– ಸೌಮ್ಯ ಹೆಗ್ಗಡಹಳ್ಳಿ
ಯಾವ್ಯಾವುದೋ ಕಾರಣಗಳಿಂದ ಅಪರಾಧಿಗಳಾಗಿ ಜೈಲು ಸೇರಿದವರು ಸಮಾಜದ ಅವಗಣನೆಗೆ ಒಳಗಾಗುವುದು ಸಾಮಾನ್ಯ. ಆದರೆ ಇವರ ಬದುಕನ್ನು ಪರಿವರ್ತಿಸಿ ಮತ್ತೆ ಅವರು ಸಮಾಜದಲ್ಲಿ ಗೌರವಯುತವಾಗಿ ಬದುಕಬೇಕು, ಜೈಲಿನಲ್ಲಿ ಇರುವ ಸಮಯದಲ್ಲಿಯೂ ಒಳ್ಳೆಯ ಜೀವನ ಸಾಗಿಸಬೇಕು ಎನ್ನುವ ನಿಟ್ಟಿನಲ್ಲಿ ಇನ್ನರ್ ವ್ಹೀಲ್ ಸಂಸ್ಥೆ ಕಾರ್ಯೋನ್ಮುಖವಾಗಿದೆ.
ಮೈಸೂರು ಕೇಂದ್ರ ಕಾರಾಗೃಹದಲ್ಲಿರುವ ಕೈದಿಗಳಿಗೆ ಚಾಕೊಲೇಟ್, ಆಭರಣ, ಪೇಪರ್ ಬ್ಯಾಗ್ ತಯಾರಿಕೆ ಸೇರಿ ಹಲವಾರು ವೃತ್ತಿಪರ ತರಬೇತಿಗಳನ್ನು ನೀಡುತ್ತಾ ಬಂದಿರುವ ಇನ್ನರ್ ವ್ಹೀಲ್ ಕೈದಿಗಳನ್ನು ಕಾಯಕದ ಕಡೆಗೆ ಮುಖ ಮಾಡುವಂತೆ ಪ್ರೇರೇಪಣೆ ನೀಡುತ್ತಿದೆ.
ಅಲ್ಲದೇ, ದಂತ, ಕಣ್ಣಿನ ತಪಾಸಣೆ, ಯೋಗ ಮತ್ತು ಧ್ಯಾನದ ತರಗತಿಗಳೂ ನಿರಂತರವಾಗಿ ನಡೆಯುತ್ತಿವೆ. ಜೈಲಿನಲ್ಲಿರುವ ದಂಪತಿಗಳ ಮಕ್ಕಳಿಗೆ ಆಟಿಕೆ, ಪುಸ್ತಕಗಳನ್ನು ನೀಡಿ ಅವರ ಓದಿಗೆ ಸಹಾಯ ಮಾಡುತ್ತಿದೆ. ಕೈದಿಗಳಿಗೆ ಮನರಂಜನೆ ಕಾರ್ಯಕ್ರಮ, ಮೂಲ ಸೌಕರ್ಯಗಳ ಪೂರೈಕೆಯಲ್ಲಿಗೂ ತೊಡಗಿದೆ. ಮಹಿಳಾ ಕೈದಿಗಳಿಗೆ ಮುಟ್ಟಿನ ಸಂದರ್ಭದಲ್ಲಿ ಶುಚಿತ್ವ ಕಾಪಾಡಿಕೊಳ್ಳುವ ಬಗ್ಗೆ ಅರಿವು ಮೂಡಿಸುತ್ತಾ ಬರಲಾಗಿದೆ. ಈ ನಿಟ್ಟಿನಲ್ಲಿ ವೈದ್ಯಕೀಯ ಆಪ್ತ ಸವಾಲೋಚನೆಯನ್ನೂ ನಡೆಸಿದೆ. ೩ ಎಚ್ ಮೆಡಿಟೇಶನ್ ಸೆಂಟರ್ ಸ್ಥಾಪಿಸಿ ಯೋಗಕ್ಕೂ ಪ್ರಾಮುಖ್ಯತೆ ನೀಡಿದೆ.
ಮೈಸೂರು ಕಾರಾಗೃಹದ ಮಹಿಳಾ ವಿಭಾಗದಲ್ಲಿ ಸಿಂಗಲ್ ಬೆಡ್ ಒಪಿಡಿ ಸೌಲಭ್ಯವನ್ನು ಇತ್ತೀಚಿಗೆ ಇನ್ನರ್ ವೀಲ್ ಒದಗಿಸಿದೆ. ಜಿಲ್ಲಾಧ್ಯಕ್ಷರಾದ ಪುಷ್ಪ ಗುರುರಾಜ್ ಮತ್ತು ಮೈಸೂರು ಕೇಂದ್ರ ಜೈಲು ಮೇಲ್ವಿಚಾರಕಿ ದಿವ್ಯಶ್ರೀ ಅವರು ಇದನ್ನು ಉದ್ಘಾಟನೆ ಮಾಡಿದ್ದಾರೆ.
ಇನ್ನರ್ ವೀಲ್ ಸಂಸ್ಥೆಯವರು ಆರೋಗ್ಯ ಶಿಬಿರ, ಯೋಗ ತರಬೇತಿ, ಅವೆರ್ನೆಸ್ ಪ್ರೋಗ್ರಾಮ್ ಸೇರಿದಂತೆ ಹಲವು ಉಪಯುಕ್ತ ಕಾರ್ಯಗಳನ್ನು ಮಾಡುತ್ತಾ ಬಂದಿದ್ದಾರೆ. ಬಹು ಮುಖ್ಯವಾಗಿ ಮಹಿಳಾ ಕೈದಿಗಳಿಗೆಂದೇ ಫೀಮೇಲ್ ಸೆಕ್ಷನಲ್ಲಿ ಒಪಿಡಿ ವ್ಯವಸ್ಥೆಯನ್ನು ಮಾಡಿಕೊಟ್ಟಿದ್ದಾರೆ.
ದಿವ್ಯಶ್ರೀ, ಜೈಲು ಸೂಪರ್ಡೆಂಟ್
ಕೈದಿಗಳು ಕಾರಾಗೃಹದಿಂದ ಹೊರಬಂದ ನಂತರ ಉತ್ತಮ ಬದುಕು ಕಟ್ಟಿಕೊಳ್ಳಬೇಕು ಎನ್ನುವ ನಿಟ್ಟಿನಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ. ನಮ್ಮ ಕಾರ್ಯಕ್ರಮಗಳಿಗೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಮಾನವೀಯ ದೃಷ್ಟಿಯಿಂದ ಕೈದಿಗಳ ಜೀವನ ಶೈಲಿಯನ್ನು ಉತ್ತಮಗೊಳಿಸುವಂತ ಪ್ರಯತ್ನ ಅತಿ ಮುಖ್ಯ. ಹೀಗಾಗಿ ಇನ್ನರ್ ವೀಲ್ ಈ ನಿಟ್ಟಿನಲ್ಲಿ ಸಾಗುತ್ತಿದೆ.
ಸಂಧ್ಯಾ ದಿನೇಶ್
ಪಾಸ್ಟ್ ಪ್ರೆಸಿಡೆಂಟ್, ಇನ್ನರ್ ವ್ಹೀಲ್
ಜೈಲಿನಲ್ಲಿರುವ ಕೈದಿಗಳು ಕುಟುಂಬ ಮತ್ತು ಸಮಾಜದಿಂದ ಹೊರಗಿರುತ್ತಾರೆ. ಹೀಗಾಗಿ ಮಾನಸಿಕವಾಗಿ ಅವರಿಗೆ ಧೈರ್ಯ ತುಂಬಬೇಕು. ಈ ನಿಟ್ಟಿನಲ್ಲಿ ಇನ್ನರ್ ವೀಲ್ ಕೆಲಸ ಮಾಡುತ್ತಿದೆ. ಯೋಗ ಮತ್ತು ಧ್ಯಾನದ ತರಬೇತಿ ಪಡೆದ ಬಹಳಷ್ಟು ಕೈದಿಗಳು ಬದಲಾವಣೆ ಹೊಂದಿದ್ದಾರೆ. ಇಂತಹ ತರಬೇತಿಗಳನ್ನು ನೀಡಿದ್ದು ನಮಗೆ ಸಾರ್ಥಕತೆ ಎನಿಸುತ್ತದೆ.
ಡಾ. ರಚನಾ ನಾಗೇಶ್
ಪಾಸ್ಟ್ ಪ್ರೆಸಿಡೆಂಟ್, ಇನ್ನರ್ ವ್ಹೀಲ್
ಜೈಲಿನಲ್ಲಿರುವ ಕೈದಿಗಳ ಅಪರಾಧಗಳನ್ನು ಹೊರತುಪಡಿಸಿದರೆ ಅವರಲ್ಲಿಯೂ ಹಲವಾರು ಟ್ಯಾಲೆಂಟ್ ಇರುತ್ತದೆ. ಅವುಗಳನ್ನು ಗುರುತಿಸುವ ನಿಟ್ಟಿನಲ್ಲಿ ಇನ್ನರ್ ವೀಲ್ ಕೆಲಸ ಮಾಡುತ್ತಿದೆ. ಕೈದಿಗಳಿಗೆ ಕೌಶಲ ತರಬೇತಿಗಳನ್ನು ನೀಡಿ ಅವರ ಮನಸ್ಸನ್ನು ತಿಳಿಗೊಳಿಸಲಾಗುತ್ತಿದೆ. ಜೊತೆಗೆ ಸ್ವಂತ ಉದ್ಯೋಗ ಮಾಡಲೂ ಪ್ರೇರಿಪಿಸಲಾಗುತ್ತಿದೆ. ಕೈದಿಗಳು ಮುಂದೆ ಉತ್ತಮ ಬದುಕು ಕಟ್ಟಿಕೊಳ್ಳುವತ್ತ ಸಾಗಲಿ ಎಂಬುದೇ ಇನ್ನರ್ ವ್ಹೀಲ್ ಆಶಯವಾಗಿದೆ.
ಪುಷ್ಪ ಲೋಕೇಶ್
ಫಸ್ಟ್ ಪ್ರೆಸಿಡೆಂಟ್, ಇನ್ನರ್ ವ್ಹೀಲ್