- ಜಯಶಂಕರ್ ಬದನಗುಪ್ಪೆ
ಕರ್ನಾಟಕದ ಇತಿಹಾಸ ಬಹಳ ದೊಡ್ಡದು. ಪ್ರಜಾಪ್ರಭುತ್ವವನ್ನು ಅಳವಡಿಸಿಕೊಳ್ಳುವ ಮುನ್ನ ದೇಶವನ್ನು ಆಳಿದ ಅರಸರಲ್ಲಿ ಕನ್ನಡನಾಡಿನ ರಾಜಮನೆತನಗಳಿಗೆ ವಿಶೇಷ ಮಾನ್ಯತೆ ಇದೆ. ಅವರ ಕಾಲದಲ್ಲಿ ನಾಡಿನಲ್ಲಿ ನಿರ್ಮಿಸಲಾಗಿರುವ ಕೋಟೆ ಕೊತ್ತಲಗಳು, ಅರಮನೆಗಳಂತಹ ಸಾಕಷ್ಟು ನಿರ್ಮಾಣಗಳು ಇದಕ್ಕೆ ಸಾಕ್ಷಿಯಾಗಿ ಉಳಿದಿವೆ.ಇಂತಹ ಐತಿಹಾಸಿಕ ಕುರುಹುಗಳಲ್ಲಿ ಶ್ರೀರಂಗಪಟ್ಟಣವನ್ನು ಕೆಂದ್ರವನ್ನಾಗಿಸಿಕೊಂಡು ಆಳ್ವಿಕೆ ನಡೆಸಿದ ಟಿಪ್ಪುಸುಲ್ತಾನ ಹಾಸನ ಜಿಲ್ಲೆಯ ಸಕಲೇಶಪುರದ ಬಳಿ ನಿರ್ಮಿಸಿರುವ ಮಂಜರಾಬಾದ್ ಕೋಟೆ ವಿಶೇಷವೆನಿಸಿದೆ.
ಸಕಲೇಶಪುರದ ಬಳಿ ಇರುವ ನಕ್ಷತ್ರಾಕಾರದ ಕೋಟೆಯು ಇತರ ಎಲ್ಲಾ ಕೋಟೆಗಳಿಗಿಂತ ವಿಭಿನ್ನವಾಗಿದೆ. ಹಾಗಾಗಿ ಈ ಕೋಟೆಯ ವಿಶೇಷತೆಯನ್ನು ಕೇಳಿ ತಿಳಿಯುವುದಕ್ಕಿಂತ ನೋಡಿ ಅರಿತುಕೊಳ್ಳುವುದೇ ಉತ್ತಮ.
ಮಂಜರಾಬಾದ್ ಕೋಟೆಯು ಇಸ್ಲಾಮಿಕ್ ವಾಸ್ತುಶಿಲ್ಪದ ಅದ್ಭುತತೆಯನ್ನು ಒಳಗೊಂಡಿದ್ದು, ಎಂಟು ಗೋಡೆಗಳನ್ನು ಹೊಂದಿರುವ ಆಸಕ್ತಿದಾಯಕ ಅಷ್ಟಭುಜಾಕೃತಿಯ ವಿನ್ಯಾಸವನ್ನು ಹೊಂದಿದೆ. ಹೀಗಾಗಿಯೇ ಇದು ಆಕರ್ಷಣೆಯ ಕೇಂದ್ರವೆನಿಸಿದ್ದು, ಪ್ರತಿ ದಿನ ಇಲ್ಲಿಗೆ ಸಾಕಷ್ಟು ಪ್ರವಾಸಿಗರು ಭೇಟಿ ನೀಡುತ್ತಾರೆ. ಸಕಲೇಶಪುರದಲ್ಲಿ ನೋಡಲೇ ಬೇಕಾದ ಪ್ರಮುಖ ಪ್ರವಾಸಿ ತಾಣ ಇದಾಗಿದೆ.
ನಕ್ಷತ್ರಾಕಾರದ ಅದ್ಭುತ ವಿನ್ಯಾಸ : ಈ ಕೋಟೆ ಎಂಟು ಬಿಂದುಗಳ ನಕ್ಷತ್ರವಾಗಿದೆ. ಕೋಟೆಯ ಬಾಹ್ಯ ಗೋಡೆಗಳನ್ನು ಗ್ರಾನೈಟ್ ಕಲ್ಲುಗಳು ಮತ್ತು ಸುಣ್ಣದ ಗಾರೆಗಳಿಂದ ನಿರ್ಮಿಸಲಾಗಿದ್ದು, ಸೈನ್ಯದ ಬ್ಯಾರಕ್‌ಗಳು, ಶಸ್ತ್ರಾಸ್ತ್ರ ಸಂಗ್ರಹಾಲಯಗಳು, ಮಳಿಗೆಗಳು ಮತ್ತು ಇತರರಿಗೆ ಸ್ಥಳಾವಕಾಶವಿರುವ ಒಳಾಂಗಣ ಕಟ್ಟಡಗಳನ್ನು ಇಟ್ಟಿಗೆಗಳಿಂದ ನಿರ್ಮಿಸಲಾಗಿದೆ. ಕೋಟೆಯ ವಿನ್ಯಾಸ ನಕ್ಷತ್ರಾಕಾರದಲ್ಲಿದ್ದರೂ ಇಡೀ ಕೋಟೆ ಸುತ್ತಲೂ ಒಂದೇ ಸಮತಟ್ಟು ಹೊಂದಿದೆ. ಈ ಕೋಟೆಯ ವೈಮಾನಿಕ ನೋಟವು ಅದ್ಭುತವಾದ ನಕ್ಷತ್ರಾಕಾರದ ದೃಶ್ಯವನ್ನು ನೀಡುತ್ತದೆ. ಈ ಕೋಟೆಯನ್ನು ಭಾರತದ ವೌಬನೆಸ್ಕ್ ನಕ್ಷತ್ರಾಕಾರದ ಕೋಟೆ ಎಂದು ಹೇಳಲಾಗುತ್ತದೆ.
ಭೂಗತ ರಚನೆ : ಕೋಟೆಯಲ್ಲಿರುವ ಆಳವಾದ ಬಾವಿಯ ಪಕ್ಕದಲ್ಲಿ ಎರಡು ನೆಲಮಾಳಿಗೆಗಳನ್ನು ನಿರ್ಮಿಸಲಾಗಿದೆ, ಅವು ಗನ್‌ಪೌಡರ್ ಸಂಗ್ರಹಿಸಲು ಬಳಸಲಾಗುತ್ತಿದ್ದ ಭೂಗತ ರಚನೆಗಳಾಗಿವೆ ಮತ್ತು ಬೇಸಿಗೆುಯ ತಿಂಗಳುಗಳಲ್ಲಿಯೂ ಈ ಕೊಠಡಿಗಳು ತಂಪಾಗಿರುತ್ತವೆ ಅದೇ ಇಲ್ಲಿನ ವಿಶಿಷ್ಟ ತಂತ್ರಜ್ಞಾನ. ಕೋಟೆಯಲ್ಲಿ ಇಳಿಜಾರಿನ ಗೋಡೆಗಳಿವೆ. ರಣತಂತ್ರಗಳಲ್ಲಿ ನಿಪುಣನೆನಿಸಿದ್ದ ಟಿಪ್ಪು ತನ್ನ ಅಧೀನದ ಪ್ರದೇಶಗಳ ರಕ್ಷಣೆಗೂ ಹೆಚ್ಚಿನ ಆದ್ಯತೆ ನೀಡಿದ್ದನು. ಮದ್ದುಗುಂಡುಗಳನ್ನು ಸಂಗ್ರಹಿಸಲು ಗಡಿಯಾಗಿ ನಿರ್ಮಿಸಲಾಗಿರುವ ಮಂಜರಾಬಾದ್ ಕೋಟೆಯನ್ನು ಬ್ರಿಟಿಷರ ವಿರುದ್ಧ ಟಿಪ್ಪು ಸುಲ್ತಾನ್ ತನ್ನ ಸೈನ್ಯಕ್ಕೆ ರಕ್ಷಣಗಾಗಿ ಬಳಸಿಕೊಳ್ಳುತ್ತಿದ್ದನು.
ನಿರ್ಮಾಣ ಕಾಲಾವಧಿ : ಮಂಜರಾಬಾದ್ ಕೋಟೆಯ ಕಾಮಗಾರಿ 1785 ರಲ್ಲಿ ಪ್ರಾರಂಭವಾಯಿತು ಮತ್ತು 1792 ರಲ್ಲಿ ಕೊನೆಗೊಂಡಿತು. ಅಂದರೆ ಸತತ 7 ವರ್ಷಗಳ ಕಾಲ ಈ ಕೋಟೆಯನ್ನು ಇಸ್ಲಾಮಿಕ್ ವಾಸ್ತು ಶೈಲಿಯಲ್ಲಿ ನಿರ್ಮಿಸಲಾಗಿದೆ. ಇಸ್ಲಾಮಿಕ್ ಸಂಪ್ರದಾಯಗಳಲ್ಲಿ ನಕ್ಷತ್ರಾಕಾರವನ್ನು ವಿಶೇಷವಾಗಿ ಬಳಸಲಾಗುತ್ತದೆ. ಹಾಗಾಗಿ ಈ ಕೋಟೆ ನಿರ್ಮಾಣದಲ್ಲೂ ಇದೇ ವಿನ್ಯಾಸವನ್ನು ಟಿಪ್ಪು ಸುಲ್ತಾನ್ ಅಳವಡಿಸಿಕೊಂಡಿದ್ದಾನೆ. ನಾವು ಈಗ ವೈಮಾನಿಕ ವಾಗಿ ಮತ್ತು ಡ್ರೋನ್ ಮೂಲಕ ನೋಡಿದಾಗ ಕಂಡುಬರುವ ನಕ್ಷತ್ರದ ವಿನ್ಯಾಸವನನ್ನು ಮೇಲಿನಿಂದಲೇ ವೀಕ್ಷಿಸಿ, ನಿರ್ದೇಶಿಸಲು ಹಿಂದೆ ಯಾವ ತಂತ್ರಜ್ಞಾನ ಬಳಸಿಕೊಂಡಿರಬಹುದು ಎಂಬುದು ಕುತೂಹಲವನ್ನುಂಟು ಮಾಡುತ್ತದೆ.
ಪಶ್ಚಿಮ ಘಟ್ಟದ ಅವಿಸ್ಮರಣೀಯ ದೃಶ್ಯವನ್ನು ಅಡಗಿಸಿಟ್ಟುಕೊಂಡಿರುವ ಮಲೆನಾಡು ಸಂಸ್ಕೃತಿಯನ್ನು ಹೊಂದಿರುವ ಸಕಲೇಶಪುರದ ಕೆಲವೇ ಕೆಲವು ಸ್ಥಳಗಳಲ್ಲಿ ಮಂಜರಾಬಾದ್ ಕೋಟೆಯೂ ಒಂದು. ಸಮುದ್ರ ಮಟ್ಟದಿಂದ ಸುವಾರು 3200 ಅಡಿ ಎತ್ತರದಲ್ಲಿರುವ ಈ ಕೋಟೆಯಿಂದ ಅರೇಬಿುಂನ್ ಸಮುದ್ರವನ್ನು ನೋಡಬಹುದು. ಮಂಜು ಎಂಬ ಸ್ಥಳೀಯ ಕನ್ನಡ ಪದದಿಂದ ಕೋಟೆಗೆ ಈ ಹೆಸರು ಬಂದಿದೆ ಎಂದು ಹೇಳಲಾಗುತ್ತದೆ.
ಯುರೋಪಿಯನ್ ಶೈಲಿ : ಟಿಪ್ಪು ತನ್ನ ಪ್ರದೇಶಗಳ ವ್ಯಾಪ್ತಿಯ ವಿಸ್ತರಣಾ ಕಾರ್ಯಕ್ರಮಗಳಿಗಾಗಿ ಮಂಗಳೂರು ಮತ್ತು ಕೊಡಗು ನಡುವಿನ ಹೆದ್ದಾರಿಯನ್ನು ಸುರಕ್ಷಿತವಾಗಿರಿಸಲು ಆದ್ಯತೆ ನೀಡಿದ್ದನು. ಬ್ರಿಟೀಷರ ವಿರುದ್ಧ ಫ್ರೆಂಚರ ಜೊತೆ ಮೈತ್ರಿ ಮಾಡಿಕೊಂಡಿದ್ದರಿಂದ, ಯೂರೋ-ಇಸ್ಲಾಮಿಕ್ ಶೈಲಿಯ ನಕ್ಷತ್ರ ಕೋಟೆಯನ್ನು ನಿರ್ಮಿಸಲು ಫ್ರೆಂಚ್ ಇಂಜಿನಿಯರುಗಳು ತಂತ್ರಜ್ಞಾನದ ನೆರವು ಒದಗಿಸಿದರು.
ಶ್ರೀರಂಗಪಟ್ಟಣ ಕೋಟೆಗೆ ಸುರಂಗ : ಪ್ರವಾಸಿಗರು ಇಲ್ಲಿ ಗುರುತಿಸಬಹುದಾದ ಇತರ ಕೆಲವು ರೋಮಾಂಚನಕಾರಿ ಸಂಗತಿಗಳೆಂದರೆ ಕೋಟೆಯೊಳಗೆ ನಿರ್ಮಿಸಲಾದ ಹಲವಾರು ಕೋಣೆಗಳು ಮತ್ತು ಶ್ರೀರಂಗಪಟ್ಟಣ ಕೋಟೆಗೆ ಹೋಗುವ ಸುರಂಗ. ಸುರಕ್ಷತೆ ಮತ್ತು ತಂತ್ರಜ್ಞಾನಕ್ಕೆ ಟಿಪ್ಪು ಎಷ್ಟು ಆದ್ಯತೆ ನೀಡಿದ್ದನು ಎಂಬುದು ಆತನ ನಿಪುಣತೆಗೆ ಸಾಕ್ಷಿಯಾಗಿದೆ. ಈ ಕೋಟೆ ರಾಷ್ಟ್ರೀಯ ಹೆದ್ದಾರಿ 48 ರಲ್ಲಿ ಸಕಲೇಶಪುರದ ಹೊರವಲಯದಲ್ಲಿದೆ. ಟಿಪ್ಪು ಸುಲ್ತಾನನ ಆಳ್ವಿಕೆಯಲ್ಲಿ ಮದ್ದುಗುಂಡುಗಳನ್ನು ಸಂಗ್ರಹಿಸಲು ಈ ಕೋಟೆಯನ್ನು ಬಳಸಿಕೊಳ್ಳಲಾಗುತ್ತಿತ್ತು. ಇದರ ಕಾರ್ಯತಂತ್ರದ ಸ್ಥಳವು ಕೋಟೆಯಲ್ಲಿ ಇರಿಸಲಾಗಿದ್ದ ಸೈನಿಕರಿಗೆ ಮಂಗಳೂರಿನಿಂದ ಬರುವ ಬ್ರಿಟಿಷ್ ಸೈನ್ಯದ ಚಲನವಲನಗಳನ್ನು ನೋಡಿಕೊಳ್ಳಲು ಅನುಕೂಲವಾಗಿತ್ತು.
253 ಮೆಟ್ಟಿಲುಗಳು : ಕೋಟೆಯು ಬೆಟ್ಟದ ಮೇಲೆ ಇರುವುದರಿಂದ ಇದು ಸುತ್ತಮುತ್ತಲಿನ ಸ್ಪಷ್ಟಚಿತ್ರಣವನ್ನು ನೀಡುತ್ತದೆ. ಕೋಟೆಯ ತನಕ ವಾಹನಗಳನ್ನು ತೆಗೆದುಕೊಂಡು ಹೋಗಲು ಸಾಧ್ಯವಿಲ್ಲ ಮತ್ತು ಪ್ರವಾಸಿಗರು ಕೋಟೆಯಿಂದ ಸುಮಾರು 200 ಮೀ ದೂರದಲ್ಲಿ ಇಳಿದು ನಡೆದು ಹೋಗಬೇಕು. ಗೇಟ್ ತಲುಪಲು ಸುವಾರು 253 ಮೆಟ್ಟಿಲುಗಳಿವೆ. ಮಂಜರಾಬಾದ್ ಕೋಟೆುಂನ್ನು ಪುರಾತತ್ವ ಇಲಾಖೆ ನಿರ್ವಹಿಸುತ್ತಿದೆ.
ಎಲ್ಲಿದೆ ಮಂಜಿರಾಬಾದ್ ಕೋಟೆ : ಈ ಕೋಟೆ ಹಾಸನ ಜಿಲ್ಲೆಯ ಸಕಲೇಶಪುರ ಪಟ್ಟಣದಿಂದ ಅದರ ನೈಋತ್ಯಕ್ಕೆ 10 ಕಿಲೋಮೀಟರ್ (6.2 ಮೈಲಿ) ದೂರದಲ್ಲಿದೆ, ಇದು ಹೇವಾವತಿ ನದಿುಂ ಬಲದಂಡೆಯಲ್ಲಿದೆ. ಹಾಸನದಿಂದ 37 ಕಿ.ಮೀ. ದೂರದಲ್ಲಿ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಬೆಂಗಳೂರಿನಿಂದ ಮಂಗಳೂರಿಗೆ ಹೋಗುತ್ತದೆ. ಸಕಲೇಶಪುರದ ಮಂಜರಾಬಾದ್ ತಾಲ್ಲೂಕಿನ ಪ್ರಧಾನ ಕಚೇರಿಯನ್ನು ಹೊಂದಿದ್ದು, ಆಡಳಿತದ ದೃಷ್ಟಿಯಿಂದ ಪುರಸಭೆಯ ಸ್ಥಾನ ಮಾನ ಹೊಂದಿದೆ.
ತಲುಪುವುದು ಹೇಗೆ? : ಬೆಂಗಳೂರಿನಿಂದ ಸಕಲೇಶಪುರಕ್ಕೆ ಕ್ಯಾಬ್‌ನಲ್ಲಿ ತೆರಳಿದರೆ ಸುಮಾರು 4 ಗಂಟೆ ತೆಗೆದುಕೊಳ್ಳುತ್ತದೆ. ಬೆಂಗಳೂರಿನಿಂದ ಸಕಲೇಶಪುರಕ್ಕೆ ಬಸ್ ಮೂಲಕವೂ ಹೋಗಬಹುದು. ಇದು ಸುಮಾರು 5 ಗಂಟೆ ತೆಗೆದುಕೊಳ್ಳುತ್ತದೆ. ಸಕಲೇಶಪುರ ಬಸ್ ನಿಲ್ದಾಣವು ನಗರ ಕೇಂದ್ರದಿಂದ ಸುವಾರು 2 ಕಿ.ಮೀ ದೂರದಲ್ಲಿದೆ ಮತ್ತು ಬಸ್, ಟ್ಯಾಕ್ಸಿ ಅಥವಾ ಆಟೋರಿಕ್ಷಾ ಮೂಲಕವೂ ತಲುಪಬಹುದು. ವೈಯಕ್ತಿಕ ವಾಗಿ ವಾಹನ ಸೌಲಭ್ಯ ಹೊಂದಿರುವವರು ಮತ್ತು ಯುವಕರಿಗೆ ಇದು ಸೂಕ್ತವಾದ ಸ್ಥಳ.
ಬೆಂಗಳೂರಿನಿಂದ ಸಕಲೇಶಪುರಕ್ಕೆ ರೈಲು : ಬೆಂಗಳೂರಿನಿಂದ ಸಕಲೇಶಪುರಕ್ಕೆ ನೇರ ರೈಲು ಲಭ್ಯವಿದೆ. ಈ ಪ್ರಯಾಣವು ಸುಮಾರು 5 ಗಂಟೆಗಳಷ್ಟು ಸಮಯವನ್ನು ತೆಗೆದುಕೊಳ್ಳುತ್ತದೆ. ಸಕಲೇಶಪುರ ನಗರ ಕೇಂದ್ರವು ಸಕಲೇಶಪುರ ರೈಲ್ವೆ ನಿಲ್ದಾಣದಿಂದ 5 ಕಿ.ಮೀ ದೂರದಲ್ಲಿದೆ ಮತ್ತು ಆಟೋರಿಕ್ಷಾ ಅಥವಾ ಬಸ್ ಮೂಲಕ ತಲುಪಬಹುದು.
ಮೈಸೂರಿನಿಂದ ಎನ್‌ಎಚ್ 373 ರ ಮೂಲಕ 154.1 ಕಿ.ಮೀ. ಪ್ರಯಾಣಿಸಿದರೆ 3 ಗಂಟೆ 25 ನಿಮಿಷ ತೆಗೆದುಕೊಳ್ಳುತ್ತದೆ.
ಬೆಂಗಳೂರು – ಮಂಗಳೂರು ರಸ್ತೆ ಮೂಲಕ 168.5 ಕಿ.ಮೀ .ಪ್ರಯಾಣಿಸಿದರೆ 4 ಗಂಟೆ ತೆಗೆದುಕೊಳ್ಳುತ್ತದೆ.ಊಟ,ತಿಂಡಿ,ಕಾಫಿ,ಟೀ ಅವಶ್ಯಕತೆ ಪೂರೈಸಿಕೊಳ್ಳಲು ಸಕಲೇಶಪುರದಲ್ಲಿ ಹೋಟೆಲ್‌ಗಳಿವೆ.