ಆಧುನಿಕ ಜೀವನದ ಒತ್ತಡದಲ್ಲಿ ಆಹಾರ ಶೈಲಿ, ಜೀವನ ಶೈಲಿ ಎಲ್ಲವೂ ನಮಗರಿವಿಲ್ಲದಂತೆ ಬದಲಾಗುತ್ತಿದೆ. ಇದು ಹೊಂದಿಕೊಳ್ಳುವಿಕೆಯ ಅನಿವಾರ್ಯತೆ ಎನಿಸಿದರೂ ಕ್ರಮಬದ್ಧ ಜೀವನ ಶೈಲಿಯನ್ನು ಕಡೆಗಣಿಸಿದಾಗ ಹಲವು ಆರೋಗ್ಯ ಸಮಸ್ಯೆಗಳು ಉದ್ಭವಿಸುತ್ತವೆ. ಜನರನ್ನು ಪ್ರಸ್ತುತ ಹೆಚ್ಚು ಅರಿವಿಲ್ಲದಂತೆ ಕಾಡುತ್ತಿರುವ ಆರೋಗ್ಯ ಸಮಸ್ಯೆ ಎಂದರೆ ರುಮಟಾಯ್ಡ್ ಆರ್ಥೆರೈಟಿಸ್ ಅಥವಾ ಸಂಧಿವಾತ. ಪ್ರತಿವರ್ಷ ಫೆ. ೨ ರಂದು ‘ಸಂಧಿವಾತ ಜಾಗೃತಿ’ ದಿನವನ್ನಾಗಿ ಆಚರಿಸಲಾಗುತ್ತದೆ. ಈ ಕುರಿತು ಜೆಎಸ್‌ಎಸ್ ಆಸ್ಪತ್ರೆಯ ಸಂಧಿವಾತ ಮತ್ತು ಕೀಲು ರೋಗ ತಜ್ಞರಾದ ಡಾ. ಮಹಾಬಲೇಶ್ವರ ಮಮದಾಪೂರ ಅವರು ಬೆಳಕುಚೆಲ್ಲಿದ್ದಾರೆ.
ರುಮಟಾಯ್ಡ್ ಆರ್ಥೆರೈಟಿಸ್ ಅಥವಾ ರುಮಟಾಯ್ಡ್ ಸಂಧಿವಾತ ಜಾಗೃತಿ ದಿನವನ್ನು ಪ್ರತಿವರ್ಷ ಫೆಬ್ರವರಿ2 ರಂದು ಆಚರಿಸಲಾಗುತ್ತದೆ.2013ರಲ್ಲಿ ರುಮಟಾಯ್ಡ್ ಪೇಷಂಟ್ ಫೌಂಡೇಶನ್ ವತಿಯಿಂದ ಈ ಕಾಯಿಲೆಯನ್ನು ಪ್ರಾಥಮಿಕ ಹಂತದಲ್ಲಿ ಪತ್ತೆ ಹಚ್ಚುವಿಕೆ, ರೋಗದ ಬಗ್ಗೆ ಇರುವ ತಪ್ಪು ತಿಳಿವಳಿಕೆಯನ್ನು ಸರಿಮಾಡಲು ಹಾಗೂ ಚಿಕಿತ್ಸೆ ಬಗ್ಗೆ ಜಾಗೃತಿ ಮೂಡಿಸಲು ಪ್ರತಿವರ್ಷ ಫೆ2 ರಂದು ದಿನಾಂಕ ನಿಗಧಿ ಮಾಡಲಾಯಿತು.
ರುಮಟಾಯ್ಡ್ ಆರ್ಥೆರೈಟಿಸ್ ಗೆ ಕಾರಣವೇನು?
ಇದು ಸ್ವಯಂ ರೋಗ ನಿರೋಧಕ ಮತ್ತು ಉರಿಯೂತದ ಖಾಯಿಲೆಯಾಗಿದೆ. ಅಂದರೆ ನಮ್ಮ ಪ್ರತಿ ರಕ್ಷಣಾ ವ್ಯವಸ್ಥೆಯು ದೇಹದಲ್ಲಿನ ಆರೋಗ್ಯಕರ ಕೋಶಗಳ ಮೇಲೆ ತಪ್ಪಾಗಿ ದಾಳಿ ಮಾಡುತ್ತವೆ. ಇದು ದೇಹದ ಪೀಡಿತ ಭಾಗಗಳಲ್ಲಿ ಉರಿಯೂತವನ್ನು ಉಂಟುಮಾಡುತ್ತದೆ.
ಈ ರೋಗದ ಅಪಾಯಕಾರಿ ಅಂಶಗಳು ಯಾವುವು?
ರುಮಟಾಯ್ಡ್ ಆರ್ಥೆರೈಟಿಸ್‌ಗೆ ನಿಖರವಾದ ಕಾರಣ ತಿಳಿದಿಲ್ಲ. ಸಂಶೋಧಕರು ಹಲವಾರು ಅನುವಂಶಿಕ ಮತ್ತು ಪರಿಸರ ಅಂಶಗಳ ವ್ಯತ್ಯಾಸದಿಂದ ಬರಬಹುದು ಎಂದು ಪ್ರತಿಪಾದಿಸಿದ್ದಾರೆ.
ವಯಸ್ಸು: ಆರ್‌ಎ ಯಾವುದೇ ವಯಸ್ಸಿನಲ್ಲಿ ಪ್ರಾರಂಭವಾಗಬಹುದು. ಆದರೆ ಸಾಮಾನ್ಯವಾಗಿ ೩೦-೬೦ ರ ವಯಸ್ಕರಲ್ಲಿ ಅಧಿಕವಾಗಿ ಕಂಡುಬರುತ್ತದೆ.
ಲಿಂಗ: ಸಾಮಾನ್ಯವಾಗಿ ಪುರುಷರಿಗಿಂತ ಮಹಿಳೆಯರಲ್ಲಿ ಎರಡು- ಮೂರು ಪಟ್ಟು ಜಾಸ್ತಿ ಕಂಡುಬರುತ್ತದೆ.
ಇತರೇ: ಧೂಮಪಾನ ಅಭ್ಯಾಸ ಮತ್ತು ಬೊಜ್ಜು ಇರುವಾಗ ಆರ್‌ಎ ನ ಅಪಾಯವು ಅತ್ಯಧಿಕವಾಗಿರುತ್ತದೆ.
ರೋಗ ಲಕ್ಷಣಗಳು:
* ಆರ್‌ಎ ನಲ್ಲಿ ಸಾಮಾನ್ಯವಾಗಿ ಕೀಲು ಹಾಗೂ ಕೀಲು ಪದರು ಉರಿಯೂತದಿಂದ ಕೀಲು ಹಾಳಾಗುತ್ತದೆ. ದೀರ್ಘಕಾಲದ ನೋವು,ಅಸ್ಥಿರತೆ( ಸಮತೋಲನದ ಕೊರತೆ) ಮತ್ತು ಕೀಲು ವಿರೂಪತೆಗೆ ಕಾರಣ ಆಗಬಹುದು. ಸಾಮಾನ್ಯವಾಗಿ ಸಣ್ಣ ಕೀಲು, ಕೈ ಬೆರಳು, ಕಾಲ್ಬೆರಳು, ಮಣಿಕಟ್ಟು ಹಾಗೂ ದೊಡ್ಡ ಕೀಲು( ಮೊಣಕೈ), ಭುಜದ ಕೀಲುಗಳು, ಮೊಣಕಾಲು ನೋವು ಮತ್ತು ಊತ.
* ಮುಂಜಾನೆಯಲ್ಲಿ ಸರಾಸರಿ ೨೦ ನಿಮಿಷದ ಮೇಲೆ ಕಾಲು ಬಿಗಿತ ಆಗುವುದು.
* ಸುಸ್ತಾಗುವುದು, ಖಿನ್ನತೆ.
*ರಕ್ತ ಹೀನತೆ
ಅಪರೂಪವಾಗಿ ತೂಕ ಇಳಿಕೆ, ಕಣ್ಣು ಉರಿ, ಕೆಂಪಾಗುವುದು, ಮೊಣಕೈ, ಕೈ,ಕಾಲುಗಳಲ್ಲಿ ಗಂಟುಗಳು, ಶ್ವಾಸಕೋಶ, ಸಲದಯ, ರಕ್ತನಾಳ, ನರ ಸಂಬಂಧಿತ ಉರಿಯೂತ ಕಂಡುಬರುತ್ತವೆ.
ರೋಗ ನಿರ್ಣಯ ಹೇಗೆ:
ಹಿಂದೆ ಸೂಚಿಸಲಾದ ಯಾವುದೇ ಸಮಸ್ಯೆಗಳು ಗಮನಕ್ಕೆ ಬಂದರೆ ಕೂಡಲೇ ವೈದ್ಯರನ್ನು ಸಂಪರ್ಕಿಸಬೇಕು.
ಚಿಕಿತ್ಸೆ: ಚಿಕಿತ್ಸೆಯು ಸಾಮಾನ್ಯವಾಗಿ ರೋಗವನ್ನು ನಿಧಾನಗೊಳಿಸುವ ಹಾಗೂ ಕೀಲು ವಿರೂಪತೆಯನ್ನು ತಡೆಗಟ್ಟುವ ಔಷಧಗಳ ಬಳಕೆಯನ್ನು ಒಳಗೊಂಡಿರುತ್ತದೆ.
ನೋವು ನಿವಾರಕ ಮಾತ್ರೆ, ಸ್ಟಿರಾಯ್ಡ್ ಇಲ್ಲದ ಉರಿಯೂತದ ಔಷಧಗಳು, ರೋಗ ಮಾರ್ಪಡಿಸುವ ಔಷಧಗಳು, ಜೈವಿಕಗಳು ಹೀಗೆ ನಾಲು ವಿಧಾನಗಳನ್ನು ಒಳಗೊಂಡಿರುತ್ತದೆ.
ರೋಗದ ದೀರ್ಘಾವಧಿ ಪರಿಣಾಮಗಳು: ರಕ್ತ ಹೀನತೆಯ ಸಾಧ್ಯತೆಯ ಹೆಚ್ಚಳ, ಖಿನ್ನತೆ, ಸಲದಯ ರೋಗದ ಅಪಾಯ ಹೆಚ್ಚಾಗುವುದು, ಬೆನ್ನು ಹುರಿಯ ಕೀಲುಗಳು ಒತ್ತುವಿಕೆ, ಒಣಗಿದ, ಕೆಂಪಾದ ಮತ್ತು ಕೆರೆತವುಳ್ಳ ಕಣ್ಣುಗಳು, ಶ್ವಾಸಕೋಶ, ನರ ಸಂಬಂಧಿತ ಉರಿಯೂತ.
ಆಹಾರ ಮತ್ತು ವ್ಯಾಯಾಮ: ದೈಹಿಕವಾಗಿ ಕ್ರಿಯಾಶೀಲರಾಗಿ ವಾರದಲ್ಲಿ ಐದು ದಿನಗಳವರೆಗೆ ದಿನಕ್ಕೆ ೩೦ ನಿಮಿಷ ವಾಕಿಂಗ್, ಈಜು ಅಭ್ಯಾಸ ಮಾಡಿಕೊಳ್ಳಬೇಕು.
ಮೆಡಿಟರೇನಿಯನ್ ಡಯಟ್ ಅಂದರೆ ಆಹಾರದಲ್ಲಿ ಸೊಪ್ಪು, ತಾಜಾ ತರಕಾರಿ, ಹಣ್ಣುಗಳನ್ನು ಉಪಯೋಗಿಸುವುದರಿಂದ ಉರಿಯೂತ ಕಡಿಮೆಯಾಗುತ್ತದೆ. ಮಿತವಾದ ಸಕ್ಕರೆ, ಉಪ್ಪು ಉಪಯೋಗಿಸಿ, ಧೂಮಪಾನ ತ್ಯಜಿಸಿ, ಸಂಸ್ಕರಿಸಿದ ಆಹಾರ,ಬೇಕರಿ ಪದಾರ್ಥಗಳನ್ನು ವಿವೇಚನೆಯಿಂದ ಉಪಯೋಗಿಸಿ,ಕಡಿಮೆ ಕೊಬ್ಬಿನ ಆಹಾರ ಸೇವಿಸಿ.
–ಡಾ.ಮಹಾಬಲೇಶ್ವರ ಮಮದಾಪೂರ
ಸಂಧಿವಾತ ಹಾಗೂ ಕೀಲು ರೋಗ ತಜ್ಞರು.
ಜೆಎಸ್‌ಎಸ್ ಆಸ್ಪತ್ರೆ, ಮೈಸೂರು