ಇನ್ನೇನು 5ಜಿ ಆಗಮನವಾಗುವ ಹೊಸ್ತಿಲಲ್ಲಿ ನಿಂತಿದ್ದೇವೆ. ಈ ವೇಳೆಯಲ್ಲಿ ವಿದ್ಯಾರ್ಥಿಗಳು, ಓದುಗರು ಅಂತಾರ್ಜಾಲದೊಳಗೆ ಪ್ರವೇಶ ಪಡೆದುಕೊಂಡು ಸಾಕಷ್ಟು ಪಡೆದುಕೊಂಡಿದ್ದಾರೆ. ಅಲ್ಲಿ ಸಿಗುವ ಬೇರೆ ಬೇರೆ ಆಕರ್ಷಕ ಕೊಂಡಿಗಳನ್ನು ಹಿಡಿದು ಸಮಯವನ್ನು ವ್ಯರ್ಥ ಮಾಡಿಕೊಂಡು ಆಸಕ್ತಿಯನ್ನು ಬೇರೆ ಕಡೆಗೆ ಹರಿಸಿದ್ದೂ ಇದೆ.
ಇಂತಹ ಹೊತ್ತಿನಲ್ಲಿ ಎಚ್ಚರಿಕೆಯಿಂದ, ನಮಗೇನು ಬೇಕು ಎನ್ನುವ ಸ್ಪಷ್ಟತೆಯಿಂದ ಜಾಲಾಡಿದರೆ ಜಾಲತಾಣ ಬೃಹತ್ ವಿಶ್ವಕೋಶ. ಇಲ್ಲಿ ಎಲ್ಲವೂ ಲಭ್ಯ. ಅಂತೆಯೇ ಇ-ಬುಕ್, ಆಡಿಯೋ ಬುಕ್‌ಗಳೂ ಕೂಡ.
ಕನ್ನಡದ ಮಟ್ಟಿಗೆ ಇ-ಬುಕ್‌ಗಳ ಲೋಕ ಆರಂಭವಾಗಿದ್ದು ೨೦೧೫ರಿಂದ ಈಚೆಗೆ. ಕೊರೊನಾ ಸಂದರ್ಭದಲ್ಲಿ ಇವುಗಳ ಬೆಳವಣಿಗೆ ಹೆಚ್ಚಾಯಿತು. ಮೈಲಾಂಗ್ ಸೇರಿ ಹಲವಾರು ಸಂಸ್ಥೆಗಳು ಹೊಸ ಇ-ಪುಸ್ತಕಗಳ ಪ್ರಕಟಣೆ, ಇರುವ ಪುಸ್ತಕಗಳನ್ನು ಇ-ಪುಸ್ತಕಗಳಾಗಿ ಪರಿವರ್ತಿಸುವ ಕೆಲಸ ಮಾಡುತ್ತಿವೆ. ಅಲ್ಲದೇ ಎಲ್ಲ ಪ್ರಮುಖ ಪ್ರಕಾಶನ ಸಂಸ್ಥೆಗಳೂ ಇ-ಪುಸ್ತಕದ ಕಡೆ ಮುಖ ಮಾಡುತ್ತಿವೆ.
ಅನುಕೂಲಗಳು
- ಒಮ್ಮೆ ಸಿದ್ಧಪಡಿಸಿದರೆ ಮತ್ತೆ ಸಿದ್ಧಪಡಿಸುವ ಅಗತ್ಯವಿಲ್ಲ.
- ತಪ್ಪುಗಳಿದ್ದರೆ ತಿದ್ದಿಕೊಳ್ಳಲು ಸುಲಭ, ಕಡಿಮೆ ವೆಚ್ಚ.
- ಬೇಕೆಂದ ತಕ್ಷಣ ಕೊಂಡುಕೊಳ್ಳಲು ಅವಕಾಶ.
- ಮೊಬೈಲ್‌ನಲ್ಲಿಯೇ ಓದಬಹುದು, ಟಿಪ್ಪಣಿ ಮಾಡಿಕೊಳ್ಳಬಹುದು.
- ಭೌತಿಕವಾಗಿ ಸಂಗ್ರಹಿಸಿ ಇಟ್ಟುಕೊಳ್ಳಬೇಕಾದ ಹೊರೆ ಇರುವುದಿಲ್ಲ.
- ಎಲ್ಲಿಯೇ ಇದ್ದರೂ ಓದಬಹುದು, ಕಂಪ್ಯೂಟರ್, ಟ್ಯಾಬ್‌ಗಳಲ್ಲೂ ಬಳಸಬಹುದು.