Mysore
23
scattered clouds

Social Media

ಶುಕ್ರವಾರ, 11 ಜುಲೈ 2025
Light
Dark

ಮೈದುಂಬಿ ಹರಿವ ಕರಿಕೆಯ ಜಲಕನ್ಯೆಯರು

ನವೀನ್ ಡಿಸೋಜ

ಮಳೆಗಾಲ ಆರಂಭವಾಯಿತೆಂದರೆ ಕೊಡಗಿನತ್ತ ಹೆಚ್ಚಿನ ಪ್ರವಾಸಿಗರು ಮುಖ ಮಾಡುತ್ತಾರೆ. ಇಲ್ಲಿನ ತಂಪಾದ ವಾತಾವರಣ, ಅಚ್ಚ ಹಸಿರಿನ ಪರಿಸರದೊಂದಿಗೆ ಮಳೆಗೆ ಮೈದುಂಬಿ ಸೌಂದರ್ಯ ಹೆಚ್ಚಿಸಿಕೊಳ್ಳುವ ಜಲಪಾತಗಳನ್ನು ನೋಡುವುದೇ ಕಣ್ಣಿಗೆ ಹಬ್ಬ. ಅದರಲ್ಲೂ ಗ್ರಾಮವೊಂದಕ್ಕೆ ತೆರಳುವ ರಸ್ತೆಯಲ್ಲೇ ೨೦ಕ್ಕೂ ಅಧಿಕ ಜಲಪಾತ ಸೃಷ್ಟಿಯಾಗುವ ಕರಿಕೆ ಈಗ ಪ್ರವಾಸಿಗರ ಹಾಟ್‌ಸ್ಪಾಟ್.

ಹೌದು. ಭಾಗಮಂಡಲ – ಕರಿಕೆ ಅಂತಾರಾಜ್ಯ ಹೆದ್ದಾರಿಯ ಇಕ್ಕೆಲಗಳಲ್ಲಿ ಹರಿಯುತ್ತಿರುವ ಹತ್ತಾರು ಝರಿಗಳು, ಸುತ್ತಲಿನ ಮನಮೋಹಕ ನೈಸರ್ಗಿಕ ಸೊಬಗು ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಈ ಭಾಗದಲ್ಲಿ ಯಥೇಚ್ಛ ಮಳೆಸುರಿದಿದ್ದು, ಎಲ್ಲೆಡೆ ಹಸಿರಿನಿಂದ ಕಂಗೊಳಿಸುತ್ತಿದೆ. ಕರಿಕೆ ಜಲಪಾತಗಳು ತುಂಬಿ ಧುಮ್ಮಿಕ್ಕುವ ದೃಶ್ಯ ನೋಡುಗರ ಕಣ್ಮನ ಸೆಳೆಯುತ್ತಿದೆ.

ಈ ಬಾರಿ ವರುಣ ಮೇ ಅಂತ್ಯದಿಂದಲೇ ಬಿರುಸುಗೊಂಡಿದ್ದು, ಅವಽಗೂ ಮುನ್ನವೇ ಉತ್ತಮ ಮಳೆಯಾಗಿದೆ. ಇದರಿಂದ ನೀರಿಲ್ಲದೆ ಕಳೆಗುಂದಿದ್ದ ಜಲ ಕನ್ಯೆಯರು ಮೈದುಂಬಿ ಪರಿಸರ ಪ್ರಿಯರನ್ನು ತಮ್ಮತ್ತ ಆಕರ್ಷಿಸುತ್ತಿದ್ದಾರೆ. ಪ್ರಕೃತಿಯ ಅಚ್ಚ ಹಸಿರಿನ ಸುಂದರ ತಾಣ ಬ್ರಹ್ಮಗಿರಿ ಬೆಟ್ಟದ ತಪ್ಪಲಿನ ತಲಕಾವೇರಿ ಅಭಯಾರಣ್ಯದ ವ್ಯಾಪ್ತಿಯಲ್ಲಿರುವ ೨೦ಕ್ಕೂ ಅಧಿಕ ಜಲಪಾತಗಳು ಹಾಲ್ನೊರೆ ಸೂಸುತ್ತಿವೆ.

ಭಾಗಮಂಡಲದಿಂದ ಕರಿಕೆ ಕಡೆ ತೆರಳುವ ವಾಹನ ಸವಾರರು, ಪ್ರವಾಸಿಗರು ಜಲಪಾತದ ಸೌಂದರ್ಯವನ್ನು ತಮ್ಮ ಮೊಬೈಲ್, ಕ್ಯಾಮೆರಾಗಳಲ್ಲಿ ಸೆರೆಹಿಡಿಯುವ ಜೊತೆಗೆ ಸೆಲ್ಪಿ ತೆಗೆದುಕೊಂಡು,ರೀಲ್ಸ್ ಮಾಡುತ್ತಾ ಸಂಭ್ರಮಿಸುತ್ತಿದ್ದಾರೆ. ಕೇರಳ ಗಡಿಯಲ್ಲಿ ಈ ಸಣ್ಣಪುಟ್ಟ ಜಲಪಾತಗಳಷ್ಟೇ ಅಲ್ಲದೆ ದೊಡ್ಡ ಜಲಪಾತಗಳೂ ಇದ್ದು, ಕೇರಳ ಪ್ರವಾಸಿಗರೂ ಇಲ್ಲಿ ಹೆಚ್ಚಾಗಿ ಕಾಣಸಿಗುತ್ತಾರೆ. ಜಲಪಾತ ಮಾತ್ರವಲ್ಲದೆ ಸುತ್ತಲಿನ ಕಾಫಿ ತೋಟಗಳು, ದಟ್ಟ ಕಾನನದ ಅಚ್ಚ ಹಸಿರಿನ ಪರಿಸರ ಕೂಡ ಇಲ್ಲಿನ ವಿಶೇಷತೆ. ಮೋಡಗಳ ನಡುವೆ ಮರೆಯಾಗುವ ದಟ್ಟ ಕಾನನ ಕೂಡ ನೋಡುಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತದೆ.

ಕೊಡಗು-ಕೇರಳ ರಾಜ್ಯದ ಗಡಿ ಭಾಗದಲ್ಲಿರುವ ಕರಿಕೆಗೆ ಜಿಲ್ಲೆಯ ಪುಣ್ಯ ಕ್ಷೇತ್ರ ಭಾಗಮಂಡಲದಿಂದ ದಟ್ಟಾರಣ್ಯದ ನಡುವೆ ತೆರಳಬೇಕು. ಹೀಗೆ ಸಾಗುವಾಗ ದಟ್ಟ ಕಾನನದ ಮಧ್ಯೆ ದುರ್ಗಮ ಹಾದಿಯಲ್ಲಿ ಹೆಜ್ಜೆ ಹೆಜ್ಜೆಗೂ ಸರಣಿ ಜಲಧಾರೆಗಳು ಕಾಣಸಿಗುತ್ತವೆ. ಇಲ್ಲಿ ಜಲಪಾತಗಳು ರಸ್ತೆಗೆ ಹಾಲ್ಗರೆಯುತ್ತಾ ಧುಮ್ಮಿಕ್ಕುತ್ತವೆ. ಸುಮಾರು ೧೫ ಕಿಮೀ ಅಂತರದಲ್ಲಿ ೨೦ಕ್ಕೂ ಹೆಚ್ಚು ಜಲಧಾರೆಗಳ ವೈಭವವನ್ನು ಕಣ್ತುಂಬಿಕೊಳ್ಳಬಹುದು. ಮಳೆಗಾಲದಲ್ಲಿ ಮಾತ್ರ ಜೀವ ಕಳೆ ತುಂಬಿ ಕೊಳ್ಳುವ ಈ ಜಲಪಾತಗಳು ರಸ್ತೆಯ ಬಲ ಬದಿಯಲ್ಲಿರುವ ಬೆಟ್ಟ, ಗುಡ್ಡಗಳಿಂದ ಹರಿದು ಬರುತ್ತವೆ.

” ಮಳೆಗಾಲ ಬಂತೆಂದರೆ ದಕ್ಷಿಣದ ಕಾಶ್ಮೀರ ಕೊಡಗು ಜಿಲ್ಲೆ ಸ್ವರ್ಗದಂತೆ ಕಂಗೊಳಿಸುತ್ತದೆ. ಘಮಿಸುವ ಕಾಫಿ ತೋಟ, ಹೆಜ್ಜೆ ಹೆಜ್ಜೆಗೂ ಹರಿವ ಝರಿಗಳ ಸಾಲು, ಹಸಿರು ಹೊದ್ದ ದಟ್ಟ ಕಾನನ, ಬೆಟ್ಟಗುಡ್ಡಗಳು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತವೆ. ಮಳೆಗಾಲದಲ್ಲಿ ಜಲಪಾತಗಳ ಸೌಂದರ್ಯ ಇಮ್ಮಡಿಯಾಗುತ್ತದೆ. ಅದರಲ್ಲೂ ಒಂದೇ ಕಡೆ ೨೦ಕ್ಕೂ ಹೆಚ್ಚು ಜಲಪಾತಗಳು ಇದ್ದರೆ ಹೇಗಿರಬೇಡ? ಇಂತಹ ಒಂದು ಜಾಗವು ಕೊಡಗಿನಲ್ಲಿದೆ. ಸುಮಾರು ೧೫ ಕಿ.ಮೀ. ಅಂತರದಲ್ಲಿಯೇ ರಸ್ತೆ ಬದಿ ಕಾಣಸಿಗುವ ಹತ್ತಾರು ಜಲಪಾತಗಳ ಕುರಿತ ಲೇಖನ ಇಲ್ಲಿದೆ.”

‘ಕರಿಕೆ’ಗೆ ತಲುಪುವುದು ಹೇಗೆ..?

” ಇಲ್ಲಿಗೆ ಮಡಿಕೇರಿಯಿಂದ ತಲುಪುವುದು ಉತ್ತಮ. ಮಡಿಕೇರಿಯಿಂದ ೩೫ ಕಿಮೀ ತೆರಳಿದರೆ ಭಾಗಮಂಡಲ ಸಿಗುತ್ತದೆ. ಅಲ್ಲಿಂದ ಸುಮಾರು ೧೫ ಕಿ.ಮೀ. ಕರಿಕೆಯತ್ತ ತೆರಳಿದರೆ ಈ ಜಲಪಾತಗಳ ವೈಭವವನ್ನು ಕಣ್ತುಂಬಿಕೊಳ್ಳಬಹುದು. ಭಾರೀ ಮಳೆ ಸುರಿಯುತ್ತಿದ್ದರೆ ರಸ್ತೆಗೆ ಮರ ಬೀಳುವುದು, ಬರೆ ಕುಸಿಯುವಂತಹ ಘಟನೆ ನಡೆಯುತ್ತಿರುತ್ತದೆ. ಹೀಗಾಗಿ ಜಲ ವೈಭವವನ್ನು ಕಣ್ತುಂಬಿಕೊಳ್ಳುವ ಭರದಲ್ಲಿ ಅಪಾಯಕ್ಕೆ ಸಿಲುಕದಂತೆ ಸಾಕಷ್ಟು ಮುಂಜಾಗ್ರತೆವಹಿಸಿ ಸಾಧಾರಣ ಮಳೆ ಬೀಳುವ ಸಂದರ್ಭದಲ್ಲಿ ಇಲ್ಲಿಗೆ ಭೇಟಿ ನೀಡಿದರೆ ಉತ್ತಮ.”

Tags:
error: Content is protected !!