Light
Dark

ನಿರ್ಮಾಪಕಿಯಾಗಿ ಸ್ಯಾಂಡಲ್‌ವುಡ್‌ಗೆ ಬಂದ ರಮ್ಯಾ

 ಅಭಿಮಾನಿಗಳ ನಿರೀಕ್ಷೆ ಹುಸಿ ಮಾಡದ ರಮ್ಯಾ; ವೆಲ್‌ಕಮ್ ಬ್ಯಾಕ್ ಹೇಳಿದ ಚಿತ್ರರಂಗ

ಮೊನ್ನೆ ಮೊನ್ನೆ ತಾನೆ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡುತ್ತೇನೆ ಎಂದು ಟ್ವೀಟ್ ಮಾಡಿದ್ದ ರಮ್ಯಾ ಕುತೂಹಲ ಹೆಚ್ಚಿಸಿದ್ದರು. ರಮ್ಯಾ ಹೀಗೆ ಹೇಳಿದ್ದೇ ತಡ ಚಿತ್ರರಂಗದಲ್ಲಿ, ಅಭಿಮಾನಿಗಳಲ್ಲಿ ನಿರೀಕ್ಷೆಗಳು ಹೆಚ್ಚಿದ್ದವು. ಮತ್ತೆ ನಾಯಕಿಯಾಗಿ ರಮ್ಯಾ ಕಾಣಿಸಿಕೊಳ್ತಾರಾ? ಯಾರ ಜೊತೆ ನಟಿಸ್ತಾರೆ? ಹೊಸ ಚಿತ್ರ ಘೋಷಣೆ ಮಾಡ್ತಾರಾ? ಹೀಗೆಲ್ಲಾ ಚರ್ಚೆಗಳು ನಡೆದಿದ್ದವು. ಇದಕ್ಕೆ ರಮ್ಯಾ ಸ್ಪಷ್ಟನೆ ನೀಡಿದ್ದು, ಚಿತ್ರರಂಗಕ್ಕೆ ನಿರ್ಮಾಪಕಿಯಾಗಿ ಎಂಟ್ರಿ ಕೊಡುತ್ತಿರುವುದಾಗಿ ತಿಳಿಸಿದ್ದಾರೆ. ‘ಆಪಲ್ ಬಾಕ್ಸ್ ಸ್ಟುಡಿಯೋಸ್’ ಎನ್ನುವ ನಿರ್ಮಾಣ ಸಂಸ್ಥೆಯನ್ನು ಮಾಡಲು ಮುಂದಾಗಿರುವ ರಮ್ಯಾ, ಪ್ರಾರಂಭದಲ್ಲಿಯೇ ಎರಡು ಚಿತ್ರಗಳನ್ನು ನಿರ್ಮಾಣ ಮಾಡುವ ಯೋಜನೆ ರೂಪಿಸಿಕೊಂಡಿದ್ದಾರೆ.

 

ನಿರ್ಮಾಪಕಿಯಾದ ತಾರೆಯರು
ತಾರೆಯರು ನಿರ್ಮಾಪಕಿಯಾಗುತ್ತಿರುವುದು ಹೊಸದೇನೂ ಅಲ್ಲ. ಅದರಲ್ಲೂ ಜನಪ್ರಿಯ ನಟಿಯರು. ನಲವತ್ತರ ದಶಕದಲ್ಲಿ ಬಹುದೊಡ್ಡ ಹೆಸರಾಗಿದ್ದ ತಾರೆ ಎಂ.ವಿ.ರಾಜಮ್ಮ, ? ರಾಧಾರಮಣ’ ಚಿತ್ರದ ಮೂಲಕ ಮೊದಲ ನಿರ್ಮಾಪಕಿ ಎನಿಸಿಕೊಂಡರು. ನಂತರ ಹರಿಣಿ, ಪಂಢರಿಬಾಯಿ, ಜಯಮಾಲ, ಪ್ರಮೀಳಾ ಜೋಷಾಯಿ ಮೊದಲಾದವರು ಈ ಸಾಲಿಗೆ ಸೇರಿಕೊಂಡರು.

ಹೊಸ ಸಹಸ್ರಮಾನದ ಆರಂಭದಲ್ಲಿ ಬಂದು ಜನಪ್ರಿಯರಾದ ತಾರೆಯರಲ್ಲಿ ರಕ್ಷಿತಾ, ರಾಧಿಕಾ ಮತ್ತು ರಮ್ಯಾ ಮುಂದಿನ ಸಾಲಿನಲ್ಲಿದ್ದಾರೆ. ಪುನೀತ್‌ರಾಜಕುಮಾರ್ ಯುವನಟರಾಗಿ ಬಂದ ಮೊದಲ ಚಿತ್ರ ‘ಅಪ್ಪು’ ಮೂಲಕ ರಕ್ಷಿತಾ ಬೆಳ್ಳಿತೆರೆಗೆ ಕಾಲಿಟ್ಟರೆ, ಎರಡನೇ ಚಿತ್ರ ‘ಅಭಿ’ಯೊಂದಿಗೆ ರಮ್ಯಾ ಆಗಮನ. ಅದೇ ವೇಳೆ ಸೃಜನ್ ಲೋಕೇಶ್ ಅವರೊಂದಿಗೆ ನಟಿಸಿದ ‘ನೀಲಮೇಘಶ್ಯಾಮ’ ಚಿತ್ರಕ್ಕಾಗಿ ಮೊದಲು ಬಣ್ಣ ಹಚ್ಚಿದ್ದರೂ, ತಾರೆ ರಾಧಿಕಾ ನಟಿಸಿ ತೆರೆಕಂಡ ಮೊದಲ ಚಿತ್ರ ವಿಜಯರಾಘವೇಂದ್ರ ಅವರೊಂದಿಗೆ ನಟಿಸಿದ ‘ನಿನಗಾಗಿ’.

ರಕ್ಷಿತಾ, ರಾಧಿಕಾ, ರಮ್ಯ

ಈ ಮೂವರೂ ಪೈಪೋಟಿಯಲ್ಲೆಂಬಂತೆ ನಟಿಸಿದರು. ಜನಪ್ರೀತಿ ಗಳಿಸಿದರು. ಕನ್ನಡ ಮಾತ್ರವಲ್ಲದೆ, ಇತರ ಸೋದರ ಭಾಷೆಗಳಲ್ಲೂ ನಟಿಸಿದ ಈ ಮೂವರ ಚಿತ್ರಗಳ ಸಂಖ್ಯೆ ಮೂವತ್ತರ ಆಚೆ ಇದೆ. ಚಿತ್ರೋದ್ಯಮದಲ್ಲಿ ಆರೋಗ್ಯಕರ ಸ್ಪರ್ಧೆಯೊಂದಿಗೆ ಸಾಗಿದ ಇವರಲ್ಲಿ ರಕ್ಷಿತಾ ಮತ್ತು ರಾಧಿಕಾ ವಿವಾಹಾನಂತರ ನಟನೆಯ ಜೊತೆಗೆ ನಿರ್ಮಾಣದತ್ತಲೂ ಹೊರಳಿದರು. ರಾಧಿಕಾ ಮತ್ತು ರಮ್ಯಾ, ಕವಿತಾ ಲಂಕೇಶ್ ಅವರ ‘ತನನಂ, ತನನಂ’ ಚಿತ್ರದಲ್ಲಿ ಜೊತೆಯಾಗಿ ನಟಿಸಿದರು. ರಾಧಿಕಾ ನಿರ್ಮಿಸಿದ ‘ಲಕ್ಕಿ’ ಚಿತ್ರದಲ್ಲಿ ರಮ್ಯಾ ನಟಿಸಿದರು, ಯಶ್ ಜೋಡಿಯಾಗಿ.

ಮಂಡ್ಯ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದ ರಮ್ಯಾ, ನಂತರ ಬಣ್ಣದ ಬದುಕಿನಿಂದ ದೂರವಿದ್ದರು. ವರ್ಷಗಳ ಕಾಲ ಚಿತ್ರರಂಗದಿಂದ ದೂರವಿದ್ದರೂ, ಅವರ ಅಭಿಮಾನಿಗಳು ‘ಮತ್ತೆ ಚಿತ್ರರಂಗಕ್ಕೆ ಯಾವಾಗ ಮರಳುತ್ತೀರಿ’ ಎನ್ನುವ ಪ್ರಶ್ನೆಗೆ ಮೊನ್ನೆ ಗಣೇಶ ಚತುರ್ಥಿಯಂದು ಉತ್ತರಿಸಿದ್ದಾರೆ. ಮತ್ತೆ ತಾವು ಚಿತ್ರರಂಗಕ್ಕೆ ಹಿಂತಿರುಗುವುದನ್ನು ಖಚಿತಪಡಿಸಿದ್ದಾರೆ. ಅವರು ನಿರ್ಮಾಪಕಿಯಾಗಿ ಚಿತ್ರರಂಗಕ್ಕೆ ಮರಳಿ ಬರುತ್ತಿದ್ದಾರೆ. ಅದು ಅವರ ನಿರ್ಮಾಣ ಸಂಸ್ಥೆ ಆಪಲ್ ಬಾಕ್ಸ್ ಸ್ಟುಡಿಯೋಸ್ ಮೂಲಕ. ಚಿತ್ರಗಳ ಜೊತೆ, ಒಟಿಟಿ ತಾಣಗಳಿಗಾಗಿ, ಸಿನಿಮಾ ಹಾಗೂ ವೆಬ್ ಸರಣಿಗಳನ್ನೂ ಈ ಸಂಸ್ಥೆ ನಿರ್ಮಿಸಲಿದೆಯಂತೆ. ಆಪಲ್ ಬಾಕ್ಸ್‌ನ ಜಾಲತಾಣದ ಮೂಲಕ ಚಿತ್ರದ ವಿವರಗಳನ್ನು ಮುಂದೆ ತಿಳಿಸುವುದಾಗಿ ಅವರು ಹೇಳಿದ್ದಾರೆ.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ