ; ಬೆಳೆಯುತ್ತಿರುತ್ತದೆ. ಇ-ಕಾಮರ್ಸ್ ಕೂಡ ಇಂದು ದೊಡ್ಡ ಮಟ್ಟದಲ್ಲಿರಲು ಫ್ಯಾಷನ್ ಕೊಡುಗೆ ಗಮನಾರ್ಹವಾಗಿದೆ. ಫ್ಯಾಷನ್ ಇಂಡಸ್ಟ್ರಿ ಆರ್ಥಿಕತೆ ಜೊತೆಗೆ ಸಾಮಾಜಿಕವಾಗಿಯೂ ಯುವ ಸಮುದಾಯದಲ್ಲಿ ಆತ್ಮವಿಶ್ವಾಸ, ಬದುಕಿನ ಬಗ್ಗೆ ಹೊಸ ಭರವಸೆ, ಜೀವನಪ್ರೀತಿ ಮೂಡಿಸುತ್ತಿವೆ. ಕೆಲವರಲ್ಲಿ ಸೃಜನಶೀಲತೆಗೆ ಪ್ರೇರಣೆಯಾದರೆ ಮತ್ತೂ ಕೆಲವರಿಗೆ ಬದುಕಿನ ಪ್ರಮುಖ ಸಂಗತಿಯಾಗಿ ಮಾರ್ಪಟ್ಟಿದೆ. ವಸ್ತ್ರಗಳು ನಮ್ಮನ್ನು ಈ ಜಗತ್ತಿಗೆ ಪರಿಚಯಿಸುವ ವಿಸಿಟಿಂಗ್ ಕಾರ್ಡ್ ಇದ್ದಂತೆ. ಅವುಗಳನ್ನು ಸರಳವಾಗಿ ಜೊತೆಗೆ ಫ್ಯಾಷನಬಲ್ ಆಗಿ ಅಳವಡಿಸಿಕೊಂಡಾಗ ನಾವು ಇನ್ನೂ ಪರಿಣಾಮಕಾರಿಯಾಗಿ ಎಲ್ಲರ ಗಮನ ಸೆಳೆಯುತ್ತೇವೆ. ಆ ಮೂಲಕ ನೋಡುಗರ ಮನದಲ್ಲಿ ವಿಶೇಷ ಸ್ಥಾನ ಪಡೆದುಕೊಳ್ಳುತ್ತೇವೆ.

ಫ್ಯಾಷನ್ ಅಂದ್ರೆ ಕಂಫರ್ಟಬಲ್: ಅದು ಕಾಟನ್. ಖಾದಿ, ಲೆನಿನ್. ನಾನು ಶಾಪ್ ಮಾಡಿದ್ದೇ ಖಾದಿ ಮತ್ತು ಲೆನಿನ್‌ನ ಫ್ಯಾಷನ್ ಆಗಿ ಬದಲಿಸಬೇಕು ಎಂಬ ಗುರಿಯಿಂದ. ಕಾಟನ್ ಅಂದರೆ ತೀರಾ ಹಿಂದಿನಂತಲ್ಲ, ಅದರಲ್ಲೂ ಫ್ಯಾಷನ್ ಇದೆ. ೨೦೨೫ರಲ್ಲಿಹೆಣ್ಣುಮಕ್ಕಳು ಲುಂಗಿ ಉಡುತ್ತಿದ್ದಾರೆ. ನಾನು ಕೂಡ ಕಾಟನ್ ಲುಂಗಿ, ಖಾದಿ ಲುಂಗಿ ಧರಿಸುತ್ತೇನೆ. ನನಗೆ ಕಂಫರ್ಟಬಲ್ ಅನಿಸುತ್ತದೆ. ಸ್ಲೀವ್ ಲೆಸ್ ಟಾಪ್, ಟೀ ಶರ್ಟ್ ಧರಿಸುವುದು ಹೆಚ್ಚು ಟ್ರೆಂಡಿ. ಜೊತೆಗೆ ಕೆಲಸ, ಟ್ರಾವೆಲಿಂಗ್‌ಗೆ ತುಂಬಾ ಕಂಫರ್ಟಬಲ್. ಪ್ಯಾಂಟ್ ಮೇಲೆ ಲುಂಗಿ ಹಾಕುವುದು, ಪ್ಯಾಂಟ್ ಮತ್ತು ಲುಂಗಿ ಎರಡೂ ಕಾಣುವಂತೆ ಡಿಸೈನ್ ಮಾಡುತ್ತೇನೆ. ರೆಡಿಮೇಡ್ ಸೀರೆ, ಸಿಂಥೆಟಿಕ್, ಜರ್ಜೆಟ್‌ಗೆ ಈಗಲೂ ಹೆಚ್ಚಿನ ಮನ್ನಣೆ ಇದೆ. ರಿಯಾಲಿಟಿ ಶೋ, ಇವೆಂಟ್ ಇದ್ದಾಗ ಕಾಟನ್ ಮೇಲೆ ಹೆಚ್ಚು ಡಿಸೈನ್ಗಳನ್ನು ಯಾರೂ ಮಾಡುತ್ತಿಲ್ಲ. ಫೇಯಿಂಗ್ ಮಟಿರಿಯಲ್ಸ್ ಮೇಲೆ ಪ್ಯಾಚಸ್ ಈಗ ನಡಿತಿದೆ.

ಟಿವಿಗಳಲ್ಲಿ ಗಮನಿಸಿದಾಗ ಕಾಟನ್ ಬೇಸ್‌ನಲ್ಲಿ ಯಾರೂ ಕಾಣುತ್ತಿಲ್ಲ. ನಾನು ಇವೆಂಟ್‌ಗಳಿಗೆ ಹೋದಾಗ ಕಾಟನ್ ಅಟೈರ್‌ನಲ್ಲೇ ಹೆಚ್ಚು ಕಾಣಿಸಿಕೊಳ್ಳುತ್ತೀನಿ. ಅದರ ಮೇಲೆ ಹೆಚ್ಚಿನ ಪ್ರೀತಿ ನನಗೆ. ಸ್ಲೀವ್ ಲೆಸ್ ಬ್ಲೌಸ್ ಮತ್ತು ಕಾಟನ್ ಸ್ಯಾರಿ ಎವರ್ ಗ್ರೀನ್ ಟ್ರೆಂಡ್. ನನಗೆ ಅದು ಬಹಳ ಇಷ್ಟ. ನಾನು ಯಾವುದೇ ಸಾಂಪ್ರದಾಯಿಕ ಇವೆಂಟ್ ಅಥವಾ ವೃತ್ತಿ ಸಂಬಂಧಿತ ಎಲ್ಲಾ ಫಂಕ್ಷನ್‌ಗಳಿಗೂ ಕಾಟನ್ ದಿರಿಸು ಧರಿಸಲು ಇಷ್ಟಪಡುತ್ತೇನೆ.

ಬೆರಳೆಣಿಕೆ ಮಂದಿ ಮಾತ್ರ ಹೀಗೆ ಕಾಣಸಿಗುತ್ತಾರೆ. ಈಗ ಅನೇಕರಿಗೆ ಸಮಯದ ಕೊರತೆ ಇದೆ. ಟ್ರಾವೆಲ್, ಬ್ಲಾಗಿಂಗ್, ಟ್ರಾಫಿಕ್ ಎಲ್ಲಾ ಕಡೆಯೂ ಕಂಫರ್ಟ್‌ಗೆ ಆದ್ಯತೆ ಇದೆ. ಆದ್ದರಿಂದ ಟಿ ಶರ್ಟ್, ಸ್ಕರ್ಟ್, ರ‍್ಯಾಪ್‌ಗಳನ್ನು ನಾನು ಗಮನಿಸಿದ್ದೇನೆ. ಇವತ್ತು ಹೆಣ್ಣುಮಕ್ಕಳಿಗೆ ಆಕ್ಸೆಸರಿಸ್ ಮೇಲೆ ಹೆಚ್ಚು ಒಲವು ಮೂಡಿದೆ. ಚೆಂದದ ಓಲೆಗಳನ್ನು ಧರಿಸುತ್ತಾರೆ. ಮೂಗು ಚುಚ್ಚಿಸಿ ಕೊಳ್ಳುತ್ತಾರೆ. ನೋಸ್ ಪಿನ್‌ಗಳಿಗೆಸಿಕ್ಕಾಪಟ್ಟೆ ಡಿಮ್ಯಾಂಡ್ ಇದೆ. ಟ್ರೆಂಡಿ, ಸಿಲ್ವರ್ ಬ್ಲ್ಯಾಕ್ ಆಕ್ಸೈಡ್ ಜ್ಯುವೆಲ್ಲರಿ ಮತ್ತೆ ಟ್ರೆಂಡ್‌ನಲ್ಲಿದೆ. ಟೆರ್ರಕೋಟಾ ಸಿಕ್ಕಾಪಟ್ಟೆ ಟ್ರೆಂಡ್‌ನಲ್ಲಿದೆ. ಪರ್ಸ್, ಬ್ಯಾಗ್‌ಗಳಲ್ಲಿ ದೊಡ್ಡ ಸೈಜ್‌ಗಿಂತ ಚಿಕ್ಕ ವ್ಯಾಲೆಟ್ ಹೆಚ್ಚು ಪ್ರಿಫರ್ ಮಾಡುತ್ತಿದ್ದಾರೆ. ಇವತ್ತು ಮೊಬೈಲ್‌ನಲ್ಲೇ ಎಲ್ಲಾ ಇರುವುದರಿಂದ ಬ್ಯಾಗ್ ಅಗತ್ಯವಿಲ್ಲ. ಲಿಪ್ ಸ್ಟಿಕ್, ಶೈನರ್, ಕಾರ್ಡ್‌ಗೆ ಹೊಂದು ವಂತಹ ಸ್ಮಾಲ್ ಬ್ಯಾಗ್, ವ್ಯಾಲೆಟ್‌ನಲ್ಲೇ ಲುಕ್ ಪ್ರಿಫರ್ ಮಾಡರೆ. ಗಾಗಲ್ಸ್ ಈಗ ಫುಲ್ ಟ್ರೆಂಡ್‌ನಲ್ಲಿದೆ. ಡಿಫ ರೆಂಟ್ ಶೇಡ್ ಮತ್ತು ಸ್ಟೈಲ್‌ಗಳು ಯುವ ಸಮುದಾಯವನ್ನು ಆಕರ್ಷಿಸುತ್ತಿವೆ. ಗಾಗಲ್ ಲುಕ್ ಹೆಚ್ಚು ಸ್ಟೈಲಿಶ್ ಅನಿಸುತ್ತದೆ. ಗಾಗಲ್ಸ್, ಕಪ್ಪು ಬೊಟ್ಟು ಮತ್ತು ಕಾಟನ್ ಸ್ಯಾರಿ ನನ್ನ ಸ್ಟೈಲ್ ಸ್ಟೇಟ್‌ಮೆಂಟ್. ನಾನು ನನ್ನ ವಸ್ತ್ರ ಉದ್ಯಮದಲ್ಲಿ ಕೌದಿ ಕಾನ್ಸೆಪ್ಟ್ ಮೇಲೆ ಹೆಚ್ಚು ಕೆಲಸ ಮಾಡುತ್ತಿದ್ದೇನೆ. ಪ್ಯಾಚಸ್‌ನಲ್ಲೇ ಲಾಂಗ್, ಶಾರ್ಟ್ ಗೌನ್ ವಿನ್ಯಾಸಕ್ಕೆ ಹೆಚ್ಚು ಆದ್ಯತೆ ನೀಡುತ್ತೇನೆ

ಸಿನಿಮಾದಲ್ಲಿ ಹೇಗೆ ಬದಲಾವಣೆ ಆಗಲಿದೆ: ಒಂದು ಸಿನಿಮಾ ಬಿಡುಗಡೆಯ ಸಮಯ ಬದಲಾದರೆ ಫ್ಯಾಷನ್ ಟ್ರೆಂಡ್ ಕೂಡ ಬದಲಾಗಿರುತ್ತದೆ. ಕೆಲವು ಸಿನಿಮಾಗಳು ವರ್ಷಾನುಗಟ್ಟಲೇ ಟೈಂ ತೆಗೆದುಕೊಂಡು ಬಿಡುಗಡೆಯಾಗುತ್ತವೆ. ಅಷ್ಟರಲ್ಲಿ ಕೆಲವು ಫ್ಯಾಷನ್ ಹಳೆಯದಾಗಿರುತ್ತವೆ. ಇಲ್ಲವೇ ಮತ್ತೆ ಹೊಸ ರೂಪದಲ್ಲಿ ಮರುಕಳಿಸಿರುತ್ತವೆ. ನನಗೆ ಟ್ರೆಂಡಿಯಾಗಿರಲು ಇಷ್ಟ. ಹಳ್ಳಿ, ಡ್ರಾಮಾಟಿಕ್, ಐಟಿ ಪಾತ್ರಗಳಿಗೆ ಟ್ರೆಂಡಿ ಫ್ಯಾಷನಬಲ್ ಔಟ್‌ಫಿಟ್ ಡಿಸೈನ್ ಮಾಡಲ್ಲ. ಅದನ್ನು ಪಾತ್ರಕ್ಕೆ ಅನುಗುಣವಾಗಿ ರೆಡಿ ಮಾಡುತ್ತೇವೆ. ನ್ಯೂಜನರೇಷನ್ ನಾಯಕ, ನಾಯಕಿ ಎಂದಾಗ ತುಂಬಾ ಸಮಯ ಉಳಿಯುವ ಟ್ರೆಂಡ್‌ಗಳ ಮೇಲೆ ವರ್ಕ್ ಮಾಡುತ್ತೇವೆ. ಕೆಲವೊಮ್ಮೆ ಪಾತ್ರ, ಕಾನ್ಸೆಪ್ಟ್‌ಗಾಗಿ ನಾವು ಕಾಸ್ಟ್ಯೂಮ್ ವಿನ್ಯಾಸ ಮಾಡುತ್ತೇವೆ. ಅಲ್ಲಿ ಫ್ಯಾಷನ್ಗಿಂತಲೂ ಪಾತ್ರ ಮುಖ್ಯ. ಆದರೆ ಸಿನಿಮಾ ರಿಲೀಸ್ ಆದಾಗ ಅವು ಟ್ರೆಂಡ್ ಆಗಿ ಬಿಡುವುದು ಕೂಡ ಫ್ಯಾಷನ್ ಜಗತ್ತಿನ ಅಚ್ಚರಿ. ಆದರೆ ಸೆಲೆಬ್ರೆಟಿಗಳು ಅನೇಕ ಇವೆಂಟ್‌ಗಳಲ್ಲಿ ಕಾಣಿಸಿಕೊಳ್ಳುತ್ತಾರೆ ಸಿನಿಮಾ ರಿಲೀಸ್, ಶೋ ರೂಂ ಇನ್ಯಾಗ್ಯೂರೇಷನ್, ಅವಾರ್ಡ್ ಶೋ ಇವುಗಳು ಫ್ಯಾಷನ್ ಡಿಸೈನರ್‌ಗೆ ನಿಜಕ್ಕೂ ಇಷ್ಟದ ಮತ್ತು ಸವಾಲಿನ ಕೆಲಸಗಳಾಗಿರುತ್ತವೆ. ಇವುಗಳೇ ಮುಂದೆ ಟ್ರೆಂಡ್ ಆಗಬಹುದು. ನೀವು ಗಮನಿಸಿರಬಹುದು. ಸೆಲೆಬ್ರಿಟಿಗಳ ವೆಡ್ಡಿಂಗ್ ಲುಕ್, ಇವೆಂಟ್ ಲುಕ್‌ಗಳನ್ನು ಇನ್‌ಸ್ಟಾಗ್ರಾಂನಲ್ಲಿ ಸಾಕಷ್ಟು ಜನ ರಿಕ್ರಿಯೇಟ್ ಮಾಡಿರುತ್ತಾರೆ. ಇವುಗಳು ಕೂಡ ಆ ಔಟ್‌ಫಿಟ್‌ಗೆ ಸಿಗುವ ಜನಮನ್ನಣೆಯೇ.

“ಲಕ್ಷ್ಮೀ ಬಾರಮ್ಮ ಧಾರವಾಹಿ ಖ್ಯಾತಿಯ ಕೊಡಗಿನ ಬೆಡಗಿ ಕಾವೇರಿ ಅರ್ಥಾತ್ ನಟಿ ಸುಷ್ಮಾ ನಾಣಯ್ಯ ಅವರು ಮೇಕ್ ಅಪ್ ಆರ್ಟಿಸ್ಟ್ ಕೂಡ ಹೌದು. ಕೂರ್ಗಿ ಉಡುಗೆಯಲ್ಲಿ ಆಗಾಗ ಇನ್‌ಸ್ಟಾಗ್ರಾಮ್ನಲ್ಲಿ ಗಮನ ಸೆಳೆಯುವ ಸುಷ್ಮಾ ಅವರ ಸ್ಟೈಲ್ ಸ್ಟೇಟ್ಮೆಂಟ್ ಏನು ಗೊತ್ತಾ, ‘ನನ್ನ ಸ್ಟೈಲ್ ಸ್ಟೇಟ್ಮೆಂಟ್ ಅಂದ್ರೆ ಕಂಫರ್ಟಬಲ್ ವೇರಿಂಗ್. ಜೀನ್ಸ್, ಲೂಸ್ ಟೀ ಶರ್ಟ್ ಅದೇ ನನಗೆ ತುಂಬಾ ಇಷ್ಟ. ಲಾಂಗ್ ಡ್ರೆಸ್ಸೆಸ್ ಮತ್ತು ತ್ರಿ ಫೋರ್ತ್ ಡ್ರೆಸ್ಸೆಸ್ ಬಹಳ ಇಷ್ಟವಾಗುತ್ತದೆ’ ಎನ್ನುತ್ತಾರೆ. ಇನ್ನು ಇವೆಂಟ್‌ಗಳಲ್ಲಿ ಸುಷ್ಮಾ ಧರಿಸುವ ಸೀರೆಗಳ ಬಗ್ಗೆ ಅಭಿಮಾನಿಗಳು ಕೂಡ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ”

– ಚೈತ್ರಾ 

Tags:
error: Content is protected !!