ಮಕ್ಕಳು, ಅಪ್ರಾಪ್ತ ವಯಸ್ಸಿನ ಬಾಲಕಿಯರೇ ಟಾರ್ಗೆಟ್;
ಇಂದು ಮಕ್ಕಳು, ಅಪ್ರಾಪ್ತ ಬಾಲಕಿಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿವೆ. ಅದೇ ವೇಗದಲ್ಲಿ ಮಾನವ ಕಳ್ಳಸಾಗಣೆಯಂತಹ ಹೇಯ ಕೃತ್ಯಗಳ ಪ್ರಮಾಣವೂ ಹೆಚ್ಚುತ್ತಿದೆ. ಆದರೆ ಆರೋಪಿಗಳಿಗೆ ಆಗುತ್ತಿರುವ ಶಿಕ್ಷೆಯ ಪ್ರಮಾಣ ತೀರಾ ಕಡಿಮೆ. ಈ ನಿಟ್ಟಿನಲ್ಲಿ ನಾಗರಿಕ ಸಮಾಜದಲ್ಲಿ ಸೂಕ್ತ ಅರಿವು ಮೂಡುವ ಅಗತ್ಯ ಇದೆ.
ಅಕ್ಷತಾ ಜಗನ್ನಾಥ್, ಮೈಸೂರು
ಕೆಲವು ತಿಂಗಳುಗಳ ಹಿಂದೆ ಕೋಲಾರ ಮೂಲದ ೧೬ ವರ್ಷದ ಬಾಲಕಿ ಕೆಲಸ ಅರಸಿ ಬೆಂಗಳೂರಿಗೆ ಬಂದಿದ್ದಳು. ಟ್ರಾವೆಲ್ ಏಜೆಂಟ್ ಒಬ್ಬ ಆಕೆಗೆ ಕೆಲಸ ಕೊಡಿಸುವುದಾಗಿ ಭರವಸೆ ನೀಡಿ ಆಕೆಯ ಮೇಲೆ ಲೈಂಕಿಕ ದೌರ್ಜನ್ಯವೆಸಗಿ ಹೊಸದಿಲ್ಲಿಗೆ ಸಾಗಣೆ ಮಾಡಲು ಮುಂದಾಗಿ ಸಿಕ್ಕಿಬಿದ್ದಿದ್ದ. ಆದರೆ ಆತ ವ್ಯವಹಾರದಲ್ಲಿ ‘ವೃತ್ತಿಪರ’ನೇ ಎಂಬುದನ್ನು ಖಾತ್ರಿ ವಾಡಲು ಸೂಕ್ತ ಸಾಕ್ಷಾಧಾರಗಳ ಕೊರತೆ ಎದುರಾಗಿತ್ತು. ಅಲ್ಲಿಗೆ ಪ್ರಕರಣವೂ ಹಳ್ಳ ಹಿಡಿಯಿತು.
ದೇಶಾದ್ಯಂತ ಈ ರೀತಿಯ ಸಾಕಷ್ಟು ಪ್ರಕರಣಗಳು ದಾಖಲಾಗುತ್ತಿವೆ. ಆದರೆ ಬಂಧಿತ ಆರೋಪಿಗಳಲ್ಲಿ ಶಿಕ್ಷೆಗೆ ಗುರಿಯಾಗುತ್ತಿರುವವರು ಬೆರಳೆಣಿಕೆ ಮಂದಿ ಮಾತ್ರ. ಇದಕ್ಕೆ ಆರೋಪಿಗಳನ್ನು ಅಪರಾಧಿಗಳು ಎಂದು ಪ್ರೂವ್ ವಾಡಲು ಇರುವ ಸಾಕ್ಷಾಧಾರಗಳ ಕೊರತೆ, ಹಣಬಲ, ದೊಡ್ಡ ದೊಡ್ಡ ಶಕ್ತಿಗಳ ಕೈವಾಡವೇ ಕಾರಣ ಎನ್ನಲಾಗುತ್ತಿದೆ.
ಕೆಲವೇ ಕೆಲವು ಪ್ರಕರಣಗಳಲ್ಲಷ್ಟೇ ಶಿಕ್ಷೆ
ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎಸಿಆರ್‌ಬಿ) ಇತ್ತೀಚೀನ ವರದಿಯನ್ನು ಗಮನಿಸಿದಾಗ ದೇಶಾದ್ಯಂತ ಮಾನವ ಕಳ್ಳಸಾಗಣೆ ಪ್ರಕರಣಗಳಲ್ಲಿ ಬಂಧಿಯಾಗಿ ಶಿಕ್ಷೆಗೆ ಒಳಗಾಗುವವರ ಪ್ರಮಾಣ ಸಾಕಷ್ಟು ಕಡಿಮೆಯಿದೆ. ೨೦೨೧ ರಲ್ಲಿ ದೇಶಾದ್ಯಂತ ೨,೧೮೯ ಪ್ರಕರಣಗಳಲ್ಲಿ ೮೪.೭ ಪ್ರತಿಶತ ಪ್ರಕರಣಗಳಲ್ಲಿ ಪೊಲೀಸರು ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದಾರೆ. ಆದರೆ ಕೇವಲ ಶೇ. ೧೬ ಪ್ರಕರಣಗಳಲ್ಲಿ ಮಾತ್ರ ಶಿಕ್ಷೆಯಾಗಿದೆ.
೨೦೨೦ರ ಅಂಕಿ-ಅಂಶಗಳನ್ನು ಗಮನಿಸುವುದಾದರೆ, ದೇಶಾದ್ಯಂತ ಪೊಲೀಸರು ದಾಖಲಿಸಿರುವ ೧,೭೧೪ ಮಕ್ಕಳ ಕಳ್ಳಸಾಗಣೆ ಪ್ರಕರಣಗಳಲ್ಲಿ ಶೇ.೮೫.೨ ದೋಷಾರೋಪಣಾ ಪಟ್ಟಿ ಸಲ್ಲಿಸಲಾಗಿದೆ. ಆದರೆ ಒಟ್ಟು ಪ್ರಕರಣಗಳಲ್ಲಿ ಕೇವಲ ಶೇ.೧೦.೬ ಪ್ರಕರಣಗಳಲ್ಲಿ ಮಾತ್ರ ಶಿಕ್ಷೆ ಪ್ರಕಟವಾಗಿದೆ. ೨೦೧೯ರಲ್ಲಿ, ೨,೨೬೦ ಪ್ರಕರಣಗಳು ದಾಖಲಾಗಿದ್ದು, ಪೊಲೀಸರು ಶೇ.೮೩.೭ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದಾರೆ. ಆದರೆ, ಶೇ.೨೨ ಪ್ರಕರಣಗಳಲ್ಲಿ ಮಾತ್ರ ಶಿಕ್ಷೆಯಾಗಿದೆ.
ರಾಜ್ಯದ ಸ್ಥಿತಿಗತಿ
ಕರ್ನಾಟಕದ ವಿಷಯಕ್ಕೆ ಬರುವುದಾದರೆ, ವಿಧಾನ ಪರಿಷತ್‌ನಲ್ಲಿ ಗೃಹ ಇಲಾಖೆ ಮಾಹಿತಿ ನೀಡಿರುವ ಪ್ರಕಾರ ೨೦೧೭ರಿಂದ ೨೦೨೨(ಫೆಬ್ರವರಿಯವರೆಗೂ) ೭೬೩ ಮಾನವ ಕಳ್ಳಸಾಗಣೆ ಪ್ರಕರಣಗಳು ದಾಖಲಾಗಿವೆ. ಈ ಪೈಕಿ ಕೇವಲ ೧೦ ಪ್ರಕರಣಗಳಲ್ಲಿ ಮಾತ್ರ ಶಿಕ್ಷೆಯಾಗಿದೆ.
ಗೃಹ ಇಲಾಖೆಯ ಅಂಕಿ-ಅಂಶ
ವರ್ಷ ದಾಖಲಾದ ಪ್ರಕರಣ ಬಂಧನ ಶಿಕ್ಷೆ
೨೦೧೭ ೧೭೮ ೨೨೨ ೧೦
೨೦೧೮ ೧೪೬ ೧೮೫ ೦
೨೦೧೯ ೧೫೫ ೧೯೦ ೦
೨೦೨೦ ೧೧೯ ೧೩೬ ೦
೨೦೨೧ ೧೩೪ ೨೦೫ ೦
೨೦೨೨ ೩೧ ೩೪ ೦
ಮಾನವ ಕಳ್ಳಸಾಗಣೆ ಎಂದರೇನು?
ಭಾರತದ ಸಂವಿಧಾನದ ೨೩ನೇ ವಿಧಿಯ ಮಾನವ ಕಳ್ಳಸಾಗಣೆ ಬಗ್ಗೆ ವಿವರವಾಗಿ ತಿಳಿಸಿದೆ. ಅಲ್ಲದೇ ಇದು ಾ ಯಾವುದೇ ದೌರ್ಜನ್ಯದ ಉದ್ದೇಶದ ವಾನವ ಸಾಗಣೆಯನ್ನು ನಿರ್ಬಂಧಿಸುತ್ತದೆ.
ಆಮಿಷಗಳನ್ನು ಒಡ್ಡಿ, ಅಕ್ರಮವಾಗಿ, ಬಲವಂತವಾಗಿ ಅಪಹರಣ ಮಾಡುವುದು, ಭಯ ಹುಟ್ಟಿಸಿಯೋ, ಮೋಸದಿಂದಲೋ ಅಥವಾ ಅಧಿಕಾರ ದುರುಪಯೋಗ ಮಾಡಿಕೊಂಡು ವ್ಯಕ್ತಿಯ ಮೇಲೆ ನಿಯoತ್ರಣ ಸಾಧಿಸಿ ದೈಹಿಕ, ಮಾನಸಿಕ, ಲೈಂಗಿಕ ದೌರ್ಜನ್ಯ ನಡೆಸುವ ಪ್ರಕರಣಗಳೆಲ್ಲವೂ ವಾನವ ಕಳ್ಳಸಾಗಣೆ ಅಡಿಯಲ್ಲಿ ಬರುತ್ತವೆ. ವೇಶ್ಯಾವಾಟಿಕೆ, ಇತರ ಪ್ರಕಾರಗಳ ಲೈಂಗಿಕ ದೌರ್ಜನ್ಯ, ಒತ್ತಾಯಪೂರ್ವಕ ಗುತ್ತಿಗೆ ಅಥವಾ ಜೀತ, ದೈಹಿಕ ಅಂಗಗಳನ್ನು ತೆಗೆಯುವುದು, ಭಿಕ್ಷಾಟನೆಯೂ ಇದರ ಭಾಗವಾಗಿದೆ.
ಪ್ರಮುಖ ಕಾನೂನುಗಳು
ಮಾನವ, ಮಕ್ಕಳ ಕಳ್ಳಸಾಗಣೆ ನಿಯಂತ್ರಣ ಮತ್ತು ಆರೋಪಿಗಳಿಗೆ ಶಿಕ್ಷೆ ವಿಧಿಸಲು ಐಪಿಸಿ ಸೆಕ್ಷನ್ ೩೭೦ ರಲ್ಲಿ ಅವಕಾಶವಿದೆ.
ಐಪಿಸಿ ೩೭೦(೧) ವ್ಯಕ್ತಿಯ ಶೋಷಣೆ; ಮಕ್ಕಳ ಮೇಲೆ ದೈಹಿಕ, ಲೈಂಗಿಕ ಶೋಷಣೆ ಮಾಡಿದ ಸಂದರ್ಭದಲ್ಲಿ ೫ ರಿಂದ ೭ ವರ್ಷಗಳ ಜೈಲು ಶಿಕ್ಷೆ ಮತ್ತು ದಂಡ, ವಯಸ್ಕರ ಮೇಲಿನ ದೌರ್ಜನ್ಯಕ್ಕೆ ೩ ರಿಂದ ೭ ವರ್ಷಗಳ ಜೈಲು ಶಿಕ್ಷೆ.
ಐಪಿಸಿ ೩೭೦(೨) ಕಳ್ಳ ಸಾಗಣೆ: ಕನಿಷ್ಟ ೭ ವರ್ಷ ಗರಿಷ್ಟ ೧೦ ವರ್ಷಗಳ ವರೆಗೆ ಕಠಿಣ ಶಿಕ್ಷೆ ಮತ್ತು ದಂಡ.
ಐಪಿಸಿ ೩೭೦ (೩) ಗುಂಪು ಕಳ್ಳಸಾಗಣೆ: ಒಬ್ಬರಿಗಿಂತ ಹೆಚ್ಚು ಮಂದಿಯ ಕಳ್ಳಸಾಗಣೆ ಮಾಡುವವರಿಗೆ ೧೦ ವರ್ಷಗಳಿಗಿಂತ ಅಧಿಕ ಪ್ರಮಾಣದ ಜೈಲು ಶಿಕ್ಷೆ ಮತ್ತು ದಂಡ. ಪ್ರಕರಣದ ತೀವ್ರತೆ ಅನ್ವಯ ಜೀವಾವಧಿ ಶಿಕ್ಷೆಗೂ ಅವಕಾಶ.
ಐಪಿಸಿ ೩೭೦ (೪) ಅಪ್ರಾಪ್ತ ಮಕ್ಕಳ ಕಳ್ಳಸಾಗಣೆ: ೧೦ ವರ್ಷ ಮೇಲ್ಪಟ್ಟು ಜೈಲು ಶಿಕ್ಷೆ. ದೊಡ್ಡ ಪ್ರಮಾಣದ ದಂಡ ವಿಧಿಸಬಹುದು.
ಐಪಿಸಿ ೩೭೦ (೫) ಒಬ್ಬರಿಗಿಂತ ಹೆಚ್ಚು ಅಪ್ರಾಪ್ತ ವಯಸ್ಕರ ಕಳ್ಳಸಾಗಣೆ: ಕನಿಷ್ಟ ೧೪ ವರ್ಷ ಕಠಿಣ ಜೈಲು ಶಿಕ್ಷೆ ಮತ್ತು ದಂಡ. ಇದು ಜೀವಾವಧಿ ಶಿಕ್ಷೆಯಾಗಿಯೂ ವಿಸ್ತರಣೆಯಾಗಲಿದೆ.
ಐಪಿಸಿ ೩೭೦ (೬) ಅಧಿಕಾರಿಗಳು, ಪೊಲೀಸರು ಭಾಗಿಯಾದರೆ: ಜೀವಾವಧಿ ಶಿಕ್ಷೆ ಮತ್ತು ದಂಡ. ಆರೋಪಗಳ ಆಧಾರದ ಮೇಲೆ ವಿವಿಧ ಸೆಕ್ಷನ್‌ಗಳ ಅಡಿ ಪ್ರಕರಣ ದಾಖಲಿಸಬಹುದು. ವೃತ್ತಿಯಿಂದ ವಜಾ.
ಶೇಕಡವಾರು ಶಿಕ್ಷೆಯ ಪ್ರಮಾಣ ಕಡಿಮೆಯೇಕೆ?
ಮಾನವ, ಮಕ್ಕಳ ಕಳ್ಳ ಸಾಗಣೆಯoತರ ಪ್ರಕರಣಗಳಲ್ಲಿ ಶಿಕ್ಷೆಗೆ ಒಳಗಾಗುವರ ಸಂಖ್ಯೆ ಕಡಿಮೆ ಅತ್ಯಂತ ಕಡಿಮೆ. ಇದಕ್ಕೆ ನಮ್ಮ ಸವಾಜದ ಸಂದಿಗ್ಧತೆಯೂ ಕಾರಣ. ಸಾಕ್ಷ್ಯಾಧಾರಗಳ ಕೊರತೆ, ವಿಚಾರಣೆಯ ಮಂದಗತಿ ಮತ್ತು ವಿಧಾನ, ಹಣ, ಪ್ರಭಾವ ಬಳಸಿಕೊಂಡು ಬೇಲ್ ಪಡೆಯುವುದು ಇದೆ. ಕೆಲವು ಪ್ರಕರಣಗಳಲ್ಲಿ ಆರೋಪಿಗಳು ಭೂಗತರಾಗುತ್ತಾರೆ. ಅಪ್ರಾಪ್ತರ ಕೇಸ್‌ಗಳಾದರೆ ಫಾಸ್ಟ್ ಟ್ರಾಕ್ ಕೋರ್ಟ್‌ಗಳ ಮೊರೆ ಹೋಗಬಹುದು. ವಯಸ್ಕರ ಮಾನವ ಕಳ್ಳ ಸಾಗಾಣಿಕೆ ಅಪರಾಧಗಳಿಗೆ ನಿರ್ದಿಷ್ಟ ನ್ಯಾಯಾಲಯ ಬೇಕು. ವಿಕ್ಟಿಮ್ ವಿಟ್ನೆಸ್ ಪ್ರೊಟೆಕ್ಷನ್ ಆಕ್ಟ್ ಅಗತ್ಯ ಎನ್ನುತ್ತಾರೆ ಒಡನಾಡಿ ಸೇವಾ ಸಂಸ್ಥೆಯ ನಿರ್ದೇಶಕ ಸ್ಟ್ಯಾನ್ಲಿ.
ಮಕ್ಕಳ ಕಳ್ಳಸಾಗಣೆ ತಡೆಯಲ್ಲಿ ನಾಗರಿಕರ ಪಾತ್ರ
*ಮಾನವ ಕಳ್ಳ ಸಾಗಣಿಕೆಯಾ ಪ್ರಕರಣಗಳನ್ನು ತಡೆಗಟ್ಟಲು ಪ್ರತ್ಯೇಕ ಪೊಲೀಸ ಘಟಕ ಸ್ಥಾಪಿಸಲಾಗಿದೆ. ಇದಕ್ಕೆ ನಾಗರಿಕರ ಸಹಾಯ, ಸಹಕಾರ ಬೇಕೇಬೇಕು.
* ನಮ್ಮ ಸುತ್ತಮುತ್ತಲೂ ಏನಾಗುತ್ತಿದೆ. ಅಪರಿಚಿತರ ಓಡಾಟ, ಹೊಸಬರ ವೃತ್ತಿ, ಹಿನ್ನೆಲೆಯ ಬಗ್ಗೆ ತಿಳಿದುಕೊಳ್ಳುವುದು. ಅನುಮಾನ ಬಂದರೆ ಪೊಲೀಸರಿಗೆ ಮಾಹಿತಿ ನೀಡುವುದು. ಮಾನವ ಮುಖ್ಯವಾಗಿ ನಗರ ಪ್ರದೇಶಗಳಲ್ಲಿ ಇದು ಆಗಬೇಕು.
* ಅನುಮಾನ ಬಂದರೆ ಪೊಲೀಸರಿಗೆ ದೂರು ನೀಡುವುದು, ಸೂಕ್ತ ಸಾಕ್ಷಾಧಾರಗಳು ಸಿಕ್ಕರೆ ನೀಡುವುದು, ತನಿಖೆ ವೇಳೆ ಪೊಲೀಸರಿಗೆ ಸಹಕರಿಸುವುದು.