Mysore
21
overcast clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ಮಿರರ್‌ ಲೆಸ್ ಕ್ಯಾಮೆರಾಗಳಿಗೆ ಡಿಮ್ಯಾಂಡೋ ಡಿಮ್ಯಾಂಡು

ಕ್ಯಾಮರಾಗಳ ಕ್ಷೇತ್ರದಲ್ಲಿ ನಿತ್ಯ ಒಂದಲ್ಲ ಒಂದು ಹೊಸ ಹೊಸ ಆವಿಷ್ಕಾರಗಳು ಮಾರುಕಟ್ಟೆಗೆ ಬರುತ್ತಿವೆ. ಮಿರರ್ ಕ್ಯಾಮೆರಾಗಳಿಂದ ಈಗ ಮಿರರ್ ಲೆಸ್ ಕ್ಯಾಮೆರಾಗಳು ಹೆಚ್ಚು ಜನಪ್ರಿಯವಾಗುತ್ತಿದ್ದು, ವೃತ್ತಿಪರ ಹಾಗೂ ಹವ್ಯಾಸಿ ಛಾಯಾಗ್ರಾಹಕರು ಮಿರರ್ ಲೆಸ್ ಕ್ಯಾಮೆರಾಗಳತ್ತ ಹೆಚ್ಚು ವಾಲುತ್ತಿದ್ದಾರೆ.

ಗಾತ್ರದಲ್ಲಿ ದೊಡ್ಡದಿದ್ದ, ತೂಕವೂ ಹೆಚ್ಚಿದ್ದ ಮಿರ‌ರ್ ಕ್ಯಾಮರಾಗಳನ್ನು ಎಲ್ಲೆಂದರಲ್ಲಿ ತೆಗೆದುಕೊಂಡು ಹೋಗುವುದೇ ದೊಡ್ಡ ಸವಾಲಿನ ಕೆಲಸವಾಗಿತ್ತು, ಆದರೆ ಇತ್ತೀಚಿನ ವರ್ಷಗಳಲ್ಲಿ ಬಂದಿರುವ ಮಿರರ್ ಲೆಸ್ ಕ್ಯಾಮೆರಾಗಳು ಲಘು ತೂಕವನ್ನು ಹೊಂದಿದ್ದು, ಗಾತ್ರದಲ್ಲಿಯೂ ಚಿಕ್ಕದಾಗಿರುವುದರಿಂದ ಎಲ್ಲಿ ಬೇಕಾದರೂ ಸುಲಭವಾಗಿ ತೆಗೆದುಕೊಂಡು ಹೋಗಬಹುದಾಗಿದೆ.

ಇನ್ನು ಈ ಮಿರರ್ ಲೆಸ್ ಕ್ಯಾಮೆರಾಗಳಲ್ಲಿ ಪಿಕ್ಚರ್ ಕ್ವಾಲಿಟಿಯೂ ಅದ್ಭುತವಾಗಿದ್ದು, ಡಿಜಿಟಲ್ ವೀವ್ ಫೈಂಡರ್ ಸಹ ಇದರಲ್ಲಿದೆ. ಫೋಟೋಗ್ರಫಿಯ ಆಸಕ್ತಿ ಇರುವವರು ಹಾಗೂ ಕಂಟೆಂಟ್‌ ಕ್ರಿಯೇಟರ್‌ಗಳು ಕ್ಯಾಮೆರಾಗಳನ್ನು ಬಳಸುವಾಗ ಲೆನ್ಗಳ ಬಳಕೆ ಅತಿ ಮುಖ್ಯವಾಗುತ್ತದೆ. ಸಾಮಾನ್ಯ ಲೆನ್ಸ್‌ನಲ್ಲಿ ಅಪರ್ಚರ್ ನಂಬರ್ ಕಡಿಮೆ ಇರುವ ಲೆನ್ಗಳನ್ನು ಬಳಸುವುದು ಪಿಕ್ಚರ್ ಕ್ವಾಲಿಟಿಯನ್ನು ಉತ್ತಮಗೊಳಿಸಲಿದೆ. ಉದಾಹರಣೆಗೆ ಅಪರ್ಚರ್ ಎಫ್ 1.8, ಎಫ್ 2.8, ಎಫ್ 4 ಅಂತಹ ಲೆನ್ಸ್‌ಗಳನ್ನು ಬಳಸುವುದು ಹೆಚ್ಚು ಸೂಕ್ತ. ಮಿರರ್ ಲೆಸ್ ಕ್ಯಾಮೆರಾಗಳಲ್ಲಿಯೂ ಕ್ರಾಪ್ ಸೆನ್ಸಾರ್, ಫುಲ್ ಫ್ರೆಮ್ ಸೆನ್ಸಾರ್‌ಗಳಿರುತ್ತವೆ.

ನೀವು ಆರಂಭಿಕ ಹಂತದಲ್ಲಿದ್ದು, ಫೋಟೋಗ್ರಫಿಯನ್ನು ಕಲಿಯುತ್ತಿದ್ದರೆ ಕ್ರಾಪ್ ಸೆನ್ಸಾರ್‌‌ಗಳನ್ನು ಬಳಸುವುದು ಹೆಚ್ಚು ಸೂಕ್ತ. ಇವುಗಳ ಬೆಲೆಯೂ 1 ಲಕ್ಷ ರೂ.ಗಳಿಂದ 1,20,000 ರೂ.ಗಳ ಒಳಗೇ ಇರುವುದರಿಂದ ಹೆಚ್ಚು ಹೂಡಿಕೆಯ ಅವಶ್ಯಕತೆಯೂ ಇರುವುದಿಲ್ಲ. ಇನ್ನು ಫುಲ್ ಫ್ರೇಮ್ ಹಾಗೂ ಕ್ರಾಫ್‌ ಫ್ರೇಮ್ ಸೆನ್ಸಾರ್‌ಗಳ ವಿಡಿಯೋಗಳಲ್ಲಿ ಅಷ್ಟಾಗಿ ವ್ಯತ್ಯಾಸಗಳು ಕಾಣದಿದ್ದರೂ ಫೋಟೋಗ್ರಫಿಯಲ್ಲಿ ಕ್ವಾಲಿಟಿ ವ್ಯತ್ಯಾಸ ಕಾಣಬಹುದು.

ಇತ್ತೀಚೆಗೆ ವೈವಿಧ್ಯಮಯ ಮಿರರ್ ಲೆಸ್ ಕ್ಯಾಮೆರಾಗಳನ್ನು ಪರಿಚಯಿಸಿರುವ ಪ್ರಖ್ಯಾತ ಕ್ಯಾಮೆರಾ ಬ್ಯಾಂಡ್‌ಗಳಾದ ಸೋನಿ, ನಿಕಾನ್ ಹಾಗೂ ಕೆನಾನ್ ಕಂಪನಿಗಳು 50-60 ರೂಗಳಿಂದ 4-5 ಲಕ್ಷ ರೂ. ಮೌಲ್ಯದ ಕ್ಯಾಮೆರಾಗಳವರೆಗೂ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಗ್ರಾಹಕರು ತಮ್ಮ ಬಜೆಟ್‌ಗೆ ಅನುಸಾರ ಕ್ಯಾಮೆರಾಗಳನ್ನು ಖರೀದಿಸಬಹುದಾಗಿದೆ.

ಇನ್ನು ಮಿರರ್ ಲೆಸ್’ ಕ್ಯಾಮೆರಾಗಳಲ್ಲಿ ಹೊಸ ಅನ್ವೇಷಣೆಗಳನ್ನು ಮಾಡುತ್ತಾ ಹೊಸ ಹೊಸ ಮಾದರಿಗಳನ್ನು ಮಾರುಕಟ್ಟೆಗೆ ಪರಚಯಿಸುತ್ತಿರುವ ಸೋನಿ ಕ್ಯಾಮೆರಾ ಹೆಚ್ಚು ಜನಪ್ರಿಯತೆ ಗಳಿಸಿದೆ. ಸೋನಿ ಕ್ಯಾಮೆರಾದಲ್ಲಿನ ಆಟೋ ಫೋಕಸ್ ಫೀಚರ್‌ಗೆ ಮಾರು ಹೋಗಿರುವವರು ಇತ್ತೀಚಿನ ಫೋಟೋಗ್ರಾಫರ್ಸ್‌ ಹೆಚ್ಚಾಗಿ ಸೋನಿಯತ್ತ ವಾಲುತ್ತಿದ್ದು, ಮಾರುಕಟ್ಟೆಯಲ್ಲಿ ವಿಶೇಷ ಬೇಡಿಕೆ ಹೊಂದಿದೆ.

 

Tags: